ಸರ್ಕಸ್‌ನಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ – ಕಲಾವಿದವರಿಗೆ ಗೌರವ

0

ಸಮಾಜವನ್ನು ಮಾದಕ ವಸ್ತು ಮುಕ್ತಗೊಳಿಸುವಲ್ಲಿ ಸಹಕರಿಸಿ – ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ
ಸರ್ಕಸ್ ಕಲಾವಿದರ ಸೇವೆ ಅನನ್ಯ – ಬಿ.ಪುರಂದರ ಭಟ್

ಪುತ್ತೂರು: ಸಾಹಸ, ಶಿಸ್ತು, ಪರಿಶ್ರಮ ಮತ್ತು ಕಲೆಯ ಅಪೂರ್ವ ಸಂಗಮವಾದ ಸರ್ಕಸ್ ಕಲೆಗೆ ಗೌರವ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ವಿಶೇಷ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಜಂಬೋ ಸರ್ಕಸ್‌ನಲ್ಲಿ ನಡೆಯಿತು.


ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇವರ ಸಂಯುಕ್ತ ಆಶ್ರಯದಲ್ಲಿ ಜಂಬೋ ಸರ್ಕಸ್‌ನ 40 ಮಂದಿ ಕಲಾವಿದರು ಮತ್ತು 60 ಸಿಬ್ಬಂದಿಯನ್ನು ಏಕಕಾಲದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.


ಸನ್ಮಾನ ಕಾರ್ಯಕ್ರಮದಲ್ಲಿ ಸರ್ಕಸ್‌ನ ಪ್ರಬಂಧಕ ಸುರೇಶ್, ರಿಂಗ್ ಮಾಸ್ಟರ್ ಜನಾರ್ಧನ್, ಕನ್ನಡ ವೀಕ್ಷಕ ವಿವರಣೆ ನೀಡುವ ವೆಂಕಟೇಶ್ ಮೂರ್ತಿ, ಆಫ್ರಿಕಾ, ಮಣಿಪುರ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ಪೇಟ ಹಾಗೂ ಕನ್ನಡದ ಶಾಲು ಹೊದಿಸಿ ಗೌರವಿಸಲಾಯಿತು.


ಸಮಾಜವನ್ನು ಮಾದಕ ವಸ್ತು ಮುಕ್ತಗೊಳಿಸುವಲ್ಲಿ ಸಹಕರಿಸಿ
ಮಾದಕ ವಸ್ತು ದುರ್ಬಳಕೆಯ ಜನಜಾಗೃತಿಯ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ನಡೆಯುತ್ತಿರುವ 5 ದಿನಗಳ ಅಭಿಯಾನದಲ್ಲಿ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ ಅವರು ಮಾತನಾಡಿ ಜಂಬೋ ಸರ್ಕಸ್‌ಗೆ ಆಗಮಿಸಿದ್ದ ನೂರಾರು ಪ್ರೇಕ್ಷಕರಿಗೆ ಮಾದಕ ವಸ್ತುಗಳ ದುರ್ಬಳಕೆ ಹಾಗೂ ಅಕ್ರಮ ಸಾಗಾಣಿಕೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ಯುವಜನರು ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಜೀವನವನ್ನು ಅಳವಡಿಸಿಕೊಳ್ಳಬೇಕು ಹಾಗೂ ಸಮಾಜವನ್ನು ಮಾದಕ ವಸ್ತು ಮುಕ್ತಗೊಳಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.


ಸರ್ಕಸ್ ಕಲಾವಿದರ ಸೇವೆ ಅನನ್ಯ
ಕರ್ನಾಟಕ ಸಂಘದ ಅಧ್ಯಕ್ಷ ಬಿ ಪುರಂದರ ಭಟ್ ಅವರು ಮಾತನಾಡಿ ಸರ್ಕಸ್ ಕೇವಲ ಮನರಂಜನೆಯಲ್ಲ, ಅದು ಸಾಹಸ, ಶಿಸ್ತು, ಪರಿಶ್ರಮ ಮತ್ತು ಕಲೆಯ ಅದ್ಭುತ ಸಂಗಮ. ತಮ್ಮ ಜೀವವನ್ನೇ ಪಣಕ್ಕಿಟ್ಟು ಜನರನ್ನು ರಂಜಿಸುವ ಕಲಾವಿದರ ಸೇವೆ ಅನನ್ಯವಾಗಿದೆ ಎಂದು ಶ್ಲಾಘಿಸಿದರು.


ಮೂಲತಃ ಕೇರಳ ಮೂಲದ ಜಂಬೋ ಸರ್ಕಸ್ ಕರ್ನಾಟಕದಲ್ಲಿ ಪ್ರದರ್ಶನ ನೀಡುವಾಗ ಕನ್ನಡದಲ್ಲಿ ವೀಕ್ಷಕ ವಿವರಣೆ, ಕನ್ನಡ ಹಾಡುಗಳು ಹಾಗೂ ಕನ್ನಡ ನಾಮಫಲಕಗಳನ್ನು ಬಳಸುವ ಮೂಲಕ ಕನ್ನಡ ನಾಡು-ನುಡಿಗೆ ಸಲ್ಲಿಸುತ್ತಿರುವ ಗೌರವವನ್ನು ವಿಶೇಷವಾಗಿ ಪ್ರಶಂಸಿಸಲಾಯಿತು. ಮುಳಿಯ ಜುವೆಲ್ಲರ್ಸ್ ಪರವಾಗಿ ಅಶ್ವಿನಿ ಕೃಷ್ಣ ಮುಳಿಯ ಅವರು ಎಲ್ಲ ಸನ್ಮಾನಿತ ಕಲಾವಿದರಿಗೆ ವಿಶೇಷ ಉಡುಗೊರೆಗಳನ್ನು ವಿತರಿಸಿದರು. ಜಂಬೋ ಸರ್ಕಸ್‌ನ ಪ್ರಬಂಧಕ ಸುರೇಶ್, ಪುತ್ತೂರಿನಲ್ಲಿನ ಜಂಬೋ ಸರ್ಕಸ್ ಪ್ರದರ್ಶನವು ಜುಲೈ ೫ರಂದು ಕೊನೆಗೊಳ್ಳಲಿದ್ದು, ಸಾರ್ವಜನಿಕರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸರ್ಕಸ್ ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಸದಸ್ಯೆ ಶಂಕರಿ ಶರ್ಮಾ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮ್ ರಾಜ್ ವಂದಿಸಿದರು. ನಿಯೋಜಿತ ಅಧ್ಯಕ್ಷೆ ವಚನ ಜಯರಾಮ್ ಪ್ರಾಸ್ತಕವಾಗಿ ಮಾತನಾಡಿದರು, ಕಾರ್ಯದರ್ಶಿ ಅಭಿಶ್ ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here