ನಾ ಕಂಡಂತೆ ಕರಾವಳಿ ಭಾಗದ ಹೃದಯವಂತ ಜನತೆ……

0


ಅಶ್ವಿನಿ ರಾಘವೇಂದ್ರ ಶೆಣೈ
ಅಂಬಿಕಾ ವಿದ್ಯಾಲಯ (ಸಿ.ಬಿ.ಎಸ್.ಸಿ), ಪುತ್ತೂರು

ಭಾರತದ ದಕ್ಷಿಣದ ಹೃದಯಭಾಗ ಎಂದರೆ ಪಶ್ಚಿಮ ಘಟ್ಟಗಳು. ಹಾಗೆಯೇ ಕರಾವಳಿ ಭಾಗದ ಸೊಬಗನ್ನು ತಮ್ಮ ನಡೆ-ನುಡಿ, ಆಚಾರ-ವಿಚಾರ ಹಾಗೂ ಹೃದಯವಂತಿಕೆಯ ಮೂಲಕ ಹೆಚ್ಚಿಸಿದವರು ನಮ್ಮ ಕರಾವಳಿಯ ಜನರು. ನಮ್ಮ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಪ್ರಮುಖ ಕಸುಬು ಎಂದರೆ ಮೀನುಗಾರಿಕೆ. ಹೌದು, ಇಂದು ಜುಲೈ 10. ಈ ದಿನವನ್ನು ನಾವು ’ರಾಷ್ಟ್ರೀಯ ಮೀನುಗಾರಿಕಾ ರೈತರ ದಿನ’ ಎಂದು ಆಚರಣೆ ಮಾಡುತ್ತೇವೆ.


1957ರ ಜುಲೈ 10ರಂದು ಭಾರತೀಯ ವಿಜ್ಞಾನಿಗಳಾದ ಡಾ. ಹೀರಾಲಾಲ್ ಚೌಧರಿ ಮತ್ತು ಡಾ.ಕೆ.ಎಚ್ ಅಲಿಕುಂಞಿ ಅವರು ಒಡಿಶಾದ ಅಂಗುಲ್ ನಲ್ಲಿ ಮೊದಲ ಬಾರಿಗೆ ’ಇಂಡಿಯನ್ ಮೇಜರ್ ಕಾರ್ಪ್’ ಮೀನುಗಳಲ್ಲಿ ಕೃತಕ ಸಂತಾನೋತ್ಪತ್ತಿ ಮಾಡುವಲ್ಲಿ ಯಶಸ್ಸು ಕಂಡ ದಿನವಿದು. ಇಂತಹ ಒಂದು ಸಂಶೋಧನೆಯು ಭಾರತದ ಮೀನು ಕೃಷಿ ಇತಿಹಾಸದಲ್ಲಿ ಅತಿ ದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನೇ ತಂದೊಡ್ಡಿತು. ಮೀನುಗಾರಿಕೆ ಮತ್ತು ಜಲ ಕೃಷಿ ಕ್ಷೇತ್ರಕ್ಕೆ ಮೀನುಗಾರರು ಮತ್ತು ರೈತರು ನೀಡುವ ಕೊಡುಗೆಯನ್ನು ಗುರುತಿಸಿ ಗೌರವಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ದೇಶದಾದ್ಯಂತ ಮೀನುಗಾರಿಕೆ ಮತ್ತು ಜಲಕೃಷಿಯ ಸುಸ್ಥಿರ ಅಭಿವೃದ್ಧಿಗೆ ಇತ್ತೀಚಿಗೆ ಹೊಸದಾಗಿ ತಂತ್ರಜ್ಞಾನಗಳ ಬಳಕೆ ಹಾಗೂ ನೀತಿಗಳ ಬಗ್ಗೆ ಚರ್ಚಿಸಲು ಮತ್ತು ಮೀನುಗಾರಿಕೆಗೆ ಮಾರ್ಗದರ್ಶನ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಕಾರ್ಯವನ್ನು ಹಮ್ಮಿಕೊಂಡಿದೆ. ವಿಜ್ಞಾನದ ದೃಷ್ಟಿಯಲ್ಲಿ ನೀರು ಒಂದು ಸಾರ್ವತ್ರಿಕ ದ್ರಾವಕ. ಆದರೆ ಆಧ್ಯಾತ್ಮಿಕತೆಯ ನೆಲೆಯಲ್ಲಿ ಮೀನುಗಾರರು ಇದೇ ನೀರನ್ನು ದೇವರೆಂದು ಪೂಜಿಸುತ್ತಾರೆ. ಪ್ರತಿಯೊಂದು ಜೀವಿಯ ಸುಖಮಯ ಜೀವನಕ್ಕೆ ನೀರೇ ಆಧಾರವಾಗಿರುವುದರಿಂದ ನೀರನ್ನು ನಾವು ಪೂಜನೀಯ ಭಾವನೆಯಿಂದ ನೋಡಲೇಬೇಕು. ಕೇವಲ ನೀರನ್ನೇ ನಂಬಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಮುಗ್ಧರು ನಮ್ಮ ಕರಾವಳಿ ಭಾಗದ ಜನರು…. ಜಲದೇವತೆಯ ಮಕ್ಕಳಾದ ನಮ್ಮ ಕಡಲ ತೀರದ ಮೀನುಗಾರರು ಸಹೃದಯಿಗಳು. ವರಾಹ ಸ್ವಾಮಿಯನ್ನು ಪ್ರಾರ್ಥಿಸಿ ತಮ್ಮ ಕಸುಬನ್ನು ಶುರು ಮಾಡುವ ಜನರು, ಹೊಸದೊಂದು ಉತ್ಸಾಹದೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಹೊರನೋಟಕ್ಕೆ ನಮ್ಮ ಕಣ್ಣಿಗೆ ಕಾಣುವುದು, ಅವರು ಮೀನುಗಾರರು ಎಂದು ಮಾತ್ರ. ಆದರೆ ಎಲ್ಲರೂ ಮಾಡುವಂತಹ ಉದ್ಯೋಗಕ್ಕೆ ಹೋಲಿಸಿದರೆ ಅವರದ್ದು ’ಕತ್ತಿಯ ಮೇಲಿನ ನಡಿಗೆ’ ಯಾಕೆಂದರೆ ಜೀವದ ಹಂಗು ತೊರೆದು ತಮ್ಮವರಿಗಾಗಿ, ಎರಡು ಹೊತ್ತಿನ ಊಟಕ್ಕಾಗಿ, ಮಕ್ಕಳ ಶಿಕ್ಷಣಕ್ಕಾಗಿ, ಮನೆಯವರ ನೆಮ್ಮದಿಗಾಗಿ ನೀರಿಗೆ ಇಳಿಯುತ್ತಾರೆ. ನೀರಿಗೆ ಇಳಿದರೆ ಪುನಃ ಹಿಂತಿರುಗಿ ಬರುತ್ತೇವೆ ಎಂಬ ಭರವಸೆ ಅವರದ್ದಾಗಿರುವುದಿಲ್ಲ. ಆದರೂ ಕೂಡ ದೇವರಿದ್ದಾನೆ ಎಂಬ ನಂಬಿಕೆಯಿಂದ ಜೀವನದ ಈ ಹೋರಾಟವನ್ನು ಸವಾಲಾಗಿ ಸ್ವೀಕರಿಸುವ ಹಾಗೂ ನೀರಿನಲ್ಲಿ ಬಿದ್ದವರ ಪ್ರಾಣರಕ್ಷಣೆಗೆ ತಮ್ಮ ಪ್ರಾಣದ ಹಂಗನ್ನು ಕೂಡ ತೊರೆದು ಹೋರಾಡುವ ವೀರರು ನಮ್ಮ ಮೀನುಗಾರರು.

’ನಮ್ಮ ದೇಶದ ಗಡಿಯನ್ನು ಕಾಯುವವರು ಸೈನಿಕರಾದರೆ,’ ಸಮುದ್ರ ಹಾಗೂ ನದಿ ತೀರದಲ್ಲಿ ನಮ್ಮ ಜನತೆಯ ರಕ್ಷಣೆ ಮಾಡುವವರು ನಮ್ಮ ಈ ಸಹೃದಯ ಮೀನುಗಾರ ಸೈನಿಕರು. ತಮ್ಮದೇ ಆದಂತಹ ಒಂದು ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರದೊಂದಿಗೆ ಉತ್ತಮವಾದ ಜೀವನವನ್ನು ನಡೆಸುವುದರೊಂದಿಗೆ ಸಮಾಜದಲ್ಲಿ ಒಂದು ಅತ್ಯುನ್ನತ ಸ್ಥಾನವನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಒಂದು ಒಳ್ಳೆಯ ಮನಸ್ಸನ್ನು ಹೊಂದಿರುವ ನಮ್ಮ ಮೀನುಗಾರರು ಮೀನುಗಾರಿಕಾ ಕ್ಷೇತ್ರದಲ್ಲಿ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಇಂತಹ ಒಂದು ಹೃದಯ ವಿಶಾಲತೆಯನ್ನು ಹೊಂದಿರುವ ಮೀನುಗಾರಿಕಾ ಬಂಧುಗಳಿಗೆ ದೇವರು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತಾ, ಸರ್ಕಾರವೂ ಕೂಡ ಮೀನುಗಾರಿಕಾ ರೈತರ ಸುಖ-ದುಃಖಗಳಿಗೆ ಧ್ವನಿಯಾಗಲಿ ಎಂಬ ಆಶಯದೊಂದಿಗೆ ವಿರಮಿಸುತ್ತಿದ್ದೇನೆ.

LEAVE A REPLY

Please enter your comment!
Please enter your name here