ಜೀವನ ಕೌಶಲಗಳೇ ನಮ್ಮ ಬಾಳಿನ ದಾರಿ ದೀಪವಾದಾಗ…..

0

ನಮ್ಮ ಈ ಸಂಪದ್ಭರಿತವಾದ ದೇಶದಲ್ಲಿ ಪುರಾತನ ಕಾಲದಿಂದಲೂ ಗೃಹ ಕೈಗಾರಿಕೆಗಳು ಹಾಗೂ ಸಣ್ಣ ಕೈಗಾರಿಕೆಗಳು ಆಳವಾಗಿ ಬೇರೂರಿವೆ.ನಮ್ಮ ದೇಶವು ಕರಕುಶಲ ಕಲೆಗಳ ತವರೂರಾಗಿದೆ. ಇಡೀ ವಿಶ್ವವೇ ಕಂಡಂತಹ ಹೆಗ್ಗಳಿಕೆಯ ದೇಶ ಅದುವೇ ನಮ್ಮ ಭಾರತ ದೇಶ . ಹಿಂದಿನ ಕಾಲದಲ್ಲಿ ಕೌಶಲಗಳೇ ಜೀವನೋಪಾಯದ ಮಾರ್ಗಗಳಾಗಿದ್ದವು.
ಹೌದು ಇಂದು ವಿಶ್ವ ಯುವ ಕೌಶಲ ದಿನವಾಗಿದೆ.

ವಿಶ್ವಸಂಸ್ಥೆಯು 2014 ರಿಂದ ಜುಲೈ 15 ನ್ನು ವಿಶ್ವ ಯುವ ಕೌಶಲ ದಿನ ವನ್ನಾಗಿ ಆಚರಣೆ ಮಾಡಿಕೊಂಡು ಬಂದಿದೆ. ಕೌಶಲ ಎಂದರೆ ನಮ್ಮಲ್ಲಿ ಇರುವಂತಹ ಯಾವುದೇ ಒಂದು ಕಲೆ ಆಗಿದೆ. ಹುಟ್ಟಿದ ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ತೆರನಾದ ಕೌಶಲ ಇದ್ದೇ ಇರುತ್ತದೆ.ಕೇವಲ ವಿದ್ಯಾಭ್ಯಾಸವೊಂದಿದ್ದರೆ ಸಾಲದು. ಅದರ ಜೊತೆ ಜೊತೆಯಾಗಿ ನಮಗೆ ಗೊತ್ತಿರುವ ಕೌಶಲವನ್ನು ಬೆಳೆಸಿಕೊಂಡು ಬಂದರೆ ಮಾತ್ರ ಜೀವನವನ್ನು ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ಸಾಗಿಸಬಹುದು.ಅಂದರೆ ಮಕ್ಕಳು ವಿದ್ಯಾಭ್ಯಾಸದ ಜೊತೆ ಜೊತೆಯಾಗಿ ಜೀವನ ಕೌಶಲವನ್ನು ಒಂದಲ್ಲ ಒಂದು ರೀತಿಯಲ್ಲಿ ಕರಗತ ಮಾಡಿಕೊಂಡಿರಬೇಕಾಗುತ್ತದೆ. ಮಕ್ಕಳು ವಿದ್ಯಾಭ್ಯಾಸದ ನಂತರ ಐಟಿ ಬಿಟಿ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರ್ಪಡೆಗೊಳ್ಳುತ್ತಾರೆ. ಒಂದು ವೇಳೆ ಐಟಿ ಬಿಟಿ ಕಂಪೆನಿಗಳು ಮುಳುಗಿದರೆ ಅಥವಾ ಯಾವುದೋ ಕಾರಣಕ್ಕಾಗಿ ಕೆಲಸವನ್ನು ಬಿಡುವ ಸಂದರ್ಭ ಬಂದಲ್ಲಿ, ಕೆಲಸ ಇಲ್ಲದ ಸಮಯದಲ್ಲಿ ನಮ್ಮ ಯುವಜನತೆ ಮಾನಸಿಕ ಖಿನ್ನತೆಗೆ ಒಳಗಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಮಟ್ಟಕ್ಕೆ ತಲುಪಬಹುದು.


ಜೀವನ ಕೌಶಲಗಳು ಪ್ರತಿಯೊಬ್ಬನ ಜೀವನಕ್ಕೆ ದಾರಿದೀಪವಾಗಿವೆ. ಹೇಗೆಂದರೆ ಒಂದು ಮಗು ಓದಲು ತುಂಬಾ ಕಷ್ಟ ಪಡುತ್ತಿದೆ, ಏನು ಮಾಡಿದರೂ ಮಗುವಿಗೆ ಬರೆಯಲು, ಓದಲು ಅರ್ಥವಾಗುತ್ತಿಲ್ಲ. ಅದೇ ಮಗುವಿಗೆ ಚಿತ್ರಕಲೆ, ಸಂಗೀತ, ನೃತ್ಯ, ಅಡುಗೆ, ಕಸೂತಿ ಕಲೆ ಕರಕುಶಲ ಕಲೆ ಇವೆಲ್ಲವುಗಳು ಕೂಡ ಮಗುವಿನ ಭವಿಷ್ಯದಲ್ಲಿ ಆಧಾರಸ್ತಂಭವಾಗಬಹುದು. ಕೇವಲ ಓದುವುದು, ಬರೆಯುವುದು ಅಕ್ಷರದ ಜ್ಞಾನ ಗಳಿಸುವುದು ಮಾತ್ರ ಜೀವನ ಅಲ್ಲ. ಜೀವನದಲ್ಲಿ ಕಲಿಯಲು ತುಂಬಾ ಇದೆ. ಮಗು ಮುಂದೆ ಜೀವನದಲ್ಲಿ ಏನೇ ತೊಂದರೆಗಳು ಎದುರಾದರೂ ಅದನ್ನು ಎದುರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ಪೂರ್ವಿಕರು ಎತ್ತಿ ಹಿಡಿದ ಕಲೆಯನ್ನು ನಮ್ಮ ಯುವಜನತೆ ಮುಂದುವರೆಸಿಕೊಂಡು ಬಂದರೆ ಅದರಷ್ಟು ಸಾರ್ಥಕತೆ ಮತ್ತೊಂದಿಲ್ಲ. ಹಾಗಾಗಿ ಪ್ರತಿಯೊಂದು ಶಾಲೆಯಲ್ಲಿಯೂ ಕೂಡ ವಿದ್ಯಾಭ್ಯಾಸದ ಜೊತೆ ಜೊತೆಯಾಗಿ ವಿದ್ಯಾರ್ಥಿಯ ಜೀವನಕ್ಕೆ ಉಪಯೋಗವಾಗುವಂತಹ ಜೀವನ ಕೌಶಲಗಳ ತರಬೇತಿಯನ್ನು ದೊರಕಿಸಿಕೊಟ್ಟಲ್ಲಿ ಮುಂದಿನ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಸೋಲುವುದಿಲ್ಲ. ಜೀವನ ಕೌಶಲಗಳು ಮಗುವಿನಲ್ಲಿ ಆತ್ಮವಿಶ್ವಾಸವನ್ನು ತುಂಬಲು ಸಹಾಯಕವಾಗುತ್ತದೆ. ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ.

ಉದಾಹರಣೆಗೆ: ಅಡುಗೆ ಮಾಡುವುದು ಕೂಡ ಒಂದು ಕಲೆಯೇ. ಅದನ್ನು ಯಾರೂ ಕೂಡ ಕೀಳು ಭಾವನೆಯಿಂದ ಕಾಣಬಾರದು. ಯಾವ ಮಗುವು ಕೂಡ ಜನ್ಮತಃ ದಡ್ಡನಲ್ಲ. ಬೆಳೆಯುವ ಮಗುವಿಗೆ ಅದರ ಜೀವನಕ್ಕೆ ಪೂರಕವಾಗುವಂತಹ ವಾತಾವರಣವನ್ನು ಸೃಷ್ಟಿ ಮಾಡಿದಾಗ ಮಾತ್ರ ಮಗುವಿನ ಸರ್ವಾಂಗೀಣ ಬೆಳವಣಿಗೆಯಾಗುತ್ತದೆ. ಹಾಗಾಗಿ ಸರ್ಕಾರವಾಗಲೀ, ಪೋಷಕರಾಗಲೀ, ಸಮಾಜ ಬಾಂಧವರಾಗಲೀ ಈ ಒಂದು ಜೀವನ ಕೌಶಲಗಳಿಗೆ ಪ್ರಾಮುಖ್ಯತೆಯನ್ನು ಕೊಡುವುದರ ಜೊತೆಯಲ್ಲಿ ನಮ್ಮ ಮುಂದಿನ ಪೀಳಿಗೆಯನ್ನು ಸದೃಢಗೊಳಿಸಲು ಪರಿಶ್ರಮಿಸೋಣ ಎಂದು ಹೇಳುತ್ತಾ, ನಮ್ಮ ಯುವ ಜನಾಂಗವೇ ನಮ್ಮ ದೇಶದ ಆಸ್ತಿ , ಯುವಜನತೆ ಯಾವುದೇ ಸಮಯದಲ್ಲೂ ಕೂಡ ಜೀವನದಲ್ಲಿ ಸೋಲದ ಹಾಗೆ ಅವರ ಬೆನ್ನೆಲುಬಾಗಿ ನಿಲ್ಲೋಣ ಎಂಬ ಆಶಯದೊಂದಿಗೆ ವಿರಮಿಸುತ್ತಿದ್ದೇನೆ.

ಅಶ್ವಿನಿ ರಾಘವೇಂದ್ರ ಶೆಣೈ
ಅಂಬಿಕಾ ವಿದ್ಯಾಲಯ(ಸಿ.ಬಿ.ಎಸ್.ಇ)
ಬಪ್ಪಳಿಗೆ, ಪುತ್ತೂರು.

LEAVE A REPLY

Please enter your comment!
Please enter your name here