







ಇಂದಿನ ಜಗತ್ತು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೂ ಯುದ್ಧ, ಹಿಂಸೆ ಮತ್ತು ದ್ವೇಷದ ಹಾದಿ ಹಿಡಿಯುತ್ತಿರುವಾಗ, ದಕ್ಷಿಣ ಆಫ್ರಿಕಾದ ಕ್ರಾಂತಿಕಾರಿ ನಾಯಕ ನೆಲ್ಸನ್ ಮಂಡೇಲಾ ಅವರ ನೆನಪು ಕೇವಲ ಔಪಚಾರಿಕತೆಯಲ್ಲ, ಅದೊಂದು ಅನಿವಾರ್ಯತೆ.



ಮಂಡೇಲಾ ಅವರು ತಮ್ಮ ಜೀವಿತಾವಧಿಯ ಬರೋಬ್ಬರಿ 27 ವರ್ಷಗಳನ್ನು ಜೈಲಿನಲ್ಲಿ ಕಳೆದರು. ಬಿಡುಗಡೆಯಾದಾಗ ಅವರ ಮನಸ್ಸಿನಲ್ಲಿ ತಮಗೆ ಕಿರುಕುಳ ನೀಡಿದ ಬಿಳಿಯ ಆಡಳಿತಗಾರರ ವಿರುದ್ಧ ದ್ವೇಷದ ಜ್ವಾಲೆ ಇರಲಿಲ್ಲ. ಬದಲಿಗೆ, “ನಾನು ಜೈಲಿನಿಂದ ಹೊರಬಂದಾಗ ದ್ವೇಷವನ್ನು ಅಲ್ಲಿಯೇ ಬಿಟ್ಟುಬಂದೆ, ಇಲ್ಲದಿದ್ದರೆ ನಾನು ಇಂದಿಗೂ ಮಾನಸಿಕವಾಗಿ ಜೈಲಿನಲ್ಲೇ ಇರುತ್ತಿದ್ದೆ” ಎಂದು ಹೇಳಿದ್ದರು. ನಾವು ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ನೋವುಗಳನ್ನೂ ಮರೆಯಲಾರದೆ ದ್ವೇಷ ಸಾಧಿಸುವಾಗ, ಇಡೀ ದೇಶದ ಸ್ವಾತಂತ್ರ್ಯವನ್ನು ಕದ್ದವರನ್ನು ಕ್ಷಮಿಸಿ, ಅವರೊಂದಿಗೆ ಜೊತೆಯಾಗಿ ಹೊಸ ರಾಷ್ಟ್ರ ಕಟ್ಟಿದ ಮಂಡೇಲಾ ಅವರ ಸಹನೆ ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಜನಾಂಗೀಯ ದ್ವೇಷ ಮತ್ತು ಕೋಮು ಧ್ರುವೀಕರಣದ ಇಂದಿನ ದಿನಗಳಲ್ಲಿ, ಮಂಡೇಲಾ ಅವರ ಕೋಪವನ್ನು ಪ್ರೀತಿಯಾಗಿ ಪರಿವರ್ತಿಸುವ ಕಲೆ ಪ್ರತಿಯೊಬ್ಬ ನಾಗರಿಕನೂ ಕಲಿಯಬೇಕಾದ ಬಹುದೊಡ್ಡ ಪಾಠವಾಗಿದೆ.
“ಶಿಕ್ಷಣ ಎಂಬುದು ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರ.” ಎಂಬುವುದು ಮಂಡೇಲಾ ಅವರ ಮಾತು.












