







ರಾಮಕುಂಜ: ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಆತಿಥ್ಯದಲ್ಲಿ ಎರಡು ದಿನ ನಡೆಯಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ 2026-27ನೇ ಸಾಲಿನ ಕಡಬ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಅ.1ರಂದು ಬೆಳಗ್ಗೆ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಸತೀಶ್ ಭಟ್ ಬಿಳಿನೆಲೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಕ್ರೀಡಾಂಗಣ ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಉತ್ತಮ ಆಹಾರ ಸೇವನೆ, ದಿನದಲ್ಲಿ ಅರ್ಧ ತಾಸು ವ್ಯಾಯಮ ಮಾಡುವ ರೂಢಿ ಮಾಡಿಕೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು. ನಿವೃತ್ತ ಮುಖ್ಯಗುರು ಗುಮ್ಮಣ್ಣ ಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮಲ್ಲಿರುವ ಸೋಮರಿತನ ನಮ್ಮ ವೈರಿ. ಉಲ್ಲಾಸ, ಉತ್ಸಾಹದಿಂದ ಭಾಗವಹಿಸುವುದರಿಂದ ನಾವು ಎತ್ತರಕ್ಕೆ ಏರಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ವೆಂಕಟೇಶ್ ದಾಮ್ಲೆ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಈ ಕ್ರೀಡಾಕೂಟಕ್ಕೆ ಶಿಕ್ಷಣ ಇಲಾಖೆಯಿಂದ ಪ್ರೋತ್ಸಾಹ ದೊರೆತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ಕ್ಯಾಸ್ಟಲಿನೊ ಅವರು, ಕ್ರೀಡಾಪಟುಗಳು ಕಡ್ಡಾಯವಾಗಿ ಪಥಸಂಚಲನದಲ್ಲಿ ಭಾಗವಹಿಸಬೇಕು. ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವಂತೆ ಹೇಳಿದರು. ಆಲಂಕಾರು ಕ್ಲಸ್ಟರ್ ಸಿಆರ್‌ಪಿ ಜಯಂತ ವೈ., ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್, ಪ್ರೌಢಶಾಲೆ ವಿಭಾಗದ ನೋಡಲ್ ಆಫೀಸರ್ ರಾಜೇಶ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಆಲಂಕಾರು ಸರಕಾರಿ ಹಿ.ಪ್ರಾ.ಶಾಲೆ ಮುಖ್ಯಗುರು ಶಾರದಾ ಅವರು ಗೌರವ ವಂದನೆ ಸ್ವೀಕರಿಸಿದರು. ರಾಜ್ಯಮಟ್ಟದ ಕ್ರೀಡಾಪಟು ಸಮರ್ಥ ಯಲ್ಲಹಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಡಬ ವಲಯ ನೋಡೆಲ್ ಆಫೀಸರ್ ರಾಮಣ್ಣ ಗೌಡ ಸ್ವಾಗತಿಸಿದರು. ಸಿಆರ್‌ಪಿ ಶಾಲಿನಿ ಶೆಟ್ಟಿ ವಂದಿಸಿದರು. ಶಿಕ್ಷಕಿ ನಿಶ್ಚಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಪ್ರಣಮ್ಯ ಪ್ರಾರ್ಥಿಸಿದರು. ಶ್ರೀ ರಾಮಕುಂಜೇಶ್ವರ ದೇವಸ್ಥಾನದಿಂದ ಕ್ರೀಡಾಜ್ಯೋತಿ ತರಲಾಯಿತು. ಶ್ರೀ ರಾಮಕುಂಜೇಶ್ವರ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಆಲಂಕಾರು ಸರಕಾರಿ ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಬ್ರಹಾಂ, ಸಹಶಿಕ್ಷಕಿ ಶಶಿಕಲಾ ಉದ್ಘೋಷಕರಾಗಿ ಸಹಕರಿಸಿದರು. ಅ.2ರಂದೂ ವಿವಿಧ ಕ್ರೀಡೆಗಳು ನಡೆಯಲಿವೆ.
ಸನ್ಮಾನ:
ಕ್ರೀಡಾಕೂಟಕ್ಕೆ ಸಹಕಾರ ನೀಡಿದ ನಿವೃತ್ತ ಮುಖ್ಯಗುರು ಗುಮ್ಮಣ್ಣ ಗೌಡ ಹಾಗೂ ಪರಿಮಳ ಡಿಜಿಟಲ್ ಸ್ಟುಡಿಯೋ ಮಾಲಕ ಕರುಣಾಕರ ದೊಡ್ಡ ಉರ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪಥಸಂಚಲನದಲ್ಲಿ ಭಾಗವಹಿಸಿದ್ದ ಆಲಂಕಾರು ಶಾಲಾ ಬ್ಯಾಂಡ್ ಸೆಟ್ ತಂಡಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.













