







ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ


ಪುತ್ತೂರು: ಭಗವಾನ್ ಶ್ರೀರಾಮಚಂದ್ರ ಸಪರಿವಾರ ಸಹಿತ ದರ್ಶನ ನೀಡುತ್ತಿರುವ ತಾಲೂಕಿಕ ಅತ್ಯಂತ ಕಾರಣಿಕತೆಯ ಮಂದಿರವಾಗಿರುವ ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ನವರಾತ್ರಿ ಉತ್ಸವವು ಅ.11 ರಂದು ಅತ್ಯಂತ ಸಂಭ್ರಮದಿಂದ ಆರಂಭವಾಯಿತು.




ರಾತ್ರಿ ಆರಂಭದಲ್ಲಿ ಶ್ರೀರಾಮಚಂದ್ರ ಸಪರಿವಾರ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು ಬಳಿಕ ಸ್ಥಳೀಯ ಹಿರಿಯರಾದ ಶಂಕರನಾರಾಯಣ ಉಪಾಧ್ಯಾಯ ಪಟ್ಲಮೂಲೆಯವರು ದೀಪ ಪ್ರಜ್ವಲನೆಯ ಮೂಲಕ ನವರಾತ್ರಿ ಉತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಅ.11ರಿಂದ ಆರಂಭಗೊಂಡು ಅ.19 ರತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ಜರಗಲಿದೆ. ಅ.11 ರಂದು ರಾತ್ರಿ ಮುಂಡಾಳಗುತ್ತು ಸಂಜೀವಿ ವಿಠಲ ರೈ ಮಾಣಿಪ್ಪಾಡಿಯವರ ಭಜನಾ ಸೇವೆ ಹಾಗೇ ಶ್ರೀರಾಮ ಭಜನಾ ಮಂಡಳಿ ಶ್ರೀಕ್ಷೇತ್ರ ಸನ್ಯಾಸಿಗುಡ್ಡೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಗ್ರಾಮ ದೈವ ಇದ್ಪಾಡಿ ಶ್ರೀ ಶಿರಾಡಿ ದೈವ ಮಾರಿ ಉತ್ಸವ ಸಮಿತಿ ಅಧ್ಯಕ್ಷ ಮುಂಡಾಳಗುತ್ತು ಸುಧಾಕರ ರೈಯವರು ದೀಪ ಪ್ರಜ್ವಲನೆಯ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಪ್ರಾಯೋಜಕತ್ವದಲ್ಲಿ ಶ್ರೀ ಕೃಷ್ಣ ಕಲಾಕೇಂದ್ರ ವೀರಮಂಗಲ ಇವರಿಂದ ಭಕ್ತಿಪ್ರಧಾನ ತುಳು ನೃತ್ಯ ರೂಪಕ ಏಳ್ ಸತ್ಯೋಳು(ಸಪ್ತ ಮಾತೃಕೆಯರು) ಪ್ರದರ್ಶನಗೊಂಡಿತು.

ನವರಾತ್ರಿ ಉತ್ಸವದ ಅಂಗವಾಗಿ ಪ್ರತಿ ದಿನ ರಾತ್ರಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಇದ್ದು ಪ್ರಥಮ ದಿನವೂ ನೂರಾರು ಮಂದಿ ಭಕ್ತರು ಆಗಮಿಸಿ ಶ್ರೀದೇವರ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು. ಶ್ರೀರಾಮ ಮಂದಿರ ಆಡಳಿತ ಸಮಿತಿ ಹಾಗೂ ಶ್ರೀ ಭಜನಾ ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು ಹಾಗೇ 129 ಮನೆಯ ಭಜನಾ ಸೇವಾರ್ಥಿಗಳು, ಊರ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

ಇಂದು ಶ್ರೀರಾಮ ಮಂದಿರದಲ್ಲಿ
ಅ.12 ರಂದು ಸಂಜೆ 7ರಿಂದ ಭಜನೆ ಪಟ್ಟೆತ್ತಡ್ಕ ವೀರಪ್ಪ ನಾಯ್ಕ ಇವರ ಭಜನಾ ಸೇವೆ ಹಾಗೇ ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿದುಷಿ ರಶ್ಮಿ ದಿಲೀಪ್ ರೈ ಮತ್ತು ಶಿಷ್ಯವೃಂದ ಬೃಂದಾವನ ನಾಟ್ಯಶಾಲೆ ಕುಂಬ್ರ ಇವರಿಂದ ಸಾಂಸ್ಕೃತಿಕ ವೈಭವ ಮನರಂಜಿಸಲಿದೆ.
ಇಷ್ಟಾರ್ಥ ಈಡೇರಿಸುವ ಶ್ರೀರಾಮಚಂದ್ರ
ಪುರಾತನ ಇತಿಹಾಸವನ್ನು ಹೊಂದಿರುವ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯ ಶ್ರೀರಾಮ ಮಂದಿರವು ಹಲವು ವಿಶೇಷತೆಗಳಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇಲ್ಲಿ ಭಗವಾನ್ ಶ್ರೀರಾಮಚಂದ್ರ ದೇವರು ಸಪರಿವಾರ ಸಹಿತ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಇಲ್ಲಿ ಬಂದು ಭಕ್ತಿಯಿಂದ ಬೇಡಿಕೊಂಡರೆ ನಮ್ಮ ಮನದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದ್ದು ಇದಕ್ಕೆ ಪುಷ್ಠಿ ಕೊಡುವ ಹಲವು ನಿದರ್ಶನಗಳು ಇಲ್ಲಿ ನಡೆದಿದೆ. ಆರೋಗ್ಯ ಭಾಗ್ಯ, ವಿವಾಹ ಭಾಗ್ಯ, ಉದ್ಯೋಗ ಭಾಗ್ಯ, ಜಲಭಾಗ್ಯ ಸೇರಿದಂತೆ ನಮ್ಮ ಮನೆ ಮನದ ನೆಮ್ಮದಿ, ಸಂತೋಷಕ್ಕೆ ಶ್ರೀರಾಮಚಂದ್ರ ದೇವರು ಸದಾ ಹರಸುತ್ತಾ ನೆಲೆನಿಂತಿದ್ದಾರೆ. ಈ ನವರಾತ್ರಿ ಸಂಭ್ರಮದಲ್ಲಿ ನೀವು ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ಕೊಟ್ಟು ಶ್ರೀರಾಮ ದೇವರ ಅನುಗ್ರಹಕ್ಕೆ ಪಾತ್ರರಾಗಿ.










