ಶಿಸ್ತುಬದ್ಧ, ಸಾಂಪ್ರದಾಯಿಕ ಪುತ್ತೂರು ದಸರಾಕ್ಕೆ ಸಜ್ಜು-ಅ.21ರಂದು ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ

0

ಡಿ.ಜೆ., ಪಟಾಕಿ ಸದ್ದಿಲ್ಲದೆ ಧಾರ್ಮಿಕ ಶೋಭಾಯಾತ್ರೆ – ಸೀತಾರಾಮ ರೈ ಕೆದಂಬಾಡಿಗುತ್ತು

ಹೈಲೈಟ್ಸ್:
ರಾಜಮಾರ್ಗಗಳಲ್ಲಿ ವಿದ್ಯುತ್ ದೀಪಾಲಂಕಾರ
ಶೋಭಾಯಾತ್ರೆಯಲ್ಲಿ ಹಲವು ಹೊಸತನ
ಬಾಲ ಶಾರದೆ ವಿಶೇಷ, 1,000 ಕುಣಿತ ಭಜಕರಿಂದ ದೇವಿಗೆ ನೃತ್ಯಾರ್ಪಣೆ
ಕರ್ನಾಟಕ, ಕೇರಳದ ಕಲಾತಂಡಗಳಿಂದ ವೈವಿಧ್ಯಮಯ ಪ್ರದರ್ಶನ
ಆರು ನಿಗದಿತ ಸ್ಥಳಗಳಲ್ಲಿ ಕಲಾಪ್ರದರ್ಶನ

ಪುತ್ತೂರು: 92 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಶಾರದಾ ಭಜನಾ ಮಂದಿರದ ಮೂಲಕ ನಡೆಯುವ ಪುತ್ತೂರು ದಸರಾ ಮಹೋತ್ಸವವು ಈ ಬಾರಿ ಭಕ್ತಿ, ಶ್ರದ್ಧೆ ಹಾಗೂ ಶಿಸ್ತಿನೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಕಳೆದ ಮೂರು ವರ್ಷಗಳಿಂದ ಪುತ್ತೂರು ದಸರಾ ಮಹೋತ್ಸವದ ಮೂಲಕ ನವರಾತ್ರಿ ಉತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಪುತ್ತೂರು ತಾಲೂಕಿನಲ್ಲಿ ಪ್ರಥಮವಾಗಿ ಆರಂಭಗೊಂಡ ಭಜನಾ ಮಂದಿರ ಎಂಬ ಹೆಗ್ಗಳಿಕೆ ಶ್ರೀ ಶಾರದಾ ಭಜನಾ ಮಂದಿರಕ್ಕಿದೆ. ಅ.11ರಿಂದ ನವರಾತ್ರಿ ಉತ್ಸವ ಆರಂಭಗೊಂಡಿದ್ದು, ಅ.17ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಶಾರದಾ ಮಾತೆಯ ಭವ್ಯ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಬಳಿಕ ಧಾರ್ಮಿಕ ಸಭೆ ಆಯೋಜಿಸಲಾಗಿದೆ.

ಅ.18ರಂದು ಚಂಡಿಕಾ ಹೋಮ ನಡೆಯಲಿದ್ದು, ಪ್ರತಿದಿನ ನಿರಂತರ ಭಜನಾ ಕಾರ್ಯಕ್ರಮಗಳು ಜರುಗಲಿವೆ. ಅ.21ರಂದು ಪುತ್ತೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದರು. ಧಾರ್ಮಿಕ ಪರಂಪರೆ ಮತ್ತು ಶಿಸ್ತಿಗೆ ಆದ್ಯತೆ ನೀಡುವ ಉದ್ದೇಶದಿಂದ ಶೋಭಾಯಾತ್ರೆಯಲ್ಲಿ ಡಿ.ಜೆ. ಹಾಗೂ ಪಟಾಕಿಗಳ ಸದ್ದಿಗೆ ಅವಕಾಶವಿಲ್ಲ. ಪ್ರಚಾರಕ್ಕಾಗಿ ಬ್ಯಾನರ್, ಫ್ಲೆಕ್ಸ್ ಗಳನ್ನು ಅಳವಡಿಸದೆ, ಮಾಧ್ಯಮಗಳ ಮೂಲಕವೇ ಮಾಹಿತಿ ತಲುಪಿಸುವ ಮೂಲಕ ಸರಳ ಹಾಗೂ ಶಿಸ್ತುಬದ್ಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ವಸಂತ್ ಕುಮಾರ್ ಹಾಗೂ ಶೋಭಾಯಾತ್ರೆಯ ಸಂಚಾಲಕರಾದ ನವೀನ್ ಕುಲಾಲ್, ಕೃಷ್ಣ ಎಂ. ಅಳಿಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here