ವೇಣೂರು ಸಾರ್ವಜನಿಕ ಗಣೇಶೋತ್ಸವ-ಧಾರ್ಮಿಕ ಸಭೆ: ಗಣೇಶೋತ್ಸವ ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬ: ಪ್ರೊ| ಸುಬ್ರಹ್ಮಣ್ಯ ಎಡಪಡಿತ್ತಾಯ

0


ವೇಣೂರು: ಗಣೇಶೋತ್ಸವ ಆಚರಣೆಯಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುತ್ತದೆ. ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬ ಇದಾಗಿದ್ದು, ಭಕ್ತಿಯ ಆರಾಧನೆಯಿಂದ ಎಲ್ಲರ ಬದುಕು ಹಸನಾಗಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಹೇಳಿದರು.

ವೇಣೂರು ಫಲ್ಗುಣಿ ಸೇವಾ ಸಂಘದ ಆಶ್ರಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಸಹಯೋಗದಲ್ಲಿ ಇಲ್ಲಿಯ ಮುಖ್ಯಪೇಟೆಯಲ್ಲಿ ಜರುಗಿದ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ್ಯಾಯವಾದಿ ಕು| ಸಹನಾ ಕುಂದರ್ ಸೂಡಾ ಅವರು ಮಾರ್ಗಸೂಚಿ ಭಾಷಣ ಮಾಡಿ, ಮೊಬೈಲ್‌ನ ಅತಿಯಾದ ಬಳಕೆಯಿಂದ ಇಂದು ಸಂಬಂಧಗಳು ಬೆಲೆ ಕಳೆದುಕೊಂಡಿದೆ. ಮನೆ, ಸಮಾಜವನ್ನು ಕಟ್ಟುವ ಸಾಮಾರ್ಥ್ಯ ಹೊಂದಿರುವ ಮಹಿಳೆಯರಿಂದ ಮತ್ತೆ ಬದಲಾವಣೆ ಸಾಧ್ಯ ಎಂದರು.

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ಫಲ್ಗುಣಿ ಸೇವಾ ಸಂಘ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಶಾಸಕ ಹರೀಶ್ ಪೂಂಜ ಅವರು ಭೇಟಿ ನೀಡಿದರು. ಗೋಪಾಲಕೃಷ್ಣ ಉಪಾಧ್ಯಾಯ ಮತ್ತು ಶ್ರೀಪತಿ ಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾಕಾರ್ಯಕ್ರಮಗಳು ನಡೆದವು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಫಲ್ಗುಣಿ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಿ.ಎಸ್. ಜಯರಾಜ್ ಪ್ರಸ್ತಾವಿಸಿದರು. ಪೂಜಾ ಸಮಿತಿ ಅಧ್ಯಕ್ಷ ಸುಧೀರ್ ಭಂಡಾರಿ ಸ್ವಾಗತಿಸಿ, ಕಾರ್ಯದರ್ಶಿ ಸುದೀಪ್ ಪಟವರ್ಧನ್ ವಂದಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ನಿರೂಪಿಸಿದರು.

ಸಮ್ಮಾನ ಕಾರ್ಯಕ್ರಮ:

ರಂಗಭೂಮಿ ಕಲಾವಿದ ಹಾಗೂ ವೇಣೂರು ಗ್ರಾ.ಪಂ. ಅಧ್ಯಕ್ಷರಾಗಿರುವ ನೇಮಯ್ಯ ಕುಲಾಲ್, ಸಮಾಜಸೇವಕಿ ಕುಮುದಾ ಕಾರಂತ ಹಾಗೂ ಹವ್ಯಾಸಿ ಚಿತ್ರಕಲೆಯ ಬಾಲಪ್ರತಿಭೆ ಮಾ| ಆಶಿಶ್ ಎಂ. ರಾವ್ ಅವರನ್ನು ಸಮ್ಮಾನಿಸಲಾಯಿತು.

LEAVE A REPLY

Please enter your comment!
Please enter your name here