ಪೆರ್ಮುಖ ಸುಬ್ರಹ್ಮಣ್ಯ ಭಟ್ ಅವರ ಕವನ ಸಂಕಲನ “ಚದುರಂಗ” ಬಿಡುಗಡೆ

0

ಬೆಳ್ತಂಗಡಿ: ಕವನಗಳು ಬದುಕಿ ಬಾಳುವುದೇ ಗಾಯಕನ ಕಂಠದಲ್ಲಿ. ಆದರೆ ಈಗಿನ ಕವನಗಳಿಲ್ಲಿ ಛಂದಸ್ಸು, ಲಯ, ಮಾತ್ರೆ, ಗಣಗಳು ಅದ್ಯಾವುದನ್ನೂ ಕಾಣಲು ಸಾಧ್ಯವಾಗುತ್ತಿಲ್ಲ. ಇದು ವಿಷಾದಕರ ಎಂಬುದಾಗಿ ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ರ್ತಿ ಆತಂಕ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಸೆ.17 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ನಡೆದ, ಪೆರ್ಮುಖ ಸುಬ್ರಹ್ಮಣ್ಯ ಭಟ್ ಅವರ ಕವನ ಸಂಕಲನ “ಚದುರಂಗ” ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಕೃತಿ ಪರಿಚಯ ಮಾಡಿ ಮಾತನಾಡಿದ ಕವಯತ್ರಿ ಹಾಗೂ ಕಲಾವಿದೆ ಡಾ. ವೀಣಾ ಸುಳ್ಯ ಮಾತನಾಡಿ, ಕವನಗಳನ್ನು ಕಟ್ಟುವುದು ಮುಖ್ಯವಲ್ಲ. ಅದು ಜನ‌ ಮಾನಸಕ್ಕೆ ತಲುಪುವುದೂ ಅಷ್ಟೇ ಮುಖ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ. ಶ್ರೀನಾಥ ಅವರು ಮಾತನಾಡಿ, ಕಸಾಪ ವತಿಯಿಂದ ಕೃತಿಗಳನ್ನು ಹೊರತರುವ ನಿಟ್ಟಿನಲ್ಲಿ ಹೆಚ್ಚು ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರ ಪರಿಣಾಮ ಇಂದು ಕಾಲೇಜು ವಿದ್ಯಾರ್ಥಿಗಳೂ ಕೂಡ ಪುಸ್ತಕಗಳನ್ನು ಹೊರತರುತ್ತಿದ್ದಾರೆ ಎಂದರು.

ಅತಿಥಿಯಾಗಿದ್ದ ವಿಮರ್ಶಕ ಅರವಿಂದ ಚೊಕ್ಕಾಡಿ ಮಾತನಾಡಿ, ಪೆರ್ಮುಖ ಅವರು ನಿವೃತ್ತಿಯ ಪ್ರಾಯದ ನಂತರದಿಂದ ಬರೆಯಲು ಆರಂಭಿಸಿದವರಾದುದರಿಂದ ಅವರಲ್ಲಿ ಯವ್ವನ ಕಾಲಾವಧಿಯಿಂದ ಬರುವ ಆಯಾಸ ಕಾಣಲು ಅಸಾಧ್ಯ. ಅವರ ಜೀವಿತ ಕಾಲದವರೆಗೂ ಇದರಲ್ಲಿ ಅವರು ನಿರಂತರತೆ ಕಾಯ್ದುಕೊಳ್ಳಬಹುದು ಎಂಬುದು ವಿಶೇಷ ಎಂದರು.

ಕೃತಿಕಾರ ಸುಬ್ರಹ್ಮಣ್ಯ ಭಟ್ ಅವರ ಪತ್ನಿ ಶಾರದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ವಕೀಲರಾದ ಬಿ.ಎಂ ಭಟ್ ಪ್ರಸ್ತಾವನೆ ಮತ್ತು ಕೃತಿಗಕಾರರ ಪರಿಚಯಿಸಿದರು. ಸುಜಾತಾ ಜಿ ಭಟ್ ಪ್ರಾರ್ಥನೆ ಹಾಡಿದರು. “ಚದುರಂಗ” ಹಾಡನ್ನು ಶಂಕರ ಮತ್ತು ಸುಜಾತಾ ಜಿ ಭಟ್ ಅವರು ಪ್ರಸ್ತುತಿಪಡಿಸಿದರು. ತಾಲೂಕು ಕಸಾಪ ಸಂಘ ಸಂಸ್ಥೆಗಳ ಪ್ರತನಿಧಿ ಅಶ್ರಫ್ ಆಲಿಕುಂಞಿ ವಂದಿಸಿದರು.

LEAVE A REPLY

Please enter your comment!
Please enter your name here