‘ಮ್ಯಾನ್ ಮೇಕಿಂಗ್ ಎಜ್ಯುಕೇಶನ್’ ಪರಿಕಲ್ಪನೆಯ ಶಿಕ್ಷಣ ಕೇಂದ್ರ ‘ಮಕ್ಕಳ ಮಂಟಪ’ ಬಾಗಿಲು ಮುಚ್ಚಿತು…!!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ಸಿಶೇ ಕಜೆಮಾರ್

ಮಾತೃಭಾಷೆಯಲ್ಲೇ ಮೊದಲ ಶಿಕ್ಷಣ ಕೊಡಿಸಿ

ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ಹಾಗೂ ಒಂದನೇ ತರಗತಿಯಿಂದ ಆಂಗ್ಲ ಭಾಷೆಯಲ್ಲಿ ತರಗತಿಗಳನ್ನು ಆರಂಭಿಸಿರುವುದು ಮೂರ್ಖತನದ ಕೆಲಸವಾಗಿದೆ. ಈಗಿನ ಶಿಕ್ಷಣ ಪದ್ಧತಿ ಕುಲಗೆಟ್ಟಿದೆ ಇದು ಅರ್ಥಪೂರ್ಣವಾದ ಶಿಕ್ಷಣ ಅಲ್ಲ. ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂಬುದು ಗಾಂಧೀಜಿ ಸೇರಿದಂತೆ ಹಿರಿಯ ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಆದರೆ ಅದೆಲ್ಲವನ್ನು ಮೀರಿ ಆಂಗ್ಲ ಭಾಷ ಶಿಕ್ಷಣವನ್ನು ನೀಡುತ್ತಿರುವುದು ಸರಿಯಲ್ಲ. 14 ವರ್ಷದ ಬಳಿಕ ಆಂಗ್ಲ ಅಥವಾ ಇತರ ಭಾಷೆಯಲ್ಲಿ ಶಿಕ್ಷಣ ಕೊಡುವುದಕ್ಕೆ ತೊಂದರೆಯಿಲ್ಲ.

ಪುತ್ತೂರು: `ಮಕ್ಕಳ ಮಂಟಪ’ ಈ ಹೆಸರನ್ನು ಬಹುಷಹ ಪ್ರತಿಯೊಬ್ಬರು ಕೇಳಿರಬಹುದು. ಪುತ್ತೂರು ದರ್ಬೆಯ ಬೈಪಾಸ್ ರಸ್ತೆಯ ಪಕ್ಕದಲ್ಲಿ ಪ್ರಕೃತಿರಮಣೀಯ ಜಾಗದಲ್ಲಿ ಕಳೆದ 24 ವರ್ಷಗಳ ಹಿಂದೆ ಆರಂಭವಾದ ಮಕ್ಕಳ ಮಂಟಪವನ್ನು ಮ್ಯಾನ್ ಮೇಕಿಂಗ್ ಎಜುಕೇಶನ್ ಅಂದರೆ ಮಾನವ ನಿರ್ಮಾಣದ ಶಿಕ್ಷಣದ ಪರಿಕಲ್ಪನೆಯ ಉದ್ದೇಶವನ್ನಿಟ್ಟುಕೊಂಡು ಡಾ| ಸುಕುಮಾರ ಗೌಡರು ಆರಂಭಿಸಿದ್ದರು. ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತರು ಮಕ್ಕಳ ಮಂಟಪವನ್ನು ಉದ್ಘಾಟಿಸಿದ್ದರು. ಇದೀಗ ಮಕ್ಕಳ ಮಂಟಪ ಬಾಗಿಲು ಮುಚ್ಚಿದೆ. ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಮಾನವ ಜೀವನದ ಪಾಠಗಳಿಗೆ ದಾರಿದೀಪವಾಗಿದ್ದ ಮಕ್ಕಳ ಮಂಟಪ ಬಿಕೋ ಎನ್ನುತ್ತಿದೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.

ಮ್ಯಾನ್ ಮೇಕಿಂಗ್ ಎಜುಕೇಶನ್ ಪರಿಕಲ್ಪನೆಯಲ್ಲಿ…: ಮಕ್ಕಳ ಮಂಟಪವನ್ನು 1995 ರಲ್ಲಿ ಡಾ.ಸುಕುಮಾರ ಗೌಡರವರು ಒಂದು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಆರಂಭಿಸಿದ್ದರು. ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲಿ ಅಂದರೆ ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲಂತಹ ಅವರದೇ ಆದ ಭಾಷೆಯಲ್ಲಿ ಶಿಕ್ಷಣ ಕೊಟ್ಟಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುತ್ತದೆ. ಶಿಕ್ಷಣ ಎಂಬುದು ಮಾರ್ಕೆಟ್‌ಗಾಗಿ ಅಲ್ಲ ಎಂಬ ನಿಟ್ಟಿನಲ್ಲಿ ಒಂದಷ್ಟು ತತ್ವ, ಸಿದ್ಧಾಂತಗಳನ್ನಿಟ್ಟುಕೊಂಡು ಆರಂಭಿಸಲಾಗಿತ್ತು. 3 ವರ್ಷದಿಂದ 6 ವರ್ಷದವರೆಗಿನ ಮಕ್ಕಳಿಗೆ ಅರ್ಥಪೂರ್ಣವಾದ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿತ್ತು. ಮಕ್ಕಳ ಮಂಟಪಕ್ಕೆ 20 ಮಕ್ಕಳು ಸಾಕಾಗಿತ್ತು ಆದರೆ ಮುಂದೆ ಮಕ್ಕಳ ಸಂಖ್ಯೆ 26 ದಾಟಿದ್ದು ಇದೆ. 10 ಮಕ್ಕಳಿಗೊಬ್ಬರು ಟೀಚರ್ ಇಲ್ಲಿದ್ದರು.

ಜ್ಲಾನ ಭಂಡಾರದ ಮಂಟಪವಾಗಿತ್ತು…: ಸಂಶೋಧನಾ ಅಧ್ಯಯನ ಯೋಗ್ಯವಾದ ಪುಸ್ತಕಗಳ ಭಂಡಾರವೇ ಇಲ್ಲಿದ್ದು, ರಾಜ್ಯದ ಬೆರಳೆಣಿಕೆ ಪುಸ್ತಕ ಭಂಡಾರಗಳ ಪೈಕಿ ಇದು ಒಂದಾಗಿದೆ. ಶಿಕ್ಷಣ ಅಧ್ಯಯನ ಕೇಂದ್ರವಾಗಿ ರೂಪುಗೊಂಡಿದ್ದ ಮಕ್ಕಳಮಂಟಪ ಇಂಗ್ಲಿಷ್ ಭಾಷಾ ಜ್ಞಾನದಲ್ಲಿ ಸಂಶೋಧನೆ ನಡೆಸುವ ಸಂಶೋಧನಾ ವಿದ್ಯಾರ್ಥಿಗಳಿಗೆ ಜ್ಞಾನ ಭಂಡಾರವಾಗಿತ್ತು. ಡಾ.ಸುಕುಮಾರ ಗೌಡರ ಲರ್ನರ್ ಆಂಡ್ ಲರ್ನಿಂಗ್ ಪುಸ್ತಕ ಸಿದ್ದಗೊಂಡಿದ್ದೇ ಇದೇ ಮಕ್ಕಳ ಮಂಟಪದಲ್ಲಿ, ಮುಂದೆ ಈ ಅತ್ಯುತ್ತಮ ಕೃತಿಯನ್ನು ಅಮೇರಿಕಾದ ಪ್ರಕಾಶನ ಕಂಪೆನಿ ಪಿಎಚ್‌ಐ ( ಫ್ರೆಂಚ್ ಹಾಲ್‌ಆಫ್ ಇಂಡಿಯಾ) ಮುದ್ರಣಗೊಳಿಸಿತ್ತು. ಇವರ ಸಮ್ಮರ್ ಹಿಲ್, ಕಲಿಕೆ, ಗುಣಶೋಧ ಇತ್ಯಾದಿ ಕೃತಿಗಳನ್ನು ಮಂಗಳೂರು ವಿವಿಯ ಪ್ರಸಾರಾಂಗ ಪ್ರಕಾಶನದವರು ಪ್ರಕಟಿಸಿದ್ದಾರೆ. ಸದ್ಯದ ಇನ್ನೆರಡು ಪುಸ್ತಕಗಳು ಪ್ರಕಟಗೊಳ್ಳಲಿವೆ.

ಇವರ ಕೃತಿಯನ್ನು ಕಾರಂತರು ತರ್ಜುಮೆ ಮಾಡಿದ್ದರು…: ಕೆನಡಾದಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್‌ಡಿ ಮಾಡಿ ಅಧ್ಯಯನ-ಅಧ್ಯಾಪನ ನಡೆಸಿದ ಡಾ.ಸುಕುಮಾರ ಗೌಡ ಮೂಲತಃ ಸುಳ್ಯ ತಾಲೂಕಿನವರಾದರೂ ಪುತ್ತೂರಿನಲ್ಲಿಯೇ ನೆಲೆ ನಿಂತವರು. ಇವರ ಪ್ರಾಬ್ಲೆಮ್ಸ್ ಆಂಡ್ ಪ್ರೋಸ್ಪೆಕ್ಟ್ ಆಫ್ ಅವರ್ ಎಜುಕೇಶನ್ ಎಂಬ ಪುಸ್ತಕವನ್ನು ಡಾ.ಶಿವರಾಮ ಕಾರಂತರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಪ್ರಖ್ಯಾತ ಶಿಕ್ಣಣ ತಜ್ಞ ಡಾ. ಎ.ಎಸ್.ನೀಲ್ ಅವರ ಸಮ್ಮರ್ ಹೀಲ್ ಅನ್ನು ಡಾ.ಸುಕುಮಾರ ಗೌಡರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಈ ಎಲ್ಲಾ ಕಾರ್ಯಗಳು ನಡೆದದ್ದು ಮಾತ್ರ ಮಕ್ಕಳಮಂಟಪದಲ್ಲಿ. ಪಿಎಚ್‌ಡಿ, ಎಂಫಿಲ್ ಮಾಡುವವರಿಗೆ ಮಕ್ಕಳ ಮಂಟಪ ಆಶ್ರಯವಾಗಿತ್ತು. ಇಲ್ಲಿರುವ ಹಲವು ಅಧ್ಯಯನ ಗ್ರಂಥಗಳನ್ನು ಮಂಗಳೂರು ವಿವಿಗೆ ದಾನವಾಗಿ ನೀಡಲು ಸುಕುಮಾರ ಗೌಡರವರು ನಿರ್ಧರಿಸಿದ್ದಾರೆ.

ಡಾ.ಸುಕುಮಾರ ಗೌಡರ ಕನಸಿನಕೂಸು: ಅಪ್ಪಟ ಗಾಂಧೀವಾದಿ ಡಾ.ಸುಕುಮಾರ ಗೌಡ ಅವರ ಕನಸಿನ ಕೂಸು ಈ ಮಕ್ಕಳಮಂಟಪ. ಅಪಾರ ವಿದ್ವತ್ ಹೊಂದಿರುವ ಡಾ.ಗೌಡ ಅವರ ಅಧ್ಯಯನ, ಅಗಾಧವಾದ ಜ್ಞಾನವನ್ನು ವಿದ್ಯಾರ್ಥಿಗಳು, ಅದರಲ್ಲೂ ಸಂಶೋಧನಾ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದ ಈ ಮಕ್ಕಳಮಂಟಪ ಇನ್ನು ಮುಂದೆ ಕೇವಲ ನೆನಪು ಮಾತ್ರವಾಗಲಿದೆ. ಸುಮಾರು 80 ದಶಕದ ಬದುಕನ್ನು ಅರ್ಥಪೂರ್ಣವಾಗಿ ಕಳೆದಿರುವ ಡಾ.ಸುಕುಮಾರ ಗೌಡ ಅವರ ಕನಸಿನ ಕೂಸು ಶಿಕ್ಷಣ ಅಧ್ಯಯನಕೇಂದ್ರ ಮಕ್ಕಳಮಂಟಪದ ಜೀವಂತಿಕೆ ಅಧ್ಯಯನಾಸಕ್ತರಿಗೆ ಇನ್ನೂ ಅಗತ್ಯವಿದೆ. ರಾಜ್ಯದ ಯಾವ ಮೂಲೆಯಲ್ಲಿ ಹುಡುಕಿಕೊಂಡು ಹೋದರೂ ಇಂತಹ ಮಕ್ಕಳಮಂಟಪ ಮತ್ತೊಂದು ಸಿಗಲಾರದು. ಹಾಗಾಗಿ ಮಕ್ಕಳಮಂಟಪ ಉಳಿಸುವ ಕೆಲಸ ಸಾಹಿತ್ಯಾಸಕ್ತರಿಂದ ಅಗತ್ಯವಾಗಿ ನಡೆಯಬೇಕಾಗಿದೆ.

ಮ್ಯಾನ್ ಮೇಕಿಂಗ್ ಎಜುಕೇಶನ್ ಪರಿಕಲ್ಪನೆ ಇಟ್ಟುಕೊಂಡು ಮಕ್ಕಳ ಮಂಟಪವನ್ನು ೧೯೯೫ ರಲ್ಲಿ ಆರಂಭಿಸಿzನೆ. ಇದೀಗ ನನಗೆ ವಯಸ್ಸಾಗಿದೆ. ಆರೋಗ್ಯದ ಸಮಸ್ಯೆಯೂ ಇದೆ.ನಿರ್ವಹಣೆ ಕಷ್ಟವಾಗುತ್ತಿದೆ. ಆದ್ದರಿಂದ ಮಕ್ಕಳಮಂಟಪವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಮೂಲ ಕರ್ತೃನ ಮೂಲ ತತ್ವ, ಧ್ಯೇಯಗಳನ್ನು ಪರಿಪಾಲಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಮಕ್ಕಳ ಮಂಟಪದಿಂದ ಅದೆಷ್ಟೋ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಸುಶಿಕ್ಷಿತರು, ಉದ್ಯೋಗಸ್ಥರು ಆಗಿದ್ದಾರೆ. ಆ ನೆಮ್ಮದಿ ನನಗಿದೆ ಡಾ| ಸುಕುಮಾರ ಗೌಡ ಶಿಕ್ಷಣ ತಜ್ಞರು ಮಕ್ಕಳಮಂಟಪ ಪರ್ಲಡ್ಕ ಪುತ್ತೂರು

ಮಕ್ಕಳ ಮಂಟಪದಿಂದ ನಾನು ಬಹಳಷ್ಟು ಪ್ರಯೋಜನ ಪಡೆದುಕೊಂಡಿದ್ದೇನೆ. ಪಿಎಚ್‌ಡಿ ಮಾಡುವವರಿಗೆ ಒಂದು ಅಕಾಡೆಮಿಯಾಗಿ ಇಲ್ಲಿ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿತ್ತು. ಶೈಕ್ಷಣಿಕ ಸಂವಾದ ನಡೆಸುವ ವೇದಿಕೆಯಾಗಿತ್ತು. ಇಲ್ಲಿನ ಲೈಬ್ರೆರಿಯಿಂದ ನನಗೆ ತುಂಬಾ ಪ್ರಯೋಜನ ಸಿಕ್ಕಿದೆ. ಎಲ್ಲಿಯೂ ಕಾಣಸಿಗದ ಪುಸ್ತಕಗಳು ಇಲ್ಲಿವೆ. ಮಕ್ಕಳ ಮಂಟಪದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದೆ. ಸುಕುಮಾರ್ ಗೌಡರವರ ಸಿದ್ಧಾಂತಕ್ಕೆ, ಮಕ್ಕಳ ಮಂಟಪದ ಆದರ್ಶಗಳಿಗೆ ಪುತ್ತೂರಿನ ಸಮಾಜದಿಂದ ಸ್ಪಂದನೆ ಸಿಗಲಿಲ್ಲ. ಪೋಷಕರಿಗೆ, ಶಿಕ್ಷಕರಿಗೂ ಬೇಡವಾಯಿತು. ಮಕ್ಕಳ ಮಂಟಪ ಎಂಬುದು ಚರಿತ್ರೆಗೆ ಸೇರಿಹೋಗಿದ್ದು ಬೇಸರ ತಂದಿದೆ.-ಡಾ.ಕುಮಾರಸ್ವಾಮಿ, ಉಪನ್ಯಾಸಕರು, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು

ನನ್ನ ಶಿಕ್ಷಕ ವೃತ್ತಿಯ ಬೆಳವಣಿಗೆಗೆ ಮಕ್ಕಳ ಮಂಟಪದಿಂದ ಬಹಳಷ್ಟು ಸಂಪನ್ಮೂಲಗಳು ದೊರೆತಿದೆ. ಶಿಕ್ಷಕ ವೃತ್ತಿಯ ಬದ್ಧತೆ, ಆಂಗ್ಲ ಭಾಷೆಯ ಬಗ್ಗೆ, ಶೈಕ್ಷಣಿಕ ಒಳನೋಟಗಳು ಇತ್ಯಾದಿ ನನ್ನಲ್ಲಿ ಬೆಳವಣಿಗೆಗೆ ಮಕ್ಕಳ ಮಂಟಪ ಕಾರಣವಾಗಿದೆ. ಜಿಲ್ಲೆಯ ಅದೆಷ್ಟೋ ಆಂಗ್ಲ ಭಾಷಾ ಶಿಕ್ಷಕರಿಗೆ ಮಕ್ಕಳ ಮಂಟಪದಿಂದ ಬಹಳಷ್ಟು ಲಾಭವಾಗಿದೆ. ಸುಮಾರು 10 ವರ್ಷಗಳಿಂದ ಸುಕುಮಾರ ಗೌಡರವರ ಜೊತೆ ಒಡನಾಟ ಹೊಂದಿರುವ ನಾನು ಅವರಿಂದ ಮತ್ತು ಮಕ್ಕಳ ಮಂಟಪದಿಂದ ಬಹಳಷ್ಟು ಕಲಿತುಕೊಂಡಿದ್ದೇನೆ. – ರಮೇಶ್ ಉಳಯ, ಶಿಕ್ಷಕರು ಪುತ್ತೂರು

ನಾನು ಶಿಕ್ಷಕ ವೃತ್ತಿಯನ್ನು ಎಂಜಾಯ್ ಮಾಡಿದ್ದೇ ಸುಕುಮಾರ್ ಗೌಡರವರ ಮಕ್ಕಳ ಮಂಟಪದಿಂದಾಗಿ ಹೇಳಲು ಖುಷಿ ಪಡುತ್ತೇನೆ. ಮಕ್ಕಳನ್ನು ಯಾವ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು ಮತ್ತು ಮಕ್ಕಳಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಬೇಕು, ಸ್ವಚ್ಛಂದವಾಗಿ ಬಿಡಬೇಕು ಅವರನ್ನು ಯಾವ ಕಾರಣಕ್ಕೂ ದ್ವೇಷಿಸಬಾರದು ಎಂಬಿತ್ಯಾದಿ ಹಲವು ಪಾಠಗಳನ್ನು ನಾನು ತಿಳಿದುಕೊಂಡಿದ್ದೇನೆ. ಶಿಕ್ಷಕ ವೃತ್ತಿಯನ್ನು ನಾನು ಪ್ರೀತಿಸಲು ಮಕ್ಕಳ ಮಂಟಪ ಮತ್ತು ಸುಕುಮಾರ ಗೌಡರವರು ಕಾರಣರಾಗಿದ್ದಾರೆ. ಮಕ್ಕಳ ಮಂಟಪ ಬಂದ್ ಆಗುತ್ತಿರುವುದು ತುಂಬಲಾರದ ನಷ್ಟವಾಗಿದೆ. – ಪೂರ್ಣಿಮಾ ನಾಯಕ್, ಆಂಗ್ಲ ಭಾಷ ಶಿಕ್ಷಕಿ ಪುತ್ತೂರು

‘ಸಮ್ಮರ್ ಹಿಲ್’ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಸಂದರ್ಭದಲ್ಲಿ ನಾನು ಡಾ. ಸುಕುಮಾರ್ ಗೌಡರವರಿಗೆ ಬರೆಯಲು ಸಹಾಯ ಮಾಡಲು ಅವರ ಮನೆಗೆ ಹೋಗುತ್ತಿದ್ದೆ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಅವರ, ಮಕ್ಕಳ ಮಂಟಪದ ಪರಿಕಲ್ಪನೆಯನ್ನು ಸರಕಾರ ಅಳವಡಿಸಿಕೊಳ್ಳಬೇಕಾಗಿದೆ. ಸರಕಾರಿ ಶಾಲೆಗಳಲ್ಲಿ 1 ನೇ ತರಗತಿಗೆ ಆಂಗ್ಲ ಮಾಧ್ಯಮ ತರುವ ಬದಲು ಮಕ್ಕಳ ಮಂಟಪದ ಪರಿಕಲ್ಪನೆಯಲ್ಲಿ ಮಕ್ಕಳಿಗೆ ಶಿಕ್ಷಣ ದೊರೆತರೆ ಉತ್ತಮ. ಮಕ್ಕಳ ಮಂಟಪ ಬಂದ್ ಆದರೂ ಅವರ ಪರಿಕಲ್ಪನೆ ಬಂದ್ ಅಗದಿರಲಿ ಎನ್ನುವುದು ನನ್ನ ಆಶಯ. -ರಶ್ಮಿತಾ ನರಿಮೊಗರು, ಶಿಕ್ಷಕಿ ಪುಣ್ಚಪ್ಪಾಡಿ ಶಾಲೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.