ಆದಾಯ ಮೀರಿದ ಆಸ್ತಿ ಪ್ರಕರಣ: ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಗಂಗಿರೆಡ್ಡಿ ಮೇಲಿನ ಆರೋಪ ಖುಲಾಸೆಗೊಳಿಸಿದ ಹೈಕೋರ್ಟು

0

ಬೆಳ್ತಂಗಡಿ : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಗಂಗಿ ರೆಡ್ಡಿಯವರ ಮನೆಗೆ 2009 ರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಪ್ರಕರಣದಲ್ಲಿ, ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು.

ಇದೀಗ ಹೈಕೋರ್ಟು ಆರೋಪವನ್ನು ಖುಲಾಸೆಗೊಳಿಸಿ ಆದೇಶ ಮಾಡಿದೆ. ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಗಂಗಿ ರೆಡ್ಡಿ ಅವರು ಲಾಯಿಲದಲ್ಲಿ ಹೊಂದಿದ ಮನೆಗೆ 2009ರ ಆ. 27 ರಂದು ಆಗಿನ ಲೋಕಾಯುಕ್ತ ಡಿವೈಎಸ್‌ಪಿ ಸದಾನಂದ ವರ್ಣೇಕರ್ ಮತ್ತು ಅವರ ತಂಡ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡು ವೇತನ ಆದಾಯ ಹೊರತುಪಡಿಸಿ ರೂ. 19 ಲಕ್ಷ ಹೆಚ್ಚಿನ ಆಸ್ತಿ ಪತ್ತೆ ಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಡಿವೈಎಸ್‌ಪಿ ಎಂ. ವಿಟ್ಟಲ್ ದಾಸ್ ಪೈ ಅವರು ಗಂಗಿ ರೆಡ್ಡಿ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಅವರಿಗೆ 4 ವರ್ಷ ಸಾದಾ ಸಜೆ ಮತ್ತು 5 ಲಕ್ಷ ರೂ. ದಂಡ ವಿಧಿಸಿ 2020 ಆ.27ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಗಂಗಿರೆಡ್ಡಿಯವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ, ಕೃಷಿ ಆದಾಯ, ಊರಿನಲ್ಲಿರುವ ಕಟ್ಟಡಗಳ ಬಾಡಿಗೆ, ಕುಟುಂಬದ ಆದಾಯದಲ್ಲಿ ದೊರೆತ ಚಿನ್ನ ಮಾರಾಟದ ಹಣದ ಲೆಕ್ಕಾಚಾರವನ್ನು ಲೋಕಾಯುಕ್ತ ನ್ಯಾಯಾಲಯ ತನಿಖೆ ವೇಳೆ ಪರಿಗಣಿಸಿರಲಿಲ್ಲ ಎಂಬ ಅಂಶವನ್ನು ಮುಂದಿಟ್ಟಿದ್ದರು. ಇದನ್ನು ಪರಿಗಣಿಸಿ ಹೈಕೋರ್ಟ್ ಗಂಗಿರೆಡ್ಡಿಯವರ ಶಿಕ್ಷೆಯನ್ನು ರದ್ದುಗೊಳಿಸಿದೆ.

ಗಂಗಿರೆಡ್ಡಿ ಅವರ ಪರವಾಗಿ ಪರಮೇಶ್ವರ ಎನ್. ಹೆಗ್ಡೆ, ಜಿನೇಂದ್ರ ಅವರು ವಾದ ಮಂಡಿಸಿದ್ದರು. ಗಂಗಿರೆಡ್ಡಿಯವರು ಇದೀಗ ಕರಾವಳಿ ಕಾವಲು ಪಡೆಯ (ಸಿ.ಎಸ್.ಪಿ) ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here