ಕಾಶಿಪಟ್ಣ ಸರ್ಕಾರಿ ಶಾಲಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಸಮಾಲೋಚನಾ ಸಭೆ

0

ಕಾಶಿಪಟ್ಣ: ತಾಲ್ಲೂಕಿನ ಕಾಶಿಪಟ್ಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2023-24ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮಕ್ಕೆ ಸರ್ಕಾರದಿಂದ ಅನುಮತಿ ದೊರಕಿಸಿಕೊಡಲಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಹೇಳಿದರು.

ಕಾಶಿಪಟ್ಣ ಸರ್ಕಾರಿ ಶಾಲಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ನ.18ರಂದು ಶಾಲೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕಾಶಿಪಟ್ಣ ಶಾಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೂ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಕೆ. ಸಾಲ್ಯಾನ್ ಕಾಶಿಪಟ್ಣ ಮಾತನಾಡಿ, ಕಾಶಿಪಟ್ಣ ಶಾಲೆಗೆ ಗ್ರಾಮೀಣ ಬಡ ವಿದ್ಯಾರ್ಥಿಗಳು ಹೆಚ್ಚು ಬರುತ್ತಿದ್ದು, ಅವರ ಭವಿಷ್ಯದ ದೃಷ್ಟಿಯಿಂದ ಶಾಲೆಗೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅನುಮತಿ ಮತ್ತು ಸುಸಜ್ಜಿತ ಕಟ್ಟಡ ಹಾಗೂ ಶಾಲಾ ವಾಹನದ ವ್ಯವಸ್ಥೆ ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು.

ಶಾಲೆಯ ಅಭಿವೃದ್ಧಿಗಾಗಿ ‘ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ’ ಎಂಬ ಟ್ರಸ್ಟ್ ರಚನೆ ಮಾಡುವಂತೆ ಶಾಸಕರು ಸಲಹೆ ನೀಡಿದರು. ಬಳಿಕ ಸಮಿತಿಗೆ 12 ಸದಸ್ಯರ ಆಯ್ಕೆ ಮಾಡಲಾಯಿತು. ಸಮಿತಿಗೆ ಅಶೋಕ್ ಕೋಟ್ಯಾನ್ ಪಡ್ಯೋಡಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು. ಇದೇ ವೇಳೆ ಹರೀಶ್ ಪೂಂಜ ಅವರನ್ನು ಸನ್ಮಾನಿಸಲಾಯಿತು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶುಭಕರ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಕಾಶಿಪಟ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ, ಸದಸ್ಯರಾದ ಅಶೋಕ್ ಕುಮಾರ್ ಪೊರ್ತ್ರೋಡಿ, ರವೀಂದ್ರ ಪಿ ಕೇಳ, ಶುಭವಿ ಕೋಟ್ಯಾನ್, ಮರೋಡಿ ಗ್ರಾಮ ಪಂಚಾಯಿತಿ ಸದಸ್ಯರಾದ ರತ್ನಾಕರ ಬುಣ್ಣನ್, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಶಶಿಕಲಾ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಅಖ್ತರ್ ಅಹಮ್ಮದ್ ಹಾಸ್ಕೊ, ಶಾಲಾ ಮುಖ್ಯಶಿಕ್ಷಕ ಕೃಷ್ಣಪ್ಪ ನಾಯ್ಕ ಇದ್ದರು.

ಶಾಲಾ ವಿದ್ಯಾರ್ಥಿ ನಾಯಕಿ ಲೋಷಿತಾ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಶುಭಕರ ಕೋಟ್ಯಾನ್ ಅವರು ಶಾಲೆಗೆ ಮೂಲಸೌಕರ್ಯಗಳ ಬಗ್ಗೆ ಮನವಿಯನ್ನು ಶಾಸಕರಿಗೆ ಹಸ್ತಾಂತರಿಸಿದರು. ಶಿಕ್ಷಕಿ ವಸುಧಾ ಪಿ. ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿಯವರಾದ ಭವ್ಯಾ ಜಿ.ಎಚ್‌. ಮತ್ತು ಪದ್ಮಶ್ರೀ ಜೈನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here