ಪಾಂಗಾಳಾಯಿ ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

0

ಪುತ್ತೂರು:ಕಾರಣಿಕ ಕ್ಷೇತ್ರ ಇಲ್ಲಿನ ಪರ್ಲಡ್ಕ ಪಾಂಗಳಾಯಿ ಶ್ರೀ ಅರಸು ಮುಡ್ಯಂತ್ತಾಯ ದೈವಸ್ಥಾನದಲ್ಲಿ ಶ್ರೀ ಮುಡ್ಯಂತ್ತಾಯ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ಜ.೧ರಂದು ನಡೆಯಿತು. ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಶ್ರೀ ಮಹಾಗಣಪತಿ ಹೋಮ, ನಾಗತಂಬಿಲ, ಸಾರ್ವಜನಿಕ ಆಶ್ಲೇಷ ಬಲಿ, ಪಂಚಾಮೃತ ಅಭಿಷೇಕ, ದೈವಗಳ ಸನ್ನಿಧಿಯಲ್ಲಿ ಕಲಶ ತಂಬಿಲ ಸೇವೆ, ನೂತನವಾಗಿ ನಿರ್ಮಿಸಲಾದ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಅಪರಾಹ್ನ ಶ್ರೀ ದೈವಗಳ ಭಂಡಾರ ತೆಗೆದು ಶ್ರೀ ಮುಡ್ಯಂತ್ತಾಯ ಮತ್ತು ಪರಿವಾರ ದೈವಗಳಾದ ಪೊಟ್ಟಭೂತ, ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು. ಈ ಬಾರಿ ಕೊರೋನಾ ನಿಯಮಾವಳಿಯಂತೆ ರಾತ್ರಿ ೧೦ ಗಂಟೆಯ ಬಳಿಕ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸಮಯವನ್ನು ಬದಲಾಯಿಸಿಕೊಂಡು ಅಪರಾಹ್ನದಿಂದ ನೇಮೋತ್ಸವ ಪ್ರಾರಂಭಗೊಂಡು ರಾತ್ರಿ ಸಂಪನ್ನಗೊಂಡಿದೆ. ಮಧ್ಯಾಹ್ನ ೧೨ ಗಂಟೆಯಿಂದ ಸಂಜೆ ೪ ಗಂಟೆಯ ತನಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಪೂರ್ವಶಿಷ್ಠ ಸಂಪ್ರದಾಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಎಲ್ಲಾ ವಿಧಿವಿಧಾನಗಳನ್ನು ನೆರವೇರಿದೆ. ಊಟ, ಉಪಾಹಾರ, ವಾಹನ ನಿಲುಗಡೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಬಹಳಷ್ಟು ಅಚ್ಚುಕಟ್ಟಿನಲ್ಲಿ ನಡೆದಿರುತ್ತದೆ.

ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ಮಾಜಿ ಸದಸ್ಯ ರಾಜೇಶ್ ಬನ್ನೂರು ಸಹಿತ ಸಾವಿರಾರು ಮಂದಿ ಊರ, ಪರವೂರು ಭಕ್ತಾದಿಗಳು ವಾರ್ಷಿಕ ನೇಮೋತ್ಸವದಲ್ಲಿ ಭಾಗವಹಿಸಿ ನೇಮೋತ್ಸವದ ವೈಭವವನ್ನು ಕಂಡು ಪುನೀತರಾದರು.

LEAVE A REPLY

Please enter your comment!
Please enter your name here