ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಲು ಭಾರತೀಯ ಕಿಸಾನ್ ಸಂಘ ಮನವಿ

0

ಪುತ್ತೂರು: ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ತಾಲೂಕು ಕಛೇರಿ ಮೂಲಕ ಜ.11ರಂದು ರಾಷ್ಟ್ರಪತಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿದೆ, ರೈಲ್ವೆ, ರಸ್ತೆ ವಿದ್ಯುನ್ಮಾನ ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ, ಮಂಗಳನ ಅಂಗಳದವರೆಗೂ ತಲುಪಿದ್ದೇವೆ. ಆದರೆ ಜೀವನಕ್ಕೆ ಅತ್ಯಾವಶ್ಯಕವಾಗಿ ಬೇಕಾದ ಆಹಾರವನ್ನು ಉತ್ಪಾದಿಸುವ ಕೃಷಿ ಕ್ಷೇತ್ರವು ಇಂದು ದುಸ್ಥಿತಿಯತ್ತ ಸಾಗುತ್ತಿದೆ. 1990ರ ದಶಕದಿಂದ 3.5ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಪ್ರತಿ ವರ್ಷ ಕೃಷಿ ತ್ಯಜಿಸಿ ನಗರದತ್ತ ಸಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ರೈತರು ತಾವು ಬೆಳೆದ ಬೆಳೆಗಳ ಒಳಸುರಿಗಳ ವೆಚ್ಚ ಅಧಿಕವಾಗಿ, ಪ್ರಕೃತಿ ವಿಕೋಪದಿಂದ ನಷ್ಟವುಂಟಾಗಿ ಮತ್ತು ಲಾಭದಾಯಕ ಬೆಲೆ ಸಿಗದ ಕಾರಣ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಬೇರೆ ಕ್ಷೇತ್ರಗಳ ಉತ್ಪಾದಕರು ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ತಾವೇ ದರ ನಿಗದಿಪಡಿಸುತ್ತಾರೆ. ಆದರೆ ರೈತನಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಮಧ್ಯವರ್ತಿಗಳು ದರ ನಿಗದಿ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಹೀಗೆ ಮುಂದುವರಿದರೆ ಕೃಷಿ ಕ್ಷೇತ್ರ ಅವನತಿಗೊಂಡು ಆಹಾರದ ಅಭಾವ ಉಂಟಾಗುತ್ತದೆ. ಈ ವ್ಯವಸ್ಥೆ ಸರಿಯಾಗಬೇಕಾದರೆ, ರೈತರಿಗೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ದೊರೆಯುಂತಾಗಬೇಕು.

ರೈತರ ಆದಾಯ ದ್ವಿಗುಣಗೊಳ್ಳಬೇಕೆಂದು ಕೇಂದ್ರ ಸರ್ಕಾರದ ಒಳ್ಳೆಯ ಚಿಂತನೆಯೇ ಸರಿ. ಆದರೆ, ಸರ್ಕಾರ ಕೇವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಘೋಷಿಸಿದರೆ ಸಾಲದು. ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ, ಖರೀದಿ ಗ್ಯಾರಂಟಿ ನೀಡಿ. ಘೋಷಿತ ಬೆಲೆಗಿಂತೆ ಕಡಿಮೆ ಬೆಲೆಗೆ ಖರೀದಿಯಾಗಬಾರದು. ಪ್ರತಿವರ್ಷ ಬೆಲೆ ಘೋಷಣೆಯ ಹಣದುಬ್ಬರ (inflation) ದರಕ್ಕೆ ಅನುಗುಣವಾಗಿರಲಿ, ಮಂಡಿ ಒಳಗೆ ಅಥವಾ ಹೊರಗೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಿದರೆ ಶಿಕ್ಷಾರ್ಹವಾಗಿಸಬೇಕು ಎಂಬ ಕಾನೂನನ್ನು ಜಾರಿಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ದಿನಾಂಕ 08-08-2021ರಂದು ಹರಿಯಾಣ ರಾಜ್ಯದ ಸೋನಿಪತ್ ಜಿಲ್ಲೆಯ ಜಿಂಜೋಳಿ ಗ್ರಾಮದಲ್ಲಿ ನಡೆದ ಭಾರತೀಯ ಕಿಸಾನ್ ಸಂಘದ ಅಖಿಲ ಭಾರತೀಯ ಪ್ರಭಂದ ಸಮಿತಿ ಸಭೆಯಲ್ಲಿ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಸೇರಿ ಸುಧೀರ್ಘವಾಗಿ ಚರ್ಚಿಸಿ ತೀರ್ಮಾನಿಸಲಾಗಿತ್ತು.

ಅದರಂತೆ ದಿನಾಂಕ 08-09-2021 ರಂದು ದೇಶದ ಎಲ್ಲಾ ಜಿಲ್ಲಾಧಿಕಾರಿ ಕಛೇರಿಗಳ ಎದುರು ಧರಣಿ ಸತ್ಯಾಗ್ರಹ ನಡೆಸಿ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿತ್ತು. ಆದರೆ ಇದುವರೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರ ನೇತೃತ್ವ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಆದುದರಿಂದ ತಾವುಗಳು ಈ ರೀತಿಯ ಕಾನೂನನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ರೈತರ ನೆರವಿಗೆ ಬರಬೇಕು ಮನವಿ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕರ್ನಾಟಕ ದಕ್ಷಿಣ ಪ್ರಾಂತ ಕಾರ್‍ಯಕಾರಿಣಿ ಸದಸ್ಯ ಸುಬ್ರಾಯ ಬಿ.ಎಸ್, ತಾಲೂಕು ಅಧ್ಯಕ್ಷ ವಿಜಯ ಕುಮಾರ್ ರೈ, ತಾಲೂಕು ಕಾರ್ಯದರ್ಶಿ ಧನಂಜಯ, ಜಿಲ್ಲಾ ಸಮಿತಿ ಸದಸ್ಯ ಮೂಲಚಂದ್ರ, ಶಾಂತಿಗೋಡು ಗ್ರಾಮ ಸಮಿತಿ ಕಾರ್‍ಯದರ್ಶಿ ರಾಜಾರಾಮ ನೆಲ್ಲಿತ್ತಾಯ, ಸದಸ್ಯ ಸುಕುಮಾರ ಶಿರಾಡಿರವರು ಮನವಿ ಸಲ್ಲಿಸುವ ನಿಯೋಗದಲ್ಲಿದ್ದರು. ತಹಶೀಲ್ದಾರ್ ರಮೇಶ್ ಬಾಬು ಮನವಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here