ಬಿದ್ದು ಸಿಕ್ಕಿದ ಚಿನ್ನದ ಚೈನ್ ವಾರಿಸುದಾರರಿಗೆ ಹಸ್ತಾಂತರ – ಪ್ರಾಮಾಣಿಕತೆಗೆ ಸಿಕ್ಕಿದ ಗೌರವ ಮೊತ್ತ ರೋಗಿಗೆ ಹಸ್ತಾಂತರ

0

  • ಪ್ರಾಮಾಣಿಕತೆಯೊಂದಿಗೆ ಮಾನವೀಯತೆ ಮೆರೆದ ಆಟೋ ರಿಕ್ಷಾ ಚಾಲಕ ಜನಾರ್ದನ ನಾಯಕ್ ಯಾನೆ ಚಂದ್ರಕಾಂತ್

ಪುತ್ತೂರು: ಪುತ್ತೂರು ಮಾರ್ಕೆಟ್ ರಸ್ತೆಯಲ್ಲಿ ಬಿಎಂಎಸ್ ರಿಕ್ಷಾ ಚಾಲಕರೊಬ್ಬರಿಗೆ ಬಿದ್ದು ಸಿಕ್ಕಿದ 24 ಗ್ರಾಂ ತೂಕದ ಪೆಂಡೆಂಟ್ ಸಹಿತ ಚಿನ್ನದ ಚೈನ್ ಅನ್ನು ಪೊಲೀಸರ ಸಮ್ಮುಖದಲ್ಲಿ ವಾರಿಸುದಾರರಿಗೆ ಹಸ್ತಾಂತರಿಸುವ ಮೂಲಕ ರಿಕ್ಷಾ ಚಾಲಕರು ಪ್ರಾಮಾಣಿಕತೆ ಮೆರೆದ ಮತ್ತು ರಿಕ್ಷಾ ಚಾಲಕನ ಪ್ರಾಮಾಣಿಕತೆಗೆ ಮೆಚ್ಚಿ ವಾರಿಸುದಾರರು ನೀಡಿದ ಗೌರವ ಮೊತ್ತವನ್ನು ರೋಗಿಯೊಬ್ಬರ ಚಿಕಿತ್ಸೆಗೆ ಹಸ್ತಾಂತರಿಸುವ ಮೂಲಕ ರಿಕ್ಷಾ ಚಾಲಕ ಮಾನವೀಯತೆ ಮೆರೆದಿದ್ದಾರೆ.


ಬಿಯಂಯಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಸದಸ್ಯ ಜನಾರ್ದನ ನಾಯಕ್ ಯಾನೆ ಚಂದ್ರಕಾಂತ್ ಅವರಿಗೆ ಜ.10ರಂದು ಮಾರ್ಕೆಟ್ ರಸ್ತೆಯಲ್ಲಿ ಸುಮಾರು 24ಗ್ರಾಂ ತೂಕದ ಪೆಂಡೆಂಟ್ ಸಹಿತ ಚಿನ್ನದ ಚೈನ್ ಬಿದ್ದು ಸಿಕ್ಕಿತ್ತು. ಚಂದ್ರಕಾಂತ್ ಅವರು ಚಿನ್ನದ ಚೈನ್ ಅನ್ನು ಪುತ್ತೂರು ಬಿಎಂಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಕಚೇರಿಗೆ ಒಪ್ಪಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ರವಾನಿಸಿದ್ದರು. ಈ ವಿಚಾರವನ್ನು ತಿಳಿದ ವಾರಿಸುದಾರೆ ಉಪ್ಪಿನಂಗಡಿ ನಿವಾಸಿ ಇಂದಿರಾ ದೇವಾಡಿಗ ಅವರು ಈಶ್ವರಮಂಗಲ ಘಟಕದ ಅಧ್ಯಕ್ಷ ರಮೇಶ್ ಅವರ ಮೂಲಕ ಚಿನ್ನದ ಸರದ ಕುರಿತು ಮಾಹಿತಿ ಪಡೆದರು. ಜ.11ರಂದು ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ್ ಅವರ ಉಪಸ್ಥಿತಿಯಲ್ಲಿ ವಾರಿಸುದಾರೆ ಇಂದಿರಾ ಅವರಿಗೆ ಚಿನ್ನದ ಸರವನ್ನು ಹಸ್ತಾಂತರಿಸಲಾಯಿತು. ಇದು ರಿಕ್ಷಾ ಚಾಲಕ ಚಂದ್ರಕಾಂತ್ ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿತ್ತು.

ಪ್ರಾಮಾಣಿಕೆಯೊಂದಿಗೆ ಮಾನವೀಯತೆ:
ವಾರಿಸುದಾರೆ ಇಂದಿರಾ ದೇವಾಡಿಗರವರು ಕಳೆದು ಹೋದ ಚಿನ್ನದ ಸರ ಸಿಕ್ಕಿದ ಸಂತೋಷದಲ್ಲಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಚಂದ್ರಕಾಂತ್ ಅವರಿಗೆ ಗೌರವದ ನೆಲೆಯಲ್ಲಿ ಮೊತ್ತ ನೀಡಿದಾಗ ಅದನ್ನು ಚಂದ್ರಕಾಂತ್ ಅವರು ಸ್ವೀಕರಿಸದೆ ವಾರಿಸುದಾರರ ಮೂಲಕ ಬಪ್ಪಳಿಗೆಯ ರೋಗಿಯೊಬ್ಬರ ಚಿಕಿತ್ಸೆಗೆ ಆ ಹಣವನ್ನು ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದರು. ಬಪ್ಪಳಿಗೆ ಗುಂಪಕಲ್ ನಿವಾಸಿ ಅನಾರೋಗ್ಯದಿಂದ ಬಳಲುತ್ತಿರುವ ಸಂಜೀವ ಅವರ ಚಿಕಿತ್ಸೆಗಾಗಿ ಆ ಹಣವನ್ನು ನೀಡುವುದರ ಮುಖಾಂತರ ಮಾನವೀಯತೆ ಮೆರೆದರು. ರಿಕ್ಷಾ ಚಾಲಕರ ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಬಿಯಂಯಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಮಾಜಿ ಗೌರವಾಧ್ಯಕ್ಷ ದೇವಪ್ಪ ಗೌಡ, ಅಧ್ಯಕ್ಷ ರಾಜೇಶ್ ಮರೀಲು. ಕಾರ್ಯದರ್ಶಿ ದಿನೇಶ್ ಗೌಡ. ಕೋಶಾಧಿಕಾರಿ. ಬಿ ಜನಾರ್ಧನ್ ಪೂಜಾರಿ. ಸುಳ್ಯಪದವು ಘಟಕದ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದರು. ಇಂದಿರಾ ಅವರಿಗೆ ಚಿನ್ನದ ಹಸ್ತಾಂತರ ಸಂದರ್ಭದಲ್ಲಿ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ರಾಧಾಕೃಷ್ಣ ನಾಯಕ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here