ಲಂಚ ಅಂದರೆ ದರೋಡೆ – ಭ್ರಷ್ಟಾಚಾರ ಅಂದರೆ ದೇಶದ್ರೋಹ | ಉತ್ತಮ ಕೆಲಸಕ್ಕೆ ಪುರಸ್ಕಾರ – ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಘೋಷಣೆ

0

  • ಮನೆ ಮನೆಗಳಲ್ಲಿ ಮೊಳಗಲಿ, ಊರು ಊರುಗಳಲ್ಲಿ ಲಂಚ, ಭ್ರಷ್ಟಾಚಾರ ದಹನವಾಗಲಿ

ಮ್ಮಲ್ಲಿ ಯಾರನ್ನೇ ಕೇಳಿದರೂ ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡ ಲಂಚ, ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗಲಿ ಎಂಬ ಆಂದೋಲನದ ಉದ್ಧೇಶ ಒಳ್ಳೆಯದೇ ಆದರೆ ಅದು ಇಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಲಂಚ ಭ್ರಷ್ಟಾಚಾರ ಸಾರ್ವತ್ರಿಕವಾಗಿದೆ. ಬ್ರಹ್ಮಾಂಡದಂತೆ ಬೆಳೆದಿದೆ. ಎಲ್ಲಾ ಜನರು ಇದನ್ನು ಅನಿವಾರ್ಯವೆಂದು ಒಪ್ಪಿಕೊಂಡಿದ್ದಾರೆ. ಯಾವ ಪಕ್ಷದ ಸರಕಾರ ಬಂದರೂ ಅಧಿಕಾರಿಗಳು, ಇಲಾಖೆಗಳು ಬದಲಾಗುವುದಿಲ್ಲ. ಹಣ ಕೊಡದಿದ್ದರೆ ಕೆಲಸವಾಗುವುದಿಲ್ಲ ಎಂದು ಬಹಿರಂಗವಾಗಿ ಹೇಳಿ ಇಷ್ಟು ಹಣ ಕೊಡಿ ಎಂದು ಹೇಳುವ ವ್ಯವಸ್ಥೆ ಬಂದಿದೆ. ದೂರು ಕೊಡುತ್ತೇನೆ ಎಂದರೆ ಕೊಡಿ, ನಾವು ಮೇಲೆ ಕೊಟ್ಟೇ ಬಂದಿದ್ದೇವೆ. ಲಂಚ ಪಡೆಯುವುದು, ಭ್ರಷ್ಟಾಚಾರ ಮಾಡುವುದು ನಮ್ಮ ಕೆಲಸದ ಹಕ್ಕು ಎಂದು ಜನರನ್ನು ನಂಬಿಸಿ ಹೆದರಿಸುವ ಮಟ್ಟಿಗೆ ಅವರು ಗಟ್ಟಿಯಾಗಿದ್ದಾರೆ. (ಇದು ಎಲ್ಲಾ ಇಲಾಖೆಗಳಿಗೂ, ಸಿಬ್ಬಂದಿಗಳಿಗೂ ಅನ್ವಯವಾಗುವುದಿಲ್ಲ. ಬಹಳಷ್ಟು ಜನ ಪ್ರಾಮಾಣಿಕರೂ ಇದ್ದಾರೆ. ಕಷ್ಟದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ.) ಇಲ್ಲಿಯವರೆಗೆ ರಾಜ್ಯದಲ್ಲಿ ಅಥವಾ ದೇಶದಲ್ಲಿ ಬಂದಿರುವ ಯಾವುದೇ ಸರಕಾರದಿಂದಲೂ ಅದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಸುದ್ದಿ ಆಂದೋಲನದಿಂದ ಹೇಗೆ ಸಾಧ್ಯವೆಂದು ಹೇಳುವವರು ಇದ್ದಾರೆ. ಹೌದು ಅವರು ಎಲ್ಲರೂ ಹೇಳುವುದು ಸರಿಯಾಗಿದೆ. ಇಂದಿನ ಮತ್ತು ಹಿಂದಿನ ಸರಕಾರಗಳು ಪ್ರಯತ್ನಿಸಲಿಲ್ಲ ಎಂದಲ್ಲ. ಚುನಾವಣೆಯ ಅನಿವಾರ್ಯತೆಯ ಸಂದಿಗ್ಧತೆ ಸ್ವಲ್ಪ ಮಟ್ಟಿಗೆ ತೊಡಕಾಗಿರಬಹುದು. ಆದರೆ ನಮ್ಮ ಸಮಾಜ, ಜನತೆ ಲಂಚ ಭ್ರಷ್ಟಾಚಾರವನ್ನು ವಿರೋಧಿಸದೆ ಒಪ್ಪಿಕೊಂಡಿದ್ದರಿಂದಲೇ ಅದು ಬೆಳೆದಿದೆ ಮತ್ತು ಎಲ್ಲಾ ಸರಕಾರಗಳ ಪ್ರಯತ್ನಗಳನ್ನು ವಿಫಲಗೊಳಿಸಿದೆ. ಅದಕ್ಕೆ ಮುಖ್ಯ ಕಾರಣ ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್ ಹೆಗ್ಡೆಯವರು ಹೇಳಿದಂತೆ ನಮ್ಮ ಜನತೆ ದುರಾಸೆಗೆ ಬಲಿಯಾಗಿರುವುದು, ಮಾನವೀಯತೆಯನ್ನು ಕಳೆದುಕೊಂಡಿರುವುದು ಮತ್ತು ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯವನ್ನು ಮರೆತಿರುವುದು ಎಂದು ಹೇಳಬಹುದು.

ಶಾಸಕರ ಮತ್ತು ಜನತೆಯ ನೇತೃತ್ವದಲ್ಲಿ ನಡೆಯುವ ಜನಾಂದೋಲನವಾಗಬೇಕು :
ಸುದ್ದಿಯಿಂದ ಲಂಚ, ಭ್ರಷ್ಟಾಚಾರವನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಮಹಾತ್ಮ ಗಾಂಧಿ ಆಶಯದ ಸ್ವಯಂ ಆಡಳಿತದ ಹಿನ್ನಲೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ತೊಡಗಿಸಿಕೊಂಡು ಅದನ್ನು ಜನಾಂದೋಲನವನ್ನಾಗಿ ರೂಪಿಸಲು ಸಾಧ್ಯವಾದರೆ ಜನರಿಂದ ಈ ಲಂಚ ಭ್ರಷ್ಟಾಚಾರವನ್ನು ನಿವಾರಿಸಲು ಸಾಧ್ಯವಿದೆ ಎಂದು ಖಂಡಿತಾ ನಂಬಿದ್ದೇವೆ. ಇಲ್ಲಿ ಯಾರಿಗೂ ಹೊಡೆಯಬೇಕಿಲ್ಲ, ಹಿಂಸೆ ಇಲ್ಲ, ಅವಾಚ್ಯವಾಗಿ ಬೈಯ ಬೇಕಿಲ್ಲ, ಹಿಂಸಾತ್ಮಕ ಪ್ರತಿಭಟನೆಗಳ ಅವಶ್ಯಕತೆ ಇಲ್ಲ, ಯಾವುದೇ ಖರ್ಚು ವೆಚ್ಚ, ಪರಿಶ್ರಮವಿಲ್ಲ, ಕಾನೂನು ಮುರಿಯುವ ಕ್ರಿಯೆ ಇಲ್ಲ, ಮಹಾತ್ಮ ಗಾಂಧಿಯವರ, ಸಂತೋಷ್ ಹೆಗ್ಡೆಯವರ, ಜನರ ಮನಪರಿವರ್ತನೆಯ, ನೈತಿಕ ಮೌಲ್ಯದ ಪ್ರತಿಪಾದನೆ, ಜನರ ಭಾಗವಹಿಸುವಿಕೆಯ ಗ್ರಾಮ ಸ್ವರಾಜ್ಯದ ಆಡಳಿತ ಅನುಷ್ಟಾನಕ್ಕೆ ಬರುವಂತೆ ಈ ಆಂದೋಲನ ಕೆಲಸ ಮಾಡಲಿದೆ. ನಮ್ಮದು ಪ್ರಜಾಪ್ರಭುತ್ವವಾದ್ದರಿಂದ ಇದರ ನೇತೃತ್ವವನ್ನು ಶಾಸಕರು, ಜನಪ್ರತಿನಿಧಿಗಳು, ಸಂಘಟನೆಗಳು, ಮತ್ತು ಸಾರ್ವಜನಿಕರು ವಹಿಸಿಕೊಳ್ಳಬೇಕು ಎಂದು ಆಶಿಸುತ್ತೇವೆ.

ಲಂಚ ಪಡೆಯುವ ದರೋಡೆಕೋರರಿಗೆ ಭ್ರಷ್ಟಾಚಾರ ಮಾಡುವ ದೇಶದ್ರೋಹಿಗಳಿಗೆ ಗೌರವ ಯಾಕೆ? :
ಸಂಬಳವನ್ನು ಪಡೆದು ಜನಸೇವಕನಾಗಿ ಕೆಲಸ ಮಾಡಬೇಕಾದ ವ್ಯಕ್ತಿ ಜನರನ್ನು ಹಣಕ್ಕಾಗಿ ಪೀಡಿಸಿ ಸುಲಿಗೆ ಮಾಡಿದರೆ ಅದು ದರೋಡೆಯಲ್ಲವೇ? ದರೋಡೆಕೋರನಾದರೆ ಜೀವನಕ್ಕಾಗಿ ಸಿಕ್ಕಿದನ್ನು ದೋಚುತ್ತಾನೆ. ಸಂಬಳವನ್ನು ಪಡೆದು ಹಣಕ್ಕಾಗಿ ಪೀಡಿಸಿದರೆ ಅವರು ದರೋಡೆಕೋರನಿಗಿಂvಲೂ ದೊಡ್ಡ ದರೋಡೆಕೋರ ಎಂದಾಗಬೇಕಲ್ಲವೇ… ಹಾಗೆಯೇ ಭ್ರಷ್ಟಾಚಾರದ ಮೂಲಕ ಜನರಿಗೆ ತೊಂದರೆ ನೀಡುವ, ಊರನ್ನು, ರಸ್ತೆಯನ್ನು, ಕಟ್ಟಡಗಳನ್ನು ಹಾಳು ಮಾಡುವವರು ದೇಶದ್ರೋಹಿಗಳಿಗಿಂತ ಕಡೆ ಎಂದಾಗಬೇಕಲ್ಲವೇ..? ದರೋಡೆಕೋರರು ಮತ್ತು ದೇಶದ್ರೋಹಿಗಳು, ಎಷ್ಟೇ ಪ್ರಭಾವಿಗಳಾದರೂ, ಶ್ರೀಮಂತರಾದರೂ, ಎಷ್ಟೇ ಚಿನ್ನ, ಕಾರು, ಮನೆ ಹೊಂದಿದ್ದರೂ ಅವರನ್ನು ಜನತೆ ಗೌರವಿಸುವುದಿಲ್ಲ. ಸನ್ಮಾನ ಮಾಡುವುದಿಲ್ಲ ಯಾಕೆ? ಆದರೆ ಜೀವನಕ್ಕೆ ಸಂಬಳವಿದ್ದರೂ ಲಂಚ, ಭ್ರಷ್ಟಾಚಾರದ ಮೂಲಕ ದರೋಡೆಯ ಮತ್ತು ದೇಶದ್ರೋಹದ ಕೆಲಸ ಮಾಡುತ್ತಿರುವವರನ್ನು ಗೌರವಿಸುವುದು, ರಕ್ಷಿಸುವುದು ಯಾಕೆ? ತಮ್ಮ ಕೆಲಸಕ್ಕೆ ಗೌರವವೂ ಇದೆ. ಹಣವೂ ಇದೆ. ಎಂಬ ಕಾರಣಕ್ಕೆ ಲಂಚಕೋರರು, ಭ್ರಷ್ಟಾಚಾರಿಗಳು ಜಾಸ್ತಿಯಾಗಿದ್ದಾರೆ. ಇನ್ನೂ ಆಗುತ್ತಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ..? ಅಂತವರನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು, ಗುರುತಿಸಬಾರದು, ಗೌರವಿಸಬಾರದು, ಮನೆಗಳಿಗೆ, ಕಾರ್ಯಕ್ರಮಗಳಿಗೆ ಆಹ್ವಾನಿಸಬಾರದು. ಅವರ ಸಹವಾಸ ಮಾಡಬಾರದು. ಅದಕ್ಕಾಗಿ ಅವರ ಸಂಪತ್ತನ್ನು ದರೋಡೆಯ, ದೇಶದ್ರೋಹದ ಸಂಪಾದನೆ ಎಂದು ಪರಿಗಣಿಸಬೇಕು. ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಎಂಬ ಫಲಕ ಎಲ್ಲೆಡೆಯಿದ್ದು ಘೋಷಣೆಗಳು ಇದ್ದರೆ ಅವರು ಮಾನಕ್ಕೆ ಅಂಜಿ ಲಂಚ ತೆಗೆದುಕೊಳ್ಳಲಾರರು. ಭ್ರಷ್ಟಾಚಾರ ಮಾಡಲಾರರು. ದರೋಡೆಕೋರರ, ದೇಶದ್ರೋಹಿಗಳ ಸಂಬಂಧಿಕರು ಎಂದು ಹೇಳಿಕೊಳ್ಳಲು ಇಚ್ಚಿಸದೆ ಇರುವುದರಿಂದ ಅವರ ಮನೆಯವರು, ಮಕ್ಕಳು, ಬಂಧುಗಳು, ಪ್ರೋತ್ಸಾಹ ನೀಡಲಾರರು.

ಲಂಚ ಭ್ರಷ್ಟಾಚಾರ ಸಂಪತ್ತಿಗಿಂತ ಅಧಿಕಾರಿಗಳಿಗೆ ಜನರ ಮೆಚ್ಚುಗೆಯ ಸಂಪತ್ತು ಶ್ರೇಷ್ಟವಾಗಬೇಕು :
ಅದೇ ರೀತಿ ಸಾರ್ವಜನಿಕರ ಸೇವಕನಾಗಿ ಸಂಬಳ ಪಡೆಯುತ್ತಿದ್ದರೂ, ಜನರ ತುಂಬಾ ಕೆಲಸದ ಒತ್ತಡವಿದ್ದರೂ ಮೇಲಾಧಿಕಾರಿಗಳ ಆದೇಶದ, ಕೆಲಸದ ಒತ್ತಡದ ನಡುವೆಯೂ ಜನರನ್ನು ಸಮಾಧಾನ ಪಡಿಸಿ ಉತ್ತಮ ಸೇವೆ ನೀಡುವ ಅಧಿಕಾರಿಗಳೂ ಇದ್ದಾರೆ. ಹಣ ಮಾಡುವ ಅವಕಾಶವಿದ್ದರೂ ಯಾವುದೇ ಒತ್ತಡಕ್ಕೆ ಒಳಗಾಗದೆ ಜನ ಸೇವೆ ಮಾಡುವ, ಊರಿನ ಹಿತಾಸಕ್ತಿ ಕಾಪಾಡುವ ಅಧಿಕಾರಿಗಳನ್ನು, ದೇಶ ರಕ್ಷಿಸುವ ಸೈನಿಕರನ್ನು, ಸಮಾಜಕ್ಕಾಗಿ ಸೇವೆ ಮಾಡುವವರನ್ನು, ಉದಾ: ಹರೇಕಳ ಹಾಜಬ್ಬರನ್ನು ಗುರುತಿಸಿದಂತೆ ಜನರಿಗೆ ಉತ್ತಮ ಸೇವೆ ನೀಡುವ ಸಿಬ್ಬಂದಿಗಳನ್ನು ಗುರುತಿಸಬೇಕು. ಅವರ ಪ್ರಾಮಾಣಿಕತೆಗಾಗಿ, ಜನಸೇವೆಗಾಗಿ ಸನ್ಮಾನಿಸಬೇಕು. ಹೀಗೆ ಮಾಡಿದರೆ ಆಮಿಷಕ್ಕೆ ಒಳಗಾಗಿ ಲಂಚ ಭ್ರಷ್ಟಾಚಾರ ಮಾಡಿದ ಸಂಪತ್ತಿಗಿಂತ ಜನರ ಮೆಚ್ಚುಗೆಯ ಸಂಪತ್ತು ಮುಖ್ಯವೆಂದು ಅಧಿಕಾರಿಗಳು ಪರಿಗಣಿಸುವುದು ಖಂಡಿತ. ಅಂತಹ ವಾತಾವರಣವನ್ನು ಜನತೆ ಉಂಟು ಮಾಡಿದಾಗ ಹಣ ಕೊಟ್ಟರೂ ತೆಗೆದುಕೊಳ್ಳದೆ ಭ್ರಷ್ಟಾಚಾರ ಮಾಡದೆ ನಮ್ಮ ಇಲಾಖಾ ಸಿಬ್ಬಂದಿಗಳು ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ. ಈ ಯೋಜನೆ ಕಾರ್ಯರೂಪಕ್ಕೆ ಬರಲಿಕ್ಕಾಗಿ ಕಳೆದ ಆ.15ರಂದು ಸುಳ್ಯ ಪುತ್ತೂರು ಬೆಳ್ತಂಗಡಿ ತಾಲೂಕುಗಳಲ್ಲಿ ಜನಮೆಚ್ಚಿದ ಅಧಿಕಾರಿಗಳನ್ನು ಜನರ ಓಟಿನ ಮೂಲಕ ಆರಿಸಿ ಗೌರವಿಸಿದ್ದೇವೆ. ಸನ್ಮಾನ ಮಾಡಿದ್ದೇವೆ. ಉತ್ತಮ ಸೇವೆಗೆ ಪುರಸ್ಕಾರ ನೀಡಿದ್ದೇವೆ. ಅವರ ಇಲಾಖೆಗಳಿಗೆ ಕುಂದುಕೊರತೆಗಳಿದ್ದರೆ ಸರಿಪಡಿಸುವಂತೆ ಶಾಸಕರಿಗೆ, ಮೇಲಾಧಿಕಾರಿಗಳಿಗೆ ಪತ್ರಿಕೆ ಮೂಲಕ ಮನವಿ ಸಲ್ಲಿಸಿದ್ದೇವೆ. ಸಾರ್ವಜನಿಕರು ಮುಂದೆ ಬಂದು ನಮ್ಮ ಸೇವೆಗಾಗಿ ಇರುವ ಇಲಾಖೆಗಳ ಮತ್ತು ಸಿಬ್ಬಂದಿಗಳ ಕೊರತೆ ನಿವಾರಿಸುವಂತೆ ಕೇಳಿಕೊಂಡಿದ್ದೇವೆ.

1985ರಲ್ಲಿ ಸುಳ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ಆಂದೋಲನ ನಡೆಸಿ ಅದರ ಪ್ರತಿಕೃತಿ ದಹಿಸಿದ ದಿನದ ನೆನಪಿಗಾಗಿ ಇದೇ ಜನವರಿ 10ರಂದು ಸುಳ್ಯ ಪುತ್ತೂರು ಬೆಳ್ತಂಗಡಿಗಳಲ್ಲಿ ಲಂಚ ಭ್ರಷ್ಟಾಚಾರದ ಪ್ರತಿಕೃತಿ ದಹನ ಮಾಡಿದ್ದೇವೆ. “ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ ಲಂಚ ಭ್ರಷ್ಟಾಚಾರ ಮುಕ್ತ ಊರು ತಾಲೂಕು ಜಿಲ್ಲೆ ನಮ್ಮದಾಗಲಿ” ಎಂದು ಘೋಷಣೆ ಕೂಗಿದ್ದೇವೆ. ಅದಕ್ಕೆ ಪೂರ್ವಭಾವಿಯಾಗಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರನ್ನು ಸಂವಾದಕ್ಕಾಗಿ ಸುಳ್ಯ, ಪುತ್ತೂರಿಗೆ ಕರೆಯಿಸಿ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ ಫಲಕವನ್ನು ಬಿಡುಗಡೆಗೊಳಿಸಿ ಜನಾಂದೋಲನಕ್ಕೆ ಚಾಲನೆ ನೀಡಿದ್ದೇವೆ. ಮಂಗಳೂರು, ಬೆಂಗಳೂರುನಲ್ಲಿ ಪತ್ರಿಕಾಗೋಷ್ಟಿ ಮಾಡಿ ಜನರ ಮತ್ತು ಮಾಧ್ಯಮದವರ ಬೆಂಬಲವನ್ನು ಕೇಳಿದ್ದೇವೆ.

ಲಂಚ ಭ್ರಷ್ಟಾಚಾರ ಮುಕ್ತ ಊರಿನೆಡೆಗೆ ಪ್ರಜಾಪ್ರಭುತ್ವದ ಕಡೆಗೆ ನಡಿಗೆ, ಘೋಷಣೆ, ಲಂಚ ಭ್ರಷ್ಟಾಚಾರ ದಹನ :
ಈ ಜನಾಂದೋಲನವನ್ನು ಯಶಸ್ಸುಗೊಳಿಸಲು ಜನರು ಪ್ರತೀ ಗ್ರಾಮಗ್ರಾಮಗಳಲ್ಲಿ ಆಂದೋಲನದ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಘೋಷಣೆ ಪ್ರತಿಜ್ಞೆ ಮಾಡಿಸಬೇಕು. ಪ್ರತೀ ಗ್ರಾಮದಲ್ಲಿ ಕನಿಷ್ಟ 25ರಿಂದ ನೂರು ಜನರಾದರೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತೀ ಗ್ರಾಮದಲ್ಲಿ ಉತ್ತಮ ಸೇವೆ ಮಾಡುವವರನ್ನು ಗುರುತಿಸಿ ಪಟ್ಟಿ ಮಾಡಿಡಬೇಕು. ಜನವರಿ 26ರ ಬೆಳಿಗ್ಗೆ 9 ಗಂಟೆಯಿಂದ ಪ್ರತೀ ಮನೆಯಿಂದ ಕನಿಷ್ಟ ಓರ್ವನಂತೆ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ, ಲಂಚ ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗಲಿ, ನಮ್ಮ ಊರು ನಮ್ಮ ಆಡಳಿತ ನಮ್ಮ ಜವಾಬ್ದಾರಿ ಎಂಬ ಪ್ರಜಾಪ್ರಭುತ್ವದ ಘೋಷಣೆಗಳೊಂದಿಗೆ ಪಂಚಾಯತ್ ಕಡೆ ನಡಿಗೆ ಮಾಡಬೇಕು. 10 ಗಂಟೆಯಿಂದ 11ರವರೆಗೆ ಉತ್ತಮ ಸೇವೆ ಮಾಡುವವರನ್ನು ಗುರುತಿಸುವುದು, ಪುರಸ್ಕರಿಸುವುದು ಮಾಡಬೇಕು. ತಾಲೂಕು ಕೇಂದ್ರದಲ್ಲಿ ಪ್ರತೀ ಗ್ರಾಮದಿಂದ ಕನಿಷ್ಟ 5ರಿಂದ 10 ಜನ ಭಾಗವಹಿಸಿ ಈ ಮೇಲಿನ ಕೆಲಸ ಮತ್ತು ಘೋಷಣೆಗಳನ್ನು ಕೂಗಿ ಪ್ರತಿಜ್ಞೆಯನ್ನು ಮಾಡಬೇಕು. ಕೊನೆಗೆ ಲಂಚ ಭ್ರಷ್ಟಾಚಾರದ ಪ್ರತಿಕೃತಿಯನ್ನು ಗ್ರಾಮಗಳಲ್ಲಿ ಮತ್ತು ತಾಲೂಕು ಕೇಂದ್ರದಲ್ಲಿ ದಹಿಸುವ ಮೂಲಕ ಅದರ ವಿರುದ್ಧ ಆಕ್ರೋಶವನ್ನು ಹೊರಗೆ ಹಾಕಿ ಲಂಚ ಭ್ರಷ್ಟಾಚಾರ ಮುಕ್ತ ಊರು ತಾಲೂಕು ಜಿಲ್ಲೆ ನಮ್ಮದಾಗಲಿ ಎಂಬ ನಿರ್ಣಯ ಕೈಗೊಂಡು ಪ್ರತಿಜ್ಞೆ ಮಾಡಬೇಕು. ಸುಳ್ಯ ಪುತ್ತೂರು ಬೆಳ್ತಂಗಡಿ ತಾಲೂಕಿನ ಎಲ್ಲಾ ಕಡೆಗಳಲ್ಲಿ ನಡೆಯಬೇಕು. ಸಾಧ್ಯವಾದರೆ ಇತರ ತಾಲೂಕುಗಳಿಗೆ, ದ.ಕ.ಜಿಲ್ಲೆಗೂ ವಿಸ್ತರಿಸಬೇಕು.

ಜನಾಂದೋಲನಕ್ಕೆ ಎರಡನೇ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಜಯ ಎಂದಾಗಿ ರಾಜ್ಯಕ್ಕೆ, ದೇಶಕ್ಕೆ ಹರಡಲಿ :
ಈ ಮೇಲಿನ ಎಲ್ಲಾ ಕಾರ್ಯಗಳು ಸ್ಥಳೀಯ ಜನಪ್ರತಿನಿಧಿಗಳ, ಸಂಘ ಸಂಸ್ಥೆಗ, ಶಾಸಕರ ನೇತೃತ್ವದಲ್ಲಿ ನಡೆಯಬೇಕು. ಪ್ರಜಾಪ್ರಭುತ್ವದಲ್ಲಿ ನಮ್ಮಿಂದ ಆರಿಸಲ್ಪಟ್ಟ ಜನಪ್ರತಿನಿಧಿಗಳೇ ನಮ್ಮ ಆಡಳಿತದ ಒಳಿತು ಕೆಡುಕುಗಳಿಗೆ ಜವಾಬ್ದಾರರು. ಅಧಿಕಾರಿಗಳನ್ನು ನಿಯಂತ್ರಿಸುವ, ಉತ್ತಮ ಕೆಲಸಗಳನ್ನು ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಅವರದ್ದೇ ಆಗಿದೆ. ಜನರು ಪಕ್ಷ, ಜಾತಿ, ಧರ್ಮ, ಮೇಲು ಕೀಳು, ಶ್ರೀಮಂತ, ಬಡವ ಎಂಬ ಭೇದ ಭಾವ ಬಿಟ್ಟು ಅವರೊಂದಿಗೆ ಸೇರಿಕೊಂಡು ಸಹಭಾಗಿತ್ವ, ಪ್ರೋತ್ಸಾಹ ನೀಡಬೇಕು. ಆ ಮೂಲಕ ಊರಿನ ತಾಲೂಕಿನ ಎಲ್ಲಾ ಜನರ ಆಂದೋಲನ ಇದಾಗಬೇಕು. ಹಾಗೆ ಆದರೆ ಮೂರು ತಿಂಗಳ ಒಳಗೆ ಲಂಚ ಭ್ರಷ್ಟಾಚಾರ ಮುಕ್ತ ಉತ್ತಮ ಸೇವೆ ನೀಡುವ ನಮ್ಮ ಊರು, ತಾಲೂಕು(ಜಿಲ್ಲೆ) ಆಗಲಿದೆ. ಇದು ಜನರ ಎರಡನೇ ಸ್ವಾತಂತ್ರ್ಯ ಮಾತ್ರವಲ್ಲ, ಪ್ರಜಾಪ್ರಭುತ್ವದ ಜಯ ಎಂದು ಪರಿಗಣಿಸಲ್ಪಡಬೇಕು. ಈ ಜನಾಂದೋಲನ ಯಶಸ್ವಿಯಾದರೆ ಇತರ ತಾಲೂಕು, ಜಿಲ್ಲೆಗಳಿಗೂ, ರಾಜ್ಯಕ್ಕೂ ಹರಡಿ ದೇಶವೇ ಲಂಚ ಭ್ರಷ್ಟಾಚಾರ ಮುಕ್ತ ಉತ್ತಮ ಸೇವೆಯ ದೇಶವಾಗಬಹುದು ಎಂಬ ಬಹುದೂರದ ಯೋಚನೆಯನ್ನು ನಿಮ್ಮ ಮುಂದಿಟ್ಟಿದ್ದೇನೆ.
-ಸಂ.

LEAVE A REPLY

Please enter your comment!
Please enter your name here