ಬದುಕೆಂಬ ನಾಣ್ಯದ ಚಲಾವಣೆಗೆ ಧರ್ಮ, ಸಂಸ್ಕೃತಿಯೆಂಬ ಮುಖಗಳು ಅಗತ್ಯ: ಒಡಿಯೂರು ಶ್ರೀ

0

ಉಪ್ಪಿನಂಗಡಿ: ಧರ್ಮ ಮತ್ತು ಸಂಸ್ಕೃತಿಯೆಂಬ ಎರಡು ಮುಖಗಳಿದ್ದಾಗ ಮಾತ್ರ ಬದುಕೆಂಬ ನಾಣ್ಯದ ಚಲಾವಣೆಗೆ ಬರಲು ಸಾಧ್ಯ. ಭಜನಾ ಮಂದಿರದಂತಹ ಧಾರ್ಮಿಕ ಮಂದಿರದಲ್ಲಿ ಇವುಗಳೆರಡನ್ನು ಪಡೆಯಲು ಸಾಧ್ಯ. ಆದ್ದರಿಂದ ಭಜನಾ ಮಂದಿರಗಳು ಪ್ರತಿ ಊರಲ್ಲಿ ತಲೆಯೆತ್ತಬೇಕು. ಪ್ರತಿಯೊಂದು ಮನೆಯಲ್ಲಿಯೂ ಭಜಕನಿರಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.

 

ಪುನರ್‌ನಿರ್ಮಾಣಗೊಂಡ ದುರ್ಗಾಗಿರಿಯ ಶ್ರೀ ದುರ್ಗಾ ಭಜನಾ ಮಂದಿರದ ಲೋಕಾರ್ಪಣೆ ಮತ್ತು ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ದುರ್ಗೆಯೆಂದರೆ ಜ್ಞಾನದ ಬೆಳಕು. ಇಲ್ಲಿ ಭಜನಾ ಮಂದಿರ ಪುನರ್ ನಿರ್ಮಾಣಗೊಂಡ ಬಳಿಕ ಆ ಬೆಳಕೀಗ ಪರಿಸರವನ್ನು ಆವರಿಸಿದೆ. ಇಲ್ಲಿ ಭಜನಾ ಮಂದಿರ ನಿರ್ಮಾಣವಾಗಬೇಕಾದರೆ ಹಲವು ಹಿರಿಯರ ಶ್ರಮವಿದೆ. ಹಳೆಯ ಬೇರನ್ನು ಮರೆತಾಗ ಹೊಸ ಸಿರಿಯ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಹಿರಿಯರ ಶ್ರಮವನ್ನು ಮರೆಯುವ ಕೆಲಸವಾಗಬಾರದು. ಅದರ ನೆನಪಿನೊಂದಿಗೆ ಯುವ ಶಕ್ತಿ ಎದ್ದು ನಿಂತು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಭಜನೆಯೆಂದರೆ ಭಕ್ತಿ ಪ್ರಪಂಚವಾಗಿದ್ದು, ಭಜನಾ ಕೀರ್ತನೆಯಲ್ಲಿ ಭಗವಂತ ಲೀನವಾಗಿದ್ದಾನೆ. ಭಜನೆಯು ಸುಲಭದ ಭಕ್ತಿ ಮಾರ್ಗವಾಗಿದ್ದು, ಇದಕ್ಕೆ ಕುಟುಂಬವನ್ನು ಒಂದುಗೂಡಿಸುವ ಶಕ್ತಿ ಇದೆ. ಭಜನಾ ಮಂದಿರಗಳಿಂದ ಧರ್ಮವನ್ನು ಸಾಪೇಕ್ಷವಾಗಿ ಕೊಂಡು ಹೋಗಲು ಸಾಧ್ಯ ಎಂದು ತಿಳಿಸಿದರು.

ಶ್ರೀ ಗೆಜ್ಜೆಗಿರಿ ಕ್ಷೇತ್ರಾಡಳಿತದ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಬದಲಾದ ಈ ಕಾಲಘಟ್ಟದಲ್ಲಿ ಹೆಚ್ಚಿನ ಕಡೆಗಳಲ್ಲಿ ಮಹಿಳೆಯರು ಮನೆಯನ್ನು ವಿಂಗಡನೆ ಮಾಡುವಂತಹ ಧಾರಾವಾಹಿಯನ್ನು ನೆಚ್ಚಿಕೊಂಡರೆ, ಮಕ್ಕಳು ಮೊಬೈಲ್‌ನ ಮೊರೆ ಹೋಗಿರುತ್ತಾರೆ. ಆದ್ದರಿಂದ ಸಂಜೆಯ ಹೊತ್ತು ಭಜನೆಯ ನಿನಾದ ಹೊರಹೊಮ್ಮುತ್ತಿದ್ದ ಮನೆಗಳಲ್ಲೀಗ ಟಿ.ವಿ, ಮೊಬೈಲ್‌ಗಳ ಅರಚಾಟ ಕೇಳಿಸುವಂತಾಗಿದೆ. ಕಾಲಘಟ್ಟಗಳು ಬದಲಾದರೂ ನಮ್ಮ ಸಂಸ್ಕಾರ- ಸಂಸ್ಕೃತಿಯನ್ನು ಮರೆಯಬಾರದು. ಅದನ್ನು ಮುಂದಿನ ಪೀಳಿಗೆಗೂ ಹೇಳಿಕೊಟ್ಟು ಅದನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು. ಆದ್ದರಿಂದ ಕತ್ತಲಾವರಿಸುತ್ತಿದ್ದಂತೆ ಪ್ರತಿ ಮನೆಯಲ್ಲಿಯೂ ಭಜನೆಯ ಸಂಕೀರ್ತನೆಗಳು ಹೊರಹೊಮ್ಮಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಭಜನಾ ಪರಿಷತ್‌ನ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ ಸಂದಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ವೆಂಕಟ್ರಮಣ ಭಟ್ ಪಾತಾಳ ಉಪಸ್ಥಿತರಿದ್ದರು. ಭಜನಾ ಮಂದಿರದ ಅಧ್ಯಕ್ಷ ಲೋಕೇಶ್ ಬೆತ್ತೋಡಿ ದಂಪತಿಯನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ದಡ್ಡು, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ, ಪ್ರಮುಖರಾದ ಮುಕುಂದ ಗೌಡ ಬಜತ್ತೂರು, ಸುರೇಶ್ ಅತ್ರೆಮಜಲು, ಪ್ರಸಾದ್ ಬಂಡಾರಿ, ಸುರೇಶ್ ಗೌಂಡತ್ತಿಗೆ ಮತ್ತಿತರರು ಉಪಸ್ಥಿತರಿದ್ದರು.

ಭಜನಾ ಮಂದಿರದ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಸ್ವಾಗತಿಸಿದರು. ಉಪಾಧ್ಯಕ್ಷ ಕೇಶವ ರಂಗಾಜೆ ವಂದಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂದಿರದ ಕಾರ್ಯದರ್ಶಿ ಪದ್ಮನಾಭ ಸಂಕೇಶ, ಕೋಶಾಧಿಕಾರಿ ವೆಂಕಟ್ರಮಣ ಭಟ್ ಮುಣಿಕ್ಕಾನ, ಉಪಾಧ್ಯಕ್ಷರುಗಳಾದ ಕೇಶವ ರಂಗಾಜೆ, ವಿಮಲ ಗೋಪಾಲ ಪಾತಾಳ, ಸಹ ಕಾರ್ಯದರ್ಶಿಗಳಾದ ಶೇಖರ ವರೆಕ್ಕ, ಮಾಲತಿ ಗಿರಿಯಪ್ಪ ಬೆತ್ತೋಡಿ, ಶ್ರೀ ದುರ್ಗಾ ಮಾತಾ ಭಜನಾ ಮಂಡಳಿ ಅಧ್ಯಕ್ಷೆ ಅರ್ಚನಾ ಸತೀಶ್ ಬೆತ್ತೋಡಿ, ಶ್ರೀ ದುರ್ಗಾ ಯುವಕ ಮಂಡಲದ ಅಧ್ಯಕ್ಷ ಪವನ್ ಪಾತಾಳ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here