ಒಂದೇ ಭಾರತ – ಒಂದೇ ತುರ್ತು ಕರೆ ಸಂಖ್ಯೆ 112 ಮಾಹಿತಿ ಕಾರ್ಯಕ್ರಮ

0

ಪುತ್ತೂರು : ಕೇಂದ್ರ ಸರಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಒಂದೇ ಭಾರತ – ಒಂದೇ ತುರ್ತು ಕರೆ ಸಂಖ್ಯೆಯ ಕುರಿತು ಮಾಹಿತಿ ಕಾರ್ಯಕ್ರಮವನ್ನು ಸಂತಫಿಲೋಮಿನಾ ಕಾಲೇಜಿನಲ್ಲಿ ಎನ್‌ಸಿಸಿ ಘಟಕ ಮತ್ತು ಪೋಲೀಸ್ ಇಲಾಖೆಯ ವತಿಯಿಂದ ಜಂಟಿಯಾಗಿ ಆಯೋಜಿಸಲಾಯಿತು.


ಭಾರತದಂಥ ವಿಶಾಲ ದೇಶದಲ್ಲಿ ಪೋಲೀಸ್, ಅಪಘಾತ, ವೈದ್ಯಕೀಯ, ಬೆಂಕಿ ಮತ್ತು ಇತರ ಪ್ರಾಕೃತಿಕ ಅವಘಡವೇ ಮೊದಲಾದ ತುರ್ತು ಸಂದರ್ಭದಲ್ಲಿ ಬಳಸಬೇಕಾದ ಸಹಾಯವಾಣಿಯು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ. ಅಗತ್ಯ ಸಂದರ್ಭದಲ್ಲಿ ಯಾವ ಸಂಖ್ಯೆಯನ್ನು ಸಂಪರ್ಕಿಸಬೇಕು ಎಂದು ತಿಳಿಯದೇ ಗೊಂದಲವೇ ಹೆಚ್ಚು. ಇದರ ಬದಲಿಗೆ ಒಂದೇ ಸಂಖ್ಯೆಯ ಸಹಾಯವಾಣಿಯ ವ್ಯವಸ್ಥೆ ಇದ್ದರೆ ಅತ್ಯಂತ ಅನುಕೂಲ. ಅಂಥ ಡಿಜಿಟಲ್ ಆಪ್‌ನ್ನು ರೂಪಿಸಿ ಕೇಂದ್ರ ಸರಕಾರವು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಆಪ್‌ನ್ನು ಇಂಟರ್ನೆಟ್ ತಾಣದಿಂದ ಡೌನ್ ಲೋಡ್ ಮಾಡಿ ಬಳಸುವ ಕುರಿತು ಪುತ್ತೂರು ನಗರ ಪೋಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಶ್ರೀ.ನಾಗರಾಜ್ ಮತ್ತು ಕಾನ್‌ಸ್ಟೆಬಲ್ ಶ್ರೀ.ಶಿವಪ್ಪ ನಾಯಕ್ ಪ್ರಾತ್ಯಕ್ಷಿಕೆಯ ಮೂಲಕ ವಿವರಣೆ ನೀಡಿದರು.

ತುರ್ತು ಸಂದರ್ಭಗಳಲ್ಲಿ ಫೋನಿನಲ್ಲಿ 112 ಸಂಖ್ಯೆಗೆ ಡಯಲ್ ಮಾಡಿ ಸಹಾಯಕ್ಕೆ ಮನವಿ ಸಲ್ಲಿಸಬಹುದು. ಪೊಲೀಸ್, ಅಗ್ನಿಶಾಮಕ, ಮಹಿಳಾ ವಿಪತ್ತು ನಿರ್ವಹಣೆ ಮತ್ತು ಇತರ ಹಲವು ಬಗೆಯ ನೆರವನ್ನು ಪಡೆಯಬಹುದು. ಇಂಟರ್ನೆಟ್ ಮೂಲಕ ಸಂಬಂಧಿತ ಇಲಾಖೆಯೊಂದಿಗೆ ಸಮನ್ವಯಗೊಳಿಸಿದ ಈ ಹೊಸ ವ್ಯವಸ್ಥೆಯಲ್ಲಿ ೧೧೨ ಸಂಖ್ಯೆಗೆ ಕರೆ ಮಾಡಿ ನೆರವಿಗೆ ಮನವಿ ಸಲ್ಲಿಸಿದ ಹದಿನೈದು ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಿ ಸಹಾಯ ವ್ಯವಸ್ಥೆ ಕಾರ್ಯೋನ್ಮುಖವಾಗುತ್ತದೆ ಎಂದು ವಿವರಿಸಿದರು.

ಕಾಲೇಜಿನ ಎನ್‌ಸಿಸಿ ಕ್ಯಾಡೆಟ್‌ಗಳು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದ ಕಾರ್ಯಕ್ರಮವನ್ನು ಎನ್‌ಸಿಸಿ ಆಫಿಸರ್ ಲೆಫ್ಟಿನೆಂಟ್ ಜಾನ್ಸನ್ ಡೆವಿಡ್ ಸಿಕ್ವೆರಾ ನಿರ್ವಹಿಸಿದರು.

LEAVE A REPLY

Please enter your comment!
Please enter your name here