ಎಲಿಯದಲ್ಲಿ ಶ್ರೀ ವಿಷ್ಣುವಿನ ಕಾರಣಿಕತೆ ವರ್ಷದೊಳಗೆ ಎದ್ದು ನಿಂತಿದೆ ಶಿಲಾಮಯ ಭವ್ಯ ದೇಗುಲ

0

@ ಸಿಶೇ ಕಜೆಮಾರ್

ಪುತ್ತೂರು: ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಭವ್ಯ ಇತಿಹಾಸವಿದೆ. ಈ ದೇವಾಲಯದ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಸಾಗಿದರೆ ಬಹಳಷ್ಟು ವಿಶೇಷತೆಗಳು ಕಾಣಸಿಗುತ್ತವೆ. ಬಲ್ಲಾಳರ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಈ ದೇವಾಲಯದ ನಿರ್ಮಾಣದ ಹಿಂದೆ ಎಲಿಯತ್ತಾಯ ಮನೆತದವರು ಪ್ರಮುಖ ಪಾತ್ರ ವಹಿಸಿದ್ದರು. ದ್ವೈತ ಮತದ ಸ್ಥಾಪಕರಾದ ಆಚಾರ್ಯ ಮಧ್ವರ ಅಪೇಕ್ಷೆಯಂತೆ ಬಲ್ಲಾಳ ಅರಸರು ಎಲಿಯತ್ತಾಯರ ಹಿರಿತನದಲ್ಲಿ ಈ ದೇವಾಲಯವನ್ನು ನಿರ್ಮಿಸಿದರೆಂದು ಪ್ರತೀತಿಯಿದೆ. ಸ್ವತ: ಆಚಾರ್ಯ ಮಧ್ವರೇ ದೇವರ ಪ್ರತಿಷ್ಠಾಪನೆಯ ಮಾರ್ಗದರ್ಶನ ಮಾಡಿರಬೇಕೆಂದು ಭಾವಿಸಲಾಗಿದೆ. ಸುಮಾರು 60 ವರ್ಷಗಳ ಹಿಂದೆಯೇ ಮುಜರಾಯಿ ಇಲಾಖೆಗೆ ಈ ದೇವಾಲಯ ಒಳಪಟ್ಟಿದ್ದರೂ ಇದರ ಅಭಿವೃದ್ಧಿಯಾಗಿರಲಿಲ್ಲ, ಪೂಜೆ ಮಾಡಿಸಲೂ ದುಡ್ಡಿರಲಿಲ್ಲ, ಅರ್ಚಕರಿಗೆ ಸಂಬಳ, ಪೂಜಾ ವಸ್ತು ಖರೀದಿಗೂ ಹಣವಿರಲಿಲ್ಲ. ಒಂದು ಹಂತದಲ್ಲಿ ದೇವಾಲಯದ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಹಂತ ತಲುಪಿತ್ತು.ಇಲಾಖಾ ತಸ್ತೀಕು ನಿಂತು ಹೋಗಿತ್ತು. ವ್ಯವಸ್ಥಾಪನಾ ಸಮಿತಿ ರಚನೆಗೆ ಆಹ್ವಾನಿಸಿದ್ದರೂ ಅರ್ಜಿಯೇ ಹೋಗಿರಲಿಲ್ಲ, ಪಾರಂಪರಿಕ ಆಡಳಿತ ಮೊಕ್ತೇಸರರು ರಾಜೀನಾಮೆ ನೀಡಿದ್ದು ಆಡಳಿತಾಧಿಕಾರಿ ನೇಮಕವಾಗಿತ್ತು. ಇಂತಹ ಪರಿಸ್ಥಿತಿಯಲ್ಲೂ ಈ ದೇವಳದ ಅರ್ಚಕರಾದ ನಾಗೇಶ್ ಕಣ್ಣಾರಾಯ ಎಲಿಯರವರು ಯಾವುದೇ ಸಂಬಳ ಇಲ್ಲದೆ ಹಲವು ವರ್ಷಗಳ ಕಾಲ ದೇವರಿಗೆ ಪೂಜೆ ಪುನಸ್ಕಾರ ನಡೆಸಿಕೊಂಡು ಬಂದರು.

ಒಂದೊಮ್ಮೆ ದೇವಾಲಯ ನಿರ್ಮಾಣ ಮಾಡಿಯೇ ಸಿದ್ಧ ಎಂದುಕೊಂಡು ಗ್ರಾಮಸ್ಥರು ಒಟ್ಟುಸೇರಿದರು. ಜೀರ್ಣೋದ್ಧಾರ ಸಮಿತಿ ರಚಿಸಿ ಆಡಳಿತಾಧಿಕಾರಿ ಮೂಲಕ ಇಲಾಖಾ ಅನುಮತಿ ಪಡೆದುಕೊಂಡರು. ಬಾಲಾಲಯ ನಿರ್ಮಾಣಗೊಂಡು ಹಳೆಯ ಮಂದಿರ ಕೆಡವಿ ಹೊಸ ದೇವಸ್ಥಾನಕ್ಕೆ ಪಾಯ ತೋಡಲಾಯಿತು. ಈ ಮಧ್ಯೆ ಶಾಸ್ತ್ರೀಯ ವಾಸ್ತು ವಿಚಾರದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ಸಮಯ ಕಾಮಗಾರಿ ಕುಂಠಿತಗೊಂಡಿತು. ಕಾಮಗಾರಿಯ ದೋಷ ನಿವಾರಿಸಿ ಹೊಸದಾಗಿ ಕೆಲಸ ಆರಂಭಿಸಿದ್ದು ನಿರೀಕ್ಷಿಸಿದ ರೀತಿಯಲ್ಲಿ ಕೆಲಸ ಪೂರ್ಣಗೊಂಡಿದೆ, ಊರ ಪರವೂರ ಭಕ್ತಾಧಿಗಳು ಉತ್ತಮ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು. ಸರ್ವೆ ಗ್ರಾಮದ ಭಕ್ತರು ಹಾಗೂ ನೆರೆಯ ಗ್ರಾಮದ ಭಕ್ತರು ಮತ್ತು ಊರಪರವೂರ ಭಕ್ತರ ಸಹಕಾರದೊಂದಿಗೆ ಸುಮಾರು ಎರಡೂವರೆ ಕೋಟಿ ರೂ.ವೆಚ್ಚದಲ್ಲಿ ಸುಂದರವಾದ ಶಿಲಾಮಯ ದೇವಾಲಯ ನಿರ್ಮಾಣಗೊಂಡಿದೆ.

ಎರಡೂವರೆ ಕೋಟಿ ವೆಚ್ಚದ ಸಂಪೂರ್ಣ ಶಿಲಾಮಯ ದೇವಸ್ಥಾನ
ಎಲಿಯ ದೇವಸ್ಥಾನವು ಸುಮಾರು 2 ಕೋಟಿ 50 ಲಕ್ಷ ರೂ.ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ದೇವಸ್ಥಾನವಾಗಿ ಪುನರ್ ನಿರ್ಮಾಣಗೊಂಡಿದೆ. ಇಲ್ಲಿ ಶ್ರೀ ವಿಷ್ಣುಮೂರ್ತಿ ದೇವರು ಮಾತ್ರ ಇದ್ದು ಯಾವುದೇ ಉಪದೇವರುಗಳ ಆರಾಧನೆ ಇಲ್ಲ. ಆರ್ಥಿಕ ಲೆಕ್ಕಚಾರವನ್ನು ಗಮಿಸಿದರೆ ಈ ದೇವಸ್ಥಾನ ನಿರ್ಮಾಣದ ಹಿಂದೆ ಸರ್ವೆ ಗ್ರಾಮದ ಭಕ್ತಾಧಿಗಳ ಸಿಂಹ ಪಾಲು ಇದ್ದರೆ ಉಳಿದಂತೆ ಮುಂಡೂರು, ಕೆದಂಬಾಡಿ, ಕೆಯ್ಯೂರು ಹಾಗೂ ಊರಪರವೂರ ಭಕ್ತಾಧಿಗಳ ಸಹಕಾರ ಸೇರಿದೆ. ವಾಸ್ತು ಶಿಲ್ಪಿ ರಮೇಶ್ ಕಾರಂತ್ ಬೆದ್ರಡ್ಕ ಕಾಸರಗೋಡು, ನಾಗರಾಜ್ ವೀರಕಂಭ ಬಂಟ್ವಾಳ ಮತ್ತು ಪದ್ಮನಾಭ ಪಿಲಿಗೂಡು ಕಲ್ಲೇರಿರವರ ಶಿಲಾಕಲ್ಲಿನ ಕೆತ್ತನೆ, ಡಾ.ಪುಷ್ಪರಾಜ್ ಆಚಾರ್ಯ ಉದುಮ ಕಾಸರಗೋಡು ಮತ್ತು ಪ್ರಸಾದ್ ಆಚಾರ್ಯ ಮೈಕೆರವರ ಕಾಷ್ಠಶಿಲ್ಪ, ಯೋಗಿರಾಜ್ ಪುತ್ತೂರುರವರ ತಾಮ್ರದ ಕೆಲಸ, ತಳಿಪರಂಬ ಕರೋತ್ ನಾರಾಯಣ್ ನಂಬಿಯಾರ್ ಕಲ್ಲೇರಿರವರ ಮೇಸ್ತ್ರೀ ಕೆಲಸ, ಕೃಷ್ಣಪ್ಪ ಉಜಿರೆಯವರ ಕಾರ್ನಿಶ್ ವರ್ಕ್ಸ್, ನಂದಕಿಶೋರ್ ಕಾರ್ಕಳರವರ ಗ್ರಾನೈಟ್ ಕೆಲಸ, ವಿ.ಪಿ ಪ್ರಕಾಶನ್‌ರವರ ಕಂಚಿನ ಕೆಲಸ ಹಾಗೂ ಸಂತೋಷ್ ಕುಮಾರ್ ಪುತ್ತೂರುರವರ ಸ್ಟೀಲ್ ಕೆಲಸ ಈ ದೇವಾಲಯದಲ್ಲಿ ಕಾಣಬಹುದಾಗಿದೆ.

ದೇವಾಲಯದ ವಿಶೇಷತೆಗಳು
ಸಂಪೂರ್ಣ ಶಿಲಾಮಯ ದೇವಸ್ಥಾನ, ದೇವಸ್ಥಾನದ ಮಾಡಿಗೆ ಮತ್ತು ಮುಚ್ಚಿಗೆಗೆ ಸಂಪೂರ್ಣವಾಗಿ ಸಾಗುವಾನಿ ಮರ ಬಳಸಲಾಗಿದೆ. ಗರ್ಭಗುಡಿ ಮತ್ತು ತೀರ್ಥ ಮಂಟಪದ ಮಾಡಿಗೆ ತಾಮ್ರದ ಹೊದಿಕೆ ಹಾಸಲಾಗಿದೆ. ತೀರ್ಥಾಮಂಟಪ ಶಿಲಾಮಯವಾಗಿದ್ದು ಕೆತ್ತನೆಗಳಿಂದ ಕೂಡಿದೆ. ಸುತ್ತು ಪೌಳಿಯ ಮಾಡಿಗೆ ಸಿರ್ಪು ಮರ ಬಳಸಲಾಗಿದೆ. ಸುತ್ತು ಪೌಳಿಯ ಮುಚ್ಚಿಗೆಯಲ್ಲಿ 13 ರಾಶಿಗಳ ಚಿತ್ರಗಳನ್ನು ಒಳಗೊಂಡಿದೆ. ದಾರಂದವು ಸಂಪೂರ್ಣ ಕೆತ್ತನೆಯಿಂದ ಕೂಡಿದೆ. ಮರದ ಕೆತ್ತನೆಗೆ ಪ್ರಾಶಸ್ತ್ಯ ನೀಡಲಾಗಿದೆ. ದೇವಾಲಯದ ಹೊರಗಿನ ಗೋಡೆಯಲ್ಲಿ ಸಿಮೆಂಟ್‌ನಿಂದ ಬಿತ್ತಿಸ್ತಂಭ (ಕಾರ್ನಿಶ್) ಚಿತ್ರಗಳ ರಚಿಸಲಾಗಿದೆ. ದೇವಾಲಯದಲ್ಲಿ ಕೆತ್ತನೆಗಳಿಂದ ಕೂಡಿದ 14 ಶಿಲಾಬೋದಿಗೆ ಕಂಬಗಳನ್ನು ಕಾಣಬಹುದಾಗಿದೆ. ದೇವಳದ ಎದುರು ಗೋಡೆಯಲ್ಲಿ ಶಿಲೆಯ ಎರಡು ಮಂಟಪ ಇದ್ದು ದ್ವಾರ ಪಾಲಕರ ಕೆತ್ತನೆ ಶಿಲೆಯನ್ನು ಮಾಡಲಾಗಿದೆ. ಗರ್ಭಗುಡಿಯ ಎದುರು ಕೀರ್ತಿ ಮುಖ ಮತ್ತು ನಾಸಿಕವನ್ನು ಕೇರಳೀ ಶೈಲಿಯಲ್ಲಿ ಮಾಡಲಾಗಿದೆ. ಆಗ್ನೇಯ ಭಾಗದಲ್ಲಿ ಚಿತ್ರಕೂಟ ಶೈಲಿಯಲ್ಲಿ ನಾಗನ ಕಟ್ಟೆ ಇದ್ದು ನಾಗಪ್ರತಿಷ್ಠೆ ಮಾಡಲಾಗಿದೆ. ದೇವಳದ ಒಳಗೆ ದೈವಗಳ ಮಂಚ ನಿರ್ಮಾಣ ಮಾಡಲಾಗಿದೆ. ಒಟ್ಟಿನಲ್ಲಿ ಬಹಳಷ್ಟು ವಿಶೇಷತೆಗಳನ್ನು ಒಳಗೊಂಡ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.01 ರಿಂದ 07 ರ ತನಕ ಶ್ರೀ ದೇವರ ಪುನಃ ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ನಡೆಯಲಿದೆ.

ಜೀರ್ಣೋದ್ಧಾರದ ಪ್ರಯತ್ನಗಳು
65 ವರ್ಷ ಹಿಂದೆ ದೇವಳದ ಜೀರ್ಣೋದ್ಧಾರ ನಡೆದಿತ್ತು ಎಂಬ ಐತಿಹ್ಯವಿದೆ. 2006-007 ರಲ್ಲಿ ಜೀರ್ಣೋದ್ಧಾರಕ್ಕೆ ಪ್ರಯತ್ನಿಸಲಾಗಿದೆ.2018 ರಲ್ಲಿ ಮತ್ತೊಮ್ಮೆ ಯತ್ನಿಸಲಾಗಿದೆ. 3 ನೇ ಪ್ರಯತ್ನ 2019 ರಲ್ಲಿ ಆರಂಭಗೊಂಡು 2020 ರಲ್ಲಿ ರೂಪ ಪಡೆದು 2021 ರಲ್ಲಿ ಅಧಿಕೃತ ಕಾರ್ಯ ಆರಂಭಗೊಂಡಿತು. ರಾಜಾರಾವ್ ಮುಡಂಬಡಿತ್ತಾಯ ಅಧ್ಯಕ್ಷ, ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಪ್ರಧಾನ ಕಾರ್ಯದರ್ಶಿಯಾಗಿ ಜೀರ್ಣೋದ್ಧಾರ ಸಮಿತಿ ಇದೆ. ಕರುಣಾಕರ ಗೌಡ ಎಲಿಯ ಅಧ್ಯಕ್ಷತೆಯ ವ್ಯವಸ್ಥಾಪನಾ ಸಮಿತಿ, ಎಸ್.ನಾಗೇಶ್ ರಾವ್ ಅಧ್ಯಕ್ಷತೆ, ಬೂಡಿಯಾರ್ ರಾಧಾಕೃಷ್ಣ ರೈ ಕಾರ್ಯಾಧ್ಯಕ್ಷತೆ, ರವಿನಾರಾಯಣ ಭಟ್ ಎನ್, ಪ್ರಧಾನ ಕಾರ್ಯದರ್ಶಿ, ಪ್ರಸನ್ನ ರೈ ಮಜಲುಗದ್ದೆ ಕೋಶಾಧಿಕಾರಿಯಾಗಿರುವ ಬ್ರಹ್ಮಕಲಶೋತ್ಸವ ಸಮಿತಿ ಇದೆ.

60 ವರ್ಷಗಳ ಹಿಂದೆ ಮುಜರಾಯಿ ಇಲಾಖೆಗೆ
ಈ ದೇವಾಲಯಕ್ಕೆ 14 ಸೆಂಟ್ಸ್ ಅಡಿಸ್ಥಳ ಇದೆ. ದಾರಿ 19 ಸೆಂಟ್ಸ್, ನಾಗಬನ 5 ಸೆಂಟ್ಸ್ ಸ್ಥಳವಷ್ಟೇ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸುಬ್ರಾಯ ಎಲಿಯತ್ತಾಯ ಆಡಳಿತ ಮೊಕ್ತೇಸರರಾಗಿದ್ದರು. ನಂತರ ಸುಬ್ರಾಯ ಮುಡಂಬಡಿತ್ತಾಯ, 1953 ರಲ್ಲಿ ವ್ಯಾಸರಾಮ್ ಮುಡಂಬಡಿತ್ತಾಯ ಹುದ್ದೆ ಏರಿದರು. 1975 ರಿಂದ 2019 ರವರೇಗೆ ನಾಗೇಶ್ ರಾವ್ ಎಲಿಯ ಸೇವೆ ಸಲ್ಲಿಸಿದರು. 1962 ರಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸಲಾಯಿತು. ಆರಂಭದಲ್ಲಿ ವಾರ್ಷಿಕ 19 ರೂ. ತಸ್ತೀಕು ಬರುತ್ತಿದ್ದು ಬಳಿಕ ನಿಂತಿತು. ಜೀರ್ಣೋದ್ಧಾರ ಆರಂಭಗೊಂಡ ಬಳಿಕ ಸರಕಾರದಿಂದ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಹಿಂದಿನ ಬಾಕಿ 42 ಸಾವಿರ ರೂ.ತಸ್ತೀಕು ಬಂದಿದೆ.

LEAVE A REPLY

Please enter your comment!
Please enter your name here