ಮಾರ್ಚ್ ತಿಂಗಳಲ್ಲಿ ಎಪಿಎಂಸಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ – ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ದಿನೇಶ್ ಮೆದು

0

ಪುತ್ತೂರು: ಬಹು ಬೇಡಿಕೆಯ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಯೋಜನೆ ಕಾಮಗಾರಿ ಮಾರ್ಚ್ ತಿಂಗಳಲ್ಲಿ ಶಿಲಾನ್ಯಾಸ ನಡೆಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ತಿಳಿಸಿದ್ದಾರೆ.

ಎಪಿಎಂಸಿ ಸಾಮಾನ್ಯ ಸಭೆಯು ಜ.೨೯ರಂದು ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈಗಾಗಲೇ ರೈಲ್ವೇ ಅಂಡರ್‌ಪಾಸ್ ಯೋಜನೆಗೆ ಟೆಂಡರ್ ಪ್ರೋಸೆಸ್‌ಗೆ ಬಂದಿದೆ. ಪಾಲುದಾರಿಕೆಯಲ್ಲಿ ಕರ್ನಾಟಕ ಸರಕಾರದ ಮೂಲಭೂತ ಸೌಕರ್ಯ ಇಲಾಖೆ ಮತ್ತು ಹೆಚ್‌ಎಮ್‌ಆರ್‌ಡಿ ಇದನ್ನು ನಿರ್ವಹಿಸಲಾಗಿದೆ. ಇಂಡಿಯನ್ ರೈಲ್ವೇ ಅನುದಾನ ನೀಡಲಿದೆ. ಇದಕ್ಕೆ ಸಂಬಂಧಿಸಿದ ತಾತ್ವಿಕ ಒಪ್ಪಿಗೆಯ ಎಲ್ಲಾ ಪ್ರಕ್ರಿಯೆ ಮುಗಿದಿದೆ. ಆರ್ಥಿಕ ಲೆಕ್ಕಪತ್ರ ಇಲಾಖೆ ಟೆಂಡರ್ ಪ್ರಕ್ರಿಯೆಗೆ ಸೂಚಿಸಿದ್ದು, ಮೈಸೂರು ರೈಲ್ವೇ ಇಂಜಿನಿಯರಿಂಗ್ ವಿಭಾಗ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ಟೆಂಡರ್ ಆದ ಬಳಿಕ ೧೧ ತಿಂಗಳಲ್ಲಿ ಈ ಕೆಲಸ ಮುಗಿಸಿ ಕೊಡುವುದಾಗಿ ಇಲಾಖೆಯವರು ಭರವಸೆ ನೀಡಿದ್ದು ಇದರ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಗುವುದು. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಜತೆ ಮಾತನಾಡಿ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ಎಪಿಎಂಸಿ ರಸ್ತೆ ನಗರಸಭೆಗೆ ಹಸ್ತಾಂತರ:
ಅರುಣಾ ಟಾಕೀಸ್ ಬಳಿಯಿಂದ ಸಾಲ್ಮರದವರೆಗೆ ಇರುವ ಎಪಿಎಂಸಿ ರಸ್ತೆಯನ್ನು ನಗರಸಭೆಗೆ ಹಸ್ತಾಂತರಿಸಲು ಎಪಿಎಂಸಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಸುಮಾರು ೨೫ ವರ್ಷಗಳ ಹಿಂದೆ ಎಪಿಎಂಸಿ ಯಾರ್ಡ್‌ಗೆ ಸಂಪರ್ಕ ಕಲ್ಪಿಸಲೆಂದೇ ಈ ರಸ್ತೆಯನ್ನು ನಿರ್ಮಿಸಿ ಅದನ್ನು ಎಪಿಎಂಸಿ ಹೆಸರಿಗೆ ಬರೆಸಲಾಗಿತ್ತು. ಎಪಿಎಂಸಿ ಹೆಸರಿನಲ್ಲಿರುವ ರಸ್ತೆಯನ್ನು ಅಭಿವೃದ್ಧಿ ಮಾಡುವ ಬಗ್ಗೆ ನಗರಸಭೆಯಲ್ಲಿ ಅನೇಕ ಬಾರಿ ಅಪಸ್ವರ ಕೇಳಿ ಬಂದಿತ್ತು. ಎಪಿಎಂಸಿಯ ರಸ್ತೆಯನ್ನು ಅವರೇ ಅಭಿವೃದ್ಧಿಪಡಿಸಲಿ ಎಂದು ನಗರಸಭೆ ಸದಸ್ಯರನೇಕರು ವಾದಿಸುತ್ತಾ ಬಂದಿದ್ದರು. ಆದರೆ ರಸ್ತೆ ಪಕ್ಕದ ವ್ಯವಹಾರ ಮಳಿಗೆ, ಅಂಗಡಿಗಳ ತೆರಿಗೆಯನ್ನು ನಗರಸಭೆ ವಸೂಲಿ ಮಾಡುವ ಕಾರಣ ರಸ್ತೆಯನ್ನು ನಗರಸಭೆಯವರೇ ಅಭಿವೃದ್ಧಿಪಡಿಸಬೇಕು ಎಂಬ ವಾದ ಎಪಿಎಂಸಿ ಸಭೆಗಳಲ್ಲಿ ಕೇಳಿ ಬರುತ್ತಿತ್ತು. ಇತ್ತೀಚೆಗೆ ಈ ವಿಚಾರದಲ್ಲಿ ಶಾಸಕ ಸಂಜೀವ ಮಠಂದೂರು ಅವರ ಸಲಹೆ ಮೇರೆಗೆ ರಸ್ತೆಯನ್ನು ನಗರಸಭೆಗೆ ಹಸ್ತಾಂತರಿಸಲು ಎಪಿಎಂಸಿ ಆಡಳಿತ ಮಂಡಳಿ ಒಲವು ತೋರಿತ್ತು. ಈ ಕುರಿತು ಸಭೆಯಲ್ಲಿ ಅಧ್ಯಕ್ಷ ದಿನೇಶ್ ಮೆದು, ರಸ್ತೆ ಹಸ್ತಾಂತರದ ಬಗ್ಗೆ ನಿರ್ಣಯ ಅಂಗೀಕರಿಸಿ ನಮ್ಮ ನಿರ್ದೇಶಕರಿಗೆ ಕಳುಹಿಸಲಾಗುತ್ತದೆ. ಅದರ ಪ್ರತಿಯನ್ನು ನಗರಸಭೆಗೂ ಕಳುಹಿಸಲಾಗುವುದು ಎಂದರು. ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್, ನಿರ್ದೇಶಕರಾದ ಅಬ್ದುಲ್ ಶಕೂರ್ ಹಾಜಿ, ಬೂಡಿಯಾರ್ ರಾಧಾಕೃಷ್ಣ ರೈ, ಪುಲಸ್ತ್ಯಾ ರೈ, ತ್ರಿವೇಣಿ ಪೆರ್‍ವೋಡಿ, ತೀರ್ಥಾನಂದ ದುಗ್ಗಲ, ಕೊರಗಪ್ಪ, ಕುಶಾಲಪ್ಪ ಗೌಡ, ಮೇದಪ್ಪ ಗೌಡ, ಕೃಷ್ಣಕುಮಾರ್ ರೈ, ನಾಮನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಲಕೃಷ್ಣ ಜೋಯಿಸ ಉಪಸ್ಥಿತರಿದ್ದರು. ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರರವರು ಸಭಾ ನಡಾವಳಿ ನಡೆಸಿದರು.

LEAVE A REPLY

Please enter your comment!
Please enter your name here