ಕಡಬ: ದೋಟಿ ಮೂಲಕ ಅಡಿಕೆ ಕೊಯ್ಲು, ಔಷಧಿ ಸಿಂಪಡಣೆ ತರಬೇತಿ

0

ಕಡಬ: ಕಾರ್ಬನ್ ಫೈಬರ್ ದೋಟಿಯ ಮೂಲಕ ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆ ತರಬೇತಿ ಕಾರ್ಯಾಗಾರವು ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಡಬದ ಎಲಿಯೂರು ವಿಶ್ವೇಶ್ವರ ಭಟ್ ಅವರ ಕೃಷಿ ಕ್ಷೇತ್ರದಲ್ಲಿ ಸೋಮವಾರ ಜರಗಿತು.

 


ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ ಅವರು ಕೃಷಿಯಲ್ಲಿ ಕೌಶಲಯುಕ್ತ ಕಾರ್ಮಿಕರ ತೀವ್ರ ಕೊರತೆಯ ಈ ಕಾಲಘಟ್ಟದಲ್ಲಿ ಕೃಷಿ ಕಾರ್ಯಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಮುಖ್ಯವಾಗಿ ಮರದ ಮೇಲೇರಿ ಫಲಸು ಕೀಳುವುದು, ಔಷಧಿ ಸಿಂಪಡಣೆ ಮಾಡುವುದು ಮುಂತಾದ ಸಂದರ್ಭಗಳಲ್ಲಿ ಕುಶಲಕರ್ಮಿ ಕಾರ್ಮಿಕರು ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಜೀವ ಕಳೆದುಕೊಳ್ಳುವುದು ಹಾಗೂ ಶಾಶ್ವತವಾಗಿ ಅಂಗವೈಕಲ್ಯಕ್ಕೊಳಗಾಗುವುದು ಬಲುದೊಡ್ಡ ದುರಂತವಾಗಿದೆ. ಅಂತಹ ಅಪಾಯಗಳಿಂದ ರಕ್ಷಣೆ ಕೊಡುವುದು ಕೂಡ ಕೃಷಿಕರ ಆದ್ಯ ಕರ್ತವ್ಯವಾಗಿರುವುದರಿಂದ ಅಪಾಯರಹಿತವಾದ ಸಲಕರಣೆಗಳನ್ನು ಬಳಸಿಕೊಂಡು ಕೃಷಿ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂಕರ ನಾರಾಯಣ ಖಂಡಿಗೆ ಅವರು ಕೃಷಿಕರು ಹಾಗೂ ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಹೊಸ ಹೊಸ ಆವಿಷ್ಕಾರಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ರೀತಿಯ ತರಬೇತಿಗಳು ಆಂದೋಲನದ ರೂಪದಲ್ಲಿ ಹಳ್ಳಿ ಹಳ್ಳಿಗಳಲ್ಲಿ ನಡೆಯಬೇಕು. ಕೃಷಿಕರಿಗೆ ಅನುಕೂಲವಾಗುವುದರೊಂದಿಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಯೂ ಅದರಿಂದ ಆಗಬೇಕು ಎಂದು ಅಭಿಪ್ರಾಯಪಟ್ಟರು. ತರಬೇತು ದಾರರಾಗಿ ಆಗಮಿಸಿದ್ದ ಶಿರಸಿಯ ಆರ್.ಜೆ.ಹೆಗಡೆ, ಸಹ ತರಬೇತುದಾರ ರಮೇಶ್ ಭಟ್, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾಕೋ ಕೆ.ಎಂ., ನಿರ್ದೇಶಕರಾದ ರಘುಚಂದ್ರ ಕೊಣಾಜೆ, ಗಿರೀಶ್‌ಕುಮಾರ್ ಎ.ಪಿ., ಕೃಷ್ಣಪ್ಪ ಮಡಿವಾಳ, ಹರಿಶ್ಚಂದ್ರ ಪಿ., ಉಮೇಶ್ ಗೌಡ ಬಿ., ಸದಾನಂದ ಪಿ., ಸತೀಶ್ ನಾಕ್ ಮೇಲಿನಮನೆ, ಬಾಬು ಮುಗೇರ, ಚಂದ್ರಾವತಿ, ಯಶೋದಾ ಬಿ.ಪಿ. ಮುಂತಾದವರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಜಿ. ನಿರೂಪಿಸಿ, ಉಪಾಧ್ಯಕ್ಷ ಗಣೇಶ್ ಮೂಜೂರು ವಂದಿಸಿದರು. ಕಡಬದ ಸಾಯ ಆಗ್ರಿ ಮಾರ್ಟ್ ಸಂಸ್ಥೆಯವರು ತರಬೇತಿಗೆ ಅಗತ್ಯವಾದ ಸಲಕರಣೆಗಳನ್ನು ಒದಗಿಸಿದ್ದರು.

LEAVE A REPLY

Please enter your comment!
Please enter your name here