ಸೇವಾ ಭಾರತಿಯಿಂದ ಅನಾಥ ಶವ ಸಂಸ್ಕಾರ

0

ಉಪ್ಪಿನಂಗಡಿ: ಮದ್ಯ ವ್ಯಸನಿಯಾಗಿ ಬಂಧು ಬಳಗಾದಿಯಿಂದ ದೂರವಾಗಿದ್ದ ವ್ಯಕ್ತಿಯೋರ್ವನ ಶವ ಸಂಸ್ಕಾರಕ್ಕೆ ಬಂಧುಗಳಾರೂ ಮುಂದಾಗದೇ ಇದ್ದಾಗ ಸೇವಾ ಭಾರತಿಯ ಕಾರ್ಯಕರ್ತರು ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಉಪ್ಪಿನಂಗಡಿ ಗ್ರಾಮದ ಕೊಪ್ಪಳ ಮನೆ ನಿವಾಸಿ ಕುಶಾಲಪ್ಪ ಪೂಜಾರಿ ಯಾನೆ ಕುಟ್ಟಿ (42) ಎಂಬಾತ ಮಂಗಳವಾರ ರಾತ್ರಿ ಉಪ್ಪಿನಂಗಡಿ ಸಹಕಾರಿ ಸಂಸ್ಥೆಯ ಬಳಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದ. ಈತ ತನ್ನ ಮದ್ಯ ವ್ಯಸನದಿಂದಾಗಿ ಪತ್ನಿ ಮಕ್ಕಳಿಂದ ದೂರವಾಗಿದ್ದು, ಕುಡಿತದ ಮತ್ತಿನಲ್ಲಿ ಒಡ ಹುಟ್ಟಿದ ತಮ್ಮನನ್ನೇ ಹತ್ಯೆಗೈದ ಆರೋಪಿಯಾಗಿದ್ದ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದು, ಮಂಗಳವಾರ ರಾತ್ರಿ ಹೃದಯಾಘಾತಕ್ಕೀಡಾಗಿ ಸಹಕಾರಿ ಸಂಸ್ಥೆಯ ಆವರಣದಲ್ಲಿ ಸಾವನ್ನಪ್ಪಿದ್ದ.

ಜೀವಂತವಿದ್ದಾಗ ಬಂಧು ಬಳಗಾದಿಗಳೊಂದಿಗೆ ದ್ವೇಷ ವೈರತ್ವದಿಂದಿದ್ದ ಪರಿಣಾಮ ಸಾವಿನ ಸಂಧರ್ಭದಲ್ಲಿ ಈತನ ಸಮೀಪಿಸಲು ಬಂಧುಗಳಾರೂ ಮುಂದಾಗಲಿಲ್ಲ. ತೀರಾ ಹತ್ತಿರದ ಬಂಧುಗಳನ್ನು ಪೊಲೀಸರು ಸಂಪರ್ಕಿಸಿದಾಗ `ಆತ ನಮ್ಮ ಪಾಲಿಗೆ ಹದಿನೈದು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದ” ಎಂಬ ನಿಷ್ಠುರ ನುಡಿ ಕೇಳಲ್ಪಟ್ಟಿತ್ತು.

ಈ ಸಂದರ್ಭದಲ್ಲಿ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಡೆಸಲು ಅತಂತ್ರತೆ ಮೂಡಿದಾಗ, ಉಪ್ಪಿನಂಗಡಿಯ ಸುಧಾಕರ ಶೆಟ್ಟಿ, ಯತೀಶ್ ಶೆಟ್ಟಿ, ರಮೇಶ್ ಭಂಡಾರಿ ನೇತೃತ್ವದ ಸೇವಾ ಭಾರತಿಯ ಸ್ವಯಂಸೇವಕರ ತಂಡ ಕುಶಾಲಪ್ಪ ಪೂಜಾರಿಯ ಅಂತ್ಯಸಂಸ್ಕಾರಕ್ಕೆ ಮುಂದಾಗಿ ಪೇಟೆಯ ಸ್ಮಶಾನದಲ್ಲಿ ಶಾಸ್ತ್ರೋಕ್ತ ಅಂತ್ಯ ಸಂಸ್ಕಾರವನ್ನು ನೆರವೇರಿಸಿತು.

ಈ ಕಾರ್ಯಕ್ಕೆ ವಿಜಯ, ರಾಜಗೋಪಾಲ ಹೆಗ್ಡೆ, ಯು.ಕೆ. ರೋಹಿತಾಕ್ಷ, ನಾಗೇಶ್ ಮತ್ತಿತರರು ಕೈಜೋಡಿಸಿದರು.ಒಟ್ಟಾರೆ ಮದ್ಯ ವ್ಯಸನದಿಂದಾಗಿ ವ್ಯಕ್ತಿಯ ವೈಯಕ್ತಿಕ ಬದುಕು, ಕೌಟುಂಬಿಕ ಬದುಕು, ಸಾಮಾಜಿಕ ಬದುಕು ಯಾವ ರೀತಿ ಛಿದ್ರವಾಗುತ್ತದೆ ಎನ್ನುವುದಕ್ಕೆ ಕುಶಾಲಪ್ಪ ಪೂಜಾರಿಯ ಬದುಕೇ ಒಂದು ಉದಾಹರಣೆಯಂತಾಗಿದೆ.

LEAVE A REPLY

Please enter your comment!
Please enter your name here