ಆಲೆಟ್ಟಿ ಗ್ರಾಮ ಸಭೆ

0

 

ಡಬಲ್ ಇಂಜಿನ್ ಸರಕಾರ ಇದ್ದರೂ 30 ವರ್ಷ ಕಳೆದರೂ ರಸ್ತೆ ಅಭಿವೃದ್ಧಿ ಕಂಡಿಲ್ಲ ಗ್ರಾಮಸ್ಥರ ಅಸಮಾಧಾನ

ಆಲೆಟ್ಟಿಗ್ರಾಮಪಂಚಾಯತ್ ನ 2021-22 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಸೆ.20 ರಂದು ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ
ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ನೊಡೆಲ್ ಅಧಿಕಾರಿಯಾಗಿ ತಾಲೂಕು ಶಿಕ್ಷಣಾಧಿಕಾರಿ ಎಸ್.ಪಿ.ಮಹಾದೇವ ರವರು ಸಭೆಯ ಕಲಾಪವನ್ನು ನಡೆಸಿದರು.

ಕಸ ವಿಲೇವಾರಿಗೆ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗದ ಬಗ್ಗೆ ಸ್ಥಳೀಯರು ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ಕುರಿತು ಹಿಂದಿನ ಸಭೆಯಲ್ಲಿ ಪ್ರಸ್ತಾಪವಾಗಿದೆ. ಇದರ ಬಗ್ಗೆ ಏನು ತೀರ್ಮಾನಿಸಲಾಗಿದೆ ? ಎಂದು ಲೋಲಜಾಕ್ಷ ಭೂತಕಲ್ಲು ಪ್ರಶ್ನಿಸಿದರು.

ಹಿಂದಿನ ಸಭೆಯ ತೀರ್ಮಾನದಂತೆ ಸಭೆ ಸೇರಿ ಮೈಂದೂರು ಎಂಬಲ್ಲಿ ಕಂದಾಯ ಇಲಾಖೆಯು ಗುರುತಿಸಿದ ಜಾಗದಲ್ಲಿ ಘನ ತ್ಯಾಜ್ಯ ಘಟಕ ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಬೇರೆ ಕಡೆಯಲ್ಲಿ ವೈಜ್ಞಾನಿಕವಾಗಿ ನಿರ್ವಹಣೆ ಯಾಗುತ್ತಿರುವ ಘಟಕವನ್ನು ವೀಕ್ಷಣೆ ಮಾಡಿ ಬಂದಿದ್ದೇವೆ. ಇಲ್ಲಿಯೂ ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕ ಕೆಲಸನಿರ್ವಹಿಸಲಾಗುವುದು. ಶೀಘ್ರವಾಗಿ ಟೆಂಡರ್ ಪ್ರಕ್ರಿಯೆನಡೆಸಲಾಗುವುದು ಎಂದು ಪಿ.ಡಿ.ಒ.ತಿಳಿಸಿದರು.

 

ಸುಳ್ಯದಿಂದ ಆಲೆಟ್ಟಿ ರಸ್ತೆ ಬದಿಯಲ್ಲಿ ದಿನ ನಿತ್ಯ ರಾತ್ರಿ ವೇಳೆಯಲ್ಲಿ ಕಸ ತ್ಯಾಜ್ಯ ಎಸೆದು ಪರಿಸರ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಏನು ಕ್ರಮ ಕೈಗೊಳ್ತೀರಾ ಎಂದು ದಾಮೋದರ ನಾರ್ಕೋಡು ಪ್ರಸ್ತಾಪಿಸಿದರು.

ಪರಿವಾರಕಾನ ಅರಂಬೂರು ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ರಾಶಿ ಬೀಳುತ್ತಿದೆ. ಜಲಜೀವನ್ ಯೋಜನೆಯ ಕೆಲಸ ಕಾರ್ಯ ಯಾವ ಪ್ರಗತಿಯಲ್ಲಿದೆ. ಇದರ ಬಗ್ಗೆ ವಿವರ ಬೇಕು
ಎಂದು ಬಾಪು ಸಾಹೇಬ್ ರವರು ಕೇಳಿದರು.

ಆಲೆಟ್ಟಿ ಕೇಂದ್ರ ಸ್ಥಾನದಲ್ಲಿ ಸ್ವಚ್ಚ ಗ್ರಾಮದ ಪರಿಕಲ್ಪನೆಯಲ್ಲಿ ಉದ್ಯಾನವನ, ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ, ಪರಿಸರದಲ್ಲಿ ಸುಮಾರು 150 ಮನೆಯವರಿಗೆ ಶವ ಸಂಸ್ಕಾರಕ್ಕೆ ಸ್ಮಶಾನ ಇಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆಗೆ ಪಂಚಾಯತ್ ಆಡಳಿತ ಜವಬ್ದಾರಿ ವಹಿಸಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸುಧಾಮ ಆಲೆಟ್ಟಿ ಯವರುಉಲ್ಲೇಖಿಸಿದರು.

ಗ್ರಾಮವನ್ನು ಸ್ವಚ್ಚ ವಾಗಿರಿಸುವ ಉದ್ದೇಶ ದಿಂದ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಅನುದಾನ ಇರಿಸಲಾಗಿದೆ. ಈಗಾಗಲೇ ಕಸ ವಿಲೇವಾರಿಗೆ ವಾಹನ ಖರೀದಿ ಮಾಡಲಾಗಿದೆ. ಶೀಘ್ರ ಟೆಂಡರ್ ಕರೆದು ಕೆಲಸಪ್ರಾರಂಭಿಸಲಾಗುವುದು ಎಂದು ದಿನೇಶ್ ಕಣಕ್ಕೂರು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಡಬಲ್ ಇಂಜಿನ್ ಸರಕಾರವಿದೆ 30 ವರ್ಷದಿಂದ ಬಡ್ಡಡ್ಕ ರಸ್ತೆ ದುರಸ್ತಿ ಪಡಿಸಿಲ್ಲ.ಶ್ರಮದಾನದ ಮೂಲಕ ಸ್ಥಳೀಯರು ಸೇರಿ ಕೂರ್ನಡ್ಕ ಎಂಬಲ್ಲಿ ತೀರಾ ಹದಗೆಟ್ಟ ಕಡೆ ದುರಸ್ತಿ ಕಾರ್ಯ ಮಾಡಿದ್ದೇವೆ. ಪಂಚಾಯತ್ ಈ ಬಗ್ಗೆ ಸಚಿವರ ಗಮನಕ್ಕೆ ತಂದು ಬೆನ್ನು ಹಿಡಿದು ಕೆಲಸ ಮಾಡಿಸಬೇಕು ಎಂದು ದೇವಪ್ಪ ನಾಯ್ಕ್ ಒತ್ತಾಯಿಸಿದರು.

ದೊಡ್ಡ ಗ್ರಾಮ ಆಲೆಟ್ಟಿ ಡಬಲ್ ಅಲ್ಲ ತ್ರಿಬಲ್ ಇಂಜಿನ್ ಇರುವುದರಿಂದ ದೊಡ್ಡ ಮೊತ್ತದ ಬೇಡಿಕೆ ಇರಿಸಿ ವಿಶೇಷ ಅನುದಾನ ತರಿಸಿ ಅಭಿವೃದ್ಧಿ ಪಡಿಸಿಬೇಕೆಂದು ಬಾಪು ಸಾಹೇಬ್ ಹೇಳಿದರು.

ಪೈಂಬೆಚ್ಚಾಲ್ ರಸ್ತೆ ಕಾಂಕ್ರೀಟ್ ಮಾಡಿರುವ ಬಗ್ಗೆ ವರದಿಯಲ್ಲಿದೆ. ಒಂದೇ ರಸ್ತೆಗೆ ಎರಡು ಕಡೆ ಕಾಂಕ್ರೀಟಿಕರಣ ಕೆಲಸ ನಡೆದಿದೆಯಾ ?
ಬಡ್ಡಡ್ಕ ಕೂರ್ನಡ್ಕ ರಸ್ತೆ ಕಾಮಗಾರಿಗೆ ಈಗಾಗಲೇ ಸಚಿವರಮುತುವರ್ಜಿಯಿಂದ 1.40 ಲಕ್ಷ ಅನುದಾನ ಇಡಲಾಗಿದೆ. ಮಳೆಯ ನಂತರ ಡಿಸೆಂಬರ್ ನಲ್ಲಿ ಕೆಲಸ ಪ್ರಾರಂಭಿಸುವುದಾಗಿ ತಿಳಿಸಿರುತ್ತಾರೆಎಂದು ಕರುಣಾಕರ ಹಾಸ್ಪಾರೆ ತಿಳಿಸಿದರು.

ಈಗ ಇರಿಸಿರುವ ಅನುದಾನದಲ್ಲಿ ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಿಸಲು ಸಾಧ್ಯವಿಲ್ಲ .ಹೆಚ್ಚು ಹಾಳಾಗಿರುವ ಕಡೆ ಕಾಂಕ್ರೀಟ್ ಕಾಮಗಾರಿ ಮಾಡಬೇಕೆಂದು ಎನ್.ಎ.ಗಂಗಾಧರ ರವರು ಸಲಹೆ ನೀಡಿದರು.

ಪೈಂಬೆಚ್ಚಾಲಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವಿಲ್ಲದೆ 6 ತಿಂಗಳು ಕಳೆಯಿತು. ಶಾಲಾ ವಿದ್ಯಾರ್ಥಿಗಳು ದಿನ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ. ಹಲವು ಬಾರಿ ದೂರು ನೀಡಿದ್ದೇವೆ. ಅಲ್ಲದೇ ಈ ಪ್ರದೇಶದಲ್ಲಿ ಬೀಡಾಡಿ ದನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದರಿಂದ ಸಮಸ್ಯೆ ಎದುರಾಗುತ್ತಿದೆ ಎಂದು ರಫೀಕ್ ಪೈಂಬೆಚ್ಚಾಲ್ ದೂರಿಕೊಂಡರು.

ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗಳಿಗೆ ಮುಖತ: ಭೇಟಿಯಾಗಿ ಚರ್ಚಿಸಿದ್ದೇವೆ. ಮುಡಂಗೋಳಿ ಎಂಬಲ್ಲಿ ರಸ್ತೆ ಹದಗೆಟ್ಟ ಹಾಗೂ ತಿರುವಿನಲ್ಲಿ ಬರೆ ಕುಸಿತವಾಗಿರುವ ಕಾರಣ ನೀಡಿದ್ದಾರೆ. ರಸ್ತೆ ಸಮಸ್ಯೆ ಸರಿಪಡಿಸದೆ ಬಸ್ ಸಂಚರಿಸಿ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ. ನಮ್ಮ ಪ್ರಯತ್ನ ನಿರಂತರವಾಗಿ ಮಾಡಿದ್ದೇವೆ ಎಂದು ಧರ್ಮಪಾಲ ಕೊಯಿಂಗಾಜೆ ಉತ್ತರಿಸಿದರು.

ಸಾರ್ವಜನಿಕ ಪ್ರದೇಶದಲ್ಲಿ ಸಾಕು ಪ್ರಾಣಿಗಳನ್ನು ಬಿಡಬಾರದೆಂಬುದಾಗಿ ಪಂಚಾಯತ್ ವತಿಯಿಂದ ಬ್ಯಾನರ್ ಅಳವಡಿಸಲಾಗಿದೆ.ನಿಮ್ಮ ಗಮನಕ್ಕೆ ಬಂದಲ್ಲಿ ಅವರ ವಿರುದ್ಧ ದೂರು ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ದಿನೇಶ್ ಕಣಕ್ಕೂರು ಉತ್ತರಿಸಿದರು.
ವಾರ್ಡ್ ಸಭೆಯಲ್ಲಿ ಬಸ್ ಸಂಚಾರ ಕುರಿತು ಪ್ರಸ್ತಾಪಿಲಾಗಿದೆ.ಅದೇ ಪೈಂಬೆಚ್ಚಾಲ್ ರಸ್ತೆಯಲ್ಲಿ ದಿನಂಪ್ರತಿ ಕಲ್ಲು ಸಾಗಾಟದ ಲಾರಿ ಸಂಚರಿಸುತ್ತಿದೆ. ಬಸ್ ಬರಲು ಮತ್ತೇನು ಸಮಸ್ಯೆ. ಬಸ್ ಪಾಸ್ ಹೊಂದಿದ ಸುಮಾರು 60 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಗ್ರಾಮಸಭೆಯು ಅಜೆಂಡಾ ಪ್ರಕಾರ ನಡಿಯಬೇಕು. ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಧನಂಜಯ ಕುಂಚಡ್ಕ ಅಸಮಾಧಾನ ವ್ಯಕ್ತಪಡಿಸಿದರು.

ಕೆ‌.ಎಸ್.ಆರ್. ಟಿ. ಸಿ ಯ ಅಧಿಕಾರಿಗಳಿಗೆ ತಕ್ಷಣ ಶಿಕ್ಷಣ ಇಲಾಖೆಯ ವತಿಯಿಂದ ಪತ್ರ ಬರೆದು ಒತ್ತಡ ಹಾಕಲಾಗುವುದು. ಗ್ರಾಮದಿಂದ ನಿಯೋಗ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ಮಾಡೋಣ, ಇಲಾಖೆಯು ಕೈ ಜೋಡಿಸುತ್ತೇವೆ ಎಂದು ನೊಡೆಲ್ ಶಿಕ್ಷಣಾಧಿಕಾರಿ ಎಸ್.ಪಿ.ಮಹಾದೇವ ರವರು ತಿಳಿಸಿದರು.

ಕೆ.ಫ್. ಡಿ. ಸಿ ಯಲ್ಲಿ ಸುಮಾರು 100 ಕುಟುಂಬಗಳು ಮನೆ ನಿವೇಶನ ಇಲ್ಲದೆ ಜೀವನ ನಡೆಸುತ್ತಿದ್ದಾರೆ. ಪಂಚಾಯತ್ ನಿಂದ ಮನೆ ನಿವೇಶನದ ಒದಗಿಸುವ ಬಗ್ಗೆ ನಿರ್ಣಯ ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಬೇಕು. ನಾಗಪಟ್ಟಣ ಸೇತುವೆಯನ್ನು ದುರಸ್ತಿ ಪಡಿಸಿ ಸೇತುವೆ ಉಳಿಸಿ ಎಂದು ತಂಗವೇಲು ರವರು ಒತ್ತಾಯಿಸಿದರು.

ಮಿತ್ತಡ್ಕದಿಂದ ನದಿ ಬದಿಯಲ್ಲಿ ವಾಸವಿರುವ ಮನೆಗಳಿಗೆ ಹೋಗಲು ರಸ್ತೆಯು ಕೆ.ಎಫ್ ಡಿ.ಸಿ ರಬ್ಬರ್ ತೋಟದ ನಡುವೆ ಇದೆ. ರಸ್ತೆಯ ಬಗ್ಗೆ ಪಂಚಾಯತ್ ದಾಖಲೆ ಪತ್ರದಲ್ಲಿ ದಾಖಲಿಸಲಾಗಿದೆಯಾ ? ರಸ್ತೆ ದುರಸ್ತಿಗೆ ಅನುದಾನ ಇರಿಸಲಾಗಿದೆಯಾ ? ಎಂದು ವಿಶ್ವನಾಥ ಶೆಟ್ಟಿ ಕೇಳಿದರು.
ಇದಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯಲ್ಲಿ ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ಪ್ರತ್ಯೇಕ ಅನುದಾನ 30 ಸಾವಿರ ಇರಿಸಲಾಗಿದೆ. ಕಾಮಗಾರಿ ಬಗ್ಗೆ ಏನಾಗಿದೆ ಎಂದು ಸದಸ್ಯೆ ಕಮಲಾ ರವರು ತಿಳಿಸುವಂತೆ ಮುತ್ತಪ್ಪ ಪೂಜಾರಿ ಯವರು ಸೂಚಿಸಿದರು.

ಆಲೆಟ್ಟಿ ಗ್ರಾಮ 75% ರಿಸರ್ವ್ ಫಾರೆಸ್ಟ್ ಆಧೀನದಲ್ಲಿರುವುದು. ಫಾರೆಸ್ಟ್ ಸೆಟ್ಲ್ ಮೆಂಟ್ ಸರ್ವೆ ವರದಿಯಲ್ಲಿ ರಸ್ತೆ ವಿವರ ಸಿಗುವುದು. ದಾಖಲೆ ಇದ್ದಲ್ಲಿ ನಿಗಮದ ಅನುಮತಿ ‌ಪಡೆದು ಸಾರ್ವಜನಿಕರ ಹಿತಾಸಕ್ತಿಗನುಗುಣವಾಗಿ ಹೊಂದಾಣಿಕೆಯಲ್ಲಿ ಮಾಡಬೇಕಾದ ಅನಿವಾರ್ಯತೆ ಇರುವುದು ಎಂದು ಸುಧಾಮ ಆಲೆಟ್ಟಿ ಸಲಹೆ ನೀಡಿದರು.

ಅರಂಬೂರಿನಲ್ಲಿ ಪಂಚಾಯತ್ ಜಾಗದಲ್ಲಿ ಇರುವ ಕಟ್ಟಡ ಬೀಳುವ ಸ್ಥಿತಿ ತಲುಪಿದೆ. ಸಮರ್ಪಕ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ಅನುಕೂಲವಾಗುವಂತೆ ಮಾಡಬೇಕು. ಸೇತುವೆ ನಿರ್ಮಾಣವಾಗಿ ವರುಷ 7 ಕಳೆದರೂ ಕೊನೆಯ ಹಂತದ ಕೆಲಸ ಕಾರ್ಯಗಳು ನೆನೆಗುದಿಗೆ ಬಿದ್ದಿದೆ. ಸಂಪೂರ್ಣವಾಗಿ ಕಾಮಗಾರಿ ಕೆಲಸ ಮುಗಿದಿಲ್ಲ ಯಾಕೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಉತ್ತರಿಸಬೇಕು.
ಪಕ್ಕದಲ್ಲಿ ಗಿರೀಶ್ ಭಾರದ್ವಾಜ್ ರವರು ನಿರ್ಮಿಸಿದ ಬಹು ಉಪಕಾರಿ ತೂಗು ಸೇತುವೆಯನ್ನು ಉಳಿಸಿಕೊಳ್ಳುವ ಯೋಜನೆ ಪಂಚಾಯತ್ ನಿಂದ ನಿರ್ಣಯ ಮಾಡಬೇಕೆಂದು ಸುರೇಶ್ ಅರಂಬೂರು ಪ್ರಸ್ತಾಪಿಸಿದರು.

ಪಂಚಾಯತ್ ಕಟ್ಟಡದಲ್ಲಿ ಮಹಿಳಾ ಮಂಡಲದ ಸಭೆ ನಡೆಸುತ್ತಿದ್ದೇವು.ಈಗ ಶಾಲೆಯಲ್ಲಿ ಸಭೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಮಹಿಳಾ ಮಂಡಲಕ್ಕೆ ಸ್ವಂತ ಜಾಗ ಗುರುತಿಸಿಕೊಡಬೇಕು ಎಂದು ಹಾರಾವತಿ ಕುಡೆಕಲ್ಲು ರವರು ಬೇಡಿಕೆ ಇರಿಸಿದರು.

ಅರಂಬೂರು ಕೇಂದ್ರದಲ್ಲಿ ತೆರಿಗೆ ಸಂಗ್ರಹ ಕೇಂದ್ರ ತೆರೆಯಬೇಕು. ಪಹಣಿ ಪತ್ರ ಹೊಂದಿದ 20 ಸೆಂಟ್ಸ್ ಜಾಗ ಸ್ವಾಧೀನ ಪಡಿಸಿಕೊಂಡು ಸ್ವಂತ ಕಟ್ಟಡ ನಿರ್ಮಿಸಲು ಪಂಚಾಯತ್ ಮುಂದಾಗಬೇಕು. ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಮಹಿಳಾ ಮಂಡಲದವರಿಗೆ 5 ಸೆಂಟ್ಸ್ ಜಾಗ ಗುರುತಿಸಿಕೊಡುವ ವ್ಯವಸ್ಥೆ ಮಾಡುವಂತಾಗಬೇಕು ಎಂದು ಶ್ರೀಪತಿ ಭಟ್ ಮಜಿಗುಂಡಿ ಆಗ್ರಹಿಸಿದರು.
ಇದಕ್ಕೆ ಗ್ರಾಮಸ್ಥರು
ಸಭೆಯಿಂದ ಒಕ್ಕೋರಲ ಬೆಂಬಲ ಸೂಚಿಸಿದರು.
ಅರಂಬೂರು ಶಾಲೆಯ ಆವರಣಕ್ಕೆ ಕಂಪೌಂಡು ನಿರ್ಮಿಸಲಾಗಿದೆ. ಕೆಲವು ಮಂದಿ ಕಂಪೌಂಡು ಹಾರಿ ಮೈದಾನದಲ್ಲಿ ಆಟ ಆಡುವಾಡುವುದಲ್ಲದೆ ಶಾಲೆಯ ವಸ್ತುಗಳಿಗೆ ಹಾನಿ ಮಾಡುತ್ತಿದ್ದಾರೆ ಈ ಬಗ್ಗೆ ಪಂಚಾಯತ್ ಗಮನ ಹರಿಸಬೇಕು ಎಂದು ಚಂದ್ರಶೇಖರ ನೆಡ್ಚಿಲು ದೂರು ನೀಡಿದರು.

ಶಾಲೆಯ ಆವರಣದಲ್ಲಿ ಒಂದು ಲಕ್ಷ ವೆಚ್ಚದ ಸಿ.ಸಿ.ಟಿವಿ ಅಳವಡಿಸಲಾಗಿದೆ. ಸಾರ್ವಜನಿಕರು ಕಂಪೌಂಡು ಜಿಗಿಯುವಾಗ ಕಂಡಲ್ಲಿ ತಿಳಿಸಬೇಕು. ಸಿಸಿ ಫೂಟೇಜ್ ಪರಿಶೀಲಿಸಿ ಅವರ ವಿರುದ್ಧ ಪೋಲಿಸ್ ದೂರು ನೀಡಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ.
ಸೇತುವೆ ಕಾಮಗಾರಿ ಸಂಪೂರ್ಣ ಮಾಡದಿರುವುದರಿಂದ ಪಂಚಾಯತ್ ವ್ಯಾಪ್ತಿಯಲ್ಲಿರುವ ಸೇತುವೆ ಎರಡು ಬದಿಯ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸುದೇಶ್ ಅರಂಬೂರು ಉತ್ತರಿಸಿದರು.

ಕೋಲ್ಚಾರು ಶಾಲೆಯ ಕುಡಿಯುವ ನೀರಿನ ಪೈಪು ಬ್ಲಾಕ್ ಆಗಿ ನೀರಿನ ಸಮಸ್ಯೆ ಉಂಟಾಗಿದೆ. ಪೈಪು ಬದಲಾಯಿಸಿ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು.
ಅಡಿಕೆಗೆ ಹಳದಿ ರೋಗ ಬಾಧಿಸಿದ ತೋಟಗಳಿಗೆ ಪರ್ಯಾಯ ಬೆಳೆ ಬೆಳೆದಲ್ಲಿ ಆದಾಯ ಕಡಿಮೆ ಬರುವುದು. ಪರ್ಯಾಯ ಬೆಳೆ ಬೇಡ ಬದಲಾಗಿ ರೋಗಕ್ಕೆ ಔಷಧಿಯ ಸಂಶೋಧನೆ ಮಾಡಿ ಪರಿಹಾರ ಒದಗಿಸಬೇಕು‌ ಎಂದು ಸುದರ್ಶನ ಪಾತಿಕಲ್ಲು ಪ್ರಸ್ತಾಪಿಸಿದರು.
ಆಲೆಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಗೋಮಾಳಕ್ಕೆ ಕಾದಿರಿಸಿದ ಜಾಗ ಗುರುತಿಸಿ ಗೋಶಾಲೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಈ ಬಗ್ಗೆ ಪಂಚಾಯತ್ ನಿರ್ಣಯ ಕೈಗೊಳ್ಳಬೇಕು ಎಂದು ಪ್ರವೀಣ್ ಕಲ್ಲೆಂಬಿ ಒತ್ತಾಯಿಸಿದರು.

ಆಲೆಟ್ಟಿ ಪ್ರೌಢಶಾಲೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ಹರಿದು ಸಂಪೂರ್ಣಹದಗೆಟ್ಟಿದೆ.
ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದೆ ಮೇಲಿನಿಂದ ನೀರು ಹರಿದು ಬಂದು ಕೆಳಭಾಗದಲ್ಲಿ ಇರುವ ಮನೆಯ ಆವರಣದಲ್ಲಿ ತುಂಬುತ್ತಿದೆ. ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಬರುತ್ತಿದ್ದು ಸಮಸ್ಯೆ ಉಂಟಾಗುತ್ತಿದೆ. ಶಿಬಿರದ ಮೂಲಕ ಲಕ್ಷದಷ್ಟು ಖರ್ಚು ಮಾಡಿ ನಿರ್ಮಿಸಿದ ಹೊಸ ರಸ್ತೆ ಪ್ರಯೋಜನವಿಲ್ಲದಂತಾಗಿದೆ ಎಂದು ಶಿವಪ್ರಸಾದ್ ಆಲೆಟ್ಟಿ ಪ್ರಸ್ತಾಪಿಸಿದರು.

ಸರಕಾರಿ ಪ್ರೌಢಶಾಲೆಗೆ ಹೋಗುವ ರಸ್ತೆ ಕಾಮಗಾರಿಗೆ ಪಂಚಾಯತ್ ಅನುದಾನ 20 ಸಾವಿರ ಇರಿಸಲಾಗಿದೆ. ಮಳೆ ಕಡಿಮೆಯಾದ ಮೇಲೆ ಕೆಲಸ ಪ್ರಾರಂಭಿಸುತ್ತೇವೆ‌. ದೇವಸ್ಥಾನದ ರಸ್ತೆ ಕಾಮಗಾರಿ ಸಂಪೂರ್ಣ ಕಾಂಕ್ರೀಟ್ ಮಾಡಲಾಗುವುದು. ಸ್ಮಶಾನಕ್ಕೆ ಮೊರಂಗಲ್ಲು ಎಂಬಲ್ಲಿ ಜಾಗ ಗುರುತಿಸಲಾಗಿದೆ ಎಂದು ಶಿವಾನಂದ ರಂಗತ್ತಮಲೆ ಉತ್ತರಿಸಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಿರುಗು ವ್ಯಾಪಾರಸ್ಥರು ಕಡ್ಡಾಯವಾಗಿ ಪಂಚಾಯತ್ ನಿಂದ ಅನುಮತಿ ಪಡೆದುಕೊಳ್ಳಬೇಕು.ನಿಯಮ ಮೀರದೆ ವ್ಯಾಪಾರ ಮಾಡಬೇಕು ಎಂದು ದಿನೇಶ್ ಕಣಕ್ಕೂರು ಸೂಚನೆ ನೀಡಿದರು.
ಅರಂಬೂರು ಪಂಚಾಯತ್ ಕಟ್ಟಡ ದುರಸ್ತಿ ಪಡಿಸಲು ಪ್ರಕರಣ ನ್ಯಾಯಾಲಯದ ಲ್ಲಿದ್ದುದರಿಂದ ಮುಂದಾಗಿಲ್ಲ. ಕಟ್ಟಡದ ಹಿಂಬದಿ 96 ಸೆಂಟ್ಸ್ ಜಾಗವಿದ್ದು ಸ್ಮಶಾನಕ್ಕಾಗಿ ಕಾದಿರಿಸಿದ ಸ್ಥಳವಿದೆ. 20 ಸೆಂಟ್ಸ್ ಪಹಣಿ ಪತ್ರ ಹೊಂದಿದೆ. ವಕೀಲರ ಸೂಚನೆಯಂತೆ ಮುಂದಿನ ಸಭೆಯಲ್ಲಿ ಪ್ರಕರಣದ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಪಿ.ಡಿ.ಒ.ತಿಳಿಸಿದರು.

ಗ್ರಾಮ ಸಭೆಯಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಆರೋಗ್ಯಕರ ಚರ್ಚೆ ನಡೆದಿದೆ.ವಾರ್ಡ್ ಸಭೆಯ ನಿರ್ಣಯದಂತೆ ಮುಂದಿನ ಅಭಿವೃದ್ಧಿ ಕಾಮಗಾರಿ ಕೆಲಸ ನಿರ್ವಹಿಸಲಾಗುತ್ತದೆ. ಸಚಿವರು ನಮ್ಮ ಗ್ರಾಮದ ಅಭಿವೃದ್ಧಿಗೆ ಅನುದಾನ ಒದಗಿಸಿದ್ದಾರೆ. ಹಲವು ಬೇಡಿಕೆಗಳನ್ನು ಇರಿಸಿದ್ದೇವೆ.ಹಂತ ಹಂತವಾಗಿ ನೀಡುವ ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ದಿನೇಶ್ ಕಣಕ್ಕೂರು,ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಸದಸ್ಯರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಸತ್ಯಕುಮಾರ ಆಡಿಂಜ, ಶಿವಾನಂದ ರಂಗತ್ತಮಲೆ, ಸುದೇಶ್ ಅರಂಬೂರು, ರತೀಶನ್ ಅರಂಬೂರು, ಧರ್ಮಪಾಲಕೊಯಿಂಗಾಜೆ,ಚಂದ್ರಕಾಂತನಾರ್ಕೋಡು, ಗೀತಾ ಕೋಲ್ಚಾರು, ಅನಿತಾ ಅರಂಬೂರು, ವೇದಾವತಿ ನೆಡ್ಚಿಲು, ಕಮಲ ನಾಗಪಟ್ಟಣ, ಶಂಕರಿ ಕೊಲ್ಲರಮೂಲೆ, ಮೀನಾಕ್ಷಿ ಕುಡೆಕಲ್ಲು, ವೀಣಾ ವಸಂತ ಆಲೆಟ್ಟಿ, ಶಶಿಕಲಾ ದೋಣಿಮೂಲೆ, ಭಾಗೀರಥಿ ಪತ್ತುಕುಂಜ, ಕಾರ್ಯದರ್ಶಿ ಸೃಜನ್ ಎ.ಜಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪಿ.ಡಿ.ಒ ಸ್ವಾಗತಿಸಿದರು. ಸಿಬ್ಬಂದಿ ಸೀತಾರಾಮ ಮೊರಂಗಲ್ಲು ವಂದಿಸಿದರು.

LEAVE A REPLY

Please enter your comment!
Please enter your name here