ಸ್ವಾಮಿಯ ಆಶೀರ್ವಾದದಿಂದ ಶಿಬಿರದಲ್ಲಿ ಚಿಕಿತ್ಸೆ ಪಡೆದವರಿಗೆ ಉತ್ತಮ ದೃಷ್ಟಿ ಸಿಕ್ಕಿದೆ -ಸತ್ಯಸಾಯಿ ಮಂದಿರದಲ್ಲಿ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ನೇತ್ರಾಧಿಕಾರಿ ಡಾ. ಶಾಂತರಾಜ್

0

ಪುತ್ತೂರು: ಶ್ರೀ ಸತ್ಯಸಾಯಿ ಮಂದಿರದಲ್ಲಿ ಇಲ್ಲಿನ ತನಕ ನಡೆದ ಶಿಬಿರದ ಮೂಲಕ ಚಿಕಿತ್ಸೆ ಪಡೆದವರಿಗೆ ಯಾವುದೇ ಸಮಸ್ಯೆ ಬಂದಿಲ್ಲ. ಉತ್ತಮ ಚಿಕಿತ್ಸೆಯಿಂದ ದೃಷ್ಟಿ ಸಿಕ್ಕಿದೆ. ಇವೆಲ್ಲ ಸ್ವಾಮೀಯ ಅಶೀರ್ವಾದ ಎಂದು ನೇತ್ರಾಧಿಕಾರಿ ಡಾ. ಶಾಂತರಾಜ್ ಹೇಳಿದರು.

ಸತ್ಯಸಾಯಿ ಸೇವಾ ಸಮಿತಿ, ಬೈಂದೂರು ಪ್ರಭಾಕರ ಮೆಮೋರಿಯಲ್ ಟ್ರಸ್ಟ್ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ದ.ಕ.ಜಿಲ್ಲಾ ಅಂಧತ್ವ ಹತೋಟಿ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್‌ಲಾಕ್ ಸಂಚಾರಿ ನೇತ್ರ ಚಿಕತ್ಸಾ ಘಟಕ ಮಂಗಳೂರು, ಕೆ.ಎಂ.ಸಿ ಮಂಗಳೂರು ಮತ್ತು ಸರಕಾರಿ ಆಸ್ಪತ್ರೆ ಪುತ್ತೂರು ಇವರ ಸಹಯೋಗದಲ್ಲಿ ಫೆ.೮ರಂದು ಇಲ್ಲಿನ ಶ್ರೀ ಸತ್ಯಸಾಯಿ ಮಂದಿರದ ವಠಾರದಲ್ಲಿ ೪೭ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಶಿಬಿರಾರ್ಥಿಗಳಿಗೆ ಕಣ್ಣಿನ ಚಿಕಿತ್ಸೆ ಮತ್ತು ಮುಂಜಾಗ್ರತೆ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಪಾಲ್ಗೊಂಡವರಲ್ಲಿ ಕಣ್ಣಿನ ಪೊರೆ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ಫೆ. ೧೪ರಂದು ಇಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ಬಳಿಕ ಫೆ. ೧೮ರಂದು ಮಂಗಳೂರಿಗೆ ಪೊರೆ ಚಿಕಿತ್ಸೆಗೆ ಕರೆದೊಯ್ಯಲಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮೊಂದಿ ಒಬ್ಬರು ಸಹಾಯಕರು ಬೇಕಾಗುತ್ತದೆ. ಫೆ. ೧೯ಕ್ಕೆ ಚಿಕಿತ್ಸೆ ನಡೆದ ಬಳಿಕ ಫೆ. ೨೧ಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ನಿಮ್ಮನ್ನು ಪುತ್ತೂರಿಗೆ ಬಿಡಲಾಗುವುದು ಎಂದ ಅವರು ಸಮೀಪ ದೃಷ್ಟಿ ದೋಷ ಇದ್ದವರಿಗೆ ಶಿಬಿರದಲ್ಲೇ ಕನ್ನಡಕ ಕೊಡಲಾಗುತ್ತದೆ. ದೂರ ದೃಷ್ಟಿಯುಳ್ಳವರಿಗೆ ೧೫ ದಿನದ ಬಳಿಕ ಸತ್ಯಸಾಯಿ ಮಂದಿರದಲ್ಲೇ ಕನ್ನಡಕ ವಿತರಣೆ ಮಾಡಲಾಗುತ್ತದೆ ಎಂದ ಅವರು ಸ್ವಾಮಿಯ ಆಶೀರ್ವಾದದಿಂದ ಇಲ್ಲಿನ ತನಕ ಶಿಬಿರದ ಮೂಲಕ ಚಿಕಿತ್ಸೆ ಪಡೆದವರಿಗೆ ಉತ್ತಮ ದೃಷ್ಟಿ ಲಭಿಸಿದೆ ಎಂದರು.

ಕಣ್ಣಿನ ರಕ್ಷಣೆಯ ಕಾಳಜಿ ವಹಿಸಿ:
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಲೆಸ್ಸಿ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಾ ಅಂಗಾಗಳಿಗೂ ಕಣ್ಣು ಬಹಳ ಅಗತ್ಯವುಳ್ಳದಾಗಿದ್ದು, ಕಣ್ಣಿನ ರಕ್ಷಣೆ ಮಾಡಿಸಿಕೊಳ್ಳಿ. ಕಣ್ಣು ಪೊರೆ ಚಿಕಿತ್ಸೆ ಮಾಡಿಸಿಕೊಳ್ಳಿ. ಅಗತ್ಯವುಳ್ಳವರಿಗೆ ಕನ್ನಡಕ ಕೊಡಲಾಗುತ್ತದೆ. ಶಿಬಿರದ ಸದುಪಯೋಗ ಪಡೆದು ಕೊಳ್ಳಿ ಎಂದರು. ಸತ್ಯಸಾಯಿ ಸೇವಾ ಮಂದಿರದ ಪದ್ಮನಾಭ ನಾಯಕ್ ವಿವಿಧ ಮಾಹಿತಿ ನೀಡಿದರು.

ಸ್ವಾಮೀಯ ಆದೇಶದಂತೆ ಸೇವಾ ಕಾರ್ಯ:
ಬೈಂದೂರು ಪ್ರಭಾಕರ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಸತ್ಯ ಸುಂದರ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಂದಿರವನ್ನು ಸ್ಥಾಪಿಸುವ ಸಂದರ್ಭದಲ್ಲಿ ಭಗವಾನ್ ಸತ್ಯಸಾಯಿ ಬಾಬ ಅವರು ಈ ಮಂದಿರದಲ್ಲಿ ಸೇವೆಗೆ ಮಹತ್ವವಿದೆ. ಇಲ್ಲಿ ಸೇವಾ ಚಟುವಟಿಕೆ ನಿರಂತರ ನಡೆಯಲಿ. ಬೇರೆನು ಅಪೇಕ್ಷೆ ಇಲ್ಲ ಎಂದು ಹೇಳಿದಂತೆ ಅವರ ಆದೇಶದಂತೆ ಕಣ್ಣಿನ, ದಂತ ಚಿಕಿತ್ಸಾ ಶಿಬಿರ ಮತ್ತು ಶಿಕ್ಷಣ ನಿರಂತರ ನಡೆಯುತ್ತಿದೆ ಎಂದರು. ವೇದಿಕೆಯಲ್ಲಿ ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪ್ರಸನ್ನ ಎನ್ ಭಟ್, ಡಾ.ರಿಝಾ, ಅಂಗಾಗ ದಾನ ಸಂಸ್ಥೆಯ ಕೋ ಆರ್ಡಿನೇಟರ್ ಪದ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಧ್ಯಾತ್ಮಿಕ ಸಂಯೋಜಕಿ ಚಿತ್ರಾ ಆರ್ ರೈ ಪ್ರಾರ್ಥಿಸಿದರು. ಬೈಂದೂರು ಪ್ರಭಾಕರ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಸತ್ಯ ಸುಂದರ ರಾವ್ ಸ್ವಾಗತಿಸಿದರು. ಪೆರೆಂಟ್ ವಿಭಾಗದ ಜಿಲ್ಲಾ ಕೋ ಆರ್ಡಿನೇಟರ್ ಕಾಂಚನಮಾಲ ವಂದಿಸಿದರು. ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಸಂಚಾಲಕ ರಘುನಾಥ ರೈ ಕಾರ್ಯಕ್ರಮ ನಿರೂಪಿಸಿದರು. 253 ಮಂದಿ ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು. 189 ಮಂದಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. 31 ಮಂದಿ ಶಸ್ತ್ರ ಚಿಕಿತ್ಸೆಗೆ ದಾಖಲು ಮಾಡಲಾಯಿತು. ಮುಂದಿನ ಶಿಬಿರವು ಎ.12ರಂದು ನಡೆಯಲಿದೆ.

 

LEAVE A REPLY

Please enter your comment!
Please enter your name here