ಕಡಬ ತಾಲೂಕು ಮಟ್ಟದ ಪ.ಜಾತಿ/ಪ.ಪಂಗಡದವರ ಹಿತರಕ್ಷಣೆ ಮತ್ತು ಕುಂದು ಕೊರತೆ ನಿವಾರಣಾ ಸಮಿತಿ ಸಭೆ

0

  • ಕಡಬ ತಾಲೂಕಿನಲ್ಲಿ 18.79 ಎಕ್ರೆ ಡಿಸಿ ಮನ್ನಾ ಭೂಮಿ ಇತರ ವರ್ಗದವರಿಗೆ ಮಂಜೂರು ವಿಚಾರ
  • ಪ.ಜಾ/ಪ.ಪಂ.ಕ್ಕೆ ಮೀಸಲಿಟ್ಟ ಭೂಮಿಯನ್ನು ಮರು ಸ್ವಾಧೀನಪಡಿಸದಿದ್ದರೆ ಉಗ್ರ ಹೋರಾಟ ಎಚ್ಚರಿಕೆ
  • ದಲಿತ ಸಂಘಟನೆ ಮುಖಂಡರ ವಿರುದ್ದ ಸುಳ್ಳು ಕೇಸು ಆರೋಪ-ಆಕ್ರೋಶ

 

ಕಡಬ: ಕಡಬ ತಾಲೂಕಿನಲ್ಲಿ ಒಟ್ಟು 18.79 ಎಕ್ರೆ ಡಿಸಿ ಮನ್ನಾ ಭೂಮಿಯನ್ನು ಇತರ ವರ್ಗದವರಿಗೆ ಮಂಜೂರುಗೊಳಿಸಿರುವ ಮಾಹಿತಿಯ ವಿಚಾರ ತಿಳಿಯುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಮುಖಂಡರು ಡಿಸಿ ಮನ್ನಾ ಭೂಮಿಯನ್ನು ಕೂಡಲೇ ಇತರರಿಂದ 15ದಿನದೊಳಗೆ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದ ಘಟನೆ ಮತ್ತು ಸುಬ್ರಹ್ಮಣ್ಯದಲ್ಲಿ ಪಟ್ಟಾ ಜಾಗದಲ್ಲಿ ರಸ್ತೆ ನಿರ್ಮಾಣವನ್ನು ತೆರವುಗೊಳಿಸಲು ಸ್ಥಳಕ್ಕೆ ಹೋದ ನಮ್ಮ ಮೇಲೆ ವಿನಾ ಕಾರಣ ಸುಬ್ರಹ್ಮಣ್ಯ ಎಸ್.ಐ.ಯವರು ಮಾನಭಂಗ ಕೇಸು ದಾಖಲಿಸಿದ್ದಾರೆ, ಸುಳ್ಳು ಕೇಸು ಹಾಕಿರುವ ಸುಬ್ರಹ್ಮಣ್ಯ ಠಾಣಾ ಎಸ್.ಐ.ಯವರು ಸಭೆಗೆ ಬರುವಂತೆ ಪಟ್ಟು ಹಿಡಿದು ಸಭೆಯ ಮುಂಭಾಗದಲ್ಲಿ ಕೆಲ ಮುಖಂಡರು ಧರಣಿ ಕುಳಿತ ಘಟನೆ ಹಾಗೂ ಇತರ ವಿಚಾರದಲ್ಲಿ ಭಾರಿ ಚರ್ಚೆ ನಡೆದ ಘಟನೆ ಫೆ.10ರಂದು ನಡೆದಿದೆ.

ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ಕಡಬ ತಹಸೀಲ್ದಾರ್ ಅನಂತಶಂಕರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕಿ ಭಾರತಿ ಜೆ.ಎ. ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮ ನಾಯ್ಕ್, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಫಕೀರಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಕೃಷ್ಣ.ಬಿ ವಂದಿಸಿದರು.

ಡಿ.ಸಿ.ಮನ್ನಾ ಭೂಮಿ ಇತರ ವರ್ಗದವರಿಗೆ ಮಂಜೂರು ವಿಚಾರ-ಭಾರಿ ಚರ್ಚೆ, ಆಕ್ರೋಶ
ಕಳೆದ ಬಾರಿ ನಡೆದ ಸಭೆಯಲ್ಲಿ ಆದ ನಿರ್ಣಯದ ಪಾಲನಾ ವರದಿ ಓದಿ ಡಿಸಿ ಮನ್ನಾ ಜಮೀನಿಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಒಟ್ಟು ಲಭ್ಯವಿರುವ ಡಿ.ಸಿ. ಮನ್ನಾ ಜಮೀನು ಒತ್ತುವರಿ ಹಾಗೂ ಈವರೆಗೆ ಪ.ಜಾತಿ/ಪ.ಪಂಗಡದವರಿಗೆ ಎಷ್ಟು ನಿವೇಶನಗಳನ್ನು ನೀಡಲಾಗಿದೆ ಎನ್ನುವ ಕಳೆದ ಸಭೆಯ ನಿರ್ಣಯಕ್ಕೆ ಅನುಪಾಲನಾ ವರದಿಯಲ್ಲಿ ಉಲ್ಲೇಖಿಸಿದಂತೆ ಡಿಸಿ ಮನ್ನಾ ಜಮೀನನ್ನು ಈಗಾಗಲೇ ಖಾಲಿ ಇದ್ದ ಕುದ್ಮಾರು ಗ್ರಾಮದ ಜಾಗವನ್ನು ನಿವೇಶನಕ್ಕೆ ಕಾಯ್ದಿರಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ, ಒತ್ತುವರಿ ಜಮೀನಿನ ಅಳತೆ ಕಾರ್ಯಕ್ಕೆ ಬಾಕಿ ಇದೆ ಇದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಈ ಬಗ್ಗೆ ಆಕ್ರೋಶಗೊಂಡ ಶಶಿಧರ ಬೊಟ್ಟಡ್ಕ, ಆನಂದ ಮಿತ್ತಬೈಲು ಅವರು ಮಾತನಾಡಿ, ಕಡಬ ತಾಲೂಕಿನಲ್ಲಿ ಕುದ್ಮಾರಿನಲ್ಲಿ ಮಾತ್ರ ಒತ್ತುವರಿಯಾಗಿರುವುದಾ, ತಾಲೂಕಿನ ಇತರೆಡೆ ಇರುವ ಡಿಸಿ ಮನ್ನಾ ಭೂಮಿಯ ಮಾಹಿತಿ ಕೊಡಿ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅವರು ಮಾಹಿತಿ ನೀಡಿ, ಕಡಬ ತಾಲೂಕಿನಲ್ಲಿ ಒಟ್ಟು 503.44 ಎಕ್ರೆ ಭೂಮಿ ಇದೆ, ಅದರಲ್ಲಿ ಪ.ಜಾತಿ, ಪ.ಪಂಗಡದವರಿಗೆ ಒಟ್ಟು 379.27 ಭೂಮಿ ಮಂಜೂರಾಗಿದೆ, ಅದರಲ್ಲಿ ಸಾರ್ವಜನಿಕ ಉದ್ದೇಶಕ್ಕೆ 30.97 ಎಕ್ರೆ, ಇನ್ನಿತರ ಉದ್ದೇಶಕ್ಕೆ 8.2 ಎಕ್ರೆ, ನೀಡಲಾಗಿದ್ದು, ಇತರರಿಗೆ 18.79 ಎಕ್ರೆ ಮಂಜೂರಾಗಿದ್ದು ಒಟ್ಟು 437.23 ಎಕ್ರೆ ಭೂಮಿಯು ವಿಲೇವಾರಿಯಾಗಿದೆ, ಒಟ್ಟು 63.19 ಎಕ್ರೆ ಉಳಿಕೆಯಾಗಿದೆ. ಇದರಲ್ಲಿ ಉಳಿಕೆ ವಿಸ್ತೀರ್ಣದ ಪೈಕಿ 63.19 ಎಕ್ರೆ ಅತಿಕ್ರಮಣವಾಗಿದೆ. ಇದರಲ್ಲಿ ಮಂಜೂರುದಾರರಿಗೆ 3.02 ಎಕ್ರೆ ಭೂಮಿ ಅತಿಕ್ರಮಣ ಮುಕ್ತವಾಗಿದೆ ಎಂದು ಮಾಹಿತಿ ನೀಡಿದರು. ಈ ಮಾಹಿತಿಯಲ್ಲಿ ಇತರ ವರ್ಗದವರಿಗೆ 18 ಎಕ್ರೆ ಮಂಜೂರಾಗಿರುವ ಬಗ್ಗೆ ಆಕ್ರೋಶಗೊಂಡ ದಲಿತ ಮುಖಂಡರು ತಹಸೀಲ್ದಾರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 15 ದಿನದೊಳಗೆ ಇತರ ವರ್ಗದವರಿಗೆ ಮಂಜೂರುಗೊಳಿಸಿದ ಡಿಸಿ ಮನ್ನಾ ಭೂಮಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ತಹಸೀಲ್ದಾರ್ ಉತ್ತರಿಸಿ ೧೫ ದಿನದೊಳಗೆ ಸಾಧ್ಯವಿಲ್ಲ, ಮುಂದಿನ ಸಭೆಯೊಳಗೆ ತೆರವುಗೊಳಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು, ಇದಕ್ಕೆ ಒಪ್ಪದ ಮುಖಂಡರು ಮುಂದಿನ ಸಭೆ ಅಂತ ಹೇಳಿ ನೀವು ಜಾರಿಕೊಳ್ಳುವುದು ಬೇಡ, ಇಂತಹ ವಿಚಾರಕ್ಕೆ ಕೈ ಹಾಕಿದರೆ ನಿಮ್ಮನ್ನು ಎತ್ತಂಗಡಿ ಮಾಡುತ್ತಾರೆ, ಇಲ್ಲದಿದ್ದರೆ ನೀವು ನಿವೃತ್ತಿ ಆಗುತ್ತಿರಿ ಎಂದು ಆನಂದ ಮಿತ್ತಬೈಲು ಹೇಳಿದರು, ಆದುದರಿಂದ ಕೂಡಲೇ ತೆರವಿಗೆ ಕ್ರಮ ಕೈಗೊಳ್ಳಬೇಕೆಂದರು. ಈ ಬಗ್ಗೆ ತುಂಬಾ ಚರ್ಚೆ, ಮಾತಿನ ಚಕಮಕಿ ನಡೆಯಿತು. ಬಳಿಕ ಕಾನೂನು ರೀತಿಯ ಪ್ರಕ್ರಿಯೆಗಳನ್ನು ನಡೆಸಬೇಕಿದೆ, ಆದರೆ ಈ ವಿಚಾರದಲ್ಲಿ ನಾಳೆಯಿಂದಲೇ ಕ್ರಮ ಕೈಗೊಳ್ಳುತ್ತೇನೆ ಎಂದರು. ಈ ವಿಚಾರದಲ್ಲಿ ದಲಿತ ಮುಖಂಡರಾದ ಉಮೇಶ್ ಕೋಡಿಂಬಾಳ, ವಸಂತ ಕುಬಲಾಡಿ, ಬಾಬು ಎನ್. ಸವಣೂರು, ಗಣೇಶ್ ಕಾಯರ್ತಡ್ಕ, ಗುರುವಪ್ಪ ಕಲ್ಲುಗುಡ್ಡೆ, ಸುಂದರಿ ಕಲ್ಲುಗುಡ್ಡೆ ಮೊದಲಾದವರು ಚರ್ಚೆ ನಡೆಸಿದರು.

ದಲಿತ ಸಂಘಟನೆ ಮುಖಂಡರ ವಿರುದ್ದ ಸುಳ್ಳು ಕೇಸು ಆರೋಪ-ಆಕ್ರೋಶ
ಕಡಬ ದಲಿತ ಸಂಘಟನೆಯ ಕಾರ್ಯಕರ್ತರ ಮೇಲೆ ಎರಡು ಬಾರಿ ಸುಳ್ಳು ಮಾನಭಂಗ ಕೇಸು ದಾಖಲಿಸಿದ್ದಾರೆ ಎಂದು ದಲಿತ ಮುಖಂಡರು ಸುಬ್ರಹ್ಮಣ್ಯ ಎಸ್.ಐ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಸಭೆಯಲ್ಲೇ ಧರಣಿ ಕುಳಿತ ಘಟನೆ ನಡೆದಿದೆ. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರಾಘವ ಕಳಾರ ಅವರು, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಸಂಘಟನೆಯನ್ನು ಧಮನಿಸುವ ಪ್ರಯತ್ನ ಸುಬ್ರಹ್ಮಣ್ಯ ಠಾಣೆಯಲ್ಲಿ ನಡೆದಿದೆ, ಬೇಲಿ ತೆರವು ಮಾಡುವ ವೇಳೆ ಪೊಲೀಸ್ ರಕ್ಷಣೆ ಕೋರಿದರೂ ಅವರಿಗೆ ಬರಲು ಸಾಧ್ಯವಾಗಿಲ್ಲ, ಮಹಿಳೆಯ ಮೂಲಕ ಸುಳ್ಳು ಮಾನಭಂಗ ಕೇಸು ದಾಖಲಿಸಿದ್ದಾರೆ ಎಂದು ಆಕ್ರೋಶ ಭರಿತ ಧ್ವನಿಯಲ್ಲಿ ಮಾತನಾಡಿದರು. ಸಂಘಟನೆಯ ಮಹಿಳಾ ಕಾರ್ಯಕರ್ತರನ್ನೂ ಸೇರಿಸಿ ಸತ್ಯಾಸತ್ಯತೆ ಪರಾಮರ್ಷೆ ಮಾಡದೆ ನಮ್ಮ ಮೇಲೆ ಅತ್ಯಾಚಾರ, ಮಾನಭಂಗ ಕೇಸು ದಾಖಲಿಸಿದ್ದಾರೆ, ನಮಗೂ ಅಕ್ಕತಂಗಿ-ತಾಯಿ ಇದ್ದಾರೆ, ನಮ್ಮ ತಪ್ಪಿದ್ದರೆ ನಾವು ಜೈಲಿಗೂ ಹೋಗಲು ಸಿದ್ದ ಆಕ್ರೋಶ ಹೊರ ಹಾಕಿದರು. ಇದಕ್ಕೆ ಸಭೆಯಲ್ಲಿದ್ದ ಆನಂದ ಪಟುಬೆಟ್ಟು, ವಸಂತ ಕುಬಲಾಡಿ, ಗುರುವಪ್ಪ ಕಲ್ಲುಗುಡ್ಡೆ, ಶೀನ ಬಾಳಿಲ ಸೇರಿದಂತೆ ಇತರರೂ ಧ್ವನಿ ಗೂಡಿಸಿ ಎರಡೆರಡು ಬಾರಿ ಒಂದೇ ಸಂಘಟನೆಯ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಸುಬ್ರಹ್ಮಣ್ಯದಲ್ಲಿ ದಲಿತ ಮಹಿಳೆಯೊಬ್ಬರು ನೀಡಿದ ದೂರನ್ನು ಎಸ್.ಐ ಬಿಸಾಡಿದ ಬಗ್ಗೆಯೂ ಚರ್ಚೆಯಾಯಿತು. ಸಭೆಗೆ ಸುಬ್ರಹ್ಮಣ್ಯ ಠಾಣೆ ಎಸ್.ಐ ಬರುವಂತೆ ಪಟ್ಟು ಹಿಡಿದು ವೇದಿಕೆಯ ಮುಂಭಾಗದಲ್ಲಿ ಧರಣಿ ಕುಳಿತರು. ಅಲ್ಲದೆ ಸಭೆ ಬಹಿಷ್ಕಾರಕ್ಕೂ ಮುಂದಾದರು. ಅಧಿಕಾರಿಗಳು ಎಸ್.ಐ ಅವರನ್ನು ಸಂಪರ್ಕಿಸಿದಾಗ ಸಮಾಜ ಕಲ್ಯಾಣ ಇಲಾಖೆಯಿಂದ ಯಾವುದೇ ನೋಟಿಸು ಬಾರದ ಕಾರಣ ಬರಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದರು ಎನ್ನಲಾಗಿದೆ. ಮುಂದಿನ ಸಭೆಗೆ ಕಡಬ ತಾಲೂಕು ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗೂ ನೋಟಿಸು ನೀಡುವಂತೆ ತಿಳಿಸಿದರು. ಕಡಬ ಠಾಣಾ ಎಸ್.ಐ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿ ಧರಣಿ ಕುಳಿತವರನ್ನು ಮನವೊಲಿಸಿ ಸಭೆ ಮುಂದುವರಿಸಲು ವಿನಂತಿಸಿದರು. ಬಳಿಕ ಸಭೆ ಮುಂದುವರೆಯಿತು.

ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧಿಕಾರಿಯವರ ದಲಿತ ಮುಖಂಡರ ಸಮಸ್ಯೆಗೆ ಸ್ಪಂಧಿಸುತ್ತಿಲ್ಲ, ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ ಎಂದು ಅಂಬೇಡ್ಕರ್ ನಿಗಮದ ಅಧಿಕಾರಿಯವರನ್ನು ಸಭೆಯಲ್ಲಿ ದಲಿತ ಮುಖಂಡರು ತರಾಟೆಗೆ ತೆಗೆದುಕೊಂಡರು. ಬಳಿಕ ಮಾತನಾಡಿ, ಅಂಬೇಡ್ಕರ್ ನಿಗಮದಲ್ಲಿ ಜಿಲ್ಲಾ ಮಟ್ಟದಲ್ಲಿ ಓರ್ವ ಅಧಿಕಾರಿಯವರು ಇದ್ದು ಅವರಿಗೆ ಅರ್ಜಿ ನೀಡುವುದು ಪಂಚಾಯತ್ ಮಟ್ಟದಲ್ಲಿ ಆಗಬೇಕು ಎಂದು ಹೇಳಿದರು, 94ಸಿಯಲ್ಲಿ ಹಕ್ಕು ಪತ್ರ ಸಿಗಬೇಕಾದರೆ ೨೫ ಸಾವಿರ ಹಣ ಕೊಡಬೇಕಾಗುತ್ತದೆ, ಬಡವರಿಗೆ ಯಾವುದೇ ಕೆಲಸ ಆಗಬೇಕಾದರೆ ಲಂಚ ನೀಡದಿದ್ದರೆ ಆಗುವುದಿಲ್ಲ ಎಂದು ಉಮೇಶ್ ಕೋಡಿಂಬಾಳ ಆರೋಪ ವ್ಯಕ್ತಪಡಿಸಿದರು. ಕೊಂಬಾರು ಗ್ರಾಮದಲ್ಲಿ ಅರಣ್ಯ ಗ್ರಾಮ ಸಮಿತಿಗೆ ಯಾವುದೇ ಅಧಿಕಾರ ಇಲ್ಲ, ಇಲ್ಲಿನ ಸಮಿತಿಯನ್ನು ಪುನರ್ ರಚಿಸಬೇಕು ಅದು ಎ.ಸಿ.ಎಫ್‌ಯವರ ಉಪಸ್ಥಿತಿಯಲ್ಲಿ ಆಗಬೇಕೆಂದು ಶಶಿಧರ ಬೊಟ್ಟಡ್ಕ ಆಗ್ರಹಿಸಿದರು.

ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಪ್ಪಲಿ ಹಾಕಬಾರದಂತೆ:
ಕಡಬ ಸರಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ಚಪ್ಪಲಿ ಹಾಕಬಾರದು ಆದರೆ ಅಲ್ಲಿನ ನರ್ಸ್‌ಗಳು ಮತ್ತು ಡಾಕ್ಟರ್‍ಸ್ ಚಪ್ಪಲಿ ಹಾಕಿಕೊಳ್ಳುತ್ತಾರೆ ಇದು ಯಾವ ನ್ಯಾಯ, ಮತ್ತು ಅಲ್ಲಿನ ಮಹಿಳಾ ವೈದ್ಯಾಧಿಕಾರಿಯವರು ಜನರೊಂದಿಗೆ ಸರಿಯಾಗಿ ವರ್ತನೆ ಮಾಡುವುದಿಲ್ಲ, ಓರ್ವ ಡಾಕ್ಟರ್ ಆಗಿ ಮುಖ ಎತ್ತಿ ಮಾತನಾಡಲು ಆಗುವುದಿಲ್ಲವೇ, ಆಸ್ಪತ್ರೆ ದಿನಪೂರ್ತಿ ಓಫನ್ ಅಂತ ಬೋರ್ಡ್ ಹಾಕಿ ಸಂಜೆ ಆಗುವಾಗ ಆಸ್ಪತ್ರೆ ಬಂದ್ ಆಗ್ತದೆ ಎಂದು ಆನಂದ ಮಿತ್ತಬೈಲು ಅವರು ಆರೋಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ ಅವರು, ಆಸ್ಪತ್ರೆಯಲ್ಲಿ ಚಪ್ಪಲಿ ಹಾಕಬಹುದು, ಚಪ್ಪಲಿ ಹಾಕಬಾರದೆಂದು ಹೇಳಿದ್ದರೆ ವಿಚಾರಿಸುತ್ತೇನೆ ಎಂದು ಹೇಳಿದರು. ಬಳಿಕ ಮಾತನಾಡಿದ ಆನಂದರವರು ಇಲ್ಲಿನ ಮಹಿಳಾ ವೈದ್ಯಾಧಿಕಾರಿಯವರನ್ನು ಒಂದು ವರ್ಷದೊಳಗೆ ವರ್ಗಾವಣೆಗೊಳಿಸದಿದ್ದರೆ ನಾವು ಆಸ್ಪತ್ರೆಯ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇತರ ಚರ್ಚೆಗಳು:
ಬಲ್ಯ ಪ್ರದೇಶದಲ್ಲಿ ಆನೆ ಹಾವಲಿ ಇದೆ ಅಲ್ಲದೆ ಬೀದಿ ದೀಪ ಕೂಡ ಹಾಕಿಲ್ಲ ಎಂದು ಚಂದ್ರಹಾಸ ಬಲ್ಯ ಅವರು ಆರೋಪಿಸಿದರು. ಬೊಟ್ಟಡ್ಕ ಸಮೀಪ ಅರಣ್ಯ ಪ್ರದೇಶ ಕಾಡು ತೋಟ ಆಗುತ್ತಿದೆ, ಆದರೂ ಅರಣ್ಯ ಅಧಿಕಾರಿಗಲು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಗ್ರಾಮಕ್ಕೊಂದು ಅಂಬೇಡ್ಕರ್ ಭವನ ನಿರ್ಮಾಣ ಆಗಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಕಡಬ ಅಂಬೇಡ್ಕರ್ ಭವನದ ದುಸ್ಥಿತಿಯ ಬಗ್ಗೆ ಸಭೆಯಲ್ಲಿ ಭಾರಿ ಚರ್ಚೆ ನಡೆಯಿತು, ಇದಕ್ಕೆ ಉತ್ತರಿಸಿದ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ ಅವರು ಅಂಬೇಡ್ಕರ್ ಭವನದ ದುರಸ್ತಿಗೆ ಅನುದಾನ ಇಡಲಾಗಿದೆ, ಟೆಂಡರ್ ಪ್ರಕ್ರಿಯೇ ಆಗಬೇಕಷ್ಟೆ ಎಂದು ಹೇಳಿದರು. ದಲಿತರ ಮನೆ ಇಲ್ಲದಲ್ಲಿಯೂ ಪ.ಜಾತಿ, ಪ.ಪಂಗಡದವರಿಗೆ ಮೀಸಲಿಟ್ಟ ಅನುದಾನವನ್ನು ಉಪಯೋಗಿಸಲಾಗುತ್ತಿದೆ, ಪಟ್ಟೆ ದೋಳ್ಪಾಡಿ, ಚಾರ್ವಾಕದಲ್ಲಿ ಈ ರೀತಿ ಮಾಡಲಾಗಿದೆ ಎಂದು ಸಭೆಯಲ್ಲಿ ಆರೋಪ ವ್ಯಕ್ತವಾಯಿತು. ಬಿಳಿನೆಲೆ ಗ್ರಾಮದ ಕೈಕಂಬದಲ್ಲಿ ಹಾಕಲಾಗಿರುವ ಮರ್ದಾಳ-ಧರ್ಮಸ್ಥಳ ನಾಮಫಲಕದಿಂದ ಬಸ್ಸುಗಳು ಮರ್ದಾಳ ರೂಟ್‌ನಲ್ಲಿಯೇ ಸಂಚರಿಸುತ್ತದೆ, ಗುಂಡ್ಯ ಮಾರ್ಗವಾಗಿ ಸಂಚರಿಸುವುದು ಕಡಿಮೆಯಾಗಿದೆ, ಇದರಿಂದ ಈ ಭಾಗದ ಪ್ರಯಾಣಿಕರಿಗೆ ಬಸ್ಸು ಸೌಲಭ್ಯದ ಕೊರತೆ ಉಂಟಾಗಿದೆ ಎಂದು ಹೇಳಿದರು. ನೆಲ್ಯಾಡಿ ಬಸ್ಸು ತಂಗುದಾನ ಇದ್ದು ಇಲ್ಲದಂತಾಗಿದೆ, ಇಲ್ಲಿ ಕೂಡಲೇ ಸಿಬ್ಬಂದಿ ನೇಮಕ ಮಾಡಬೇಕೆಂದು ಆಗ್ರಹ ಕೇಳಿ ಬಂತು. ಕೊಂಬಾರಿನಲ್ಲಿ ಗೋಮಾಳ ಜಾಗದಲ್ಲಿ ಅಂಗಡಿ ಕಟ್ಟಿಕೊಂಡಿದ್ದಾರೆ, ಅವರಿಗೆ ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರಾಗಿದೆ ಎಂದು ಗಣೇಶ್ ಹಾಗೂ ಶಶಿಧರ ಬೊಟ್ಟಡ್ಕ ಅವರು ಆರೋಪಿಸಿದರು. ಸಭೆಯಲ್ಲಿ ಹಲವಾರು ವಿಚಾರಗಳು, ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಿತು. ಎಲ್ಲ ಸಮಸ್ಯೆಗಳ ಬಗ್ಗೆ ನಿರ್ಣಯ ಬರೆದುಕೊಂಡು ಪರಿಹರಿಸಲಾಗುವುದು ಎಂದು ತಹಸೀಲ್ದಾರ್ ಹೇಳಿದರು. ಪೆರಾಬೆಯ ಇಡಾಳದಲ್ಲಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ರಾಘವ ಕಳಾರ, ಅಣ್ಣಿ ಎಳ್ತಿಮಾರ್ ಅವರು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ತಾ.ಪಂ. ಇ.ಒ ನವೀನ್ ಭಂಡಾರಿಯವರು, ಆ ಜಮೀನನ್ನು ಗ್ರಾ.ಪಂ.ಗೆ ಹಸ್ತಾಂತರಿಸಲಾಗಿದೆ, ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಸದ್ಯಕ್ಕೆ ಯಾವುದೇ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ ಎಂದರು. ಈ ಬಗ್ಗೆ ಮಾತನಾಡಿದ ರಾಘವರವರು ಪಂಚಾಯತ್ ಜಾಗ ಹಸ್ತಾಂತರಿಸಿದ ಬಳಿಕವೂ ಅಲ್ಲಿ ಖಾಸಗಿಯವರು ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here