ವಿಟ್ಲದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರು

0

  • ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ 11 ವಿದ್ಯಾರ್ಥಿನಿಯರು

ಪುತ್ತೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಹನ್ನೊಂದು ಮುಸ್ಲಿಂ ವಿದ್ಯಾರ್ಥಿನಿಯರು ಪಠ್ಯ ಚಟುವಟಿಕೆ ಬಹಿಷ್ಕರಿಸಿದ ಘಟನೆ ವಿಟ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಫೆ.16ರಂದು ನಡೆದಿದೆ.

ಸಾಂದರ್ಭಿಕ ಚಿತ್ರ

ವಿಟ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ಗೆ ಹಿಜಾಬ್ ಧರಿಸಿಕೊಂಡು ಬಂದಿದ್ದ 11 ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಗೆ ತೆರಳಲು ಪ್ರಾಂಶುಪಾಲರು ಅವಕಾಶ ನಿರಾಕರಿಸಿದಾಗ ವಿದ್ಯಾರ್ಥಿನಿಯರು ತಮಗೆ ತರಗತಿಗೆ ಹೋಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ನ್ಯಾಯಾಲಯದ ಮುಂದಿನ ಆದೇಶದವರೆಗೆ ಶಾಲು ಅಥವಾ ಹಿಜಾಬ್ ಧರಿಸಿ ತರಗತಿಗೆ ಹೋಗಲು ಅವಕಾಶ ಇಲ್ಲ ಎಂದು ತಿಳಿಸಿದ ಪ್ರಾಂಶುಪಾಲರು ಹಿಜಾಬನ್ನು ಕಾಲೇಜಿನ ಲೇಡಿಸ್ ರೂಮ್‌ನಲ್ಲಿ ತೆಗೆದಿಟ್ಟು ತರಗತಿಗೆ ಹೋಗುವಂತೆ ಸೂಚಿಸಿದರು. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ಕುರಿತ ಆದೇಶ ಪದವಿ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ, ಸರಕಾರವು ಪದವಿ ವಿದ್ಯಾರ್ಥಿಗಳಿಗೆ ಸಮವಸ್ತ್ರದ ನಿಬಂಧನೆ ವಿಧಿಸಿಲ್ಲ ಎಂದು ಉನ್ನತ ಶಿಕ್ಷಣ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿದರು. ನ್ಯಾಯಾಲಯದ ಆದೇಶ ಇರುವುದರಿಂದ ಯಾವುದೇ ಕಾರಣಕ್ಕೂ ಈಗ ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟವಾಗಿ ತಿಳಿಸಿದಾಗ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ತೆರಳಿದರು. ಹಿಜಾಬ್ ಧರಿಸಿದ್ದ 11 ಮಂದಿ ಮಾತ್ರ ತರಗತಿ ಬಹಿಷ್ಕರಿಸಿದ್ದು ಹಿಜಾಬ್ ಧರಿಸದ ಹಲವು ಮುಸ್ಲಿಮ್ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. ಬಳಿಕ ಯಥಾಸ್ಥಿತಿಯಲ್ಲಿ ತರಗತಿ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಕಾಲೇಜ್‌ನಲ್ಲಿ ಈ ಹಿಂದೆ ಹಿಜಾಬ್ ಧರಿಸಿಯೂ ತರಗತಿಗೆ ಬರಲು ಅವಕಾಶ ಇತ್ತು. ಹಿಜಾಬ್ ಧರಿಸದೆಯೂ ತರಗತಿಗೆ ಹಾಜರಾಗಲೂ ಅವಕಾಶ ನೀಡಲಾಗುತ್ತಿತ್ತು. ಇದೀಗ ರಾಜ್ಯದ ಹಲವೆಡೆ ಹಿಜಾಬ್ ವಿವಾದ ನಡೆಯುತ್ತಿರುವುದರಿಂದ ವಿಟ್ಲದಲ್ಲಿಯೂ ಇದು ವಿವಾದ ಸೃಷ್ಠಿಸಿದೆ. ಕಾಲೇಜ್‌ನಲ್ಲಿ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯೆ ಕೇಳಲು ಪ್ರಾಂಶುಪಾಲೆ ಶ್ರೀಜಾರವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ಬೇಡ, ಸಾಕಾಯಿತು ಮಾತನಾಡಿ ದಯವಿಟ್ಟು ಕ್ಷಮಿಸಿ ಎಂದು ಹೇಳಿ ದೂರವಾಣಿ ಕರೆ ಕಡಿತಗೊಳಿಸಿದ್ದಾರೆ.

ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಸರಕಾರ ಫೆ.9ರಿಂದ ರಜೆ ಘೋಷಿಸಿತ್ತು. ಫೆ.14ರಂದು ಪ್ರೌಢಶಾಲಾ ತರಗತಿಗಳು ಆರಂಭಗೊಂಡಿದ್ದು ಫೆ.16ರಂದು ಕಾಲೇಜ್‌ಗಳಲ್ಲಿ ತರಗತಿ ಆರಂಭಗೊಂಡಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದರ ಕುರಿತಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ನಿರಂತರವಾಗಿ ವಾದ ಪ್ರತಿವಾದ ನಡೆಯುತ್ತಿದ್ದು ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.

LEAVE A REPLY

Please enter your comment!
Please enter your name here