ರಾಜ್ಯಮಟ್ಟದ ಯುನಿಕ್ ಫ್ಯಾಶನ್, ಮಿಸ್ಟರ್, ಮಿಸ್, ಟೀಮ್ ಕರ್ನಾಟಕ ಸೌದರ್ಯ ಸ್ಪರ್ಧೆಯಲ್ಲಿ ಫಿಲೋಮಿನಾದ ಕಿಂಜಲ್‌ರವರಿಗೆ `ಮಿಸ್ ಕರ್ನಾಟಕ’ ಕಿರೀಟ

0

ಪುತ್ತೂರು: ಸೌಂದರ್ಯವರ್ಧಕ ಕ್ಷೇತ್ರವೆನಿಸಿದ ಮಾಡೆಲಿಂಗ್ ಕ್ಷೇತ್ರಕ್ಕೆ ಹುಡುಗರು, ಹುಡುಗಿಯರು ಫಿದಾ ಆಗುವುದು ಸಹಜ. ಈ ಮಾಡೆಲಿಂಗ್ ಕ್ಷೇತ್ರಕ್ಕೆ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಮುಗುಳ್ನಗೆಯ ಯುವತಿಯೊಬ್ಬಳು ಹೆಜ್ಜೆ ಇರಿಸಿರುವುದು ಮಾತ್ರವಲ್ಲ, ಚೊಚ್ಚಲ ಪ್ರಯತ್ನದಲ್ಲಿಯೇ ಸೈ ಎನಿಸಿಕೊಂಡ ಬಾಲೆ, ಪ್ರತಿಷ್ಠಿತ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಈಕೆ ಮತ್ತಾರೂ ಅಲ್ಲ, ಫಿಲೋಮಿನಾ ಕಾಲೇಜಿನಲ್ಲಿ ಅಂತಿಮ ವಿಜ್ಞಾನ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ಅದೃಷ್ಟದ ಯುವತಿ ಕಿಂಜಲ್ ಆಗಿದ್ದಾರೆ. ಫೆ.20 ರಂದು ಮೂಡಬಿದ್ರೆಯ ಕನ್ನಡ ಭವನದಲ್ಲಿ ದೀಪಕ್ ಶೆಟ್ಟಿರವರು ಆಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ ಯುನಿಕ್ ಫ್ಯಾಶನ್, ಮಿಸ್ಟರ್, ಮಿಸ್, ಟೀಮ್ ಕರ್ನಾಟಕ ಸ್ಪರ್ಧೆಯ ಮಿಸ್ ವಿಭಾಗದಲ್ಲಿ ಕಿಂಜಲ್‌ರವರು ಪ್ರತಿಷ್ಠಿತ ಟೈಟಲ್ ಅನ್ನು ತಮ್ಮದಾಗಿಸಿ ಫಿಲೋಮಿನಾ ಕಾಲೇಜಿಗೆ ಮಾತ್ರವಲ್ಲ, ಪುತ್ತೂರಿಗೂ ಹೆಸರು ತಂದಿರುತ್ತಾರೆ.

ಗ್ರ್ಯಾಂಡ್ ಫಿನಾಲೆ, 4 ಸ್ಪರ್ಧಿಗಳು:
ಈ ಸ್ಪರ್ಧೆಯಲ್ಲಿನ ಗ್ರ್ಯಾಂಡ್ ಫಿನಾಲೆಯಲ್ಲಿ ನಾಲ್ಕು ಮಂದಿ ಸ್ಪರ್ಧಿಗಳಿದ್ದು, ಅಂತಿಮವಾಗಿ ಕಿಂಜಲ್‌ರವರು ಉಳಿದ ಮೂವರನ್ನು ಹಿಂದಿಕ್ಕಿ ತೀರ್ಪುಗಾರರ ಮೆಚ್ಚುಗೆಯನ್ನು ಗಳಿಸಿ ಚಾಂಪಿಯನ್ ಆಗುವುದರೊಂದಿಗೆ ಸೌಂದರ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಬೆಡಗಿ ಕಿಂಜಲ್‌ರವರು ಸ್ಪರ್ಧೆಯ ಪ್ರತಿಯೊಂದು ವಿಭಾಗದಲ್ಲೂ ಆರಂಭದಿಂದ ಗ್ರ್ಯಾಂಡ್ ಫಿನಾಲೆಯವರೆಗೂ ಎಲ್ಲರ ಮೆಚ್ಚುಗೆಯನ್ನು ಗಳಿಸಿ ಮುನ್ನೆಡೆದಿದ್ದರು. ತೀರ್ಪುಗಾರರಾಗಿ ಕೆವಿನ್ ಥೋಮಸ್ ಹಾಗೂ ಆಕಾಂಕ್ಷಾ ಗೌಡರವರು ಭಾಗವಹಿಸಿದ್ದರು.

ಬಹುಮುಖ ಪ್ರತಿಭೆ:
ಕಿಂಜಲ್‌ರವರೋರ್ವೆ ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದು, ಓದಿನಲ್ಲೂ ಹಾಗೂ ಪಠ್ಯೇತರ ಚಟುವಟಿಕೆಯಲ್ಲೂ ಪ್ರತಿಭಾನ್ವಿತಳೆನಿಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಮಾಡೆಲಿಂಗ್ ಕ್ಷೇತ್ರದತ್ತ ಅಭಿರುಚಿ ಬೆಳಿಸಿಕೊಂಡಿರುವ ಕಿಂಜಲ್‌ರವರು ತನಗೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಭೌತಶಾಸ್ತ್ರ ವಿಭಾಗದ ಡಾ|ಚಂದ್ರಶೇಖರ್, ರಸಾಯನಶಾಸ್ತ್ರ ವಿಭಾಗದ ಪ್ರೊ|ಎಡ್ವಿನ್ ಡಿ’ಸೋಜ, ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಶ್ ಪಿಂಟೋ ಹಾಗೂ ತನ್ನ ಸಹಪಾಠಿ ವಿದ್ಯಾರ್ಥಿನಿಯರಾದ ಶ್ರಾವ್ಯ, ಸುವಿತ ರೈ ಹಾಗೂ ಗ್ಲೆನ್ನಾ ರೀಮಾ ಮೊಂತೇರೋರವರು ಪ್ರೋತ್ಸಾಹದಾಯಕ ಸ್ಫೂರ್ತಿಯನ್ನು ತುಂಬಿದವರು ಎಂದಿದ್ದಾರೆ. ಇಲ್ಲಿನ ದರ್ಬೆ ಇನ್‌ಫಿನಿಟಿ ಬ್ಯೂಟಿ ಪಾರ್ಲರ್‌ನ ಪೋಸ್ಟರ್‌ವೊಂದಕ್ಕೆ ರೂಪದರ್ಶಿಯಾಗಿಯೂ ಕಿಂಜಲ್‌ರವರು ಪಾತ್ರ ವಹಿಸಿದ್ದರು. ಬಹುಮುಖ ಪ್ರತಿಭೆಯಾಗಿರುವ ಕಿಂಜಲ್‌ರವರು ಫಿಲೋಮಿನಾ ಕಾಲೇಜಿನಲ್ಲಿ ಎನ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿಯೂ ಒಲವು ಹೊಂದಿರುತ್ತಾರೆ. ಮಾತ್ರವಲ್ಲದೆ ಆಲ್ಬಂ ಸಾಂಗ್‌ಗೆ ಹೆಜ್ಜೆಯಿರಿಸಲು ಅವಕಾಶ ಸಿಕ್ಕರೆ ಭಾಗವಹಿಸಲು ಸಿದ್ಧ ಎಂದು ಕಿಂಜಲ್‌ರವರು `ಸುದ್ದಿ’ಗೆ ತಿಳಿಸಿದ್ದಾರೆ.

ಕಿಂಜಲ್‌ರವರು ತಮ್ಮ ಪ್ರಾಥಮಿಕ ಶಿಕ್ಷಣದ ನಾಲ್ಕನೇ ತರಗತಿಯವರೆಗೆ ರಾಜಸ್ಥಾನದ ಯೂರೋಕಿಡ್ಸ್ ಸಂಸ್ಥೆಯಲ್ಲಿ, ಐದರಿಂದ ಹತ್ತನೇ ತರಗತಿಯವರೆಗೆ ಪುತ್ತೂರಿನ ಸುದಾನ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪಿಯು ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಪ್ರಸ್ತುತ ಕಿಂಜಲ್‌ರವರು ತಂದೆ ಉದ್ಯಮಿ ಎನ್.ಕೃಷ್ಣ ನಾಯ್ಕ್, ತಾಯಿ ರಮ್ಯಕೃಷ್ಣ, ತಂಗಿ ಅಂಬಿಕಾ ವಿದ್ಯಾಲಯದಲ್ಲಿ ಐದನೇ ತರಗತಿ ಓದುತ್ತಿರುವ ಆರುಷಿರವರೊಂದಿಗೆ ನೂಜಿ ತೆಂಕಿಲದಲ್ಲಿ ವಾಸವಾಗಿದ್ದಾರೆ.

ಪ್ರತಿಭಾವಂತರಿಗೆ ಯಾವುದೇ ಕ್ಷೇತ್ರವಾದರೂ ಚಿಂತಿಲ್ಲ. ಪ್ರತಿಭೆಯನ್ನು ತೋರ್ಪಡಿಸಲು ಸೂಕ್ತ ವೇದಿಕೆ ಸಿಗಬೇಕಾಗಿದೆ. ಆದರೆ ಯಾರು ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ನೆಲೆಯನ್ನು ಕಂಡುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಓದಿನ ಜೊತೆಗೆ ತನ್ನ ಪ್ರತಿಭೆಯಿಂದ ಮಾಡೆಲಿಂಗ್ ಕ್ಷೇತ್ರದತ್ತ ಗಮನಹರಿಸಿದ ಕಿಂಜಲ್‌ರವರು ಭವಿಷ್ಯದಲ್ಲಿ ಮಿಂಚುವತ್ತ ಉತ್ತಮ ಅವಕಾಶಗಳು ಲಭಿಸಲಿ, ಭವಿಷ್ಯ ಉಜ್ವಲವಾಗಲಿ ಎಂಬುದಾಗಿ ನಾವು ಹಾರೈಸೋಣ.

 

ದಕ್ಷಿಣ ಭಾರತವನ್ನು ಪ್ರತಿನಿಧಿಸುವ ಕನಸು…
ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ `ಮಿಸ್ ಕರ್ನಾಟಕ’ ನನಗೆ ಒಲಿದಿರುವುದು ತುಂಬಾ ಹೆಮ್ಮೆಯೆನಿಸಿದೆ. ನನ್ನ ಕನಸು ಏನು ಇದೆಯೋ ಅದು ಇದೀಗ ಅರ್ಧ ಪೂರೈಸಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ನಿರೂಪಕರು ವಿಜಯಿ ಸ್ಪರ್ಧಿಯಾಗಿ ತನ್ನ ಹೆಸರನ್ನು ಕರೆದಾಗ ನಿಜಕ್ಕೂ ರೋಮಾಂಚನಗೊಂಡಿದ್ದೆ. ಈ ಸ್ಪರ್ಧೆಯಲ್ಲಿ ನನ್ನೊಂದಿಗೆ ಅಂತಿಮ ಘಟ್ಟದಲ್ಲಿ ಮೂಡಬಿದ್ರೆಯ ಈರ್ವರು ಹಾಗೂ ಮಂಗಳೂರಿನ ಓರ್ವ ಯುವತಿ ಭಾಗವಹಿಸಿದ್ದರು. ಭವಿಷ್ಯದಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುವ ಕನಸಿನೊಂದಿಗೆ ಮಾಡೆಲಿಂಗ್ ಕ್ಷೇತ್ರವನ್ನು ಫ್ಯಾಶನ್ ಆಗಿ ಮುಂದುವರೆಸಲು ಇಚ್ಛಿಸುತ್ತೇನೆ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುವ ಹೆಬ್ಬಯಕೆಯೂ ಇದೆ ನನಗೆ ಕು|ಕಿಂಜಲ್, ಮಿಸ್ ಕರ್ನಾಟಕ ಚಾಂಪಿಯನ್

LEAVE A REPLY

Please enter your comment!
Please enter your name here