ಮಾ.5-6:ಅಖಿಲ ಕರ್ನಾಟಕ 18ನೇ ಹಸ್ತಪ್ರತಿ ಸಮ್ಮೇಳನ – ರೆ|ಜಿ.ಎಫ್.ಕಿಟ್ಟೆಲ್‌ರವರ ಸಾಹಿತ್ಯ ಸಂಸ್ಮರಣೆ

0

ಪುತ್ತೂರು: ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಸಂಸ್ಕೃತಿಯ ಅಧ್ಯಯನದ ಆಕರಗಳಾದ ತಾಡೋಲೆ-ಕೋರಿಕಾಗದ-ಕಡತ ರೂಪದ ಹಸ್ತಪ್ರತಿಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಹಸ್ತಪ್ರತಿಗಳ ಸಮಗ್ರ ಅಧ್ಯಯನಕ್ಕಾಗಿ ಕನ್ನಡ ವಿಶ್ವವಿದ್ಯಾಲಯವು ಹಸ್ತ ಪ್ರತಿಶಾಸ್ತ್ರ ವಿಭಾಗವನ್ನು ಆರಂಭಿಸಿದೆ. ಈ ವಿಭಾಗದ ವಾರ್ಷಿಕಾವರ್ತನ ಕಾರ್ಯಕ್ರಮಗಳಲ್ಲಿ ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನವೂ ಒಂದು. ಈಗಾಗಲೇ ನಾಡಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 17 ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಹದಿನೆಂಟನೆಯ ಸಮ್ಮೇಳನವು ಮಾ.5 ಮತ್ತು 6ರಂದು ನೆಹರುನಗರದ ಸುದಾನ-ಕಿಟ್ಟೆಲ್ ಸೆಂಟರ್ ಸಹಯೋಗದಲ್ಲಿ ಪುತ್ತೂರಿನಲ್ಲಿ ನಡೆಯಲಿದೆ.


ಕನ್ನಡದ ಹಿರಿಯ ವಿದ್ವಾಂಸರು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ ಪ್ರತಿಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ|ಎ.ವಿ.ನಾವಡರವರು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ಮಾ.5ರಂದು ಪೂರ್ವಾಹ್ನ ನಡೆಯುವ ಉದ್ಘಾಟನಾ ಸಮಾರಂಭವು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|ಸ.ಚಿ.ರಮೇಶ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ|ಅಜಕ್ಕಳ್ ಗಿರೀಶ್ ಭಟ್‌ರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪ್ರೊ|ಎ.ವಿ.ನಾವಡರವರು ಸಮ್ಮೇಳನಾಧ್ಯಕ್ಷತೆಯ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರೊ|ಎ.ವಿ.ನಾವಡರವರು ಸಂಪಾದಿಸಿದ ಕಿಟ್ಟೆಲ್ ವಾಚಿಕೆ, ಸಿಲೆಕ್ಟೆಡ್ ರೈಟಿಂಗ್ ಆಫ್ ರೆ|ಕಿಟ್ಟೆಲ್ ಇನ್ ಕನ್ನಡ ಲ್ಯಾಂಗ್ವೇಜ್ ಲಿಟರೇಚರ್ ಆಂಡ್ ಕಲ್ಚರ್, ಕಿಟ್ಟೆಲ್‌ರವರ ಕ್ರಿಸ್ತೀಯ ಕಾವ್ಯ ಕಥಾಮಾಲೆ ಹಾಗೂ ಡಾ|ವೀರೇಶ ಬಡಿಗೇರರವರು ಸಂಪಾದಿಸಿದ ಹಸ್ತಪ್ರತಿ ವ್ಯಾಸಂಗ-21, ಕನ್ನಡ ಅಧ್ಯಯನ ೧೦-೧, ೨ ಕನ್ನಡ ಅಧ್ಯಯನ 22.1,2 -ಹೀಗೆ ಆರು ಪುಸ್ತಕಗಳನ್ನು ಕನ್ನಡದ ಹಿರಿಯ ವಿದ್ವಾಂಸರಾದ ಉಪ್ಪಿನಂಗಡಿಯ ಡಾ|ತಾಳ್ತಜೆ ವಸಂತಕುಮಾರ್‌ವರು ಲೋಕಾರ್ಪಣೆ ಮಾಡಲಿದ್ದಾರೆ. ಸುದಾನ ವಸತಿ ಶಾಲೆಯ ಸಂಚಾಲಕರಾದ ರೆ|ವಿಜಯ ಹಾರ್ವಿನ್‌ರವರು ಹಸ್ತಪ್ರತಿ ಮತ್ತು ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಹಸ್ತ ಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|ಎಫ್.ಟಿ.ಹಳ್ಳಿಕೇರಿರವರು ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಸುದಾನ-ಕಿಟ್ಟೆಲ್ ಸೆಂಟರಿನ ನಿರ್ದೇಶಕರಾದ ಡಾ|ಪೀಟರ್ ವಿಲ್ಸನ್ ಪ್ರಭಾಕರ್‌ರವರು ಸ್ವಾಗತ ಭಾಷಣ ಮಾಡಲಿದ್ದಾರೆ.

ಮಧ್ಯಾಹ್ನ 2 ಗಂಟೆಯಿಂದ ಗೋಷ್ಠಿಗಳು ಆರಂಭವಾಗಲಿದ್ದು, ರೆ|ಕಿಟ್ಟೆಲ್ ಅವರ ಸಾಹಿತ್ಯ ಸಾಧನೆ ಕುರಿತು ಮೊದಲ ಎರಡು ಗೋಷ್ಠಿಗಳಲ್ಲಿ ಎಂಟು ಸಂಪ್ರಬಂಧಗಳು ಮಂಡನೆಯಾಗಲಿವೆ. ಕಿಟ್ಟೆಲ್‌ರವರ ಜೀವನ ಪಥ, ನಿಘಂಟು-ವ್ಯಾಕರಣ, ಪಠ್ಯಪುಸ್ತಕ ರಚನೆ, ಗ್ರಂಥ ಸಂಪಾದನೆ, ಕಾವ್ಯ, ಸಂಶೋಧನೆ, ಧರ್ಮ, ಸಾಹಿತ್ಯ ಚರಿತ್ರೆ ಕುರಿತು ಚಿಂತನ ಮಂಥನ ನಡೆಯಲಿದೆ. ಮಾ.6ರಂದು ಬೆಳಿಗ್ಗೆ ಸಮ್ಮೇಳನಾಧ್ಯಕ್ಷರಾದ ಪ್ರೊ|ಎ. ವಿ.ನಾವಡರವರ ಸಾಧನೆ ಕುರಿತು ಒಂದು ವಿಶೇಷ ಉಪನ್ಯಾಸ, ಯಕ್ಷಗಾನ ಹಸ್ತಪ್ರತಿಗಳ ವಿಷಯ ವೈವಿಧ್ಯ, ಸಂಗ್ರಹ-ಸಂರಕ್ಷಣೆ, ಲಿಪಿಕಾರರು ಹಾಗೂ ಸಂಪಾದನೆ ಕುರಿತು ಗೋಷ್ಠಿ, ಪ್ರಾಚೀನ ಕಾವ್ಯ ಪರಿಷ್ಕರಣಗಳ ಬಗ್ಗೆ ಗೋಷ್ಟಿ ನಡೆಯಲಿದೆ.

ಆದಿತ್ಯವಾರ ಮಧ್ಯಾಹ್ನ 2 ಗಂಟೆಗೆ ಕನ್ನಡ ವಿಶ್ವವಿದ್ಯಾಲಯದ ಕುಲ ಸಚಿವರಾದ ಡಾ|ಎ.ಸುಬ್ಬಣ್ಣ ರೈರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಹಿರಿಯ ವಿದ್ವಾಂಸರಾದ ಡಾ|ಪಾದೇಕಲ್ಲು ವಿಷ್ಣುಭಟ್‌ರವರು ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಸ್ತಪ್ರತಿ ತಜ್ಞರಾದ ಮಂಗಳೂರು ತಿಯಾಲಾಜಿಕಲ್ ಕಾಲೇಜಿನ ಪತ್ರಾಗಾರ ತಜ್ಞರಾದ ಬೆನೆಟ್ ಜಿ.ಅಮ್ಮನ್ ಹಾಗೂ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಹಿರಿಯ ಸಂಶೋಧಕರಾದ ಡಾ|ಎಸ್.ಆರ್.ವಿಘ್ನರಾಜರವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ|ಎಂ.ಪಿ.ಶ್ರೀನಾಥ್, ಪುತ್ತೂರು ತಾಲೂಕು ಅಧ್ಯಕ್ಷರಾದ ಉಮೇಶ ನಾಯಕ್, ಸುದಾನ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶೋಭಾ ನಾಗರಾಜ್‌ರವರು ಉಪಸ್ಥಿತರಿರುವರು. ಎರಡು ದಿನ ನಡೆಯುವ ಈ ಸಮ್ಮೇಳನದಲ್ಲಿ ನಾಡಿನ ವಿವಿಧ ಭಾಗದ ವಿದ್ವಾಂಸರು, ಮಂಗಳೂರು-ಉಡುಪಿ ಜಿಲ್ಲೆಯ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|ಎಫ್.ಟಿ.ಹಳ್ಳಿಕೇರಿ ಮತ್ತು ಸುದಾನ-ಕಿಟ್ಟೆಲ್ ಸೆಂಟರನ ನಿರ್ದೇಶಕರಾದ ಡಾ|ಪೀಟರ್ ವಿಲ್ಸನ್ ಪ್ರಭಾಕರ್‌ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here