ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವ – ಸಭಾ ಕಾರ್ಯಕ್ರಮ

0

  • ಸಮಾನತೆಯ ಚಿಂತನೆಯಿಂದ ಸಮಾಜದ ಅಭಿವೃದ್ಧಿ – ವಿಖ್ಯಾತಾನಂದ ಶ್ರೀ

 

 

ಪುತ್ತೂರು: ಸಮಾನತೆಯ ತತ್ವದಲ್ಲಿ ಸಮಾಜವನ್ನು ಬೆಳಗಿದ ಶ್ರೀ ನಾರಾಯಣ ಗುರುಗಳ ಚಿಂತನೆಯಂತೆ ಸಮಾಜ ಬೆಳೆಯಬೇಕಾದರೆ ಪ್ರತಿಯೊಂದು ಕಡೆಯೂ ಸಮಾನತೆಯ ಭಾವನೆ ಇರಬೇಕು. ಇದರಿಂದ ಸಮಾಜದ ಪರಿವರ್ತನೆ ಸಾಧ್ಯ ಎಂದು ಸೋಲೂರು ಮಠ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನುಡಿದರು.

 


ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ನಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಪುಣ್ಯ ಕ್ಷೇತ್ರಗಳಿಂದಾಗಿ ಭಾರತದ ಸನಾತನ ಸಂಸ್ಕೃತಿ, ಧರ್ಮ ಇನ್ನೂ ಶಾಶ್ವತವಾಗಿ ಉಳಿದಿದೆ. ಹಾಗಾಗಿ ನಾವು ನೆಮ್ಮದಿ ಸುಸಂಸ್ಕೃತ ಜೀವನ ನಡೆಸುವಂತಾಗಿದೆ ಎಂದ ಅವರು ಕೋಟಿ ಚೆನ್ನಯರ ಜೀವಿತ ಇಂದಿನ ಯುವಜನತೆ ಆದರ್ಶವಾಗಿ ಕಾಣಬೇಕು ಎಂದರು. ನಾರಾಯಣ ಗುರುಗಳು ಶೋಷಣೆಯ ಸಮಾಜದ ವಿರುದ್ಧ ಧ್ವನಿಯೆತ್ತಿ ಪರಿವರ್ತನೆಯ ನಾಂದಿ ಹಾಡಿದವರು. ಹಾಗಾಗಿ ಅವರ ಹೆಸರಿನಲ್ಲಿ ವಸತಿ ಶಾಲೆ ನಿರ್ಮಿಸಲು ಮುಂದಾಗಿರುವ ಕರ್ನಾಟಕ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

 


ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯಲಿ – ಮಠಂದೂರು: ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ‘ಭಾರತ ಅಧ್ಯಾತ್ಮ ದೇಶವಾಗಿದೆ. ಅಧ್ಯಾತ್ಮ ಕ್ಷೇತ್ರಕ್ಕೆ ನಾರಾಯಣ ಗುರುಗಳ ಕೊಡುಗೆ ಅನನ್ಯವಾಗಿದೆ. ಅದೇ ರೀತಿ ತುಳುನಾಡಿನ ಪರಂಪರೆಗೆ ಅಳಿಯ ಕಟ್ಟು ಸಮಾಜ ನೀಡಿದ ಕೊಡುಗೆಯೂ ಅಪಾರವಾದುದು. ಗೆಜ್ಜೆಗಿರಿ ಕ್ಷೇತ್ರದ ಮೂಲಕ ಪುತ್ತೂರು ಕ್ಷೇತ್ರವೂ ಇತಿಹಾಸದ ಪುಟದಲ್ಲಿ ಸೇರಿರುವುದಕ್ಕೆ ಶಾಸಕನಾಗಿ ಹೆಮ್ಮೆಯಿದೆ ಎಂದ ಹೇಳಿದರು. ಗೆಜ್ಜೆಗಿರಿ, ಹನುಮಗಿರಿ ಮತ್ತು ಬಿಲ್ವಗಿರಿಯನ್ನು ಪ್ರವಾಸೋದ್ಯಮದ ಕ್ಷೇತ್ರವಾಗಿ ಮಾಡುವ ಕಾರ್ಯಗಳು ಮುಂದಕ್ಕೆ ನಡೆಯಲಿ ಎಂದು ಆಶಿಸಿದ ಶಾಸಕರು, ಹಿಂದಿನ ಸರಕಾರ ಇಟ್ಟಿರುವ ಅನುದಾನವನ್ನು ಮುಂದುವರಿಸಿಕೊಂಡು ಕ್ಷೇತ್ರದ ಸರ್ವ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಸರಕಾರ ಹತ್ತು ಹಲವು ಅನುದಾನಗಳನ್ನು ನೀಡಿದೆ. ಮುಂದೆಯೂ ಸರಕಾರ ಸದಾ ನಿಮ್ಮ ಜೊತೆಗೆ ಇದೆ ಎಂದರು.

ಭೂ ಮಸೂದೆಯಿಂದ ಬಿಲ್ಲವರಿಗೆ ಹೆಚ್ಚಿನ ಲಾಭ – ರಮಾನಾಥ ರೈ: ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ರಮಾನಾಥ ರೈಯವರು ಮಾತನಾಡಿ ‘ಭೂ ಮಸೂದೆ ಕಾಯ್ದೆಯಿಂದ ಬಿಲ್ಲವ ಸಮಾಜ ಹೆಚ್ಚಿನ ಲಾಭ ಪಡೆದಿದೆ. ನಾನು ಅರಣ್ಯ ಸಚಿವನಾಗಿದ್ದಾಗ ಇಲ್ಲಿ ದೇಯಿ ಬೈದ್ಯೆತಿ ಔಷಧಿವನ ಮಾಡಬೇಕೆಂದು ಸ್ಚಯಂಪ್ರೇರಿತವಾಗಿ ಮನಸ್ಸಿಗೆ ಬಂದಿತ್ತು. ನಮ್ಮ ಸರಕಾರ ಈ ಕ್ಷೇತ್ರದ ಅಭಿವೃದ್ಧಿಗೆ5ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಮುಂದಕ್ಕೆ ಶ್ರೀಗಳು ಹೇಳಿದಂತೆ ಆಯುರ್ವೇದ ಔಷಧಾಲಯ ನಿರ್ಮಾಣ ಮಾಡುವಲ್ಲಿ ಸಮಾಜ ಇದನ್ನು ಸವಾಲಾಗಿ ಸ್ವೀಕರಿಸಬೇಕೆಂದರು.


ಇಲ್ಲಿ ಅಪೂರ್ವ ವಾದ ಶಕ್ತಿಯಿದೆ – ಸೊರಕೆ: ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರು ಮಾತನಾಡಿ ‘ಗೆಜ್ಜೆಗಿರಿಯಲ್ಲಿ ಅಪೂರ್ವವಾದ ಶಕ್ತಿಯಿದೆ. ಸಿದ್ದರಾಮಯ್ಯ ಸರಕಾರ ಕೋಟಿ ಚೆನ್ನಯ ಜನ್ಮಸ್ಥಾನ ಅಭಿವೃದ್ಧಿಗೆ ೫ ಕೋಟಿ ರೂ., ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠಕ್ಕಾಗಿ ೨ ಕೋಟಿ ರೂ. ಅನುದಾನ ಇಟ್ಟಿತ್ತು. ಈ ಕ್ಷೇತ್ರ ಭಕ್ತಾಭಿಮಾನಿಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಇಲ್ಲಿ ಅಭಿವೃದ್ಧಿ ನಡೆಯಬೇಕಾಗಿದೆ. ನಿರಂತರ ಕಾರ್ಯ ಚಟುವಟಿಕೆಗಳು ಇಲ್ಲಿ ನಡೆಯುತ್ತಿರಲಿ ಎಂದು ಆಶಿಸಿದರು.


ಈ ಕ್ಷೇತ್ರವನ್ನು ರೈ, ಸೊರಕೆ ಅಭಿವೃದ್ಧಿಪಡಿಸಲಿ-ಬಂಗೇರ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಸಂತ ಬಂಗೇರರವರು ಮಾತನಾಡಿ ‘ಈ ಕ್ಷೇತ್ರದ ಅಭಿವೃದ್ಧಿಯನ್ನು ರೈಯವರು ಮತ್ತು ಸೊರಕೆಯವರು ಮಾಡಬೇಕು. ನಾನಿನ್ನು ರಾಜಕೀಯದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ. ಅವರ ಬೆನ್ನ ಹಿಂದೆ ನಾನಿದ್ದೇನೆ ಎಂದು ಹೇಳಿದ ಅವರು ಭವಿಷ್ಯದಲ್ಲಿ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಬಂದೇ ಬರುತ್ತದೆಂದು ಭರವಸೆ ವ್ಯಕ್ತಪಡಿಸಿದರು.

೪ ಎಕ್ರೆ ಜಾಗ ಖರೀದಿಸಲಾಗಿದೆ – ಕೋಟ್ಯಾನ್: ಮುಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್ ರವರು ಮಾತನಾಡಿ ‘ಕಷ್ಟಗಳ ಪರಿಹಾರಕ್ಕಾಗಿ ಪ್ರಾರ್ಥಿಸಿ ಬಂದ ಭಕ್ತರ ಇಷ್ಟಾರ್ಥ ನೆರವೇರಿದ ಅದೆಷ್ಟೋ ಉದಾಹರಣೆಗಳು ಈ ಕ್ಷೇತ್ರದಲ್ಲಿದೆ. ಕ್ಷೇತ್ರ ಲೋಕಾರ್ಪಣೆಯಾದ ಬಳಿಕ ಸಾವಿರಾರು ಮಂದಿ ಇಲ್ಲಿಗೆ ಬಂದು ತಾಯಿ ಮತ್ತು ಕೋಟಿಚೆನ್ನಯರ ಪರಮ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ. ಶ್ರೀಗಳು ಸೂಚಿಸಿದ ರೀತಿಯಲ್ಲಿ ಇಲ್ಲಿ ಸಂಸ್ಥೆಯೊಂದನ್ನು ನಿರ್ಮಿಸಲು ಸಮಿತಿಯಿಂದ ೪ ಎಕ್ರೆ ಜಾಗವನ್ನು ಖರೀದಿಸಲಾಗಿದೆ ಎಂದು ಹೇಳಿದರು.

ಮುಂಬೈ ಭಕ್ತರ ಸರ್ವ ಸಹಕಾರವಿದೆ – ಹರೀಶ್ ಅಮೀನ್: ಮುಂಬೈ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮೀನ್ ರವರು ಮಾತನಾಡಿ ‘ಗೆಜ್ಜೆಗಿರಿ ಕ್ಷೇತ್ರದ ಎಲ್ಲಾ ಅಭಿವೃದ್ಧಿ ಕಾರ್ಯಗಳ ಜೊತೆ ಮುಂಬೈಯಿಂದ ಅಸೋಸಿಯೇಷನ್ ಸದಾ ಸಹಕಾರ ನೀಡಲಿದೆ. ಆಯುರ್ವೇದ ಆಸ್ಪತ್ರೆ ಕಟ್ಟುವಲ್ಲಿ ನಮ್ಮ ಸಹಕಾರ ಇದೆ. ಬ್ರಹ್ಮಕಲಶೋತ್ಸವದ ಬಳಿಕ ಇಲ್ಲಿಗೆ ಮುಂಬೈಯಿಂದಲೂ ಸಾವಿರಾರು ಮಂದಿ ಬಂದು ಹೋಗುತ್ತಿರುವುದು ಇದಕ್ಕೆ ಸಾಕ್ಷಿ ಎಂದರು.

ಬೆಂಗಳೂರು ಚೆಪ್‌ಟಾಕ್ ಸಂಸ್ಥೆಯ ಚೇರ್‌ಮೆನ್ ಗೋವಿಂದ ಬಾಬು ಪೂಜಾರಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ನ ಮಾಜಿ ವೈಸ್ ಚೇರ್‌ಮೆನ್ ಸುಭಾಷ್ ಕೌಡಿಚ್ಚಾರ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಅಧ್ಯಕ್ಷ, ಉದ್ಯಮಿ ಆರ್. ಪದ್ಮರಾಜ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಸದಸ್ಯ ಉದ್ಯಮಿ ಎನ್.ಟಿ. ಪೂಜಾರಿ ಮುಂಬೈ ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆಯವರು ಮಾತನಾಡಿ ‘ಗೆಜ್ಜೆಗಿರಿ ಕ್ಷೇತ್ರದಲ್ಲಿ ಬಿಲ್ಲವ ಸಮಾಜದ ಎಲ್ಲಾ ಅಂಗಸಂಸ್ಥೆಗಳು ಒಂದಾಗಿವೆ. ಕ್ಷೇತ್ರದ ಸೇವಕಾರಿ ನೂರಾರು ಮಂದಿ ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ವಿನಯ ಕುಮಾರ್ ಮತ್ತು ರಮಾನಾಥ ರೈಯವರು ಈ ದಿಶೆಯಲ್ಲಿ ನಮ್ಮೊಂದಿಗಿದ್ದಾರೆ ಎಂಬ ಭರವಸೆ ನಮಗಿದೆ. ಇಲ್ಲಿಗೆ ಬರುವ ಭಕ್ತರ ಸಕಲ ದುರಿತ ಕಷ್ಟಗಳನ್ನು ಇಲ್ಲಿನ ಶಕ್ತಿಗಳು ಪರಿಹರಿಸಿ ಅನುಗ್ರಹಿಸಲಿ ಎಂದು ಆಶಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ರವರು ಮಾತನಾಡಿ ‘ಗೆಜ್ಜೆಗಿರಿಯಲ್ಲಿ ನಭೂತೋ ನಭವಿಷ್ಯತಿ ಎಂಬಂತೆ ನಡೆದಿರುವ ಬ್ರಹ್ಮಕಲಶೋತ್ಸವ ನಡೆದಿರುವುದು ಈ ಕ್ಷೇತ್ರ ದೈವ ಸಂಕಲ್ಪದಂತೆಯೇ ನಿರ್ಮಾಣವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಭಕ್ತರ ಬೆವರು, ಸಮರ್ಪಣೆ ಇಲ್ಲಿ ಸಾಕಾರಗೊಂಡಿದೆ. ಕ್ಷೇತ್ರ ಬಹುತೇಕ ಒಂದು ಸಮುದಾಯದವರಿಂದ ನಿರ್ಮಾಣವಾಗಿದೆ. ಆದರೆ ಲೋಕಾರ್ಪಣೆಯಾದ ಬಳಿಕ ಇಲ್ಲಿಗೆ ಸರ್ವ ಸಮಾಜದವರು ಬಂದು ಹೋಗುತ್ತಿದ್ದಾರೆ. ಸಮಾಜ ಒಟ್ಟಾಗಿ ಕ್ಷೇತ್ರವನ್ನು ಬೆಳೆಸಬೇಕಾಗಿದೆ ಎಂದರು.

ಸನ್ಮಾನ: ಕ್ಷೇತ್ರಕ್ಕೆ ರಸ್ತೆ ಅಭಿವೃದ್ಧಿ ಗೆ ಅನುದಾನ ಇಟ್ಟಿರುವ ಶಾಸಕ ಸಂಜೀವ ಮಠಂದೂರು, ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಜಯಂತ ನಡುಬೈಲು, ಹೊರೆಕಾಣಿಕೆ ಸಮಿತಿಯ ಸಂಚಾಲಕ ಗೌರವ ಡಾಕ್ಟರೇಟ್ ಪುರಸ್ಕೃತ ರವಿ ಕಕ್ಯಪದವು ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ತುಳು ಭಕ್ತಿ ಸುಗಿಪು ಬಿಡುಗಡೆ: ಗೆಜ್ಜೆಗಿರಿ ಕ್ಷೇತ್ರಕ್ಕೆ ಸಂಬಂಽಸಿದ ಧನು ಕುಂಡಡ್ಕ ಗಾಯನದ ವಿಡಿಯೋ ತುಳು ಭಕ್ತಿ ಗೀತೆಯನ್ನು ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು. ಸುದ್ದಿ ನ್ಯೂಸ್ ಯುಟ್ಯೂಬ್ ಚಾನೆಲ್ ನಲ್ಲಿ ಈ ಭಕ್ತಿಗೀತೆ ಪ್ರಸಾರಗೊಂಡಿತು.

ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಸ್ವಾಗತಿಸಿ, ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ ವಂದಿಸಿದರು. ದಿನೇಶ್ ರಾಯಿ ಮತ್ತು ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು

ಆಶೀರ್ವಾದ ಉಳಿಸಿಕೊಳ್ಳಿ

ಭಾಷಣ ಮಾಡುತ್ತಿದ್ದ ವಸಂತ ಬಂಗೇರರವರು ‘ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೇತಿ ಔಷಧಾಲಯ ನಿರ್ಮಾಣ ಮಾಡುವಲ್ಲಿ ರೈ ಮತ್ತು ಸೊರಕೆಯವರು ಮನಸ್ಸು ಮಾಡಬೇಕು ಎಂದು ಅವರತ್ತ ಬೊಟ್ಟು ಮಾಡಿ ತೋರಿಸಿದರು. ಆಗ ಸೊರಕೆ ಮತ್ತು ರೈಯವರು ನಿಮ್ಮ ‘ಆಶೀರ್ವಾದ ಬೇಕು’ ಎಂದರು. ‘ಆಶೀರ್ವಾದ ಇದೆ. ಆದರೆ ಅದನ್ನು ನೀವು ಉಳಿಸಿಕೊಳ್ಳಬೇಕು’ ಎಂದು ಹೇಳಿದ ಬಂಗೇರರು ನಾನು ರಾಜಕೀಯದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ ಎಂದರು.

LEAVE A REPLY

Please enter your comment!
Please enter your name here