ಭಯದಿಂದ ಹೊರ ಬಂದಾಗ ಗುರಿ ಮುಟ್ಟಲು ಸಾಧ್ಯ : ಡಾ ಗಾನ ಪಿ.ಕುಮಾರ್

0

ಪುತ್ತೂರು : ಜೀವನದಲ್ಲಿ ಹೆಣ್ಣಿನ ಪಾತ್ರ, ಜವಾಬ್ದಾರಿಗಳು ಹಲವು. ಹೆಣ್ಣು ತಾಯಿ, ತಂಗಿ ಪತ್ನಿ, ಮಗಳು ಹೀಗೆ ಹಲವು ರೀತಿಯ ಕೌಟುಂಬಿಕ ಪಾತ್ರಗಳಲ್ಲಿ ಕುಟುಂಬದ ಜವಾಬ್ದಾರಿ ಹೊತ್ತ ಹೆಣ್ಣು ವೃತ್ತಿ ಜೀವನದಲ್ಲಿಯೂ ತನ್ನ ಛಾಪು ಮೂಡಿಸಬೇಕಾದರೆ ಅತೀವವಾದ ಮಾನಸಿಕ ಸ್ಥೈರ್ಯ, ಮನೋಬಲ, ದೈಹಿಕ ಗಟ್ಟಿತನ ಅಗತ್ಯ. ಜೀವನದಲ್ಲಿ ಕಷ್ಟಗಳು, ಸವಾಲುಗಳು ಬರುತ್ತಲೇ ಇರುತ್ತವೆ. ಇವುಗಳ ಮೊತ್ತವೇ ಜೀವನ. ಇವುಗಳಿಗೆ ಮಹಿಳೆಯರು ಭಯಪಡಬಾರದು. ಎದುರಿಸುವ ಗೆಲ್ಲುವ ಛಾತಿ ತೋರಿಸಬೇಕು. ಭಯ ನಮ್ಮನ್ನು ಕುಗ್ಗಿಸುತ್ತದೆ. ನಮ್ಮ ವ್ಯಕ್ತಿತ್ವವನ್ನು ಮುಡುಡಿಸುತ್ತದೆ. ತನ್ನಿಂದ ಸಾಧ್ಯವಾಗದು ಎಂಬ ಭಯದಿಂದ, ಕೀಳರಿಮೆಯಿಂದ ಹೊರಬಂದು ಗುರಿಯನ್ನು ಗೆಲ್ಲುವ ಸಂಕಲ್ಪ ಮಾಡಬೇಕು. ಭಯ ಮುಕ್ತರಾದಾಗ ಗುರಿ ತಲುಪಲು ಸಾಧ್ಯ ಎಂದು ಪುತ್ತೂರು ಉಪವಿಭಾಗದ ಪೋಲೀಸ್ ಉಪ ಅಧೀಕ್ಷಕರಾದ ಡಾ|ಗಾನಾ ಪಿ ಕುಮಾರ್ ಹೇಳಿದರು. ಇವರು ಸಂತಫಿಲೋಮಿನಾ ಕಾಲೇಜಿನ ಕಾಲೇಜಿನ ಮಹಿಳಾ ಸಬಲೀಕರಣ ಕೋಶ ಮತ್ತು ಮಹಿಳಾ ದೌರ್ಜನ್ಯ ವಿರೋಧೀ ಕೋಶ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಮಹಿಳೆಯರು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ. ಹವ್ಯಾಸಗಳು ನಮ್ಮ ಜೀವನವನ್ನು ಹೆಚ್ಚು ಹೆಚ್ಚು ಉದ್ದೀಪಿಸುತ್ತವೆ. ಸಾಹಿತ್ಯ, ಸಂಗೀತ, ನಾಟಕ, ಕಲೆ, ಹೂದೋಟ ಹೀಗೆ ವೈವಿದ್ಯಮಯ ಭಿನ್ನ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಪ್ರಯತ್ನವಿಲ್ಲದೇ ಆಸಕ್ತಿ ಹುಟ್ಟಲಾರದು. ಅಭಿರುಚಿ ಬರಲಾರದು. ಒಮ್ಮೆ ಅಭಿರುಚಿ ಆರಂಭವಾದರೆ ಅದರಲ್ಲಿ ತಾದಾತ್ಮ್ಯತೆಯಿಂದ ತೊಡಗಿಸಿ ಕೊಂಡರೆ ಆ ಅಭಿರುಚಿಗಳು ನಮ್ಮ ವ್ಯಕ್ತಿತ್ವದ ಭಾಗವಾಗುತ್ತವೆ. ಶಿಸ್ತು, ಸಂಯಮ, ನೈತಿಕತೆ ಮೊದಲಾದ ಉದಾತ್ತ ಗುಣಗಳನ್ನು ಮಹಿಳೆಯರು ಅಳವಡಿಸಿಕೊಂಡಾಗ ಕುಟುಂಬದ ವಾತಾವರಣ ಹದಗೆಡದು. ಸಮಾಜದ ಸ್ವಾಸ್ಥವೂ ಉತ್ತಮವಾಗುತ್ತದೆ. ಇದು ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅವರು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಂ|ಡಾ|ಎಂಟೋನಿ ಪ್ರಕಾಶ್ ಮಂತೆರೋ ಅವರು ಮಹಿಳೆ ಮತ್ತು ಪುರುಷ ಒಂದು ಕುಟುಂಬ ಅಥವಾ ಸಮಾಜವೆಂಬ ನಾಣ್ಯದ ಎರಡು ಮುಖಗಳು. ಮಹಿಳೆಯರನ್ನು ಮಾನವೀಯತೆಯಿಂದ, ಗೌರವದಿಂದ ನೋಡುವ ಬದ್ಧತೆ ಪುರುಷರ ಮೇಲಿದೆ. ಮಹಿಳೆಯರನ್ನು ಅತ್ಯಂತ ಗೌರವದಿಂದ ನೋಡುವ ಅಭ್ಯಾಸವನ್ನು ಪುರುಷರು ಅನುಸರಿಸಿದಾಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ, ಮೌಲ್ಯ ಬರುತ್ತದೆ ಎಂದು ನುಡಿದರು.

ಅಂತಿಮ ಬಿಬಿಎ ವಿದ್ಯಾರ್ಥಿನಿ ಪ್ರಶ್ಯಾತ್ ರೈ ಸ್ವಾಗತಿಸಿ, ಅಂತಿಮ ಬಿಕಾಂ ವಿದ್ಯಾರ್ಥಿನಿ ಅಂಜನ್ ವಂದಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಖ್ಯಾತ್ ಟಿಜೆ ನಿರೂಪಿಸಿದರು. ಮಹಿಳಾ ಸಬಲೀಕರಣ ಕೋಶದ ಸಂಚಾಲಕಿ ಡಾ|ಡಿಂಪಲ್ ಫೆರ್ನಾ೦ಡಿಸ್ ಮತ್ತು ಮಹಿಳಾ ದೌರ್ಜನ್ಯ ಕೋಶದ ಸಂಚಾಲಕಿ ನೊವೆಲಿನ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ಸಂಘಟಿಸಿದರು. ಮಹಿಳಾ ದಿನದ ಪ್ರಯುಕ್ತ ಮಹಿಳೆಯರ ಸಾಧನೆಗಳನ್ನು ಬಿಂಬಿಸುವ ರೂಪಕ, ಹಾಡು, ನೃತ್ಯವನ್ನು ವಿದ್ಯಾರ್ಥಿಗಳ ತಂಡ ಪ್ರಸ್ತುತ ಪಡಿಸಿತು.

LEAVE A REPLY

Please enter your comment!
Please enter your name here