ಪಾಪೆಮಜಲು ಆರೋಗ್ಯ ಉಪಕೇಂದ್ರಕ್ಕೆ ಖಾಯಂ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ನೇಮಕಕ್ಕೆ ಸದಸ್ಯರ ಒತ್ತಾಯ

0

ಪುತ್ತೂರು : ಅರಿಯಡ್ಕ ಗ್ರಾಮದ ಪಾಪೆಮಜಲು ಆರೋಗ್ಯ ಉಪಕೇಂದ್ರದಲ್ಲಿ ಕೋವಿಡ್ ಸಮಯದಲ್ಲಿ ಗುತ್ತಿಗೆ ಆಧಾರದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಯವರ ಗುತ್ತಿಗೆ ಅವಧಿ ಮುಕ್ತಾಯ ಹಂತ ತಲುಪಿರುವುದರಿಂದ ಕೂಡಲೇ ಪಾಪೆಮಜಲು ಆರೋಗ್ಯ ಉಪಕೇಂದ್ರಕ್ಕೆ ಖಾಯಂ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಯನ್ನು ನೇಮಕ ಮಾಡಬೇಕೆಂದು ಅರಿಯಡ್ಕ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದೆ.ಮಾ.9ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷ ಸಂತೋಷ್ ಮಣಿಯಾಣಿಯವರು ವಿಷಯ ಪ್ರಸ್ತಾಪಿಸಿದರು. ಇತರ ಸದಸ್ಯರು ಧ್ವನಿಗೂಡಿಸಿದರು. ಈ ಬಗ್ಗೆ ಆರೋಗ್ಯ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು ಹಾಗೂ ಸಿ.ಪಿ.ಎಚ್.ಸಿ – ಯು.ಎಚ್.ಸಿ ಕಾರ್ಯಕ್ರಮದಡಿ ಉಪಕೇಂದ್ರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ವೆಲ್ನೆಸ್ ಏರಿಯಾ ನಿರ್ಮಾಣ, ನವೀಕರಣ ಮತ್ತು ರಿಪೇರಿ ಕಾರ್ಯಗಳನ್ನು ಕೈಗೊಳ್ಳಲು ಆರೋಗ್ಯ ಉಪಕೇಂದ್ರ ಪಾಪೆಮಜಲಿಗೆ ೬ ಲಕ್ಷ ರೂ. ಬಿಡುಗಡೆಗೊಂಡಿದೆ. ಇದರ ಗುತ್ತಿಗೆದಾರರ ಮಾಹಿತಿ ನಮಗಿಲ್ಲ. ಕೇವಲ ಚಿಕ್ಕಶೀಟ್ ಹಾಕಿದ ಶೆಡ್ ಒಂದನ್ನು ಕಟ್ಟಲಾಗಿದ್ದು ಇದೂ ಕೂಡ ಸಂಪೂರ್ಣ ಕಳಪೆಯಾಗಿದೆ. ಆರೋಗ್ಯ ಇಲಾಖೆ, ಪಂಚಾಯತ್ ಇದರ ಬಗ್ಗೆ ಮಾಹಿತಿ ನೀಡಬೇಕಿತ್ತು. ಕೋವಿಡ್ ಸಂದರ್ಭದಲ್ಲಿ ಇಲಾಖೆಗೆ ನಮ್ಮ ನೆನಪಾಗಿ ಇಂತಹ ಸಂದರ್ಭದಲ್ಲಿ ಪಂಚಾಯತ್‌ನ್ನು ಮರೆತಿರುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಗೆ ಬರೆಯಬೇಕೆಂದೂ ಉಪಾಧ್ಯಕ್ಷರು ತಿಳಿಸಿದರು. ಈ ವಿಚಾರವನ್ನು ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು.

 

ಮಾಡ್ನೂರು ಗ್ರಾಮದ ಕಾವು ಪಂಪು ಸ್ಥಾವರದ ಪಂಪು ಚಾಲಕರೋರ್ವರು ಸರಿಯಾಗಿ ಕಾರ್ಯನಿರ್ವಹಿಸದೆ, ಜನರ ಸಮಸ್ಯೆಗಳಿಗೆ ಸ್ಪಂದಿಸದೇ, ಫಲಾನುಭವಿಗಳಿಗೆ ಬೈಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಪಂಪು ಚಾಲಕ ಪಂಚಾಯತ್‌ಗೆ ಅಗತ್ಯ ಉಂಟೇ..? ಅವರ ವಿರುದ್ದ ನಿರ್ಣಯ ಕೈಗೊಳ್ಳಿ ಎಂದು ಪಂಚಾಯತ್ ಸದಸ್ಯ ಮೋನಪ್ಪ ಪೂಜಾರಿಯವರು ಹೇಳಿದರು. ಈ ಸಂದರ್ಭದಲ್ಲಿ ಸದಸ್ಯ ಲೋಕೇಶ್ ಚಾಕೋಟೆ ಮಾತನಾಡಿ ಪಂಪು ಚಾಲಕನಿಗೆ ಸೂಚನೆ ಕೊಡೋಣ ಎಂದು ಪಿ.ಡಿ.ಓರರಲ್ಲಿ ಹೇಳಿದರು. ಈ ವಿಚಾರವಾಗಿ ಉಪಾಧ್ಯಕ್ಷ ಸಂತೋಷ್ ಮಣಿಯಾಣಿಯವರು ಮಾತನಾಡಿ ಕೇಂದ್ರ ಸರಕಾರ ಜಲಜೀವನ್ ಮಿಷನ್ ಯೋಜನೆಯಡಿ ನಮ್ಮ ಪಂಚಾಯತ್‌ಗೆ ರೂ.೩ ಕೋಟಿ ೮೭ ಲಕ್ಷ ಬಿಡುಗಡೆಮಾಡಿದೆ ಎಂದು ಹೇಳಿ ಹಣ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.ಈ ಹಣವನ್ನು ಬಳಸಿಕೊಂಡು ಪ್ರತೀ ಮನೆಗೆ ನೀರು ಕೊಡಬೇಕಿದೆ. ಇದು ಕಾರ್ಯಗತವಾದ ಮೇಲೆ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬರುವುದಿಲ್ಲ ಎಂದವರು ಹೇಳಿದರು.

ಪಂಚಾಯತ್ ವ್ಯಾಪ್ತಿಯಲ್ಲಿ ಮಾ.೨೨ ರಂದು ವಿವಿಧ ಕಡೆಗಳಲ್ಲಿ ಪಶುಸಂಗೋಪನಾ ಇಲಾಖೆ ಮತ್ತು ಪಂಚಾಯತ್ ಸಹಭಾಗಿತ್ವದಲ್ಲಿ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ನೀಡಲು ನಿರ್ಣಯಿಸಲಾಯಿತು. ಈ ಬಗ್ಗೆ ಇಲಾಖೆಯ ಪರಿವೀಕ್ಷಕ ವೀರಪ್ಪ ಮಾಹಿತಿ ನೀಡಿದರು.

ಅಕ್ರಮ ಸಕ್ರಮೀಕರಣದಲ್ಲಿ ಇತ್ತೀಚೆಗೆ ಜಮೀನು ಮಂಜೂರಾದ ಕೃಷಿಕರಿಗೆ ಕೊಳವೆ ಬಾವಿ ತೋಡಲು ಪರವಾನಿಗೆ ನೀಡಬೇಕೆಂದು ಪಂಚಾಯತ್ ಸದಸ್ಯ ಹರೀಶ್ ರೈ ಜಾರತ್ತಾರು ತಿಳಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಬರೆಯಲು ನಿರ್ಣಯಿಸಲಾಯಿತು.

ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕ ನೀರಿನ ಟ್ಯಾಂಕ್ ನಿರ್ಮಿಸುವ ಸಂದರ್ಭದಲ್ಲಿ ಪಂಚಾಯತ್ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂಬ ಸುತ್ತೋಲೆ ಇದೆ ಎಂದು ಪಿ.ಡಿ.ಓ ಪ್ರಸ್ತಾಪಿಸಿದರು. ಈ ಬಗ್ಗೆ ಸದಸ್ಯ ಹರೀಶ್ ರೈ ಜಾರತ್ತಾರು ಮಾತಾಡಿ ಅರಣ್ಯ ಪ್ರದೇಶದಲ್ಲಿ ನೀರಿನ ಟ್ಯಾಂಕ್ ರಚಿಸಲು ಹೊರಟಾಗ ಅರಣ್ಯ ಇಲಾಖೆಯವರು ಸಹಕಾರ ನೀಡುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ನೀರಿನ ಟ್ಯಾಂಕ್ ರಚಿಸುವ ಸಂದರ್ಭ ಬಂದಾಗ ಪಂಚಾಯತ್‌ಗೆ ಅರಣ್ಯ ಇಲಾಖೆ ಪರವಾನಿಗೆ ನೀಡಲಿ ಎಂದು ಹೇಳಿ ಈ ಬಗ್ಗೆ ಇಲಾಖೆಗೆ ಬರೆಯಲು ಸೂಚಿಸಿದರು.ಸದಸ್ಯ ಅಬ್ದುಲ್ ರಹಿಮಾನ್ ಧ್ವನಿಗೂಡಿಸಿದರು.

ಪಂಚಾಯತ್ ಸ್ವಂತ ನಿಧಿಯಿಂದ ವಿಕಲಚೇತನರಿಗೆ ಮೀಸಲಿಟ್ಟ ಶೇ.೫ ಅನುದಾನದಲ್ಲಿ ೧೦ ಜನ ವಿಕಲಚೇತನರಿಗೆ ಮಂಚ ಮತ್ತು ಹಾಸಿಗೆಯನ್ನು ವಿತರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಬಾಲಸುಬ್ರಹ್ಮಣ್ಯ, ಉಪಾಧ್ಯಕ್ಷ ಸಂತೋಷ್ ಮಣಿಯಾಣ, ಸದಸ್ಯರಾದ ಸದಾನಂದ ಮಣಿಯಾಣಿ, ಸಾವಿತ್ರಿ ಪೊನ್ನೆತ್ತಳ್ನ, ಮೀನಾಕ್ಷಿ ಪಾಪೆಮಜಲು, ನಾರಾಯಣ ನಾಯ್ಕ ಚಾಕೋಟೆ, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಲತಾ ಮರತ್ತಮೂಲೆ, ಅನಿತಾ ಆಚಾರಿಮೂಲೆ, ಮೋನಪ್ಪ ಪೂಜಾರಿ ಕೆರೆಮಾರು, ಸಲ್ಮಾ ಕಾವು, ಶಂಕರ ಮಾಡನ್ನೂರು, ವಿಜಿತ್ ಕಾವು, ಲೋಕೇಶ್ ಚಾಕೋಟೆ, ಜಯಂತಿಪಟ್ಟುಮೂಲೆ, ಪ್ರವೀಣ ಎ.ಬಿ ಅಮ್ಚಿನಡ್ಕ, ಅಬ್ದುಲ್ ರಹಿಮಾನ್ ಕಾವು, ರೇಣುಕಾ ಕರ್ಕೇರ, ವಿನೀತಾ ಬಳ್ಳಿಕಾನ, ಹರೀಶ್ ರೈ ಜಾರತ್ತಾರು, ಲೋಕೇಶ್ ಚಾಕೋಟೆ ಮತ್ತು ಹೇಮಾವತಿ ಚಾಕೋಟೆ ಭಾಗವಹಿಸಿದ್ದರು. ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ, ಸುತ್ತೋಲೆ ಓದಿದರು. ಪಿ.ಡಿ.ಓ ಪದ್ಮಕುಮಾರಿ ವಂದಿಸಿದರು.

ಅಭಿನಂದನೆ: ರಾಜೇಶ್ ಮಯೂರ ನೇತೃತ್ವದ ವಿಷ್ಣು ಯುವಶಕ್ತಿ ಬಳಗ ಮಜ್ಜಾರು ಇವರ ಪರಿಶ್ರಮ ಹಾಗೂ ಸಾಧನೆಯನ್ನು ಗುರುತಿಸಿ ಜಿಲ್ಲಾ ನೆಹರು ಯುವಕೇಂದ್ರ ಮಂಗಳೂರು ವತಿಯಿಂದ ಸ್ವಚ್ಛಭಾರತ್ ಪ್ರಶಸ್ತಿ ನೀಡಿರುವುದು ಅಭಿನಂದನೀಯ ಎಂದು ಸಭೆಯಲ್ಲಿ ಪ್ರಸ್ತಾಪಿಸಿ, ಅವರಿಗೆ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಎಲೆಮರೆಯ ಕಾಯಿಯಾಗಿದ್ದ ತುಳುನಾಡಿನ ಭಗೀರಥ ಅಮೈ ಮಹಾಲಿಂಗ ನಾಯ್ಕರವರಿಗೆ ಅರ್ಜಿಹಾಕದೇ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಕಾರ್ಯಕ್ಕೆ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಅವರು ನಮ್ಮನಾಡಿನ ಹೆಮ್ಮೆಯ ಮಾದರಿ ರೈತ ಎಂದು ಅವರರಿಗೂ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here