ರಾಮಕುಂಜ ಗ್ರಾ.ಪಂ.ಮಕ್ಕಳ ಗ್ರಾಮಸಭೆ

0

  • 70 ವರ್ಷ ಹಳೆಯ ಶಾಲಾ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ರಚಿಸುವಂತೆ ಆಗ್ರಹ

 

ರಾಮಕುಂಜ: ರಾಮಕುಂಜ ಗ್ರಾಮ ಪಂಚಾಯತ್‌ನ 2021-22ನೇ ಸಾಲಿನ ಮಕ್ಕಳ ಗ್ರಾಮಸಭೆ ಮಾ.18ರಂದು ಬೆಳಿಗ್ಗೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.ಕದ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು.

 


ಹೊಸ ಕಟ್ಟಡ ರಚಿಸಿ:
ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಝಾಹಿದಾ ಮಾತನಾಡಿ, ಶಾಲೆಯಲ್ಲಿ 70 ವರ್ಷಗಳಷ್ಟು ಹಳೆಯ ಕಟ್ಟಡವೊಂದಿದೆ. ಇದರಲ್ಲಿ ಈಗಾಲೂ ತರಗತಿ ನಡೆಯುತ್ತಿದೆ. ಈ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದ್ದು ಹಂಚುಗಳು ಕೆಳಕ್ಕೆ ಬೀಳುತ್ತಿದೆ. ಆದ್ದರಿಂದ ಈ ಹಳೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ರಚಿಸಬೇಕೆಂದು ಒತ್ತಾಯಿಸಿದರು. ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡಬೇಕೆಂದು ವಿದ್ಯಾರ್ಥಿಯೋರ್ವ ಒತ್ತಾಯಿಸಿದರು.

ಬೆಂಚು, ಡೆಸ್ಕ್ ಕೊಡಿ:
ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಶಾಲೆಯಲ್ಲಿ ಬೆಂಚು, ಡೆಸ್ಕ್‌ನ ಕೊರತೆ ಉಂಟಾಗಿದೆ. ಆದ್ದರಿಂದ ಶಾಲೆಗೆ ಬೆಂಚು, ಡೆಸ್ಕ್ ಕೊಡಬೇಕೆಂದು ಶಾಲೆಯ ವಿದ್ಯಾರ್ಥಿಗಳು ಮನವಿ ಮಾಡಿದರು. ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಬಿಸಿಯೂಟ, ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ. ಬೋರ್‌ವೆಲ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಪ್ಲಾಸ್ಟಿಕ್ ವಿಲೇವಾರಿ ಮಾಡಿ:
ರಾಮಕುಂಜ ಸಂಸ್ಕೃತ ಹಿ.ಪ್ರಾ.ಶಾಲೆಯ ವಿದ್ಯಾರ್ಥಿ ಶ್ರೀಕೃಷ್ಣ ಮಾತನಾಡಿ, ಶಾಲೆಯಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿದರು.

ಅಂಗನವಾಡಿಗೆ ಮಕ್ಕಳು ಬರುತ್ತಿಲ್ಲ:
ಕುಂಡಡ್ಕ ಅಂಗನವಾಡಿ ಕೇಂದ್ರಕ್ಕೆ ಸರಿಯಾದ ರಸ್ತೆ ಸೌಕರ್ಯವಿಲ್ಲ. ಆದ್ದರಿಂದ ಇಲ್ಲಿಗೆ ಮಕ್ಕಳು ಬರುತ್ತಿಲ್ಲ. ಮಕ್ಕಳ ಸಂಖ್ಯೆ ಕಡಿಮೆಯಾದಲ್ಲಿ ಅಂಗನವಾಡಿ ಮುಚ್ಚಲಿದೆ. ಆದ್ದರಿಂದ ಇಲ್ಲಿಗೆ ಸೂಕ್ತ ಸೌಕರ್ಯ ಒದಗಿಸಬೇಕೆಂದು ಅಂಗನವಾಡಿ ಮಕ್ಕಳ ಪರವಾಗಿ ಅಂಗನವಾಡಿ ಕಾರ್ಯಕರ್ತೆ ಗ್ರಾ.ಪಂ.ಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಅಂಗನವಾಡಿಯವರೇ ಪೋಷಕರ ಮನವೊಲಿಕೆ ಮಾಡಿ ಮಕ್ಕಳು ಬರುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಇದಕ್ಕೆ ಗ್ರಾ.ಪಂ.ನಿಂದಲೂ ಸಹಕಾರ ನೀಡುವುದಾಗಿ ಹೇಳಿದರು.

ರಸ್ತೆಯಲ್ಲೇ ತ್ಯಾಜ್ಯ:
ಕುಂಡಾಜೆ ಪರಿಸರದಲ್ಲಿ ರಸ್ತೆ ಬದಿಯಲ್ಲಿಯೇ ತ್ಯಾಜ್ಯಗಳ ರಾಶಿ ಇದೆ. ದಾರಿಯಲ್ಲಿಯೇ ಜಾನುವಾರುಗಳ ಕೊಂಬು ಸೇರಿದಂತೆ ಇತರೇ ತ್ಯಾಜ್ಯಗಳು ಇರುತ್ತವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಇಂಚರ ಹೇಳಿದರು. ಶಾಲೆಯಿಂದ ಒಣಕಸ, ಹಸಿ ಕಸ ವಿಲೇವಾರಿ ಮಾಡುವಂತೆಯೂ ವಿದ್ಯಾರ್ಥಿನಿ ಮನವಿ ಮಾಡಿದರು.

ಬಿಸಿಯೂಟ ಅಕ್ಕಿಯಲ್ಲಿ ಗುಣಮಟ್ಟವಿಲ್ಲ:
ಹಳೆನೇರೆಂಕಿ ಸರಕಾರಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿ ಹಿತೇಶ್ ಮಾತನಾಡಿ, ಈಗ ಶಾಲೆಗಳಿಗೆ ಪೂರೈಕೆಯಾಗುತ್ತಿರುವ ಅಕ್ಕಿ ಗುಣಮಟ್ಟದಿಂದ ಕೂಡಿಲ್ಲ. ಇದರಿಂದಾಗಿ ಬಿಸಿಯೂಟ ರುಚಿಕರವಾಗಿಲ್ಲ. ಗುಣಮಟ್ಟದ ಅಕ್ಕಿ ಪೂರೈಸಬೇಕೆಂದು ಹೇಳಿದರು. ಗುಣಮಟ್ಟದ ಅಕ್ಕಿ ಪೂರೈಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ಇನ್ನೊಂದು ಜೊತೆ ಸಮವಸ್ತ್ರ ಕೊಡಿ:
ಈ ಸಲ ಶಾಲೆಗೆ ಒಂದೇ ರೀತಿಯ ಸಮವಸ್ತ್ರ ಪೂರೈಕೆಯಾಗಿದೆ. ಇನ್ನೊಂದು ಬಣ್ಣದ ಸಮವಸ್ತ್ರವೂ ನೀಡಬೇಕು. ವಿದ್ಯಾರ್ಥಿಗಳಿಗೆ ಸೈಕಲ್ ಸಹ ನೀಡಬೇಕೆಂದು ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿ ನಿಖಿಲ್ ಒತ್ತಾಯಿಸಿದರು. ೨೦೨೩ನೇ ವರ್ಷದಲ್ಲಿ ಹಳೆನೇರೆಂಕಿ ಸರಕಾರಿ ಶಾಲೆ ಶತಮಾನೋತ್ಸವ ಆಚರಿಸಲಿದ್ದು ಇದಕ್ಕೆ ಎಲ್ಲರೂ ಸಹಕರಿಸುವಂತೆ ಶಾಲೆಯ ವಿದ್ಯಾರ್ಥಿನಿ ಮನವಿ ಮಾಡಿದರು.

ಸಭೆಯಲ್ಲಿ ರಾಮಕುಂಜ, ಹಳೆನೇರೆಂಕಿ, ಕುಂಡಾಜೆ ಸರಕಾರಿ ಹಾಗೂ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮಸ್ಯೆ ಬಗ್ಗೆ ಮಕ್ಕಳು ಚೀಟಿ ಬರೆದು ದೂರುಪೆಟ್ಟಿಗೆಗೂ ಹಾಕಿದರು. ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಉಮಾವತಿಯವರು ಮಾಹಿತಿ ನೀಡಿದರು. ಗ್ರಾ.ಪಂ.ಸದಸ್ಯರಾದ ಸುಚೇತಾ ಬರೆಂಬೆಟ್ಟು, ಸೂರಪ್ಪ ಕುಲಾಲ್, ಜಯಶ್ರೀ ಇರ್ಕಿ, ವಸಂತ, ಕುಶಾಲಪ್ಪ, ಸುಜಾತ, ಅಬ್ದುಲ್ ರಹಿಮಾನ್, ಆಯಿಷಾಶರೀಫ್, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಲಲಿತ, ಜಲಜ, ಸಂಧ್ಯಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಜೆರಾಲ್ಡ್ ಸ್ವಾಗತಿಸಿ, ಮಕ್ಕಳ ಗ್ರಾಮಸಭೆಯ ಉದ್ದೇಶದ ಬಗ್ಗೆ ತಿಳಿಸಿದರು.

LEAVE A REPLY

Please enter your comment!
Please enter your name here