ನೆಲ್ಯಾಡಿ: ಮಂಗಳೂರು ವಿವಿ ಅಂತರ್‌ಕಾಲೇಜು ಮಟ್ಟದ ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್ ಪಂದ್ಯಾಟ

0

  • ಜಾಗ ಅಧಿಕೃತಗೊಂಡ ತಕ್ಷಣ ನೆಲ್ಯಾಡಿ ಘಟಕ ಕಾಲೇಜಿಗೆ ಆಂತರಿಕ ಸಂಪನ್ಮೂಲ ಬಿಡುಗಡೆಗೆ ಕ್ರಮ: ಪ್ರೊ.ಪಿ.ಎಸ್.ಯಡಪಡಿತ್ತಾಯ

 

 

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿ ಇದರ ಆಶ್ರಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವ-75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮಟ್ಟದ ‘ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಕೂಟ 2021-22’ ಮಾ.21ರಂದು ನೆಲ್ಯಾಡಿ ಗಾಂಧಿ ಮೈದಾನದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊಫೆಸರ್ ಪಿ.ಎಸ್.ಯಡಪಡಿತ್ತಾಯರವರು ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವೈಯಕ್ತಿಕ ಬೆಳವಣಿಗೆಯೊಂದಿಗೆ ದೇಶದ ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯವಿದೆ. ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿಗೆ ನೆಲ್ಯಾಡಿಯಲ್ಲಿ ೨೪ ಎಕ್ರೆ ಜಾಗ ಕಾದಿರಿಸಲಾಗಿದ್ದು ಆರ್‌ಟಿಸಿ ಸಹ ಆಗಿದೆ. ಆದರೆ ಸದ್ರಿ ಜಾಗಕ್ಕೆ ಅರಣ್ಯ ಇಲಾಖೆ ತಕರಾರು ಇರುವುದರಿಂದ ಕಡತ ಸಹಾಯಕ ಆಯುಕ್ತರ ಬಳಿ ಇದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಯವರ ಜೊತೆಗೆ ಮಾತುಕತೆ ನಡೆಸುತ್ತೇನೆ. ಮಂಗಳೂರು ವಿವಿಗೆ ಜಾಗ ಅಧಿಕೃತವಾಗಿ ಆದ ೧೫ ದಿನದೊಳಗೆ ಆಂತರಿಕ ಸಂಪನ್ಮೂಲ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇವೆ. ೧ ವರ್ಷದೊಳಗೆ ಜಾಗಕ್ಕೆ ಆವರಣ ಗೋಡೆ ನಿರ್ಮಾಣ ಮಾಡುತ್ತೇವೆ. ನಮ್ಮ ಜಾಗದ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು. ನೆಲ್ಯಾಡಿ ಘಟಕ ಕಾಲೇಜಿನ ಅನುಷ್ಠಾನ ಸಮಿತಿ ಅಧ್ಯಕ್ಷೆಯಾಗಿರುವ ಉಷಾ ಅಂಚನ್‌ರವರು ಧೈರ್ಯಶಾಲಿಯಾಗಿದ್ದಾರೆ. ಮುಂದೊಂದು ದಿನ ಅವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನವೂ ಸಿಗಲಿದೆ. ಅವರಿಗೆ ಹಿಡಿದ ಕೆಲಸ ಸಾಧಿಸಬೇಕೆಂಬ ಹಠವೂ ಇದೆ. ನೆಲ್ಯಾಡಿ ಘಟಕ ಕಾಲೇಜು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸಬೇಕೆಂದು ಹೇಳಿದ ಅವರು ನೆಲ್ಯಾಡಿಯಲ್ಲಿ ವೃತ್ತಿಪರ ಕೋರ್ಸು ಆರಂಭಿಸಲು ಸಿದ್ಧರಿದ್ದೇವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ ಎಸ್.ಗೌಡ ಮಾತನಾಡಿ, ಶಿಕ್ಷಣ ಹಾಗೂ ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳು. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ಪಾಲ್ಗೋಳ್ಳಬೇಕು. ನೆಲ್ಯಾಡಿ ಘಟಕ ಕಾಲೇಜು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಪಕ್ಷಾತೀತವಾಗಿ ಪ್ರಯತ್ನಿಸೋಣ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ಸೌಹಾರ್ದತೆಯಿಂದ ಆಟವಾಡಿದಲ್ಲಿ ಯಶಸ್ಸು ಸಿಗಲಿದೆ. ಸೋತವರನ್ನು ನಿಂದಿಸದೆ, ಗೆದ್ದವರನ್ನು ಅಭಿನಂದಿಸಿ ಎಂದರು.

ಘಟಕ ಕಾಲೇಜು ಅನುಷ್ಠಾನ ಸಮಿತಿ ಅಧ್ಯಕ್ಷೆ ಉಷಾಅಂಚನ್‌ರವರು ಮಾತನಾಡಿ, ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನ ಮೂಲಕ ನೆಲ್ಯಾಡಿಯ ಹೆಸರು ರಾಷ್ಟ್ರ ಮಟ್ಟದಲ್ಲಿ ಪಸರಿಸಬೇಕು. ಇಲ್ಲಿ ಬಿಸಿಎ, ಬಿಬಿಎ ಸೇರಿದಂತೆ ಇನ್ನಿತರ ವ್ರತ್ತಿಪರ ಕೋರ್ಸು ಆರಂಭಿಸಬೇಕು. ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ನೆಲ್ಯಾಡಿ ಘಟಕ ಕಾಲೇಜಿಗೆ ೨೪ ಎಕ್ರೆ ಜಾಗ ಕಾದಿರಿಸಲಾಗಿದ್ದು ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಮೆರವಣಿಗೆ ಉದ್ಘಾಟಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಉಲಹನ್ನನ್‌ರವರು ಶುಭಹಾರೈಸಿದರು.

ನೆಲ್ಯಾಡಿ ಘಟಕ ಕಾಲೇಜಿನ ಮೊದಲ ಸಂಯೋಜಕ ಯತೀಶ್ ಕುಮಾರ್, ಪಿಟಿಎ ಉಪಾಧ್ಯಕ್ಷ ಅಬ್ದುಲ್ ಖಾದರ್, ನೆಲ್ಯಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ನೆಲ್ಯಾಡಿ ಘಟಕ ಕಾಲೇಜಿನ ಸಂಯೋಜಕ ಡಾ.ಜಯರಾಜ್ ಎನ್. ಸ್ವಾಗತಿಸಿದರು. ಉಪನ್ಯಾಸಕ ನೂರಂದಪ್ಪ ವಂದಿಸಿದರು. ಚಂದ್ರಕಲಾ ಸ್ವಾಗತಿಸಿದರು. ವಿದ್ಯಾರ್ಥಿಗಳು ಮಂಗಳೂರು ವಿವಿಯ ಗೀತೆ ಹಾಡಿದರು. ಇದಕ್ಕೂ ಮೊದಲು ನೆಲ್ಯಾಡಿ ಪೇಟೆಯಿಂದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್, ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ, ಕೆ.ಪಿ.ತೋಮಸ್, ನೆಲ್ಯಾಡಿ ಘಟಕ ಕಾಲೇಜು ಅನುಷ್ಠಾನ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ, ಸದಸ್ಯರಾದ ರೇಷ್ಮಾಶಶಿ,ರವಿಪ್ರಸಾದ್ ಶೆಟ್ಟಿ, ನೆಲ್ಯಾಡಿ ಶ್ರೀರಾಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ತಾ.ಪಂ.ಮಾಜಿ ಸದಸ್ಯ ದಾವೂದ್, ನೆಲ್ಯಾಡಿ ಸರಕಾರಿ ಶಾಲಾ ಶಿಕ್ಷಕರಾದ ವಿಮಲ್‌ಕುಮಾರ್, ಜನಾರ್ದನ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಸನ್ಮಾನ:
ನೆಲ್ಯಾಡಿ ಘಟಕ ಕಾಲೇಜಿಗೆ ಆರಂಭದ ಎರಡು ವರ್ಷ ತರಗತಿ ನಡೆಸಲು ಅವಕಾಶ ನೀಡಿದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here