ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಮುಗಿಯದ ಹಿಜಾಬ್ ಗೊಂದಲ

0

ಉಪ್ಪಿನಂಗಡಿ: ಹಿಜಾಬ್ ಕುರಿತ ನ್ಯಾಯಾಲಯದ ಆದೇಶದ ಹೊರತಾಗಿಯೂ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್‌ನೊಂದಿಗೆ ಪ್ರವೇಶ ಬಯಸಿದ ವಿದ್ಯಾರ್ಥಿಗಳು ಗದ್ದಲವೆಬ್ಬಿಸಿದ ಘಟನೆ ಸೋಮವಾರ ಸಂಭವಿಸಿದೆ.

ಬಿಎಸ್ಸಿ ವಿಭಾಗದ ವಿಷಯವೊಂದಕ್ಕೆ ಸೋಮವಾರ ಪರೀಕ್ಷೆ ನಡೆದಿದ್ದು, ಸದ್ರಿ ಪರೀಕ್ಷೆಗೆ ಹಾಜರಾಗಲು ನಾಲ್ವರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಯೊಳಗೆ ಬಲವಂತದ ಪ್ರವೇಶ ಮಾಡಿದ್ದು, ಉಪನ್ಯಾಸಕರ ಆಕ್ಷೇಪದಿಂದಾಗಿ ಓರ್ವ ವಿದ್ಯಾರ್ಥಿನಿ ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾಳೆ. ಉಳಿದ ಮೂವರು ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿದರಾದರೂ ಬೆಂಬಲಿತ ವಿದ್ಯಾರ್ಥಿಗಳೊಡಗೂಡಿ ಕಾಲೇಜು ವರಾಂಡದಲ್ಲಿ ಸೇರಿ ಗದ್ದಲವೆಬ್ಬಿಸಿದ್ದು, ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯೊಡ್ಡುವ ಕೃತ್ಯವನ್ನು ನಡೆಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ರಜೆಯಲ್ಲಿದ್ದು, ಕರ್ತವ್ಯ ನಿರತ ಉಪ ಪ್ರಾಂಶುಪಾಲರು ಪೊಲೀಸರ ರಕ್ಷಣೆ ಬಯಸಿದ ಬಳಿಕ ಪ್ರತಿಭಟನಾನಿರತರು ಕಾಲೇಜು ಪ್ರವೇಶದ್ವಾರದ ಬಳಿ ಜಮಾಯಿಸಿದ್ದರು. ಬಹುತೇಕ ವಿದ್ಯಾರ್ಥಿಗಳಿಗೆ ಮುಂಬರುವ ಎಪ್ರಿಲ್ ೬ ರಿಂದ ನಡೆಯುವ ಪರೀಕ್ಷೆಗೆ ಓದಲು ರಜೆ ಇದ್ದು , ಸೋಮವಾರ ಕಾಲೇಜಿಗೆ ಪರೀಕ್ಷೆ ಕಾರಣಕ್ಕೆ ಆಗಮಿಸಿದ್ದ ನಾಲ್ವರು ವಿದ್ಯಾರ್ಥಿನಿಯರನ್ನು ಬೆಂಬಲಿಸುವ ಸಲುವಾಗಿ ರಜೆ ಇದ್ದರೂ, ಕೆಲವು ವಿದ್ಯಾರ್ಥಿಗಳು ಅನಗತ್ಯ ಕಾಲೇಜಿಗೆ ಬಂದು ದಾಂಧಲೆ ನಡೆಸಿದ್ದಾರೆ. ಕಾಲೇಜಿನಲ್ಲಿ ಸತತ ಅನಪೇಕ್ಷಿತ ವಿದ್ಯಾಮಾನಗಳಿಂದ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತಾಗಿದೆ ಎಂಬ ಆರೋಪ ವಿದ್ಯಾರ್ಥಿ ಸಮೂಹದಿಂದ ಕೇಳಿಬರುತ್ತಿದೆ.

ಲಿಖಿತ ದೂರು ನೀಡದೇ ಕ್ರಮವಿಲ್ಲ: ಪೊಲೀಸರು : ಹಿಜಾಬ್‌ಗಾಗಿ ತರಗತಿ ಬಹಿಷ್ಕಾರ, ಪರೀಕ್ಷೆ ಬಹಿಷ್ಕಾರ ನಡೆಸುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಮುಂಬರುವ ಎಪ್ರಿಲ್ 6 ರಿಂದ ನಡೆಯುವ ವಾರ್ಷಿಕ ಪರೀಕ್ಷೆಯು ನಿರ್ಣಾಯಕವಾಗಿದ್ದು, ಸದ್ರಿ ಪರೀಕ್ಷೆಯನ್ನು ನಮಗೆ ಬರೆಯಲು ಅವಕಾಶ ನೀಡದಿದ್ದರೆ ಬೇರೆಯಾರಿಗೂ ಅವಕಾಶ ನೀಡದಂತೆ ಸಂಘರ್ಷ ಮೂಡಿಸಲು ಸಿದ್ದತೆ ನಡೆಸಿದಂತೆ ವರ್ತನೆ ತೋರುತ್ತಿರುವ ಕೆಲವು ವಿದ್ಯಾರ್ಥಿಗಳ ನಡೆ ವಿದ್ಯಾರ್ಥಿ ಸಮೂಹವನ್ನು ಆಕ್ರೋಶಕ್ಕೆ ಒಳಪಡಿಸಿದೆ. ಕಳೆದ ಕೆಲ ದಿನಗಳಿಂದ ಕಾಲೇಜು ಕ್ಯಾಂಪಸ್‌ನಲ್ಲಿ ಠಿಕಾಣಿ ಹೂಡಿರುವ ಪೊಲೀಸರು ಮೌನವಾಗಿರುವುದು ಪ್ರತಿಭಟನಾನಿರತ ವಿದ್ಯಾರ್ಥಿಗಳ ಅಪಹಾಸ್ಯಕ್ಕೆ ಕಾರಣವಾಗಿದ್ದರೆ, ಉಳಿದ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ನಮಗೆ ಲಿಖಿತ ದೂರು ಬಾರದೇ ಯಾವುದೇ ಬಲ ಪ್ರಯೋಗ ಮಾಡುವಂತಿಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದರೆ, ಕಾಲೇಜು ಪ್ರಾಂಶುಪಾಲರು ಮಾತ್ರ ಲಿಖಿತ ದೂರು ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದೇ ಇಂತಹ ನಿರಂತರ ಅನಪೇಕ್ಷಿತ ಘಟನೆಗೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿದೆ.

ಪಿಯು ಕಾಲೇಜಿನಲ್ಲಿ ಕೆಲವರು ಹಾಜರು:
ಹಿಜಾಬ್‌ಗೆ ಸಂಬಂಽಸಿ ಹೈಕೋರ್ಟ್ ತೀರ್ಪು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ತೀರ್ಮಾನಕ್ಕೆ ಬದ್ಧವಾಗಿದ್ದೇವೆ. ಆದ್ದರಿಂದ ತರಗತಿಯೊಳಗೆ ಹಿಜಾಬ್ ಧರಿಸಿಕೊಂಡು ಬರಲು ಯಾವುದೇ ಕಾರಣಕ್ಕೂ ಅವಕಾಶವನ್ನು ನೀಡುವುದಿಲ್ಲ ಎಂದು ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜು ಸ್ಪಷ್ಟ ನಿಲುವು ತೆಗೆದುಕೊಂಡ ಹಿನ್ನೆಲೆಯಲ್ಲಿ ಹಿಜಾಬ್‌ಗೆ ಅವಕಾಶ ಬೇಕು ಎಂದು ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಶೇ.೧೦ರಷ್ಟು ಮಂದಿ ಸೋಮವಾರ ಹಿಜಾಬ್ ತೆಗೆದು ತರಗತಿಗೆ ಹಾಜರಾಗಿದ್ದಾರೆ. ಉಳಿದ ವಿದ್ಯಾರ್ಥಿಗಳು ಹಿಜಾಬ್‌ಗೆ ಅವಕಾಶವನ್ನು ನೀಡಬೇಕೆಂದು ಕೋರಿದ್ದ ಕೆಲ ವಿದ್ಯಾರ್ಥಿನಿಯರು ಕಾಲೇಜಿಗೆ ಗೈರು ಹಾಜರಾಗಿದ್ದುದು ಕಂಡು ಬಂದಿದೆ. ಹಾಜರಾದ ವಿದ್ಯಾರ್ಥಿಗಳು ಶಾಂತವಾಗಿ ಪರೀಕ್ಷೆಯನ್ನು ಬರೆದಿದ್ದಾರೆ.

LEAVE A REPLY

Please enter your comment!
Please enter your name here