ಕಾಂಚನ ಪೆರ್ಲ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶೋತ್ಸವ,ಧಾರ್ಮಿಕ ಸಭೆ

0

  • ನಿಷ್ಕಲ್ಮಶ ಭಕ್ತಿ, ಪ್ರೀತಿಗೆ ಭಗವಂತನ ಅನುಗ್ರಹ; ಶ್ರೀ ಧರ್ಮಪಾಲನಾಥ ಸ್ವಾಮೀಜಿ
  • ದೇಶದ ಸಂವಿಧಾನ ಎಲ್ಲರೂ ಪಾಲಿಸಬೇಕು: ನಳಿನ್‌ಕುಮಾರ್
  • ಸರಕಾರದಿಂದ ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ಕಾರ್ಯಕ್ರಮ: ಮಠಂದೂರು
  • ದೇವಸ್ಥಾನಗಳಲ್ಲಿ ‘ನಿತ್ಯ ನಿರ್ವಹಣಾ ನಿಧಿ’ ಮಾಡಿಕೊಳ್ಳಬೇಕು: ರೋಹಿಣಿ ಸುಬ್ಬರತ್ನಂ

 

ನೆಲ್ಯಾಡಿ: ದೇವರಿಗೆ ಆಡಂಬರದ ಭಕ್ತಿ ಬೇಡ. ದೇವರ ಮುಂದೆ ಯಾವುದೇ ಫಲಾಪೇಕ್ಷೆ ಇಲ್ಲದೆ ಶರಣಾಗಬೇಕು. ನಿಷ್ಕಲ್ಮಶ ಭಕ್ತಿ, ಪ್ರೀತಿಗೆ ಭಗವಂತನ ಅನುಗ್ರಹವಿದೆ. ಧರ್ಮಕಾರ್ಯ ಮಾಡುವ ಮೂಲಕ ಒಳ್ಳೆಯ ಕೀರ್ತಿಗಳಿಸುವುದೇ ಜೀವನದ ಮುಖ್ಯ ಗುರಿಯಾಗಬೇಕು ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.

 

 

ಅವರು ಕಡಬ ತಾಲೂಕಿನ ಆಲಂತಾಯ ಗ್ರಾಮದ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ೫ನೇ ದಿನವಾದ ಮಾ.೨೬ರಂದು ಸಂಜೆ ಕೀರ್ತಿಶೇಷ ಕೊರಗಪ್ಪ ಪೂಜಾರಿ ಪಾಲೇರಿ ಸಭಾಂಗಣದ ಕೀರ್ತಿಶೇಷ ಬ್ರಹ್ಮರಾಜ ಹೆಗ್ಡೆ ಶಾಂತಿಮಾರು ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮನುಷ್ಯನನ್ನು ನಂಬಿ ಕೆಟ್ಟವರು ಇದ್ದಾರೆ. ಆದರೆ ದೇವರನ್ನು ನಂಬಿ ಕೆಟ್ಟವರು ಯಾರು ಇಲ್ಲ. ಅತಿಯಾದ ನಿರೀಕ್ಷೆಯೇ ಮನುಷ್ಯನ ಅಧ: ಪತನಕ್ಕೆ ಕಾರಣವಾಗುತ್ತದೆ. ದೇವರ ಕಾರ್ಯದ ಮೂಲಕ ಜೀವನ ಪರಿಪೂರ್ಣವಾಗಲು ಬ್ರಹ್ಮಕಲಶೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಅತ್ಯವಶ್ಯಕ ಎಂದರು.

 

ಮುಖ್ಯ ಅತಿಥಿಯಾಗಿದ್ದ ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ದೇವರು, ಧರ್ಮ, ದೇಶ ಉಳಿಸುವ ಕೆಲಸ ಆಗಬೇಕು. ಈ ದೇಶದಲ್ಲಿರುವ ಎಲ್ಲರೂ ದೇಶದ ಸಂವಿಧಾನ ಪಾಲಿಸಬೇಕು. ದೇಶದ ಸಂಪ್ರದಾಯ, ಸಂವಿಧಾನಕ್ಕೆ ಗೌರವ ಕೊಟ್ಟು ಬದುಕಬೇಕೆಂದು ಹೇಳಿದ ಅವರು ಕಾಂಚನ ಷಣ್ಮುಖ ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ಲೋಕಸಭಾ ಸದಸ್ಯ ನಿಧಿಯಿಂದ ೫ ಲಕ್ಷ ರೂ.,ಅನುದಾನ ನೀಡುತ್ತೇನೆ ಎಂದು ಹೇಳಿದರು. ಇನ್ನೋರ್ವ ಅತಿಥಿ ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಸರಕಾರ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ದೇವಸ್ಥಾನಗಳಲ್ಲಿ ಸಪ್ತಪದಿ, ಗೋಶಾಲೆ ಸೇರಿದಂತೆ ಧಾರ್ಮಿಕತೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಸರಕಾರಿ ಜಾಗದಲ್ಲಿರುವ ದೇವಾಲಯಗಳ ಉಳಿವಿಗೆ ಕಾಯ್ದೆಯೂ ಜಾರಿಗೆ ತಂದಿದೆ ಎಂದು ಹೇಳಿದ ಅವರು ಷಣ್ಮುಖ ದೇವಸ್ಥಾನದಲ್ಲಿ ಶೌಚಾಲಯ ನಿರ್ಮಾಣಕ್ಕೆ ೫ ಲಕ್ಷ ರೂ.,ಅನುದಾನ ನೀಡಿದ್ದು, ಮುಂದೆ ಇಂಟರ್‌ಲಾಕ್ ಅಳವಡಿಕೆಗೂ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂರವರು ಮಾತನಾಡಿ, ಅರ್ಚಕರಿಗೆ ದಕ್ಷಿಣೆ, ಶುಚಿತ್ವ, ಇತರೇ ಖರ್ಚು ಸೇರಿದಂತೆ ದೇವಸ್ಥಾನದ ನಿರ್ವಹಣೆಗೆ ವಾರ್ಷಿಕ ೪೦ ರಿಂದ ೫೦ ಸಾವಿರ ಅಗತ್ಯವಿದೆ. ಈ ನಿಟ್ಟಿನಲ್ಲಿ ನಿತ್ಯ ನಿರ್ವಹಣಾ ನಿಧಿ ಮಾಡಿಕೊಳ್ಳಬೇಕು. ಗ್ರಾಮದ ಪ್ರತಿ ಮನೆಯವರು ಕನಿಷ್ಠ ೧ ಸಾವಿರ ರೂ., ಇದಕ್ಕೆ ದೇಣಿಗೆ ನೀಡಬೇಕೆಂದು ಹೇಳಿದರು.

ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮಾತನಾಡಿ, ದೇವಸ್ಥಾನದ ಹೊರಾಂಗಣದಲ್ಲಿ ಮೇಲ್ಛಾವಣಿ, ಸಭಾಭವನ ಸೇರಿದಂತೆ ಸುಮಾರು ೬೫ ಲಕ್ಷ ರೂಪಾಯಿಗೂ ಮಿಕ್ಕಿ ಅಭಿವೃದ್ಧಿ ಕೆಲಸ ಆಗಿದೆ. ಇನ್ನಷ್ಟೂ ಅಭಿವೃದ್ಧಿ ಕೆಲಸ ಬಾಕಿ ಇದೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ೪ ಲಕ್ಷ ರೂ., ದೇಣಿಗೆ ಸಿಕ್ಕಿದೆ. ಶಾಸಕ ಸಂಜೀವ ಮಠಂದೂರುರವರು ೫ ಲಕ್ಷ ರೂ.,ಅನುದಾನ ಒದಗಿಸಿಕೊಟ್ಟಿದ್ದಾರೆ. ವಿಧಾನಪರಿಷತ್ ಸದಸ್ಯ ಹರೀಶ್‌ಕುಮಾರ್‌ರವರು ೨.೫೦ ಲಕ್ಷ ರೂ.,ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಸಂಸದ ನಳಿನ್‌ಕುಮಾರ್ ಕಟೀಲ್‌ರವರು ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಒದಗಿಸಿಕೊಡಬೇಕೆಂದು ಹೇಳಿ ಲಿಖಿತ ಮನವಿ ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಜಿತ್‌ಕುಮಾರ್ ಪಾಲೇರಿ ಮಾತನಾಡಿ, ೧೪ ವರ್ಷಗಳ ಹಿಂದೆ ಇಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಈಗ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಸುಯೋಗ ಸಿಕ್ಕಿದೆ. ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ನಡೆದ ಕರಸೇವೆಯಲ್ಲಿ ಪ್ರತಿದಿನ ೨೦೦ ಸ್ವಯಂ ಸೇವಕರು ಪಾಲ್ಗೊಳ್ಳುತ್ತಿದ್ದರು. ದೇವರ ಸೇವೆ ಮಾಡಬೇಕೆಂಬ ಅಭಿಲಾಷೆ ಊರಿನ ಭಕ್ತರಲ್ಲಿ ಇತ್ತು. ಊರಿನ ಭಕ್ತರ ಪರಿಶ್ರಮದಿಂದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿದೆ. ಊರ, ಪರವೂರಿನ ಭಕ್ತರ ಸಹಕಾರ ನಿರೀಕ್ಷೆಗೂ ಮೀರಿ ಸಿಕ್ಕಿದೆ ಎಂದು ಹೇಳಿದರು.

ಸನ್ಮಾನ:
ದೇವಸ್ಥಾನದ ಪ್ರಧಾನ ಅರ್ಚಕರಾಗಿ, ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುತ್ತಿರುವ ಶ್ರೀನಿವಾಸ ಬಡೆಕ್ಕಿಲ್ಲಾಯ ದಂಪತಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈಯವರು ಅಭಿನಂದನಾ ಭಾಷಣ ಮಾಡಿದರು. ಪುಷ್ಪರಾಜ್ ಕಡಮದಪಳಿಕೆಯವರು ಅಭಿನಂದನಾ ಪತ್ರ ವಾಚಿಸಿದರು.
ಮುಖ್ಯ ಅತಿಥಿಗಳಾಗಿದ್ದ ಇನ್‌ಕಮ್ ಟ್ಯಾಕ್ಸ್ ಎಡಿಷನಲ್ ಕಮೀಷನರ್ ಕೆ.ಚಂದ್ರಕುಮಾರ್, ಧಾರ್ಮಿಕ ಮುಖಂಡ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಗುಡ್ರಾಡಿ ಗುಡ್ರಾಮಲ್ಲೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಗೌಡ ಕೈಕುರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಡಾ.ರಾಮಕೃಷ್ಣ ಭಟ್ ಅಂಜರ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರೆಮೇಲು ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

ವೈದಿಕ ಕಾರ್ಯಕ್ರಮ:
ಬ್ರಹ್ಮಕಲಶೋತ್ಸವದ ೫ನೇ ದಿನವಾದ ಮಾ.೨೬ರಂದು ಬೆಳಿಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಸಂಜೆ ಕುಂಭೇಶ ಕರ್ಕರಿ ಕಲಶಪೂಜೆ, ಬ್ರಹ್ಮಕಲಶ ಪೂಜೆಎ, ಪರಿಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ ನಡೆಯಿತು.

ಭಜನೆ/ಸಾಂಸ್ಕೃತಿಕ ಕಾರ್ಯಕ್ರಮ:
ಮಾ.೨೬ರಂದು ಬೆಳಿಗ್ಗೆ ನೆಲ್ಯಾಡಿ ಬಲ್ಯ ಶ್ರೀ ಕಾಳಿಕಾಂಬ ಭಜನಾ ಮಂಡಳಿ, ಸಂಜೆ ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ಮಂಡಳಿ, ಶಿವಾರು ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಮಕ್ಕಳ ಕುಣಿತ ಭಜನೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ರಸರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ಇವರ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು. ರಾತ್ರಿ ಪುತ್ತೂರು ಜಗದೀಶ ಆಚಾರ್ಯ, ಅಖಿಲಾ ಪಜಿಮಣ್ಣು, ಸಮನ್ವಿ ರೈ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಿತು.

ಇಂದು ಬ್ರಹ್ಮಕಲಶಾಭಿಷೇಕ:
ಬ್ರಹ್ಮಕಲಶೋತ್ಸವದ ೬ನೇ ದಿನವಾದ ಮಾ.೨೭ರಂದು ಬೆಳಿಗ್ಗೆ ೧೧.೨೪ರ ಮಿಥುನ ಲಗ್ನದಲ್ಲಿ ಶ್ರೀ ಷಣ್ಮುಖ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಇದಕ್ಕೂ ಮೊದಲು ಬೆಳಿಗ್ಗೆ ಗಣಪತಿ ಹೋಮ, ೯.೪೯ರ ವೃಷಭ ಲಗ್ನದಲ್ಲಿ ಅಷ್ಟಬಂಧ ಲೇಪನ ನಂತರ ಪರಿಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ರಾತ್ರಿ ಪೂಜೆ, ಶ್ರೀ ಭೂತಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಗೋಳಿತ್ತೊಟ್ಟ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ವಿಠಲ್ ನಾಯಕ್ ಕಲ್ಲಡ್ಕ ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here