ಇಲಾಖಾಧಿಕಾರಿಗಳು ಸಭೆಗೆ ಗೈರಾದರೆ ನಮ್ಮ ಸಮಸ್ಯೆ ಪರಿಹರಿಸುವವರು ಯಾರು?

0

  • ವಿಟ್ಲ ಮುಡ್ನೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆ

ವಿಟ್ಲ: ವಿಟ್ಲಮುಡ್ನೂರು ಗ್ರಾ.ಪಂ. ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷರಾದ ಜಯಪ್ರಕಾಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಮಾ.24ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಆಯಾಯಾ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಆಯಾಯಾ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರಬೇಕು. ಇಲ್ಲವಾದಲ್ಲಿ ನಮ್ಮ ಸಮಸ್ಯೆಯನ್ನು ಪರಿಹರಿಸುವವರ್ಯಾರು ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಒಂದೇ ದಿನ ಎರಡೆರಡು ಕಡೆ ಗ್ರಾಮ ಸಭೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಬರಲು ಅಸಾದ್ಯವಾಗಿದೆ ಎಂದು ಪಿಡಿಒ ರಾಘವೇಂದ್ರ ಹೊರಪೇಟೆ ಹೇಳಿದರು. ಮುಂದಿನ ದಿನಗಳಲ್ಲಿ ಅಧಿಕಾರಿಗಳಿಗೆ ಸಮಯಾವಕಾಶ ಇರುವ ವೇಳೆ ಗ್ರಾಮ ಸಭೆ ಇಟ್ಟುಕೊಳ್ಳೋಣ ಇಲ್ಲವಾದಲ್ಲಿ ಗ್ರಾಮ ಸಭೆಯು ಪರಿಪೂರ್ಣವಾಗುವುದಿಲ್ಲ ಎಂದು ಗ್ರಾಮಸ್ಥರು ಸಲಹೆ ನೀಡಿದರು.
ಕಂಬಳಬೆಟ್ಟು ಮಸೀದಿಗೆ ಗ್ರಾ.ಪಂ.ನಿಂದ ೧ ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿ ಹಲವಾರು ವರ್ಷವಾಗಿದೆ. ಈ ಬಗ್ಗೆ ಇಂಜಿನಿಯರುಗಳು ಹಲವಾರು ಬಾರಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ ಈವರೆಗೆ ಅನುದಾನ ಬಿಡುಗಡೆ ಮಾಡಿಲ್ಲ ಯಾಕೆ ಎಂದು ಅಬ್ದುಲ್ ರಹಿಮಾನ್‌ರವರು ಪ್ರಶ್ನಿಸಿದರು. ಈ ವೇಳೆ ಅಧ್ಯಕ್ಷರು ಮಾತನಾಡಿ ಯಾಕೆ ಆಗಿಲ್ಲ ಎನ್ನುವುದಕ್ಕೆ ಮಾಹಿತಿ ನೀಡಲು ಸಮಸ್ಯೆ ಏನೆಂಬುದನ್ನು ಹೇಳಲು ಆ ಸೆಕ್ಷನ್ ನ ಇಂಜಿನಿಯರ್ ಸಭೆಯಲ್ಲಿ ಉಪಸ್ಥಿತರಿಲ್ಲ ಎಂದರು. ಈ ವೇಳೆ ಸದಸ್ಯ ಪುನೀತ್ ಮಾಡ್ತಾರ್ ರವರು ಮಾತನಾಡಿ ಆ ಸಂದರ್ಭದಲ್ಲಿ ಇದ್ದ ಇಂಜಿನಿಯರ್ ಇದೀಗ ಇಲ್ಲ. ಕಡತಗಳನ್ನೆಲ್ಲಾ ಪರಿಶೀಲನೆ ನಡೆಸುವ ಕೆಲಸವಾಗಿದೆ. ತಾಂತ್ರಿಕ ತೊಂದರೆಯಿಂದಾಗಿ ಬಾಕಿ ಇರುವುದಾಗಿ ನಮಗೆ ಮಾಹಿತಿ ಲಭಿಸಿದೆ. ಕೂಡಲೇ ಅದನ್ನು -ಲೋಅಪ್ ಮಾಡಲಾಗುವುದು ಎಂದರು. ಸದಸ್ಯ ಮಹಾಬಲೇಶ್ವರ ಭಟ್ ರವರು ಮಾತನಾಡಿ ಈ ಬಗ್ಗೆ ನಾನು ಶಾಸಕರಲ್ಲಿ ಮಾತುಕತೆ ನಡೆಸಿದ್ದೇನೆ ಎರಡು ದಿನದೊಳಗೆ ಮಾಹಿತಿ ಸಂಗ್ರಹಿಸಿ ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದ್ದಾರೆ ಎಂದರು.

ಉದ್ಯೋಗ ಖಾತರಿ ಯೋಜನೆಯ ಕೆಲಸ ಮಾಡುವಾಗ ಗ್ರಾಮಸ್ಥರಿಗೆ ಟೆಕ್ನಿಕಲ್ ಪಾಯಿಂಟ್ ಹಿಡಿದುಕೊಂಡು ಇಂಜಿನಿಯರ್‌ಗಳು ಸಮಸ್ಯೆ ಮಾಡ್ತಾರೆ. ಇದರಿಂದಾಗಿ ಉದ್ಯೋಗ ಖಾತರಿಯ ಅಡಿಯಲ್ಲಿ ಕೆಲಸ ಮಾಡಿಸಲು ಗ್ರಾಮಸ್ಥರು ಹಿಂದೇಟು ಹಾಕಿವಂತಾಗಿದೆ ಎಂದು ಗ್ರಾ.ಪಂ.ಸದಸ್ಯ ಪುನೀತ್ ಮಾಡ್ತಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಲಾಖಾ ಮಾಹಿತಿ ನೀಡಲು ಆಗಮಿಸಿದ ಅಧಿಕಾರಿ ಇಂಜಿಯರ್‌ಗಳ ಗಮನಕ್ಕೆ ತರುವ ಕೆಲಸ ಮಾಡ್ತೇನೆ ಎಂದರು.

ಗ್ರಾ.ಪಂ. ವ್ಯಾಪ್ತಿಯ ಕೆಲವುಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿರುವ ಕುರಿತು ಗ್ರಾಮಸ್ಥರು ಪ್ರಸ್ತಾಪ ಮಾಡಿದರು. ಈ ವೇಳೆ ಮಾತನಾಡಿದ ಗ್ರಾ.ಪಂ. ಅಧ್ಯಕ್ಷರು ಪ್ರಧಾನಿಯವರ ಮನೆ ಮನೆಗೆ ಗಂಗೆ ಯೋಜನೆಯಡಿಯಲ್ಲಿ ಪ್ರತೀ ಮನೆಗೆ ನೀರು ಕೊಡುವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಆಗಲಿದೆ. ಇದೀಗಾಗಲೇ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳದ ಗುರುತು ಮಾಡಲಾಗಿದೆ. ಆ ವರೆಗೆ ಜನರು ನಮಗೆ ಸಹಕಾರ ನೀಡಬೇಕು. ಯಾರೂ ಕೂಡ ನೀರನ್ನು ಪೋಲು ಮಾಡಬೇಡಿ. ನಿಮಗೆ ಬೇಕಾದಷ್ಟನ್ನು ಮಾತ್ರ ಬಳಸಿಕೊಳ್ಳಿ ಎಂದರು. ಮೂಡೈಮಾರ್ ಸೇತುವೆ ಬಳಿ ಸ್ಥಳೀಯ ನಿವಾಸಿಗಳು ತ್ಯಾಜ್ಯ ಎಸೆಯುತ್ತಾರೆ ಅದಕ್ಕೆ ಪಂಚಾಯತ್ ನಿಂದ ಸೂಕ್ತ ವ್ಯವಸ್ಥೆ ಮಾಡಬೇಕು. ಕಳೆದ ನಾಲ್ಕು ವರ್ಷದಿಂದ ಈ ಬಗ್ಗೆ ಹೇಳುತ್ತಾ ಬಂದಿದ್ದೇವೆ ಆದರೆ ಈವರೆಗೆ ಅದಕ್ಕೊಂದು ಸೂಕ್ತ ವ್ಯವಸ್ಥೆ ಆಗಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಈ ವೇಳೆ ಅಧ್ಯಕ್ಷರು ಮಾತನಾಡಿ ನಮ್ಮಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣವಾಗುವ ವರೆಗೆ ಗ್ರಾಮಸ್ಥರು ನಮಗೆ ಸಹಕಾರ ನೀಡಬೇಕು. ಘಟಕ ನಿರ್ಮಾಣವಾದ ಕೂಡಲೇ ನಮ್ಮ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರವಾಗುತ್ತದೆ. ಮುಂದಿನ ದಿನಗಳಲ್ಲಿ ಕಸ ಎಸೆಯದಂತೆ ಮಾವು ಕಸ ಎಸೆಯುವವರಿಗೆ ಮಾಹಿತಿ ನೀಡ್ತೇವೆ. ಆ ಬಳಿಕವೂ ಅದು ಮುಂದುವರಿದಲ್ಲಿ ಅಂತವರಿಗೆ ದಂಡ ವಿಽಸುವ ಕೆಲಸವನ್ನು ಗ್ರಾ.ಪಂ. ವತಿಯಿಂದ ಮಾಡಲಾಗುವುದು ಎಂದರು.

ನೋಡೆಲ್ ಅಧಿಕಾರಿ ತಾಲೂಕು ದೈಹಿಕ ಪರಿವೀಕ್ಷಣಾಽಕಾರಿ ವಿಷ್ಣು ಹೆಬ್ಬಾರ್ ರವರ ಆಗಮಿಸಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಹೊರಪೇಟೆ ಸ್ವಾಗತಿಸಿ ವಂದಿಸಿದರು. ಗ್ರಾ.ಪಂ ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ಪುನೀತ್ ಮಾಡ್ತಾರ್, ಪ್ರೇಮಲತಾ, ಮಹಾಬಲೇಶ್ವರ ಭಟ್, ಲೋಕೇಶ್, ಭಾರತಿ, ತಾಯಿರ, ಸಿದ್ದಿಕ್, ಮರಿಯಮ್ಮ, ಉಮೇಶ್, ರೋಹಿಣಿ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಈ ಹಿಂದೆ ವಿಟ್ಲಮುಡ್ನೂರು ಗ್ರಾಮ ಪಂಚಾಯತ್‌ನಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ಸಾಲೆತ್ತೂರು ಗ್ರಾಮ ಪಂಚಾಯತ್‌ಗೆ ವರ್ಗಾವಣೆಗೊಂಡಿದ್ದ ಅಬ್ದುಲ್ ಕರೀಂರವರನ್ನು ಈ ಸಂದರ್ಭದಲ್ಲಿ ಗ್ರಾ.ಪಂ. ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಲಂಚ, ಭ್ರಷ್ಟಾಚಾರದ ವಿರುದ್ಧದ ಸುದ್ದಿ ಜನಾಂದೋಲನದ ಫಲಕ ಸ್ವೀಕಾರ

ಲಂಚ, ಭ್ರಷ್ಟಾಚಾರ ವಿರುದ್ಧದ ಸುದ್ದಿ ಜನಾಂದೋಲನದ ಫಲಕವನ್ನು ವಿಟ್ಲ ವರದಿಗಾರ ನಿಶಾಕಿರಣ್ ಬಾಳೆಪುಣಿಯವರಿಂದ ಸ್ವೀಕಾರ ಮಾಡಿದ ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ್ ನಾಯಕ್ ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಭ್ರಷ್ಟಾಚಾರ ಮುಕ್ತ ಗ್ರಾಮ ನಮ್ಮದಾಗಬೇಕು ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು. ಗ್ರಾ.ಪಂ. ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here