ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಚೆ ನೌಕರರ ಮುಷ್ಕರ – ಪುತ್ತೂರು ವಿಭಾಗ ಸಮಿತಿಯಿಂದ ಕಚೇರಿ ಮುಂದೆ ಧರಣಿ

0

  • ನೌಕರರ ಒಗ್ಗಟ್ಟಾಗಿ ಮಾಡುವ ಮುಷ್ಕರಕ್ಕೆ ಗೆಲುವಿದೆ – ತೀರ್ಥಪ್ರಸಾದ್
  • ಕೇಂದ್ರ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ – ಸುನಿಲ್ ದೇವಾಡಿಗ
  • ಬೇಡಿಕೆ ಈಡೇರದಿದ್ದರೆ ಮುಷ್ಕರ ಅನಿರ್ದಿಷ್ಟಾವಧಿಯಾಗಲಿದೆ – ಚಿದಾನಂದ

ಪುತ್ತೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಮಾ.28 ಮತ್ತು 29 ರಂದು ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಂತೆ ಪುತ್ತೂರು ವಿಭಾಗ ಸಮಿತಿಯಿಂದ ಪ್ರಧಾನ ಅಂಚೆ ಕಚೇರಿ ಎದುರು ಮುಷ್ಕರ ನಡೆಯಿತು. ಬೇಡಿಕೆಗಳನ್ನು ಈಡೇರಿಸುವಂತೆ ಘೊಷಣೆ ಕೂಗುವುವ ಮೂಲಕ ಮುಷ್ಕರ ನಡೆಯಿತು. ಅಂಚೆ ಇಲಾಖೆಯನ್ನು ಖಾಸಗೀಕರಣಗೊಳಿಸಬಾರದು, 8ನೇ ಕೇಂದ್ರ ವೇತನ ಆಯೋಗ, ಗ್ರಾಮೀಣ ಡಾಕ್ ಸೇವಕರಿಗೆ ನಾಗರಿಕ ಸೇವಕ ಸ್ಥಾನಮಾನ ನೀಡಿ ಮತ್ತು ಅವರ ಸೇವೆಯನ್ನು ಕ್ರಮಬದ್ಧಗೊಳಿಸುವುದ ಸೇರಿದಂತೆ ಹಲವು ಬೇಡಿಕಗೆಳನ್ನು ಮುಂದಿಟ್ಟು ಮುಷ್ಕರ ನಡೆಯಿತು.

 

ನೌಕರರ ಒಗ್ಗಟ್ಟಾಗಿ ಮಾಡುವ ಮುಷ್ಕರಕ್ಕೆ ಗೆಲುವಿದೆ:
ಅಖಿಲ ಭಾರತ ಅಂಚೆ ನೌಕರರ ಸಂಘಟನೆಯ ಅಧ್ಯಕ್ಷ ತೀರ್ಥಪ್ರಸಾದ್ ಅವರು ಮಾತನಾಡಿ ಅಖಿಲ ಭಾರತ ಅಂಚೆ ನೌಕರರ ಸಂಘಟನೆ, ರಾಷ್ಟ್ರೀಯ ಅಂಚೆ ನೌಕರರ ಸಂಘಟನೆ, ಅಖಿಲ ಭಾರತ ಗ್ರಾಮೀಣ ಡಾಕ್ ನೌಕರರ ಸಂಘಟನೆ, ಈ ಮೂರು ಸಂಘಟನೆಯ ನೌಕರರು ಒಟ್ಟಾಗಿ, ಒಗ್ಗಟ್ಟಿನಿಂದ ತಮ್ಮ ಬೇಡಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರಕ್ಕೆ ಗೆಲುವಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ:
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಕರ್ನಾಟಕ ವಲಯದ ಖಜಾಂಜಿ ಸುನಿಲ್ ದೇವಾಡಿಗ ಅವರು ಮಾತನಾಡಿ ಕೇಂದ್ರ ಸರಕಾರದ ದ್ವಿಮುಖ ನೀತಿಯ ವಿರುದ್ಧ ನಾವು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸಾರಿಗೆ, ಹಣಕಾಸು ಮತ್ತು ಅಂಚೆ ಇಲಾಖೆ ಸೇವೆ ಮಾಡುವ ಸಂಸ್ಥೆಯಾಗಿದ್ದು, ಇದು ಜನರ ಜೀವನಾಡಿ. ಇವತ್ತು ಇದನ್ನು ಖಾಸಗಿ ಜನರ ಕೈ ಕೊಟ್ಟರೆ ಜನರಿಗೆ ಮತ್ತು ನೌಕರರಿಗೆ ಬಹಳ ಕಷ್ಟ ಆಗಲಿದೆ. ಕೋರಿಯರುಗಳು ಖಾಸಗಿ ಕಂಪೆನಿಯವರು ನಡೆಸುತ್ತಿದ್ದರೂ ಅವರಿಗೆ ಹಳ್ಳಿಗಳನ್ನು ಸಂಪರ್ಕ ಮಾಡಲು ಆಗುತ್ತಿಲ್ಲ. ಹಳ್ಳಿಗಳ ಸಂಪರ್ಕ ಏನಿದ್ದರೂ ಅದು ಅಂಚೆ ಇಲಾಖೆಯಿಂದ ಮಾತ್ರ ಸಾಧ್ಯ. ಇದನ್ನು ಖಾಸಗಿಕರಣ ಮಾಡಿದರೆ ರೈತಾಪಿರ್ವಕ್ಕೆ ತೊಂದರೆ ಆಗಲಿದೆ ಎಂದರು.

ಬೇಡಿಕೆ ಈಡೇರದಿದ್ದರೆ ಮುಷ್ಕರ ಅನಿರ್ದಿಷ್ಟಾವಧಿಯಾಗಲಿದೆ:
ರಾಷ್ಟ್ರೀಯ ಅಂಚೆ ನೌಕರರ ಸಂಘದ ನ್ಯಾಷನಲ್ ಯೂನಿಯನ್ ಕಾರ್ಯದರ್ಶಿ ಚಿದಾನಂದ ಅವರು ಮಾತನಾಡಿ ನಮ್ಮ ಬೇಡಿಕೆಗಳು ಈಡೇರದಿದ್ದರೆ ಮುಷ್ಕರ ಅನಿರ್ದಿಷ್ಟಾವಧಿಯಾಗಲು ಸಾಧ್ಯವಿದೆ ಎಂದು ಹೇಳಿದರು. ರಾಷ್ಟ್ರೀಯ ಅಂಚೆ ನೌಕರರ ಸಂಘದ ನ್ಯಾಷನಲ್ ಯೂನಿಯನ್ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಗುರುಪ್ರಸಾದ್, ಎಐಜಿಡಿಎಸ್‌ಯುವಿನ ಅಧ್ಯಕ್ಷ ವಿಠಲ ಎಸ್ ಪೂಜಾರಿ, ಖಜಾಂಜಿ ಕಮಲಾಕ್ಷ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಬೇಡಿಕೆಗಳು: ಹೊಸ ಪಿಂಚಣಿ (ಎನ್‌ಪಿಎಸ್) ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು, ಜಿಡಿಎಸ್ ನೌಕರರಿಗೆ ಕೇಂದ್ರ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಜಾರಿಗೊಳಿಸಬೇಕು ಹಾಗೂ ಕಮಲೇಶ್ ಚಂದ್ರ ವರದಿಯ ಶಿಪಾರಸ್ಸು ಅನುಷ್ಠಾನಗೊಳಿಸಬೇಕು, ಕನಿಷ್ಟ ವೇತನಕ್ಕೆ ಸಂಬಂಧಿಸಿದಂತೆ ೭ನೇ ವೇತನ ಆಯೋಗದಲ್ಲಿ ನೀಡಿದ ಆಶ್ವಾಸನೆಯನ್ನು ಜಾರಿಗೊಳಿಸಬೇಕು, ವಾರದಲ್ಲಿ 5 ದಿನಗಳನ್ನು ಕರ್ತವ್ಯದ ದಿನವಾಗಿ ಪರಿಣಿಸಬೇಕು, ಅಂಚೆ ಇಲಾಖೆಯನ್ನು ಖಾಸಗೀಕರಣಗೊಳಿಸಬಾರದು, ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು, ಶೇ.100ರಷ್ಟು ಅನುಕಂಪ ಆಧಾರಿತ ನೇಮಕ ಮಾಡುವುದು, ಸಿಎಸ್‌ಐ, ಸಿಬಿಎಸ್, ಆರ್ ಐಸಿಟಿ, ಎಸ್‌ಐಎಫ್‌ವೈ ತಂತ್ರಜ್ಞಾನಗಳಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸುವುದು, ಐಪಿಪಿಬಿ ಹಾಗೂ ಎಇಪಿಎಸ್ ಗಳ ಅವೈಜ್ಞಾನಿಕ ಗುರಿಗಳನ್ನು ನೀಡಿ ನೌಕರರಿಗೆ ಕಿರುಕುಳ ನೀಡಬಾರದು, ಕೋವಿಡ್‌ನಿಂದ ಮೃತರಾದ ನೌಕರರ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ನೀಡಬೇಕೆಂದು ಮುಷ್ಕರದ ಸಂದರ್ಭ ಒತ್ತಾಯಿಸಲಾಗುವುದೆಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here