ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಹಸುಳೆ ಮೃತ್ಯು – ದಾದಿಯ ನಿರ್ಲಕ್ಷ್ಯ ಆರೋಪ-ತಾಯಿ ದೂರು

0

ಪುತ್ತೂರು:ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ 41 ದಿನದ ಮಗುವೊಂದು ಮೃತಪಟ್ಟ ಘಟನೆ ಮಾ.29ರಂದು ನಡೆದಿದ್ದು, ದಾದಿಯ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿ ಮಗುವಿನ ತಾಯಿ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಬೊಳಗಂಡಿ ನಿವಾಸಿ ಗಣೇಶ್ ಕೆ.,ಎಂಬವರ ಪತ್ನಿ ಚೈತ್ರಾರವರು ನೀಡಿದ ದೂರಿನಂತೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೈತ್ರರವರು ಫೆ.೧೪ರಂದು ಮಂಗಳೂರಿನ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ೧೦ ದಿನಗಳ ಹಿಂದೆ ಕೆಮ್ಮು ಕಾಣಿಸಿಕೊಂಡಿರುವುದರಿಂದ ಚಿಕಿತ್ಸೆಗಾಗಿ ಮಾ.೨೪ರಂದು ಮಗುವನ್ನು ಪುತ್ತೂರು ಚೇತನಾ ಆಸ್ಪತ್ರೆಗೆ ಕರೆತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ, ಕೆಮ್ಮು ಮತ್ತು ಕಫ ಜಾಸ್ತಿ ಇದ್ದಲ್ಲಿ ಮಗುವನ್ನು ಎಡ್ಮಿಟ್ ಮಾಡಬೇಕೆಂದು ತಿಳಿಸಿರುತ್ತಾರೆ. ನಂತರವೂ ಮಗುವಿಗೆ ಕೆಮ್ಮು ಕಡಿಮೆಯಾಗದೇ ಇರುವುದರಿಂದ ಮಾ.26ರಂದು ಮಗುವನ್ನು ಕರೆದುಕೊಂಡು ಚಿಕಿತ್ಸೆಯ ಬಗ್ಗೆ ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ಎಡ್ಮಿಟ್ ಮಾಡಿರುತ್ತಾರೆ. ಮಾ.27ರಂದು ಮಧ್ಯಾಹ್ನ ವೈದ್ಯರು ಬಂದು ಮಗುವನ್ನು ಪರೀಕ್ಷಿಸಿ ಮಗು ಆರೋಗ್ಯವಾಗಿದೆ ಎಂದು ತಿಳಿಸಿರುತ್ತಾರೆ. ಬಳಿಕ ಮಗುವಿನ ಚಿಕಿತ್ಸೆ ಮಾಡುತ್ತಿದ್ದ ದಾದಿ ಚೇತನಾರವರು ಸಂಜೆ ಸುಮಾರು ೬.೦೦ ಗಂಟೆಗೆ ಮಗುವಿಗೆ ಮೂರು ಸಲ ಇಂಜೆಕ್ಷನ್ ನೀಡಿದ್ದು ಮಗು ಕೂಗುವಾಗಲೇ ಆಕ್ಸಿಜನ್ ನೀಡಿದ್ದು, ಆ ಸಮಯ ಮಗು ಕೂಗುವುದನ್ನು ನಿಲ್ಲಿಸಿದ್ದು, ಸಂಜೆ ಸುಮಾರು ೬.೧೪ ಗಂಟೆಗೆ ದಾದಿಯವರು ಮಗು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮಗುವಿನ ಆರೈಕೆ ನೋಡಿಕೊಳ್ಳುತ್ತಿದ್ದ ದಾದಿ ಚೇತನಾರವರು ಮಗುವಿಗೆ ಸರಿಯಾಗಿ ಚಿಕಿತ್ಸೆ ನೀಡದೇ ನಿರ್ಲಕ್ಷಿಸಿರುವುದರಿಂದಲೇ ಮಗು ಮೃತಪಟ್ಟಿರುವುದಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ 174 (3) (4) ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿದೆ.

ಮರಣೋತ್ತರ ಪರೀಕ್ಷೆ: ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದ ಕೊಠಡಿಯಲ್ಲಿ ಮೃತ ಮಗುವಿನ ಮಹಜರು ನಡೆಸಿದ ಬಳಿಕ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಬುಧವಾರ ಮಗುವಿನ ನಾಮಕರಣವಿತ್ತು: ನಮ್ಮ ಮೊದಲ ಮಗು ಮೂರು ತಿಂಗಳಲ್ಲಿ ಮೃತಪಟ್ಟಿತ್ತು.ಇದೀಗ ೨ನೇ ಮಗು ದಾದಿಯ ನಿರ್ಲಕ್ಷ್ಯದಿಂದ ಮೃತಪಟ್ಟಿದೆ.ಈ ಮಗು ಚೇತರಿಸಿಕೊಂಡಿದ್ದು ವೈದ್ಯರು ನಾಳೆ ಬಿಡುಗಡೆ ಆಗಬಹುದು ಎಂದು ಹೇಳಿದ್ದರಿಂದ ಮಾ.೩೦ರಂದು ಮಗುವಿನ ನಾಮಕರಣಕ್ಕೆ ಸಿದ್ಧತೆ ಮಾಡಲಾಗಿತ್ತು.ಆದರೆ ವಿಧಿಯಾಟವೇ ಬೇರೆ ಆಗಿದೆ ಎಂದು ಮಗುವಿನ ತಂದೆ ಗಣೇಶ್ ತಿಳಿಸಿದ್ದಾರೆ.

ಮಗುವಿಗೆ ಹೃದಯದ ಸಮಸ್ಯೆ ಇತ್ತು

ಮಾ.24ಕ್ಕೆ ಮಗುವನ್ನು ಕರೆದುಕೊಂಡು ಬಂದಿದ್ದರು. ಆಗ ಔಷಧಿ ಕೊಟ್ಟು ಕಳುಹಿಸಿದ್ದೆ. ಆಗ ಮಗುವನ್ನು ಪರೀಕ್ಷೆ ಮಾಡಿಸಿ ಹೃದಯ ಸಂಬಂಧಿತ ಖಾಯಿಲೆ ಇರಬಹುದು. ಸ್ಕ್ಯಾನಿಂಗ್ ಮಾಡಬೇಕಾದಿತ್ತು ಎಂದು ಅವರ ಔಷಧಿ ಚೀಟಿಯಲ್ಲಿ ಬರೆದಿದ್ದೆ. ಮಗುವಿಗೆ ದಮ್ಮು ಕಟ್ಟುವುದಿದ್ದರೆ ಮತ್ತೆ ಕರೆದುಕೊಂಡು ಬರಲು ತಿಳಿಸಿದ್ದೆ. ಮಾ.೨೬ಕ್ಕೆ ಮಗುವನ್ನು ಮತ್ತೆ ಕರೆದುಕೊಂಡು ಬಂದಾಗಲೂ ಮಗುವಿನ ಪರೀಕ್ಷೆ ಮಾಡಿ ಆಗಲೂ ತಪಾಸಣೆ ಚೀಟಿಯಲ್ಲಿ ಮಗುವಿಗೆ ಹೃದಯದ ಸಮಸ್ಯೆ, ಸ್ಕ್ಯಾನಿಂಗ್ ಮಾಡಬೇಕೆಂದು ಬರೆದಿದ್ದೆ. ಮಗು ಮೇಲ್ನೋಟಕ್ಕೆ ಚೇತರಿಕೆಯಲ್ಲಿತ್ತು. ಮತ್ತೊಂದು ಕಡೆ ಅವರು ಬುಧವಾರ ಮಗುವಿನ ನಾಮಕರಣ ಮಾಡಲಿದೆ ಎಂದಿದ್ದರು. ಇದರ ಜೊತೆಗೆ ಮಗು ಕೂಡಾ ಸ್ವಲ್ಪ ಆರೋಗ್ಯದಲ್ಲಿರುವುದು ಕಂಡು ಬಂದಿತ್ತು. ಹಾಗಾಗಿ ಸೋಮವಾರ ಬಿಡುಗಡೆ ಮಾಡಬಹುದು ಎಂದಿದ್ದೆ. ನೀವು ಸೋಮವಾರ ಮಧ್ಯಾಹ್ನದ ತನಕ ನಿಲ್ಲುವುದಾದರೆ ಮಂಗಳೂರು ಕೆ.ಎಂ.ಸಿಯಿಂದ ಡಾ.ನಾರಾಯಣ್ ಬರುತ್ತಾರೆ. ಅವರ ಮೂಲಕ ಹೃದಯಕ್ಕೆ ಸಂಬಂಧಿಸಿ ಸ್ಕ್ಯಾನಿಂಗ್ ಮಾಡಿಸುವ ಎಂದಿದ್ದೆ. ಸಾಮಾನ್ಯವಾಗಿ ದಮ್ಮು ಕಟ್ಟುವ ಮಗು ಇದ್ದರೆ ಮಂಗಳೂರು ಅಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಇರುತ್ತದೆ. ಮಗುವಿಗೆ ಇಂಜೆಕ್ಷನ್ ಸಹ ಎಲ್ಲಾ ಮಕ್ಕಳಿಗೆ ಕೊಡುವಂತಹದ್ದನ್ನೇ ಕೊಟ್ಟದ್ದು. ಮಗುವಿಗೆ ತಕ್ಷಣ ತೊಂದರೆ ಕಂಡಾಗ ನಾನಿದ್ದರೂ ಕೂಡಾ ಏನು ಮಾಡಲು ಸಾಧ್ಯವಿಲ್ಲ.ಡಾ. ಶ್ರೀಕಾಂತ್ ರಾವ್, ಚೇತನಾ ಆಸ್ಪತ್ರೆ ಪುತ್ತೂರು

LEAVE A REPLY

Please enter your comment!
Please enter your name here