ಮಾ.31:ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ|ದಿನಕರ ರಾವ್ ಸೇವಾ ನಿವೃತ್ತಿ

0

ಪುತ್ತೂರು: ಕೆಥೊಲಿಕ್ ಶಿಕ್ಷಣ ಮಂಡಳಿ ಮಂಗಳೂರು ಇದರ ಆಡಳಿತಕ್ಕೊಳಪಟ್ಟಿರುವ ಮತ್ತು ಪುತ್ತೂರು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರೊ|ದಿನಕರ್ ರಾವ್‌ರವರು ತಮ್ಮ 36 ವರ್ಷ 9 ತಿಂಗಳ ಶೈಕ್ಷಣಿಕ ಸೇವೆಯಿಂದ ಮಾ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

 

1962ರ ಮಾರ್ಚ್ ೩ರಂದು ಜನಿಸಿರುವ ಪ್ರೊ|ದಿನಕರ್ ರಾವ್‌ರವರು ಮೂಲತಃ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ನಿವಾಸಿಯಾಗಿದ್ದು, ತಮ್ಮ ಆರಂಭದ ಶಿಕ್ಷಣವನ್ನು ಸ.ಕಿ.ಪ್ರಾ. ಶಾಲೆ ಶಾಲೆತ್ತಡ್ಕ, ಸ.ಹಿ.ಪ್ರಾ. ಶಾಲೆ ಕುಂಟಾಲಪಳ್ಕೆ ಮತ್ತು ಸರಕಾರಿ ಪ್ರೌಢಶಾಲೆ ಅರಸಿನಮಕ್ಕಿ ಇಲ್ಲಿ ಪಡೆದು, ಉಜಿರೆಯ ಶ್ರೀ ಧ.ಮ. ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಎ. ಪದವಿ ಶಿಕ್ಷಣವನ್ನು ಪೂರೈಸಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪ್ರಥಮ ರ‍್ಯಾಂಕಿನೊಂದಿಗೆ ಸ್ನಾತಕೋತ್ತರ ಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಕಾನೂನು ಶಿಕ್ಷಣದಲ್ಲಿ ಸ್ನಾತಕ ಪದವಿ ಗಳಿಸಿರುವರು. 19೮85ರ ಜುಲೈ 1ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ನೇಮಕಾತಿಗೊಂಡು ಅಲ್ಲಿ 21 ವರ್ಷಗಳ ಸೇವೆಯನ್ನು ಸಲ್ಲಿಸಿರುತ್ತಾರೆ. 2001ರ ಜೂನ್ 26ರಿಂದ ಜುಲೈ 10ರ ಅಲ್ಪಾವಧಿಯಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಸೇವೆಗೈದಿರುತ್ತಾರೆ. 2006ರ ಜೂನ್1 ರಂದು ಸಂತ ಫಿಲೋಮಿನಾ ಕಾಲೇಜಿಗೆ ವರ್ಗಾವಣೆಗೊಂಡು ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ, ಕಲಾ ವಿಭಾಗದ ಡೀನ್ ಮತ್ತು ಉಪ ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿರುತ್ತಾರೆ.

ತಮ್ಮ ವೃತ್ತಿ ಬದುಕಿನಲ್ಲಿ ಹಲವು ಮಹತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿನೆಸ್ ಮ್ಯಾನೇಜ್‌ಮೆಂಟ್, ಗ್ರಾಮೀಣ ಅಭಿವೃದ್ಧಿ ಹಾಗೂ ಸಹಕಾರ ಅಧ್ಯಯನ ಮಂಡಳಿ ಮತ್ತು ಅರ್ಥಶಾಸ್ತ್ರದ ಅಧ್ಯಯನ ಮಂಡಳಿಗಳ ಸದಸ್ಯರಾಗಿ ಆರು ವರ್ಷ ಕಾರ್ಯನಿರ್ವಹಿಸಿರುವ ಇವರು ಮಂಗಳೂರು ವಿವಿಯ ಅರ್ಥಶಾಸ್ತ್ರ ಪರೀಕ್ಷಾ ಮಂಡಳಿಯ ಮುಖ್ಯಸ್ಥರಾಗಿ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿರುತ್ತಾರೆ. ಮಂಗಳೂರು ವಿವಿ ವ್ಯಾಪ್ತಿಕ್ಕೊಳಪಟ್ಟ ಸ್ವಾಯತ್ತ ಕಾಲೇಜುಗಳಲ್ಲಿಯೂ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಪ್ರೊ|ದಿನಕರ್‌ರವರು ಕಾಲೇಜಿನಲ್ಲಿ ತಮ್ಮ ಬೋಧನೆಯೊಂದಿಗೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ, ಸುರಕ್ಷಾ ಗ್ರಾಹಕ ವೇದಿಕೆಯ ನಿರ್ದೇಶಕರಾಗಿ, ಮಾನವಿಕ ಸಂಘದ ನಿರ್ದೇಶಕರಾಗಿ, ಮತದಾರರ ಸಾಕ್ಷರತಾ ಸಂಘದ ನೋಡಲ್ ಅಧಿಕಾರಿಯಾಗಿ, ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕರಾಗಿ, ವಿಧಾನಸಭೆ/ಲೋಕಸಭೆ ಚುನಾವಣೆಗಳಲ್ಲಿ ಮಾಸ್ಟರ್ ಟ್ರೈನರ್ ಆಗಿ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಹೀಗೆ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾರೆ. ಇವರು ಸುರಕ್ಷಾ ಗ್ರಾಹಕ ವೇದಿಕೆಯ ನಿರ್ದೇಶಕರಾಗಿ ೮ ವರ್ಷ ಕಾರ್ಯ ನಿರ್ವಹಿಸಿದ್ದು, ಪ್ರತಿವರ್ಷವೂ ದ.ಕ ಜಿಲ್ಲಾ ಮಟ್ಟದ ಉತ್ತಮ ಗ್ರಾಹಕ ಕ್ಲಬ್ ಮತ್ತು ಉತ್ತಮ ಗ್ರಾಹಕ ಕ್ಲಬ್ ನಿರ್ದೇಶಕ ಪ್ರಶಸ್ತಿ ಬಂದಿರುವುದು ವಿಶೇಷ ಸಾಧನೆಯಾಗಿದೆ. ಪ್ರಸ್ತುತ ಇವರು ಪತ್ನಿ ವಾಣಿ ರಾವ್ ಮತ್ತು ಪುತ್ರಿ ಸಹನಾ ರಾವ್‌ರವರೊಂದಿಗೆ ಪುತ್ತೂರಿನ ಮುಕ್ರಂಪಾಡಿ ಎಂಬಲ್ಲಿ ನೆಲೆಸಿರುತ್ತಾರೆ.

LEAVE A REPLY

Please enter your comment!
Please enter your name here