ಮಾ.31:ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವಾಹನ ಚಾಲಕ ಸೀತಾರಾಮ್ ಸಿ ಸೇವಾ ನಿವೃತ್ತಿ

0

ಪುತ್ತೂರು: ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ವಾಹನ ಚಾಲಕರಾಗಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವಾಹನ ಚಾಲಕ ಸೀತಾರಾಮ್ ಸಿ.ರವರು ಮಾ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

 


ನಿವೃತ್ತಿ ಹೊಂದಲಿರುವ ಸೀತಾರಾಮ್ ಸಿ.ರವರು ಮೂಲತಃ ಕುಂಬ್ರ ಶೇಖಮಲೆ ನಿವಾಸಿಯಾಗಿದ್ದು, ದಿ.ಐತ್ತಪ್ಪ ನಾಯ್ಕ ಹಾಗೂ ಪೂವಕ್ಕ ದಂಪತಿಗಳ ಆರು ಮಕ್ಕಳ ಪೈಕಿ ಎರಡನೇಯವರಾಗಿ ಜನಿಸಿರುತ್ತಾರೆ. 1987, ಜುಲೈ 24 ರಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಯಮಸಂಧಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಹನ ಚಾಲಕರಾಗಿ ನೇಮಕಗೊಂಡು ಅಲ್ಲಿ ನಾಲ್ಕು ವರುಷ ಸೇವೆಗೈಯ್ದು, ಬಳಿಕ ಬೇಲೂರಿನ ಜನರಲ್ ಆಸ್ಪತ್ರೆಯಲ್ಲಿ ೨೫ ವರ್ಷ ಸೇವೆ ಸಲ್ಲಿಸಿರುತ್ತಾರೆ. ೨೦೧೨ರಲ್ಲಿ ಸೀತಾರಾಮ್‌ರವರು ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ವರ್ಗಾವಣೆಗೊಂಡು ಪುತ್ತೂರಿನಲ್ಲಿ ಹತ್ತು ವರ್ಷ ಸೇವೆಗೈಯ್ದು ನಿವೃತ್ತಿ ಹೊಂದಲಿದ್ದಾರೆ.

ಸೀತಾರಾಮ್‌ರವರು ಕಳೆದ ಏಳು ವರ್ಷಗಳಿಂದ ಪುತ್ತೂರಿನ ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿದ್ದು, ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಳಿಯಿರುವ ಸಾರಥಿ ಭವನ ಕಟ್ಟಡವನ್ನು ಮುನ್ನೆಡೆಸಿಕೊಂಡು ಬಂದಿರುತ್ತಾರೆ. ಮಾತ್ರವಲ್ಲದೆ ಬೇಲೂರಿನಲ್ಲಿ ಉದ್ಯೋಗ ನಿರ್ವಹಿಸುವ ಸಂದರ್ಭದಲ್ಲಿ ಅಲ್ಲಿನ ಸರಕಾರಿ ವಾಹನ ಚಾಲಕರ ಸಂಘದ ಉಪಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಮಿನಿವಿಧಾನ ಸೌಧದ ಬಳಿ ಕಾರ್ಯಾಚರಿಸುತ್ತಿರುವ ತಾಲೂಕು ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಇತ್ತೀಚೆಗೆ ಕಿಲ್ಲೆ ಮೈದಾನದಲ್ಲಿ ಜರಗಿದ ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಟ್ರೋಫಿಯಲ್ಲಿ ಸೀತಾರಾಮ್‌ರವರ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗಿತ್ತು. ಸರಕಾರಿ ವಾಹನ ಚಾಲಕ ವೃತ್ತಿಗೆ ಆಗಮಿಸಲು ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್‌ರವರು ಕಾರಣೀಭೂತರಾಗಿದ್ದಾರೆ ಎಂದು ನಿವೃತ್ತರಾದ ಸೀತಾರಾಮ್‌ರವರು ‘ಸುದ್ದಿ’ಗೆ ತಿಳಿಸಿದ್ದಾರೆ.

ಪ್ರಸ್ತುತ ಸೀತಾರಾಮ್‌ರವರು ತಾಯಿ ಪೂವಕ್ಕ, ಪತ್ನಿ ಶೋಭಾ, ಹಿರಿಯ ಪುತ್ರಿ ಎಲೆಕ್ಟ್ರೋನಿಕ್ಸ್ ಇಂಜಿನಿಯರ್ ಪದವೀಧರೆಯಾಗಿರುವ ಕು|ಚೈತ್ರಾ, ಕಿರಿಯ ಪುತ್ರಿ ಎಲೆಕ್ಟ್ರೋನಿಕ್ಸ್ ಇಂಜಿನಿಯರ್‌ನಲ್ಲಿ ಅಂತಿಮ ವರ್ಷ ಓದುತ್ತಿರುವ ಕು|ಮೌಲ್ಯರವರೊಂದಿಗೆ ಚಿಕ್ಕಪುತ್ತೂರು ರೈಲ್ವೇ ಸ್ಟೇಷನ್ ಬಳಿಯಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here