ಚರ್ಚ್‌ಗಳಲ್ಲಿ ಶ್ರದ್ಧಾಭಕ್ತಿಯ ‘ಗರಿಗಳ ಭಾನುವಾರ’ ಆಚರಣೆ

0

  • ಯೇಸುಕ್ರಿಸ್ತರು ಪ್ರೀತಿ, ಶಾಂತಿಯ ಧ್ಯೋತಕರಾಗಿದ್ದಾರೆ-ವಂ|ಕೆವಿನ್ ಲಾರೆನ್ಸ್

ಪುತ್ತೂರು: ಬದುಕಿನಲ್ಲಿ ಕಷ್ಟ ಮತ್ತು ನಿರಾಸೆಯಾದಾಗ ಮಾತ್ರ ಯೇಸುಕ್ರಿಸ್ತರನ್ನು ನೆನೆಯುವುದು ಆಗಬಾರದು, ಜೀವನದ ಪ್ರತಿಯೊಂದು ಮೆಟ್ಟಿಲನ್ನು ಇಡುವಾಗಲೂ ಯೇಸುಕ್ರಿಸ್ತರನ್ನು ನಮ್ಮ ಹೃದಯದಲ್ಲಿಟ್ಟು ಪೂಜಿಸುವಂತಾಗಬೇಕು. ಯೇಸುಕ್ರಿಸ್ತರು ಪ್ರೀತಿ ಮತ್ತು ಶಾಂತಿಯ ಧ್ಯೋತಕರಾಗಿದ್ದು ಇತರರನ್ನು ಗೆಲ್ಲಲು ಪ್ರಯತ್ನಿಸಿದ್ದರು ಎಂದು ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ಹೇಳಿದರು.


ಅವರು ಏ.10 ರಂದು ವಿಶ್ವದಾದ್ಯಂತ ಕೈಸ್ತ ಬಾಂಧವರು ಆಚರಿಸುತ್ತಿರುವ ‘ಗರಿಗಳ ಭಾನುವಾರ(ಪಾಮ್ ಸಂಡೇ)’ ದಿನದಂದು ಮಾಯಿದೆ ದೇವುಸ್ ಚರ್ಚ್‌ನಲ್ಲಿ ಬೈಬಲ್ ವಾಚಿಸಿ ಸಂದೇಶ ನೀಡಿದರು. ಕ್ರಿಸ್ತ ಅಧ್ಯಾತ್ಮಿಕ ಅನುಭವವನ್ನು ಎಲ್ಲೆಡೆ ಚೆಲ್ಲುವ ಹರಿಕಾರರಾಗಿದ್ದರು. ಅವರು ಸ್ವತಹ ಕಷ್ಟದ ಜೀವನವನ್ನು ಸವೆಸಿ ಕಷ್ಟವೇನೆಂಬುದರ ಅರಿವನ್ನು ತೋರಿಸಿಕೊಟ್ಟವರು. ದೇವಪುತ್ರನಾದರೂ ಮನುಜನ ಪಾಪ ಪರಿಹಾರಕ್ಕೋಸ್ಕರ ತಾನೇ ಮಾನವನಾಗಿ ಭೂಮಿಯಲ್ಲಿ ಜನ್ಮತಾಳಿದವರು. ಯೇಸು ಕ್ರಿಸ್ತರು ಪುನರುತ್ಥಾನರಾದಂತೆ ನಾವೂ ಒಂದು ದಿನ ಪುನರುತ್ಥಾನ ಹೊಂದುವೆವು ಎಂಬುದರ ಬಗ್ಗೆ ನಮ್ಮಲ್ಲಿ ವಿಶ್ವಾಸವಿರಬೇಕು ಎಂದ ಅವರು ತನ್ನ ಎಡಬಲಗಳಲ್ಲಿ ಕುಳಿತುಕೊಳ್ಳುವ, ಅಧಿಕಾರಕ್ಕಾಗಿ ಕಚ್ಚಾಡುವವರಿಗೆ ಕೊನೆಯವನು ಹೇಗೆ ಮೊದಲಿಗನಾಗಬೇಕೆಂದು ಸಾರಿದವರು. ಯೇಸುಕ್ರಿಸ್ತರು ಸಾಮಾಜಿಕ ಸಮಸ್ಯೆಗಳಿಗೆಲ್ಲಾ ಮನಪರಿವರ್ತನೆ, ಪರಸ್ಪರ ಸೇವೆ ಮತ್ತು ಸಹಕಾರವೇ ಮದ್ದು ಎಂದು ಸಾರಿದವರು. ಹಿಂಸೆಯಿಂದ ದೂರ ಸರಿದು ಕ್ರಿಸ್ತ ಶಾಂತಿಗಾಗಿ ಶ್ರಮಿಸುವವರು ಧನ್ಯರು, ಅವರು ದೇವರ ಮಕ್ಕಳೆನಿಸಿಕೊಳ್ಳುವರು ಎಂದು ಜಗತ್ತಿಗೆ ಸಾರಿದವರು. ಹಿಂಸೆಯಿಂದ ಹೊರಬರಲು ಒಂದೇ ಮಾರ್ಗವೆಂದರೆ ಅದು ಶಿಸ್ತಿನ ಬದುಕು, ಅಧ್ಯಾತ್ಮಿಕತೆಗೆ ಕರೆದೊಯ್ಯುವ ಪ್ರಾರ್ಥನೆ, ಉಪವಾಸ, ಕಷ್ಟನೋವುಗಳ ನಡುವೆ ತೋರಬೇಕಾದ ತಾಳ್ಮೆ ಸಹನೆಗಳಷ್ಟೇ ಹಿಂಸೆಯನ್ನು ಹತ್ತಿಕ್ಕಲು ಸಾಧ್ಯವೆಂದು ತಿಳಿಸಿದವರು ಎಂದು ಅವರು ಹೇಳಿದರು. ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಧರ್ಮಗುರು ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ, ವಂ|ಅಶೋಕ್ ರಾಯನ್ ಕ್ರಾಸ್ತಾರವರು ಬಲಿಪೂಜೆಯಲ್ಲಿ ಪಾಲ್ಗೊಂಡರು.


ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ಬ್ರದರ್ ಕ್ಲೆಮೆಂಟ್ ಡಿ’ಸೋಜ(ಕಾಪುಚಿನ್), ಬ್ರದರ್ ಅವಿತ್ ಪಾಸ್‌ರವರು, ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೋರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಆಯಾ ಚರ್ಚ್‌ಗಳಲ್ಲಿ ದಿವ್ಯ ಪೂಜೆಯ ಮೊದಲು ಶುದ್ಧೀಕರಿಸಿದ ತಾಳೆಗರಿಗಳನ್ನು ಆಯಾ ಚರ್ಚುಗಳಲ್ಲಿ ಭಕ್ತರಿಗೆ ಹಂಚಲಾಯಿತು. ಬಳಿಕ ಭಕ್ತಿ ಮೆರವಣಿಗೆ ಮೂಲಕ ಭಕ್ತರು ಚರ್ಚ್‌ಗೆ ಆಗಮಿಸಿ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು. ಆಯಾ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ಪಾಲನಾ ಸಮಿತಿಯ ಸದಸ್ಯರು, ವಾಳೆ ಗುರಿಕಾರರು, ಚರ್ಚ್ ಸ್ಯಾಕ್ರಿಸ್ಟಿಯನ್, ವೇದಿ ಸೇವಕರು, ಗಾಯನ ಮಂಡಳಿಯವರು ಸಹಕರಿಸಿದರು.

ಪವಿತ್ರ ಸಪ್ತಾಹ ಆರಂಭ…
ಗರಿಗಳ ಭಾನುವಾರ ಪಿತನ ಚಿತ್ತಕ್ಕೆ ವಿಧೇಯರಾದ ಯೇಸು, ನಿತ್ಯಜೀವ ಅರಸಲು ಮೃತ್ಯುಪಾಶಕ್ಕೆ ಸಾಗುವ ಪ್ರಯಾಣದ ಸಂಕೇತ. ಈ ಭಾನುವಾರವನ್ನು ಗರಿಗಳ ಭಾನುವಾರ ಅಥವಾ ಶ್ರಮ-ಮರಣಗಳ, ಶೋಕ ಸಂಭ್ರಮಗಳ ಭಾನುವಾರವೆಂದು ಗುರುತಿಸುತ್ತೇವೆ. ಇಂದಿನ ಪೂಜಾವಿಧಿಯ ಮೊದಲನೆಯ ಭಾಗದಲ್ಲಿ ಯೇಸುಸ್ವಾಮಿಯು ಇಸ್ರಯೇಲರ ಜೈಕಾರಗಳೊಡನೆ ಜೆರುಸಲೇಮ್ ಮಹಾನಗರವನ್ನು ರಾಜನಂತೆ ಪ್ರವೇಶಿಸುವುದನ್ನು ನೆನಪಿಸಿಕೊಳ್ಳುತ್ತೇವೆ. ಎರಡನೆಯ ಭಾಗದಲ್ಲಿ ಯೇಸುಕ್ರಿಸ್ತರ ಯಾತನೆ ಮತ್ತು ಮರಣವನ್ನು ಸತ್ಯವೇದದ ವಾಚನಗಳಲ್ಲಿ ಮತ್ತು ಪವಿತ್ರ ಸಂಸ್ಕಾರಗಳಲ್ಲಿ ಸ್ಮರಿಸುವುದಾಗಿದೆ. ಜನತೆ ಯೇಸುಕ್ರಿಸ್ತರನ್ನು ತಾಳೆಗರಿಗಳಿಂದ ಆತ್ಮೀಯವಾಗಿ ಬರಮಾಡಿಕೊಂಡ ದಿನವನ್ನೇ ಕ್ರೈಸ್ತ ಸಮುದಾಯದವರು ‘ಪಾಮ್ ಸಂಡೇ’ ಆಗಿ ಆಚರಿಸುವುದು ಸಂಪ್ರದಾಯವಾಗಿದೆ.

ಏ.17:ಈಸ್ಟರ್ ಆಚರಣೆ..
ಈ ವಾರವನ್ನು ಯಾತನೆಯ ವಾರವೆಂದು ಕರೆಯಲಾಗಿದೆ. ಗರಿಗಳ ಭಾನುವಾರದಂದು ಪ್ರಾರಂಭವಾಗುವ ಯೇಸುವಿನ ಯಾತ್ರೆ ಇಡೀ ವಾರ ಮುಂದುವರೆದು ಶುಕ್ರವಾರದಂದು ಅಂತಿಮ ತೆರೆ ಎಳೆಯುತ್ತದೆ. ಮುಂದಿನ ರವಿವಾರದವರೆಗೆ ಕ್ರೈಸ್ತ ಬಂಧುಗಳು ಪವಿತ್ರವಾರ ಆಚರಿಸಲಿದ್ದು ಏ.೧೪ರಂದು ಶುಭ ಗುರುವಾರ, ಏ.೧೫ರಂದು ಶುಭ ಶುಕ್ರವಾರವನ್ನಾಗಿ ಆಚರಿಸಿ ಏ.೧೭ರಂದು ಈಸ್ಟರ್ ಸಂಡೇ ಹಬ್ಬಕ್ಕಾಗಿ ಕ್ರೈಸ್ತರು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ. ಕ್ರೈಸ್ತರಿಗೆಲ್ಲಾ ಪರಿಶುದ್ಧವಾದ, ಬದುಕಿನ ಉತ್ಕೃಷ್ಟ ಭಾವನೆಗಳನ್ನು ಹೊರಹೊಮ್ಮುವ ವಾರ ಈ ಪವಿತ್ರ ವಾರವಾಗಿದೆ.

LEAVE A REPLY

Please enter your comment!
Please enter your name here