ಜಾತ್ರಾ ಗದ್ದೆಯಲ್ಲಿರುವ ವ್ಯಾಪಾರ ಮಳಿಗೆಗಳಿಗೆ ಡಸ್ಟ್ ಬಿನ್ ವಿತರಣೆ

0

  • ಪುತ್ತೂರು ಜಾತ್ರೆ ಸ್ವಚ್ಛತೆಯಲ್ಲಿ ಮಾದರಿಯಾಗಲಿ:ಕೇಶವ ಪ್ರಸಾದ್

ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಸಂದರ್ಭ ದೇವಳದ ಜಾತ್ರಾ ಗದ್ದೆಯಲ್ಲಿ ಅಳವಡಿಸಲಾಗಿರುವ ತಾತ್ಕಾಲಿಕ ವ್ಯಾಪಾರದ ಮಳಿಗೆಗಳಿಗೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ದೇವಳದ ನೇತೃತ್ವದಲ್ಲಿ ನಗರಸಭೆ ಮತ್ತು ರೋಟರಿ ಪೂರ್ವ ಸ್ವಚ್ಛತಾ ಆಂದೋಲನ ಟ್ರಸ್ಟ್‌ನಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸಲು ಡಸ್ಟ್ ಬಿನ್‌ಗಳನ್ನು ವಿತರಣೆ ಮಾಡಲಾಗಿದೆ. ದೇವಳದ ಗದ್ದೆಯಲ್ಲಿ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

 

ಪುತ್ತೂರು ಜಾತ್ರೆ ಸ್ವಚ್ಛತೆಯಲ್ಲಿ ಮಾದರಿಯಾಗಬೇಕು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಸಾಂಕೇತಿಕವಾಗಿ ಡಸ್ಟ್‌ಬಿನ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಾತ್ರೆಯ ಸಂದರ್ಭ ಲಕ್ಷಾಂತರ ಮಂದಿ ಭಕ್ತರು ಬರುತ್ತಾರೆ.ಅವರಿಗೆ ಪುತ್ತೂರು ಜಾತ್ರೆ ಅತೀ ಸುಂದರವಾಗಿ ಕಾಣಬೇಕು.ಈ ನಿಟ್ಟಿನಲ್ಲಿ ಜಾತ್ರೆಗೆ ಬರುವವರು ಮತ್ತು ಜಾತ್ರಾ ಗದ್ದೆಯಲ್ಲಿರುವ ಅಂಗಡಿಯವರು ಕಂಡ ಕಂಡಲ್ಲಿ ಕಸಗಳನ್ನು ಹಾಕದೆ ಸ್ವಚ್ಛತೆಗೆ ಆದ್ಯತೆ ನೀಡಬೇಕು.ಈ ನಿಟ್ಟಿನಲ್ಲಿ ಕಸವನ್ನು ಒಂದು ಕಡೆ ಶೇಖರಣೆಗೆ ಅವಕಾಶವನ್ನು ಮಾಡಿಕೊಡಲಾಗಿದೆ.ಅಂಗಡಿಯವರು ತಮ್ಮ ಅಂಗಡಿಯ ಮುಂಭಾಗದಲ್ಲಿರುವ ಕಸದ ಸ್ವಚ್ಛತೆಯ ಜವಾಬ್ದಾರಿ ತಾವೇ ವಹಿಸಬೇಕು.ಈ ನಿಟ್ಟಿನಲ್ಲಿ ಪ್ರತಿ ಅಂಗಡಿಗೂ ಹಸಿ ಮತ್ತು ಒಣ ಕಸ ಸಂಗ್ರಹಣೆಗೆ ತೊಟ್ಟಿ ಕೊಡಲಾಗಿದೆ.ಒಟ್ಟಿನಲ್ಲಿ ಪುತ್ತೂರು ಜಾತ್ರೆ ಸ್ವಚ್ಛತೆಯಲ್ಲಿ ಮಾದರಿಯಾಗುವಂತಾಗಲಿ ಎಂದರು.

ಹಸಿ ಕಸವನ್ನು ದೇವಳದ ವತಿಯಿಂದ ಸಂಸ್ಕರಣೆ:ಪ್ರತಿ ದಿನ ಸಂಗ್ರಹವಾದ ಕಸದಲ್ಲಿ ಒಣ ಕಸವನ್ನು ನಗರಸಭೆಯ ವಾಹನದಲ್ಲಿ ಸಂಗ್ರಹಿಸಲಾಗುತ್ತದೆ.ಹಸಿ ಕಸವನ್ನು ದೇವಳದ ವತಿಯಿಂದ ಸಂಸ್ಕರಣೆ ಮಾಡಲಾಗುತ್ತದೆ ಎಂದು ಕೇಶವಪ್ರಸಾದ್ ತಿಳಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ಬಿ. ಐತಪ್ಪ ನಾಯ್ಕ್,ರವೀಂದ್ರನಾಥ ರೈ, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೆಚ್ ,ಕಚೇರಿಯ ವ್ಯವಸ್ಥಾಪಕ ಹರೀಶ್ ಶೆಟ್ಟಿ, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ರೋಟರಿ ಪೂರ್ವದ ಸ್ವಚ್ಛತಾ ಆಂದೋಲನ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಮತ್ತು ಡಾ| ರಾಜೇಶ್ ಬೆಜ್ಜಂಗಳ ಉಪಸ್ಥಿತರಿದ್ದರು.

ದೇವಳದಿಂದ ಹಸಿರು ಯೋಧರು

ಪ್ರತಿ ಅಂಗಡಿಗಳಿಗೆ ನೀಡಲಾದ ಕಸದ ಬುಟ್ಟಿಯನ್ನು ಸರಿಯಾಗಿ ಉಪಯೋಗಿಸುತ್ತಾರೋ ಇಲ್ಲವೋ ಅಥವಾ ಅಂಗಡಿಯವರು ಸ್ವಚ್ಛತೆಯನ್ನು ಯಾವ ರೀತಿ ಮಾಡುತ್ತಿದ್ದಾರೆ ಎಂದು ಪರಿಶೀಲಿಸಲು ಮತ್ತು ಸ್ವಚ್ಛತೆಗೆ ಆದ್ಯತೆ ಕೊಡದಿದಲ್ಲಿ ಅವರನ್ನು ಎಚ್ಚರಿಸುವ ನಿಟ್ಟಿನಲ್ಲಿ ದೇವಳದಿಂದ ಹಸಿರು ಯೋಧರ ತಂಡವೊಂದು ಕಾರ್ಯಪ್ರವೃತ್ತವಾಗಲಿದೆ.ಅವರು ಪ್ರತಿಯೊಂದು ಅಂಗಡಿಯ ಸ್ವಚ್ಛತೆಯ ಮೇಲೆ ನಿಗಾ ಇಡಲಿದ್ದಾರೆ.- ರಾಮದಾಸ್ ಗೌಡ , ಸ್ವಚ್ಛತಾ ಉಪಸಮಿತಿ ಸಂಚಾಲಕರು

ಸ್ವಚ್ಛತೆಗೆ ಪ್ರತಿ ದಿನ ಬಹುಮಾನ
ಸ್ವಚ್ಛತೆಗೆ ಆದ್ಯತೆ ನೀಡುವ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಅಂಗಡಿಗಳು ತಮ್ಮ ಅಂಗಡಿಯ ಮತ್ತು ಎದುರಿನ ಪರಿಸರ ಸ್ವಚ್ಛತೆಯಲ್ಲಿ ಇಟ್ಟುಕೊಳ್ಳಬೇಕು.ಈ ಕುರಿತು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರ ತಂಡ ಪರಿಶೀಲನೆ ನಡೆಸಿ ಸಂಜೆಯ ವೇಳೆ ಅಂಕ ನೀಡಲಾಗುತ್ತದೆ.ಮಾರನೆ ದಿನ ಬೆಳಿಗ್ಗೆ, ಸ್ವಚ್ಛತೆ ಕಾಪಾಡುವಲ್ಲಿ ಅತಿ ಹೆಚ್ಚು ಅಂಕ ಪಡೆದ ಅಂಗಡಿಗೆ ಬಹುಮಾನ ನೀಡಲಾಗುವುದು.ಈ ಬಹುಮಾನ ವಿತರಣೆ ಜಾತ್ರೆ ಮುಗಿಯುವ ತನಕ ನಿತ್ಯ ನಡೆಯಲಿದೆ. ಮಧು ಎಸ್ ಮನೋಹರ್, ಪೌರಾಯುಕ್ತರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here