ಮೈಸೂರಿನ ಫೊಟೋಗ್ರಾಫರ್ ಜಗದೀಶ್ ಶೆಟ್ಟಿ ಕೊಲೆ ಪ್ರಕರಣ

0

  • ಕೃತ್ಯಕ್ಕೆ ಒಳಸಂಚು ನಡೆಸಿದ್ದ ಆರೋಪಿ ಜಯರಾಜ್ ಶೆಟ್ಟಿಗೆ ಜಾಮೀನು

 

 

ಪುತ್ತೂರು: ಪುತ್ತೂರಿಗೆ ಬಂದು ನಾಪತ್ತೆಯಾಗಿದ್ದ ಮೈಸೂರಿನ ಫೊಟೋಗ್ರಾಫರ್ ಜಗದೀಶ್ ಶೆಟ್ಟಿಯವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಅಣಿಲೆ ಜಯರಾಜ್ ಶೆಟ್ಟಿಯವರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಜಗದೀಶ್ ಶೆಟ್ಟಿ ಅವರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಶವವನ್ನು ಕಾಡು ಪ್ರದೇಶದಲ್ಲಿ ಗುಂಡಿ ತೋಡಿ ಹೂತಿಡಲಾಗಿತ್ತು.ಕೃತ್ಯಕ್ಕೆ ಒಳಸಂಚು ನಡೆಸಿದ್ದ ಆರೋಪದಲ್ಲಿ ಜಯರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು.

 

ಕೊಲೆಯಾದ ಜಗದೀಶ್ ಶೆಟ್ಟಿ

 

ಆರೋಪಿ ಜಯರಾಜ್ ಶೆಟ್ಟಿ ಅಣಿಲೆ

ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯನಗರ ನಿವಾಸಿಯಾಗಿದ್ದ, ಮಂಗಳೂರು ಕಾವೂರು ಶಿವನಗರ ಮುಲ್ಲಕಾಡು ಸಿಂಧೂರ ಮನೆ ದಿ.ಶಂಭು ಶೆಟ್ಟಿಯವರ ಮಗ ಜಗದೀಶ್ ಶೆಟ್ಟಿ(58ವ.)ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಕಳೆದ ನವೆಂಬರ್ 18ರಂದು ಮೈಸೂರಿನ ಸುಬ್ರಹ್ಮಣ್ಯ ನಗರದಿಂದ ಪುತ್ತೂರು ಆರ್ಯಾಪು ಗ್ರಾಮದ ಕುಂಜೂರುಪಂಜದಲ್ಲಿರುವ ತನ್ನ ಒಡೆತನದ ಜಾಗವನ್ನು ನೋಡಲೆಂದು ಬಂದಿದ್ದ ಜಗದೀಶ್ ಶೆಟ್ಟಿಯವರು ನಾಪತ್ತೆಯಾಗಿದ್ದರು.ಈ ಕುರಿತು ಜಗದೀಶ್ ಶೆಟ್ಟಿಯವರ ಪತ್ನಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.ಬಳಿಕ ತನಿಖೆ ನಡೆಸಿದ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿದ್ದರು.ಸಂಬಂಧದಲ್ಲಿ ಮೃತರಿಗೆ ಮಾವನಾಗಿರುವ ನೆಟ್ಟಣಿಗೆಮುಡ್ನೂರು ಪಟ್ಲಡ್ಕ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರೈ, ಆತನ ಪತ್ನಿ ಜಯಲಕ್ಷ್ಮೀ ರೈ, ಮಗ ಪ್ರಶಾಂತ್ ರೈ ಮತ್ತು ಹತ್ತಿರದ ಮನೆ ಸಂಜೀವ ಗೌಡ ಪಟ್ಲಡ್ಕ ಅವರ ಮಗ ಜೀವನ್‌ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದರು.ದಿನೇಶ್ ಶೆಟ್ಟಿಯವರ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಮೃತದೇಹವನ್ನು ಮುಗುಳಿ ಸಮೀಪ ಕಾಡು ಪ್ರದೇಶದಲ್ಲಿ ಗುಂಡಿ ತೋಡಿ ಹಾಕಿಟ್ಟಿದ್ದರು.ಈ ಪ್ರಕರಣದಲ್ಲಿ ಕೊಲೆಗೆ ಒಳಸಂಚು ನಡೆಸಿದ್ದ ಆರೋಪದಲ್ಲಿ ಜಯರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು.ಜಯರಾಜ್ ಶೆಟ್ಟಿ ಈ ಹಿಂದೆ ತಿಂಗಳಾಡಿ ಉಮೇಶ್ ರೈ ಕೊಲೆ ಪ್ರಕರಣದ ಆರೋಪಿಯಾಗಿ ಪೊಲೀಸರಿಂದ ಬಂಧಿತನಾಗಿದ್ದು ಬಳಿಕ ನ್ಯಾಯಾಲಯದಲ್ಲಿ ನಿರ್ದೋಷಿಯಾಗಿ ಬಿಡುಗಡೆಗೊಂಡಿದ್ದರು.ಇದೀಗ ಫೊಟೋಗ್ರಾಫರ್ ಜಗದೀಶ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇವರಿಗೆ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲ ಬಿ.ನರಸಿಂಹಪ್ರಸಾದ್ ವಾದಿಸಿದ್ದರು.ಬಂಧಿತ ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

LEAVE A REPLY

Please enter your comment!
Please enter your name here