34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ

0

  • ಏಕ ವಿನ್ಯಾಸ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗಾಗಿ
  • ಯೋಜನಾ ಇಲಾಖೆಯ ಅನುಮತಿ ಆಕ್ಷೇಪಾರ್ಹ, ಪುನರ್ ಪರಿಶೀಲನೆಗೆ ಆಗ್ರಹಿಸಿ ನಿರ್ಣಯ

ಉಪ್ಪಿನಂಗಡಿ: ಪ್ರಸಕ್ತ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಡಿಯಲ್ಲಿ ಬರುತ್ತಿದ್ದ ಏಕ ವಿನ್ಯಾಸ ಯಾ 9/11 ನಕ್ಷೆ ಪಡೆಯಲು ಯೋಜನಾ ಇಲಾಖೆಯ ಅನುಮತಿ ಪಡೆಯುವ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದು ಆಕ್ಷೇಪಾರ್ಹವಾದುದು, ಇದರ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಸರ್ಕಾರವನ್ನು ಕೋರಿ 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ನಿರ್ಣಯ ಅಂಗೀಕರಿಸಿದೆ.
34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಎ.12ರಂದು ಜರಗಿದ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಸರ್ಕಾರದಿಂದ ಬಂದ ಸುತ್ತೋಲೆಗಳನ್ನು ಓದುತ್ತಾ “ಸ್ಥಳೀಯ ಯೋಜನಾ ಪ್ರದೇಶದ ಹೊರ ಭಾಗದಲ್ಲಿನ ಒಂದು ಎಕರೆಗಿಂತ ಕಡಿಮೆ ಇರುವ ಪ್ರದೇಶ ಮತ್ತು ಏಕ ನಿವೇಶನ (9/11) ವಷತಿ/ವಸತಿಯೇತರಗಾಗಿ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅನುಮೋದನೆ ಪಡೆಯುವ” ಬಗ್ಗೆ ತಿಳಿಸುತ್ತಿದ್ದಂತೆ ಸದಸ್ಯರುಗಳು ಪ್ರತಿಕ್ರಿಯಿಸಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಈ ಅಧಿಸೂಚನೆ ಜನರಿಗೆ ಹೊರೆ ಆಗಲಿದೆ.

ಈ ಹಿಂದೆ ಏಕ ವಿನ್ಯಾಸ ಯಾ 9/11 ನಕ್ಷೆ ಪಡೆಯುವವರು ಪಂಚಾಯಿತಿಗೆ ಅರ್ಜಿ ಸಲ್ಲಿಸಿ, ಅದು ತಾಲ್ಲೂಕು ಪಂಚಾಯಿತಿ ಅನುಮೋದನೆಯೊಂದಿಗೆ ಪಡೆಯಲಾಗುತ್ತಿತ್ತು. ಆದರೆ ಇದೀಗ ಬಂದ ಅಧಿಸೂಚನೆಯಂತೆ ಏಕ ವಿನ್ಯಾಸ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆ ಪಡೆಯಲು ದೂರದ ಮಂಗಳೂರುನಲ್ಲಿರುವ ಯೋಜನಾ ಇಲಾಖೆಯ ಅನುಮೋದನೆ ಪಡೆಯಬೇಕಾಗುತ್ತದೆ. ಇದರಿಂದಾಗಿ ಜನ ಸಾಮಾನ್ಯರು ಮಂಗಳೂರುಗೆ ಅಲೆದಾಟ ಮಾಡಬೇಕಾಗುತ್ತದೆ, ದುಂದು ವೆಚ್ಚದ ಹೊರೆ ಆಗಲಿದೆ. ಜನ ಸಾಮಾನ್ಯರಿಗೆ ಮಾಹಿತಿ ಕೊರತೆ ಎದುರಾಗಲಿದ್ದು, ಇದು ಮಧ್ಯವರ್ತಿಗಳಿಗೆ ವರದಾನವಾಗಲಿದೆ. ಆದ ಕಾರಣ ಸರ್ಕಾರ ಈ ಅಧಿಸೂಚನೆ ಬಗ್ಗೆ ಪುನರ್ ಪರಿಶೀಲನೆ ನಡೆಸಿ, ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಡಿಯಲ್ಲಿಯೇ ಏಕ ವಿನ್ಯಾಸ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿ ಸರ್ಕಾರವನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.

ದಾಖಲೆಯಲ್ಲಿ 57, ಅಲ್ಲಿ ಇರುವುದು 42 ಸೆಂಟ್ಸ್..!!
ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮೈಂದಡ್ಕ ಸಾರ್ವಜನಿಕ ಮೈದಾನದ ಸರ್ವೆ ಕಾರ‍್ಯ ನಡೆಸಲಾಗಿ ಭೂ ಮಾಪನಾ ಅಧಿಕಾರಿಗಳು ಅದರಲ್ಲಿ 57 ಸೆಂಟ್ಸ್ ಜಾಗ ಇದೆ ಎಂದು ವಿವರಿಸಿದ್ದಾರೆ. ಆದರೆ ಗ್ರಾಮಸ್ಥರು ನೀಡಿರುವ ಮಾಹಿತಿ ಪ್ರಕಾರ ಅದರಲ್ಲಿ 57ಸೆಂಟ್ಸ್ ಜಾಗ ಇಲ್ಲ, ಬಹಳ ಕಡಿಮೆ ಇದೆ ಎಂದು ಮಾಹಿತಿ ನೀಡಿದ್ದು, ಅದಕ್ಕಾಗಿ ಖಾಸಗಿ ಸರ್ವೆ ಮಾಡಿಸಲಾಗಿದ್ದು, ಖಾಸಗಿ ಸರ್ವೆ ಅಳತೆ ಪ್ರಕಾರ ಅಲ್ಲಿ 42 ಸೆಂಟ್ಸ್ ಜಾಗ ಇರುವುದಾಗಿ ತಿಳಿಸಿದ್ದಾರೆ. ಆದ ಕಾರಣ ಪಂಚಾಯಿತಿ ಜಾಗ ಅತಿಕ್ರಮಣ ಆಗಿರುವುದನ್ನು ತೆರವು ಮಾಡಿ ಪಂಚಾಯಿತಿಯ 57 ಸೆಂಟ್ಸ್ ಜಾಗದ ಗಡಿ ಗುರುತು ಮಾಡಿ ಕೊಡುವಂತೆ ತಹಸೀಲ್ದಾರ್ ಅವರನ್ನು ಕೇಳಿಕೊಳ್ಳುವುದಾಗಿ ನಿರ್ಣಯಿಸಲಾಯಿತು.

ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಮಾಡುವಂತೆ ಸೂಚನೆ:
ಸಭೆ ನಡೆಯುವ ವೇಳೆ ತಾಲ್ಲೂಕು ಪಂಚಾಯಿತಿ ಕಾರ‍್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಸಭೆಗೆ ಆಗಮಿಸಿದ್ದು, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಮಾತನಾಡಿದ ಅವರು ಪುತ್ತೂರು ಮತ್ತು ಕಡಬ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಬಹಳಷ್ಟು ಘಟಕಗಳಲ್ಲಿ ಉತ್ತಮ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ನಡೆಯುತ್ತಿದೆ. ಕೆಲವೊಂದು ಕಡೆ ಸಮಸ್ಯೆ ಇದೆ. ಅದರಲ್ಲೂ ನೆಕ್ಕಿಲಾಡಿಯಲ್ಲಿಯೂ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ, ಆದಷ್ಟು ಬೇಗ ವ್ಯವಸ್ಥಿತವಾಗಿ ನಡೆಸುವಂತೆ ಸೂಚನೆ ನೀಡಿದರು.

ವಾಹನದಲ್ಲಿ ಬಂದು ರಸ್ತೆ ಬದಿಯಲ್ಲಿ ಕಸ ಎಸೆಯುವುದನ್ನು ವಿಡಿಯೋ ಮಾಡಿಸಿ, ಅಂತಹ ವಾಹನದ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸಾರಿಗೆ ಇಲಾಖೆಗೆ ಬರೆದುಕೊಳ್ಳುವಂತೆ ಸೂಚನೆ ನೀಡಿದರು. ಪಂಚಾಯಿತಿ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ಇದ್ದಲ್ಲಿ, ತಾವು ಸೂಚಿಸಿದಂತೆ ಕೆಲಸ ಮಾಡದಿದ್ದಲ್ಲಿ ಅಂತಹವರ ಸಂಬಳ ಕಡಿತ ಮಾಡುವಂತೆ ಸೂಚನೆ ನೀಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಮರಳುಗಾರಿಕೆ ಮಾಡುವವರು ಯಾವುದೇ ದಾಖಲೆ ಪತ್ರಗಳನ್ನು ಪಂಚಾಯಿತಿಗೆ ನೀಡುತ್ತಿಲ್ಲ ಮತ್ತು ಮಾಹಿತಿ ಕೊಡುತ್ತಿಲ್ಲ, ಈ ಬಗ್ಗೆ ಗಣಿ ಇಲಾಖೆಯವರಿಗೆ ತಿಳಿಸಿದರೂ ಅವರೂ ಸ್ಪಂಧಿಸುತ್ತಿಲ್ಲ, ಯಾವುದು ಅಕ್ರಮ, ಯಾವುದು ಸಕ್ರಮ ಎಂದು ತೋಚುತ್ತಿಲ್ಲ ಎಂದು ಅಧ್ಯಕ್ಷರು ಕಾರ‍್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಗಣಿ ಇಲಾಖೆಯನ್ನು ಕೇಳಿ ತಿಳಿದುಕೊಂಡು ಆ ಬಳಿಕ ಕಾರ‍್ಯಾಚರಣೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ವಪ್ನ ಜೀವನ್, ಸದಸ್ಯರುಗಳಾದ ಹರೀಶ್ ದರ್ಬೆ, ಹರೀಶ್ ಕೆ., ರಮೆಶ್ ನಾಯ್ಕ್, ವಿಜಯಕುಮಾರ್ ಚರ್ಚೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು. ಸದಸ್ಯರುಗಳಾದ ಸುಜಾತ ರೈ, ವೇದಾವತಿ, ತುಳಸಿ, ರತ್ನಾವತಿ, ಗೀತಾ ಉಪಸ್ಥಿತರಿದ್ದರು.

ಕಡಬ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಚೆನ್ನಪ್ಪ ಗೌಡ, 34-ನೆಕ್ಕಿಲಾಡಿ ಗ್ರಾಮಕರಣಿಕೆ ನವಿತಾ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಯ್ಯ ಸ್ವಾಗತಿಸಿ, ವಂದಿಸಿದರು.

 

LEAVE A REPLY

Please enter your comment!
Please enter your name here