ಮುಕ್ಕೂರಿನಲ್ಲಿ ಪ್ರಕೃತಿ ಮಡಿಲಲ್ಲಿ ಬೇಸಿಗೆ ಶಿಬಿರ

0


ಪುತ್ತೂರು : ಪ್ರಕೃತಿ, ಗಾಳಿ, ಮರಗಳನ್ನು ಚಿತ್ರಗಳ ಮೂಲಕ ತೋರಿಸಿ ಮಾಡುವ ಪರಿಸರ ಪಾಠ ನೀಡುವ ಅನುಭವಕ್ಕಿಂತ ಸ್ವತ ಪರಿಸರದೊಳಗೆ ಹೊಕ್ಕಿ ಆಸ್ವಾಽಸಿದಾಗ ಸಿಗುವ ಖುಷಿ, ಅನುಭವ ವರ್ಣಿಸಲು ಅಸಾಧ್ಯ. ಮುಕ್ಕೂರಿನಲ್ಲಿ ನಡೆಯುತ್ತಿರುವ ಉಚಿತ ಬೇಸಗೆ ಶಿಬಿರದ ಎರಡನೆ ದಿನ ಚಿಣ್ಣರು ಸಂಭ್ರಮಿಸಿದ್ದು ನಾಲ್ಕು ಗೋಡೆಗಳ ಮಧ್ಯೆ ಅಲ್ಲ ; ಗೌರಿ ಹೊಳೆಯ ಮಡಿಲಲ್ಲಿ..!

ಮಂಗಳವಾರ ಅರ್ಧ ದಿನ ರಂಗಾಭಿನಯದ ಚಟುವಟಿಕೆಯ ಬಳಿಕ ಉಳಿದ ಅರ್ಧ ದಿನದ ಹೊತ್ತು ಪರಿಸರದ ನೈಜ ಪಾಠವನ್ನು ಶಿಬಿರದ ಮೂಲಕ ಹೇಳುವ ಪ್ರಯತ್ನ ನಡೆಯಿತು. 90 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಮರ ಗಿಡಗಳ ನಡುವೆ ನಡೆದಾಡುತ್ತಾ ತಲುಪಿದ್ದು ಕುಂಜಾಡಿ ಪರಿಸರದಲ್ಲಿ ಹರಿಯುವ ಗೌರಿ ಹೊಳೆ ತಟಕ್ಕೆ. ಚಿಣ್ಣರು ನೀರಲ್ಲಿ ಓಡಾಡಿದರು, ಮರಳಲ್ಲಿ ಆಟವಾಡಿದರು. ಮರದ ಇಳಿಬೇರುಗಳಲ್ಲಿ ಜೀಕಿದರು. ಹಣ್ಣುಗಳನ್ನು ತಿಂದರು. ಜೀವವೈವಿಧ್ಯತೆಗೆ ಜೈ ಹೋ ಅಂದರು. ಅವರ ಸಂಭ್ರಮವೇ ವಿಶಿಷ್ಟ ಎನ್ನುತ್ತಾರೆ ಬೇಸಗೆ ಶಿಬಿರದ ಆಯೋಜಕ ಸಂಸ್ಥೆ ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು. ಖ್ಯಾತ ರಂಗಕರ್ಮಿ ಕೃಷ್ಣಪ್ಪ ಬಂಬಿಲ, ಗಾನಸಿರಿ ತಂಡದ ಗಾಯಕಿ ಮಧುಶ್ರೀ ಐವರ್ನಾಡು ನೇತೃತ್ವದಲ್ಲಿ ಸಂಪನ್ಮೂಲ ತಂಡ ಮಕ್ಕಳೊಂದಿಗೆ ಮಕ್ಕಳಾಗಿ ಶಿಬಿರವನ್ನು ನಡೆಸಿಕೊಟ್ಟಿತ್ತು. ಪ್ರಾರಂಭದಲ್ಲಿ ಕೃಷ್ಣಪ್ಪ ಬಂಬಿಲ ಅವರು ಅಭಿನಯ ಗೀತೆಗಳು, ವಿಶೇಷ ಹಾಡು, ನಿರೂಪಣೆ ಕೌಶಲ್ಯದ ಬಗ್ಗೆ ಚಟುವಟಿಕೆ ನೀಡಿದರು. ಹೊಳೆ ವಿಹಾರದಲ್ಲಿ ಅಭಿನಯ ಕೌಶಲ್ಯ, ಹಾಡು, ಪ್ರಕೃತಿ ಬಗ್ಗೆ ಮಾಹಿತಿ ನೀಡಲಾಯಿತು. ತಂಡದಲ್ಲಿ ನೇಸರ ಯುವಕ ಮಂಡಲದ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್., ಸದಸ್ಯ ರಕ್ಷಿತ್ ಗೌಡ ಕಾನಾವು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ, ಸವಿತಾ ಬೊಣ್ಯಕುಕ್ಕು ಸಹಕರಿಸಿದರು.

LEAVE A REPLY

Please enter your comment!
Please enter your name here