ಫಿಲೋಮಿನಾ ಕಾಲೇಜಿನ 1983-84ನೇ ಬ್ಯಾಚ್‌ನ ಬಿಕಾಂ ವಿದ್ಯಾರ್ಥಿಗಳ ‘ಪುನರ್ಮಿಲನ’

0

ಪುತ್ತೂರು: ದರ್ಬೆ ಸಂತ ಫಿಲೋಮಿನಾ ಕಾಲೇಜು ಇಲ್ಲಿನ 1983-84ನೇ ಸಾಲಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ‘ಪುನರ್ಮಿಲನ’ ಕಾರ್ಯಕ್ರಮವು ಎ.17ರಂದು ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಿತು.

 


ಸ್ಥಳೀಯ ವಿದ್ಯಾರ್ಥಿಗಳ ಜೊತೆ ಪ್ರಸ್ತುತ ಬಾಂಬೆ, ಚೆನ್ನೈ, ಗೋವಾ, ಕ್ಯಾಲಿಕಟ್, ಮಡಿಕೇರಿ, ಮಂಡ್ಯ, ಮೈಸೂರು, ಬೆಂಗಳೂರು, ಧಾರವಾಡ, ಮಂಗಳೂರು ಇಲ್ಲಿ ವಾಸ್ತವ್ಯವಿರುವ ಸುಮಾರು 52 ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 38 ವರ್ಷಗಳ ಬಳಿಕ ಸುಮಾರು 59ರ ವಯೋಮಾನದಲ್ಲಿರುವ ಯುವ ಮನಸ್ಸುಗಳಿಗೆ 20ರ ತಾರುಣ್ಯವನ್ನು ಮರುಕಳಿಸುವಲ್ಲಿ ಈ ಪುನರ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿತ್ತು. ಭಾಗವಹಿಸಿದ ಎಲ್ಲಾ ಸದಸ್ಯರು ತಮ್ಮ ಕಾಲೇಜು ದಿನಗಳಲ್ಲಿನ ಮನ:ಸ್ಥಿತಿಯಲ್ಲಿ ವಿಚಾರ ವಿನಿಮಯ ಮಾಡಿಕೊಂಡರು ಮಾತ್ರವಲ್ಲದೆ ತಮ್ಮ ಪರಿಚಯವನ್ನು ಮಾಡಿಕೊಳ್ಳುತ್ತಿದ್ದ ಪ್ರತಿಯೊಬ್ಬರು ಆ ಕಾಲದ ತಮ್ಮ ಆರ್ಥಿಕ ಅಡಚಣೆ, ವಿದ್ಯಾರ್ಜನೆಗೆ ಇದ್ದ ಮಾಹಿತಿಯ ಕೊರತೆ, ಮುಕ್ತ ಮಾತುಕತೆಗೆ ಇದ್ದ ತಡೆಗೋಡೆ, ಶಿಸ್ತಿನ ಸಿಪಾಯಿಗಳಂತಿದ್ದ ಬೋಧಕ ವರ್ಗದವರ ನಡವಳಿಕೆಗಳು, ತಮ್ಮ ಸ್ವಪ್ರಯತ್ನದಿಂದ ಮೇಲೆ ಬಂದ ಅನುಭವಗಳು, ಬದುಕಿನಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮೇಲೆ ಬಂದ ರೀತಿ ನೀತಿಗಳು ಮತ್ತು ತಮ್ಮ ಮಕ್ಕಳನ್ನು ಸಮಾಜಕ್ಕೆ ಹೊಂದಿಕೊಳ್ಳುವಂತೆ ಬೆಳೆಸಿದ ರೀತಿಯನ್ನು ತಮ್ಮ ಮನದಾಳದಿಂದ ಮಾತುಗಳಿಂದ ವ್ಯಕ್ತಪಡಿಸಲಾಯಿತು.

ಸ್ಥಳೀಯ ವಿದ್ಯಾರ್ಥಿಗಳ ಜವಾಬ್ದಾರಿಯಲ್ಲಿ ಸದರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಶ್ರೀಮತಿ ಶರತ್ ಕುಮಾರಿ, ಶ್ರೀಮತಿ ಜ್ಯೊತ್ಸ್ನಾ ಶೆಟ್ಟಿ ಧಾರವಾಡ, ನರಸಿಂಹ ಪ್ರಸಾದ್, ಪೂಣಚ್ಚ ಮಡಿಕೇರಿರವರು ಎಲ್ಲರನ್ನು ವಾಟ್ಸಪ್ ಮತ್ತು ವೈಯಕ್ತಿಕ ಕರೆಗಳ ಮೂಲಕ ಡಾ.ಉಮ್ಮಪ್ಪ ಪೂಜಾರಿರವರು ಗೂಗಲ್ ಮೀಟ್ ಮೂಲಕ ಎಲ್ಲರನ್ನು ಒಟ್ಟುಗೂಡಿಸುವ ವ್ಯವಸ್ಥೆ ಮಾಡಿದ್ದರು. ಶ್ರೀಮತಿ ಪದ್ಮಿನಿ ಶೆಣೈ ಪ್ರಾರ್ಥಿಸಿದರು. ರಾಮಚಂದ್ರ ಸ್ವಾಗತಿಸಿ, ಕರುಣಾಕರ ರೈ ಬಾಲ್ಯೊಟ್ಟುಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ರಾಜೇಶ್ ಕಾಮತ್‌ರವರು ಊಟದ ವ್ಯವಸ್ಥೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ಸಹಪಾಠಿಗೆ ಧನಸಹಾಯ ನೀಡಲಾಯಿತು. ಜಯಕುಮಾರ್ ರೈ ವಂದಿಸಿ ಬಳಿಕ ಒಂದು ವರ್ಷದಲ್ಲಿ ಮತ್ತೆ ಒಟ್ಟು ಸೇರುವ ಶರತ್ತಿನೊಂದಿಗೆ ಕಾರ್ಯಕ್ರಮವು ಸಮಾಪನಗೊಂಡಿತು.

LEAVE A REPLY

Please enter your comment!
Please enter your name here