ರಾಮಕುಂಜ: ’ಧರ್ಮ ಶಿಕ್ಷಣ’ ತರಗತಿ ಉದ್ಘಾಟನೆ

0

 

ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ 3 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಯುವ ’ಧರ್ಮ ಶಿಕ್ಷಣ’ ತರಗತಿಗೆ ಎ.17ರಂದು ಚಾಲನೆ ನೀಡಲಾಯಿತು.


ಕುಟುಂಬ ಪ್ರಬೋಧನಾ ಮಂಗಳೂರು ವಿಭಾಗದ ಸಹ ಸಂಯೋಜಕ ಅಚ್ಚುತ ನಾಯಕ್‌ರವರು ದೀಪ ಪ್ರಜ್ವಲನೆ ಮಾಡಿದರು. ಬಳಿಕ ಮಾತನಾಡಿದ ಅವರು, ಮನುಷ್ಯ ಹುಟ್ಟಿನಿಂದ ಸಾವಿನ ತನಕ 16 ಸಂಸ್ಕಾರ ಪಡೆಯುತ್ತಾನೆ. ಇವೆಲ್ಲ ಸಂಸ್ಕಾರ ಪಡೆಯುವ ಮೂಲಕ ಪ್ರತಿಯೊಬ್ಬರು ದೇವರಾಗಬೇಕು. ಇದಕ್ಕಾಗಿ ಮಹಾಪುರುಷರ ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿ ದಿನವೂ ಮನೆಯಲ್ಲಿ ಭಜನೆ ಮಾಡಬೇಕೆಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಮಾತನಾಡಿ, 15 ದಿನಗಳಿಗೊಮ್ಮೆ 2ಗಂಟೆಯ ಅವಧಿ ಧರ್ಮ ಶಿಕ್ಷಣ ತರಗತಿ ನಡೆಸಲು ಉದ್ದೇಶಿಸಲಾಗಿದೆ. ಗ್ರಾಮದ ಎಲ್ಲಾ ಮಕ್ಕಳೂ ಭಾಗವಹಿಸಬೇಕೆಂದು ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಡಬ ತಾಲೂಕು ಪ್ರಮುಖ್ ದಿವಾಕರ ರಾವ್ ಪಂಚವಟಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಧರ್ಮಶಿಕ್ಷಣ ತರಗತಿಯ ಶಿಕ್ಷಕರಾದ ವೆಂಕಟೇಶ್ ಭಟ್ ಹೂಂತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ಹರೀಶ್ ಬಾರಿಂಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ಪವಿತ್ರಪಾಣಿ ನರಹರಿ ಉಪಾಧ್ಯಾಯ ಇರ್ಕಿ ಮಠ, ವ್ಯವಸ್ಥಾಪನಾ ಸಮಿತಿ ಸದಸ್ಯ ಯೋಗೀಶ್ ಅಜ್ಜಿಕುಮೇರು, ಮಾಜಿ ಸದಸ್ಯ ತೇಜಕುಮಾರ್ ರೈ ವಳೆಂಜ, ರಾಮಕುಂಜ ಗ್ರಾ.ಪಂ.ಸದಸ್ಯ ಸೂರಪ್ಪ ಕುಲಾಲ್, ಭಾಸ್ಕರ ಹಿರಿಂಜ, ಸುರೇಶ್ ಇರ್ಕಿ, ಅಶೋಕ ಹಲ್ಯಾರ, ಹರೀಶ್ ರಾಮಕುಂಜ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here