ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾ ಸದನದ ಮಾಲಕ ಪನ್ನೆಗುತ್ತು ಬೆಳ್ಳಾರೆ ಸಂಜೀವ ಶೆಟ್ಟಿಯವರಿಗೆ ಶ್ರದ್ಧಾಂಜಲಿ

0

 

ಪುತ್ತೂರು: ಇತ್ತೀಚೆಗೆ ಅಗಲಿದ ಅಗಲ್ಪಾಢಿ ದೇರಣ್ಣ ಶೆಟ್ಟಿ ಹಾಗೂ ಪನ್ನೆಗುತ್ತು ದುಗ್ಗಮ್ಮರವರ ಪುತ್ರ, ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಸದನದ ಮಾಲಕ ಪನ್ನೆಗುತ್ತು ಬೆಳ್ಳಾರೆ ಸಂಜೀವ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವು ಎ.20ರಂದು ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಸದನದಲ್ಲಿ ಮಧ್ಯಾಹ್ನ ಜರಗಿತು.

ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ ಮಾತನಾಡಿ, ಕುಂಬ್ರ ತರವಾಡು ಮನೆತನದ ಹಿರಿಯರಾದ ಪಟೇಲ್ ಜತ್ತಪ್ಪ ರೈಯವರು ನನಗೂ ಹಾಗೂ ಬೆಳ್ಳಾರೆ ಸಂಜೀವ ಶೆಟ್ಟಿಯವರಿಗೂ ಕುಟುಂಬದಲ್ಲಿ ಹಿರಿಯರು ಆದ ಕಾರಣ ಸಂಜೀವ ಶೆಟ್ಟಿಯವರು ಕಟ್ಟಿಸಿದ ಈ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಸದನದ ವೇದಿಕೆಗೆ ಕುಂಬ್ರ ಪಟೇಲ್ ಜತ್ತಪ್ಪ ರೈ ರಂಗಮಂಟಪ ಎಂಬುದಾಗಿ ಹೆಸರಿಟ್ಟಿರುತ್ತಾರೆ. ಜೀವನದಲ್ಲಿ ಮುಂದೆ ಬರಬೇಕಾದರೆ ಒಂದು ಸತ್ಯ ನುಡಿಯಬೇಕು, ಮತ್ತೊಂದು ಶಿಸ್ತನ್ನು ಅಳವಡಿಸಿಕೊಳ್ಳಬೇಕು ಜೊತೆಗೆ ಮುಖದಲ್ಲಿ ಕೋಪ ಬೇಕು, ಹೃದಯದಲ್ಲಿ ಪ್ರೀತಿಯಿರಬೇಕು. ಆಗ ಮಾತ್ರ ದೇವರ ದಯೆ ಸಿಗಲು ಸಾಧ್ಯ ಎನ್ನುವ ವೇದವಾಕ್ಯ ಸಂಜೀವ ಶೆಟ್ಟಿಯವರದು. ಅಂತಹ ಮಹಾನುಭಾವರ ಒಳ್ಳೆಯ ಮನಸ್ಸನ್ನು ಅರಿತು ನಾವು ಮುಂದುವರೆಯುವ ಎಂದು ಹೇಳಿ ಅಗಲಿದ ಬೆಳ್ಳಾರೆ ಸಂಜೀವ ಶೆಟ್ಟಿಯವರ ಆತ್ಮಕ್ಕೆ ಭಗವಂತ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

 

ದಿ.ಬೆಳ್ಳಾರೆ ಸಂಜೀವ ಶೆಟ್ಟಿಯವರ ಆತ್ಮೀಯರೂ, ಪ್ರಸ್ತುತ ಮೈಸೂರಿನಲ್ಲಿ ಹೊಟೇಲ್ ಉದ್ಯಮವನ್ನು ನಡೆಸುತ್ತಿರುವ ಹರ್ಷ ಮೇಲಾಂಟರವರು ಮಾತನಾಡಿ, ಅಗಲಿದ ಸಂಜೀವ ಶೆಟ್ಟಿಯವರನ್ನು ನಾನು ಕಳೆದ ಹತ್ತಿಪ್ಪತ್ತು ವರ್ಷದಿಂದ ಬಲ್ಲೆ. ಉದ್ಯಮ ಕ್ಷೇತ್ರದಲ್ಲಿ ಅವರೋರ್ವ ಯಶಸ್ವಿ ಉದ್ಯಮಿ ಎನ್ನಬಹುದು. ಕುಟುಂಬದಲ್ಲಿ ಹಿರಿಯರಾಗಿದ್ದು ಕುಟುಂಬವನ್ನು ನಿಭಾಯಿಸುತ್ತಿದ್ದ ರೀತಿ ಮೆಚ್ಚುವಂತಹುದು. ಸಮಾಜದಲ್ಲಿ ಸಂಜೀವ ಶೆಟ್ಟಿಯವರದು ‘ಪೊರ‍್ಲುದ ಜೀವನ’ ಹಾಗೆಯೇ ‘ಪೊರ‍್ಲುದ ಮರಣ’ ಆಗಿದೆ. ಮಾನವೀಯತೆಯನ್ನು ತನ್ನ ಜೀವನದಲ್ಲಿ ಮೈಗೂಡಿಸಿಕೊಂಡಿರುವ ಸಂಜೀವ ಶೆಟ್ಟಿಯವರಂತೆ ನಾವೂ ಕೂಡ ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳೋಣ ಎಂದು ಹೇಳಿ ಅಗಲಿದ ಸಂಜೀವ ಶೆಟ್ಟಿಯವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಅಗಲಿದ ಬೆಳ್ಳಾರೆ ಸಂಜೀವ ಶೆಟ್ಟಿಯವರ ಪತ್ನಿ ಕೂರ್ಯಾಲಗುತ್ತು ಎಲಿಯಾರು ವೇದ ಎಸ್.ಶೆಟ್ಟಿ, ಪುತ್ರ ಡಾ|ಚೇತಕ್ ಶೆಟ್ಟಿ, ಸೊಸೆಯಂದಿರಾದ ಸಪ್ನ ಶೆಟ್ಟಿ, ಡಾ|ಸಮನ್ವಿತಾ ಶೆಟ್ಟಿ, ಸಹೋದರಿ ಶ್ರೀಮತಿ, ಸಹೋದರರಾದ ಡಾ.ಮಾಧವ ಶೆಟ್ಟಿ, ಜಗನ್ನಾಥ ಶೆಟ್ಟಿ, ಪ್ರಮುಖರಾದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ್ ರೈ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಹೊಟೇಲ್ ಅಶ್ವಿನಿಯ ಕರುಣಾಕರ್ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ರ್ಶರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾಕ್, ಸಿಝ್ಲರ್ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಮಿ ಶಿವರಾಂ ಆಳ್ವ, ಅಜಿತ್ ಶೆಟ್ಟಿ ಕಡಬ, ದಂಬೆಕಾನ ಸದಾಶಿವ ರೈ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಜೈರಾಜ್ ಭಂಡಾರಿ, ಡಾ.ಎ.ಕೆ ರೈ, ಶ್ಯಾಮ್‌ಸುಂದರ್ ರೈ, ಮಹಾವೀರ ಆಸ್ಪತ್ರೆಯ ಡಾ.ಅಶೋಕ್ ಪಡಿವಾಳ್, ಶಶಿಕಿರಣ್ ರೈ ನೂಜಿ, ಕೆ.ಆರ್ ಶೆಣೈ, ಕೆ.ವಿಶ್ವಾಸ್ ಶೆಣೈ, ದಿ.ಕೋಚಣ್ಣ ರೈಯವರ ಪುತ್ರ ಡಾ.ಮಂಜುನಾಥ್ ರೈ, ಪನ್ನೆಗುತ್ತು ಹಾಗೂ ಚಿಲ್ಮೆತ್ತಾರು ಕುಟುಂಬಸ್ಥರ ಸಹಿತ ಹಲವಾರು ಮಂದಿ ಆಗಮಿಸಿದ್ದರು. ದಿ.ಬೆಳ್ಳಾರೆ ಸಂಜೀವ ಶೆಟ್ಟಿಯವರ ಹಿರಿಯ ಪುತ್ರ ದೀಪಕ್ ಶೆಟ್ಟಿ ವಂದಿಸಿ, ಹತ್ತಿರದ ಸಂಬಂಧಿ ಎ.ಜೆ ರೈ ಕಾರ್ಯಕ್ರಮ ನಿರೂಪಿಸಿದರು.

ಉದ್ಯಮದೊಂದಿಗೆ ಕೃಷಿಯಲ್ಲೂ ಪ್ರೀತಿ..
ಇಂಜಿನಿಯರ್ ಪದವೀಧರರಾಗಿರುವ ಬೆಳ್ಳಾರೆ ಸಂಜೀವ ಶೆಟ್ಟಿಯವರು ಬೆಂಗಳೂರಿನ ಹಿಡ್ಕಲ್ ಡ್ಯಾಂನಲ್ಲಿ ಪ್ರಪ್ರಥಮವಾಗಿ ಕಾರ್ಯನಿರ್ವಹಿಸಿದ್ದು, ಬಳಿಕ ವಿಜಯಮಾಲಾ ಇಂಡಸ್ಟ್ರೀಸ್ ಹೆಸರಿನಲ್ಲಿ ಕೈಗಾರಿಕೋದ್ಯಮವನ್ನು ಆರಂಭಿಸಿದ್ದರು. ಉದ್ಯಮದ ಜೊತೆಗೆ ಕೃಷಿಯಲ್ಲೂ ಪ್ರೀತಿ ಹೊಂದಿರುವ ಶಿಸ್ತಿನ ಸಿಪಾಯಿ ಬೆಳ್ಳಾರೆ ಸಂಜೀವ ಶೆಟ್ಟಿಯವರು ಓರ್ವ ಕುಟುಂಬ ಪ್ರೇಮಿಯಾಗಿ, ಹಲವಾರು ಮಂದಿಗೆ ವಿದ್ಯೆಯನ್ನು ನೀಡುವ ಮೂಲಕ ವಿದ್ಯೆದಾತಾರೆನಿಸಿಕೊಂಡಿದ್ದರು. ದೂರದೃಷ್ಟಿತ್ವದ ಚಿಂತನೆ ಹಾಗೂ ಸಮಯ ಪಾಲನೆಗೆ ಬಹಳ ಪ್ರಾತಿನಿಧ್ಯ ನೀಡುತ್ತಿದ್ದ ಬೆಳ್ಳಾರೆ ಸಂಜೀವ ಶೆಟ್ಟಿಯವರು ೨೦೦೨-೦೩ರಲ್ಲಿ ತನ್ನ ತಂದೆ-ತಾಯಿಯ ಹೆಸರಿನಲ್ಲಿ ದರ್ಬೆಯಲ್ಲಿ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಸದನವನ್ನು ನಿರ್ಮಿಸಿದ್ದರು. ಮಾತ್ರವಲ್ಲದೆ ಸಭಾಸದನ ಆವರಣದಲ್ಲಿ ಗಣಪತಿ ಗುಡಿಯನ್ನು ನಿರ್ಮಿಸಿ ಭಕ್ತರಿಗೆ ಪೂಜಾ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದ್ದರು. ತನ್ನ ಕೆಲಸಗಾರರನ್ನು ಬಹಳ ಪ್ರೀತಿ ಹಾಗೂ ಗೌರವದಿಂದ ನೋಡಿಕೊಳ್ಳುತ್ತಿದ್ದ ಸಂಜೀವ ಶೆಟ್ಟಿಯವರು ಬೆಂಗಳೂರಿನ ಬಂಟರ ಸಂಘದ ಸ್ಥಾಪಕ ಟ್ರಸ್ಟಿಯಾಗಿ, ಉಪಾಧ್ಯಕ್ಷರಾಗಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಎ.ಜೆ ರೈ, ಪನ್ನೆಗುತ್ತು ಬೆಳ್ಳಾರೆ ಸಂಜೀವ ಶೆಟ್ಟಿಯವರ ಹತ್ತಿರದ ಸಂಬಂಧಿ

ಮೌನ ಪ್ರಾರ್ಥನೆ..
ಅಗಲಿದ ಬೆಳ್ಳಾರೆ ಸಂಜೀವ ಶೆಟ್ಟಿಯವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲೆಂದು ಆಗಮಿಸಿದ ಹಿತೈಷಿಗಳು, ಬಂಧುಮಿತ್ರರು ಎದ್ದು ನಿಂತು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು

LEAVE A REPLY

Please enter your comment!
Please enter your name here