ಪಾಣಾಜೆ: ಕಂದಾಯ ಇಲಾಖೆಯಿಂದ ಅಕ್ರಮ ಶೆಡ್ ತೆರವು

0

ಬೆಟ್ಟಂಪಾಡಿ: ಪಾಣಾಜೆ ಗ್ರಾಮದ ಜಾಲಗದ್ದೆ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾದ ಅಕ್ರಮ ಶೆಡ್‌ವೊಂದನ್ನು ಕಂದಾಯ ಇಲಾಖೆಯವರು ತೆರವುಗೊಳಿಸಿದ ಘಟನೆ ಏ. 20 ರಂದು ನಡೆದಿದೆ.

ಶಾಹುಲ್ ಹಮೀದ್ ಎಂಬವರು ಈ ಅಕ್ರಮ ಶೆಡ್ ನಿರ್ಮಿಸಿದ್ದರು ಎನ್ನಲಾಗಿದೆ. 4 ಸುತ್ತಿನ ಕಲ್ಲಿನ ಗೋಡೆ ನಿರ್ಮಿಸಿ 6 ಮರದ ಕಂಬಗಳನ್ನು ಹಾಕಿ ಮೇಲ್ಗಡೆ ಸಿಮೆಂಟ್ ಶೀಟ್ ಹಾಕಲಾಗಿತ್ತು. ಅಕ್ರಮ ಶೆಡ್ ತೆರವುಗೊಳಿಸಲು ಇಲಾಖೆಯಿಂದ ಏ. 19ರಂದು ಗಡುವು ಕೊಡಲಾಗಿತ್ತು. ಆದರೆ ಮೇಲ್ಗಡೆಯ ಸಿಮೆಂಟ್ ಶೀಟ್ ಮಾತ್ರ ತೆಗೆದು ಉಳಿದಂತೆ ಯಥಾಸ್ಥಿತಿಯಲ್ಲಿರುವುದನ್ನು ಕಂಡು ಗ್ರಾಮಕರಣಿಕ ಮಂಜುನಾಥ್ ರವರು ಏ. 20 ರಂದು ಮಧ್ಯಾಹ್ನ ಸ್ಥಳಕ್ಕೆ ಹೋಗಿ ಶೆಡ್ ನ್ನು ಸಂಪೂರ್ಣ ಕೆಡವಿ ಹಾಕಿದ್ದಾರೆ. 2 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಶೆಡ್ ನಿರ್ಮಿಸಲು ಮುಂದಾಗಿದ್ದಾಗ ಸ್ಥಳೀಯರೋರ್ವರ ದೂರಿನ ಮೇರೆಗೆ ಶೆಡ್ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ತಡೆಯೊಡ್ಡಲಾಗಿತ್ತು. ಇದೀಗ ಮತ್ತೆ ಮುಂದುವರಿದು ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲು ಮುಂದಾಗಿರುವ ವಿಚಾರ ತಿಳಿದು ಕಂದಾಯ ಇಲಾಖೆಯಿಂದ ಶಾಹುಲ್ ಹಮೀದ್ ರವರಿಗೆ ಮೌಖಿಕವಾಗಿ ತಿಳಿಸಲಾಗಿತ್ತು. ಏ. 19ರ ಮುಂಚಿತವಾಗಿ ಸಂಪೂರ್ಣ ತೆರವುಗೊಳಿಸಲು ಒಪ್ಪಿಕೊಂಡಿದ್ದ ಅವರು ಶೀಟ್ ಮಾತ್ರ ತೆಗೆದಿಟ್ಟಿದ್ದರು. ಇದೀಗ ಕಂದಾಯ ಇಲಾಖೆ ಅಕ್ರಮವಾಗಿ ನಿರ್ಮಿಸಿರುವ ಶೆಡ್ ನ್ನು ಸಂಪೂರ್ಣ ಕೆಡವಿ ಹಾಕಿದೆ.

ಈ ಬಗ್ಗೆ ಸುದ್ದಿಯೊಂದಿಗೆ ಪ್ರತಿಕ್ರಿಯಿಸಿರುವ ಶಾಹುಲ್ ಹಮೀದ್ ರವರು ’ಸದ್ರಿ ಜಾಗ ನನ್ನ ಕುಮ್ಕಿ ಭೂಮಿಯಾಗಿದ್ದು, ೧೫ ವರ್ಷಗಳಿಂದ ಮನೆ ನಿರ್ಮಿಸಿ ವಾಸವಾಗಿದ್ದೆ. ಹಳೆಯ ಮಣ್ಣಿನ ಮನೆ ಸಂಪೂರ್ಣವಾಗಿ ಬಿದ್ದು ಹೋದುದರ ಪರಿಣಾಮ ಮನೆ ದುರಸ್ತಿ ಮಾಡುತ್ತಿದ್ದೇನೆ. ಸದ್ರಿ ಮನೆಗೆ ಸರಕಾರಕ್ಕೆ ತೆರಿಗೆಯೂ ಪಾವತಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here