ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸಂಭ್ರಮ ಪುರಸ್ಕಾರಕ್ಕೆ  ಪತ್ರಕರ್ತ ವಿಷ್ಣುಗುಪ್ತ ಪುಣಚ ಆಯ್ಕೆ

0

ವಿಟ್ಲ: ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಇನ್ನಿತರ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್  ತನ್ನ  38ನೇ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೀಡುವ ಸಂಭ್ರಮ ಪುರಸ್ಕಾರ (ಪತ್ರಿಕೋದ್ಯಮ)ಕ್ಕೆ ಪತ್ರಕರ್ತ ವಿಷ್ಣುಗುಪ್ತ ಪುಣಚ (ರಮೇಶ್.ಕೆ ಪುಣಚ) ಆಯ್ಕೆಯಾಗಿದ್ದಾರೆ.

ವರ್ಷಂಪ್ರತಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ನೀಡುತ್ತಿದೆ. ಸಾಹಿತ್ಯ, ಬರವಣಿಗೆ ಕ್ಷೇತ್ರದಲ್ಲಿ ‘ವಿಷ್ಣುಗುಪ್ತ ಪುಣಚ’ ಎಂಬ ಕಾವ್ಯನಾಮದಿಂದ ನಾಡಿನಾದ್ಯಂತ ಚಿರಪರಿಚಿತರಾಗಿರುವ ರಮೇಶ್ ಕೋಡಂದೂರು ಅವರು ಬಂಟ್ವಾಳ ತಾಲೂಕಿನ ಪುಣಚ ಗ್ರಾಮದವರು.  ಪತ್ರಿಕಾ ಕ್ಷೇತ್ರದಲ್ಲಿ ಪತ್ರಕರ್ತರಾಗಿ ಸುಮಾರು ಇಪ್ಪತ್ತು ವರ್ಷಗಳಿಂದ ದುಡಿಯುತ್ತಿದ್ದಾರೆ. ಸುದ್ದಿ ಬಿಡುಗಡೆ, ಮೈಸೂರು ಆಂದೋಲನ, ಉಷಾ ಕಿರಣ, ಪ್ರಜಾವಾಣಿ, ವಿಜಯಕರ್ನಾಟಕ, ನಮ್ಮ ಬಂಟ್ವಾಳ ಇತ್ಯಾದಿ ಪತ್ರಿಕೆಗಳಲ್ಲಿ ದುಡಿದಿದ್ದಾರೆ. ಇದಲ್ಲದೇ ರಂಗಭೂಮಿ, ಬೀದಿನಾಟಕ, ಹಲವಾರು ತುಳು ಸಾಮಾಜಿಕ ನಾಟಕಗಳಲ್ಲಿ ನಟಿಸಿದ್ದಾರೆ. ಕನ್ನಡ, ತುಳು ಭಾಷೆಗಳ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯ ಮಟ್ಟದ ಲೇಖನ, ಕಥೆ, ಕವನ, ಚುಟುಕು ಇನ್ನಿತರ ಸಾಹಿತ್ಯ  ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಬಹುಮಾನಗಳನ್ನು ಪಡೆದಿದ್ದಾರೆ. ಪುಣಚ ಮಂಗಳ ಕಲಾ ಸಾಹಿತ್ಯ ವೇದಿಕೆಯ ಮೂಲಕ ಹತ್ತಾರು ರಾಜ್ಯ ಮಟ್ಟದ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಬಂಟ್ವಾಳ ಪ್ರೆಸ್ ಕ್ಲಬ್ ಉಪಾಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದಾರೆ.  ಬಂಗ್ಲೆ ಮೈದಾನದಲ್ಲಿ ಎ.24ರಂದು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್  ತನ್ನ  38ನೇ ವಾರ್ಷಿಕ ಸಂಭ್ರಮ ಆಚರಣೆಯಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ. ಇದೇ ಸಂದರ್ಭದಲ್ಲಿ 14ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವೂ ನಡೆಯಲಿದೆ.

LEAVE A REPLY

Please enter your comment!
Please enter your name here